Advertisement
ಇಂತಹ ಸಣ್ಣ ಪುಟ್ಟ ಮಾತುಗಳು ಮಲೆನಾಡಿನ ಜೀವನದ ಬಹುಮುಖ್ಯ ಭಾಗ. ಎಲ್ಲರ ಮನೆಯಲ್ಲಿ ಕೋಳಿ ಕೂಗಿದ ಮೇಲೆ ಬೆಳಗಾದರೆ ನಮ್ಮನೆಯಲ್ಲಿ ಬೆಳಗಾಗೋದು ಒಂದು ಲೋಟ ಚಾ ಕುಡಿದಾದ ಮೇಲೆ. ಬೆಳಗ್ಗೆ ಯಾರೇ ಮೊದಲು ಎದ್ದರು ಸರಿ ಚಾ ಮಾಡಲು ನೀರು ಕುದಿಯಲಿಟ್ಟು ಮುಂದಿನ ಕೆಲಸ ಆಗಬೇಕು ಅನ್ನೋದು ಒಂದು ಎಲ್ಲರೂ ಪಾಲಿಸಿಕೊಂಡು ಬಂದಿರುವ ಅಲಿಖೀತ ನಿಯಮ.
Related Articles
Advertisement
ಹಾಗೂ ಹೀಗೂ ಚಹಾ ರಹಿತ ಜೀವನದ ಎರಡು ದಶಕಗಳನ್ನು ಮುಗಿಸಿ ಪುಣೆಗೆ ಕೆಲಸಕ್ಕೆ ಬಂದಾಯಿತು. ನಾನು ಚಹಾ ಕುಡಿಯುವುದಿಲ್ಲ ಎಂದು ಸಹೋದ್ಯೋಗಿಗಳಿಗೆ ಗೊತ್ತಾದಾಗ ಅಯ್ಯೋ ಪಾಪ ಎಂದು ನೊಂದುಕೊಂಡರು. ಚಹಾವನ್ನು ಹೊಗಳಿದರು, ಚಹಾ ಹಾಗೂ ಸಮೋಸದ ಜೋಡಿಯ ಬಗ್ಗೆ ವರ್ಣನೆ ಮಾಡಿದರು.
ಹೇಗೆ ಇಷ್ಟು ವರ್ಷಗಳ ಕಾಲ ಬದುಕಿದೆ ಎಂದು ಕೆಲವರು ತಮ್ಮ ಕುತೂಹಲವನ್ನು ಕೂಡ ಮುಂದಿಟ್ಟರು. ನನ್ನ ರೂಮ್‌ಮೇಟ್ ಚಹಾದ ವಿನಾ ಮನೆಯ ಹೊರಗೆ ಕಾಲಿಡುತ್ತಿರಲಿಲ್ಲ, ಅವಳಿಗಾಗಿ ಭಕ್ತಿಯಿಂದ ಚಹಾ ಮಾಡಿಕೊಟ್ಟು ನಾನು ಮಾತ್ರ ಬಿಸಿ ಹಾಲಿಗೆ ಹಾರ್ಲಿಕ್ಸ್ ಹಾಕಿಕೊಂಡು ಕುಡಿಯುವಷ್ಟು ಮುಗೆª. ಆದರೆ ಜಗತ್ತಿನ ಎಲ್ಲ ಚಟಗಳು ಶುರುವಾಗುವುದು ಸ್ನೇಹಿತರಿಂದ ಅಂತ ಯಾರೋ ಪುಣ್ಯಾತ್ಮ ಮೊದಲೇ ಹೇಳಿಬಿಟ್ಟಿದ್ದ ಅದು ಅರ್ಥವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.
ಸ್ನೇಹಿತರ ಜತೆ ಚಹಾ ವಿರಾಮಕ್ಕೆ ಹೋದಾಗ ಖಾಲಿ ಕೂರುವುದು ಏಕೆ ಎಂದು ಚಿಕ್ಕ ಲೋಟದಲ್ಲಿ ಅರ್ಧ ಕುಡಿಯಲು ಶುರು ಮಾಡಿದೆ. ಚಹಾ ಎಂದರೆ ಹಾಗೇ ಬಣ್ಣ ರುಚಿ ಮತ್ತು ಶಕ್ತಿ. ಒಮ್ಮೆ ಕುಡಿದರೆ ಮತ್ತೆ ಮತ್ತೆ ಕುಡಿಯಬೇಕು ಅನ್ನೋ ಹಂಬಲ. ಹಾಗೇ ಕುಡಿಯುತ್ತ ಕುಡಿಯುತ್ತಾ ದಿನಕ್ಕೆ ಅರ್ಧ ಲೋಟದಿಂದ 4 ಲೋಟ ಕುಡಿಯುವಂತಾಯಿತು. ಅದರಲ್ಲೂ ಶುಂಠಿ ಚಹಾ, ತುಳಸಿ ಚಹಾ, ಮಸಲಾ ಚಹಾ, ಏಲಕ್ಕಿ .. ಹೀಗೆ ತರಹೇವಾರಿ ಚಹಾಗಳ ರುಚಿ ನೋಡಿದ ನಾಲಿಗೆ ಬೆಳಗ್ಗೆ, ಮಧ್ಯಾಹ್ನ. ಸಂಜೆ ಚಹಾ ಬೇಡತೊಡಗಿತ್ತು.
ಬೆಳಗ್ಗೆ ಎದ್ದ ಮೇಲೆ ಕೆಲ್ಸಕ್ಕೆ ಹೋಗಬೇಕಲ್ಲ ಎಂದು ಚಹಾ ಕುಡಿದೆ, ಕೆಲಸಕ್ಕೆ ಹೋದ ಮೇಲೆ ಸ್ವಲ್ಪ ಮೋಟಿವೇಶನ್ ಇರಲಿ ಎಂದು ಕುಡಿದೆ. ಸ್ನೇಹಿತರಿಗೆ ಜತೆ ಜತೆ ಕೊಡಲು ಕುಡಿದೆ, ಕೆಲಸ ಆಗಲಿಲ್ಲ ಅಂತ ಕುಡಿದೆ, ಕೆಲಸ ಆಯಿತಲ್ಲ ಇನ್ನೇನು ಅಂತ ಕುಡಿದೆ. ಆಗಾಗ ಹೆಚ್ಚುತ್ತಿರುವ ತೂಕದ ಬಗ್ಗೆ ಗಮನ ಹೋಗಿ ಗ್ರೀನ್ ಟೀ ಕೂಡ ಕುಡಿದೆ.
ಇವೆಲ್ಲ ಭಾರತೀಯ ಚಹಾದ ಕಥೆಗಳಾದರೆ, ಯು.ಕೆ.ಗೆ ಬಂದ ಮೇಲೆ ಇಂಗ್ಲಿಷ್ ಟೀ ಕುಡಿದೆ. ಬಿಸಿ ನೀರಿನಲ್ಲಿ ಚಹಾದ ಪ್ಯಾಕೆಟ್ ಅದ್ದಿ, ಬೇಕೋ ಬೇಡವೋ ಅನ್ನುವಷ್ಟೇ ಹಾಲು ಸೇರಿಸಿ ಸಕ್ಕರೆಯನ್ನು ರುಚಿಗೆ ತಕ್ಕಷ್ಟು ಹಾಕದೆ ಇರುವ ಚಹಾ ಕುಡಿಯುವುದನ್ನೂ ಕಲಿತೆ. ಆಗಾಗ ಸೋಯಾ ಹಾಲು, ಓಟ್ಸ್ ಹಾಲಿನ ಚಹಾವನ್ನು ಕುಡಿದದ್ದಿದೆ.
ಗೆಳೆಯ ಗೆಳತಿಯರನ್ನು ಮನೆಗೆ ಆಹ್ವಾನಿಸಿ, ಹೊಟ್ಟೆ ತುಂಬಾ ಚಹಾ ಕುಡಿಸಿ ಭೇಷ್ ಅನಿಸಿಕೊಂಡೆ. ಅಷ್ಟೇ ಅಲ್ಲ ಟೀ ಪಾರ್ಟಿಗಳನ್ನು ಅರೆಂಜ್ ಮಾಡಿ ಹಿಗ್ಗಿದೆ. ಒಮ್ಮೆ ಚಹಾ ಕುಡಿದರೆ ಮತ್ತೆ ನಾಲ್ಕು ದಿನ ನಿದ್ದೆ ಬರದಿರುವವರನ್ನು ನೋಡಿ ನಕ್ಕು, ರಕ್ತದಾನ ಮಾಡುವ ಸಂದರ್ಭ ಬಂದರೆ ಖಂಡಿತ ರಕ್ತದಲ್ಲಿ ಪೂರ್ತಿ ಚಹಾ ತುಂಬಿರುವ ಹಂತ ತಲುಪಿದೆ.
ಚಹಾ ಇರದೆ ಬದುಕೇ ಇಲ್ಲ ಎಂದುಕೊಂಡಿದ್ದಾಗ ಆ ಒಂದು ದಿನ ಬಂದೇ ಬಿಟ್ಟಿತು. ನನ್ನ ಯೋಗ ಗುರುಗಳು ಹೇಳಿದ ಮೊದಲ ಮಾತು. ಚಹಾ ಬಿಡಬೇಕು ಎಂದಾಗ ಕಾಳಿYಚ್ಚನ್ನು ಕಾಲಿನಲ್ಲಿ ಮೆಟ್ಟಿ ಅಡಗಿಸಬಲ್ಲೆ, ಭರ ಸಿಡಿಲ ಬಡಿತವನ್ನು ಬರಿ ಮುಷ್ಠಿಯಲ್ಲಿ ಹಿಡಿಯಬಲ್ಲೆ ಎಂಬ ಬಬ್ರುವಾಹನ ಸಿನೆಮಾದ ಸಾಲುಗಳು ನೆನಪಾದವು.
ಚಹಾವಿಲ್ಲದೆ ದಿನ ಕಳೆಯುವುದು ಕಷ್ಟ ವಾಯಿತು. ತಲೆನೋವು ಕಾಡಿತು. ಚಹಾ ಕುಡಿಯಲಿಲ್ಲ ಎಂದು ಎದೆಯಲ್ಲೂ ನೋವು.. ಆದರೆ ಗುರುಗಳ ಮಾತು ಮೀರುವುದುಂಟೇ ಎಂದುಕೊಂಡು ಹೇಗೋ ಒಂದು ವಾರ ಕಳೆಯುವುದರಲ್ಲಿ ನಾನೇ ಕಳೆದು ಹೋದೆ.
ನಾನು ಮಾಡಿದ ದೊಡ್ಡ ಸಾಧನೆ ಎಂದರೆ ಚಹಾದ ವಿನಾ ದಿನಗಳನ್ನು ಕಳೆಯಲು ಕಲಿತದ್ದು. ಕುಡಿತವೇ ಕುಡಿತದ ಮೂಲ ಅನ್ನುವ ಜ್ಞಾನೋದಯ ಆಗಿ ಕುಡಿತವನ್ನು ಕಡಿಮೆ ಮಾಡಿದೆ. ಚಹಾ ಕುಡಿತ ನಿಲ್ಲಿಸಿದೆ. ಆಗಾಗ ಸಂದರ್ಭಕ್ಕೆ ತಕ್ಕನಾಗಿ ಕುಡಿದ್ದಿದೆ. ಈಗ ರಕ್ತ ಕೊಟ್ಟರೆ ಬಹುಶಃ ರಕ್ತವೇ ಸಿಗಬಹುದು ಎಂಬ ನಂಬಿಕೆ ಇದೆ.
ಈ ಬರವಣಿಗೆ ಓದಿ ಚಹಾ ಕುಡಿಯುವ ಮನಸ್ಸಾದರೆ ನಾನು ಜವಾಬ್ದಾರನಲ್ಲ. ಹಾಗೇ ನಿಮ್ಮ ಮನೆಗೆ ಭೇಟಿ ಕೊಟ್ಟಾಗ ನಾನು ಚಹಾ ಕುಡಿಯುವುದಿಲ್ಲ ಅಂತ ಭಾವಿಸಿ ಚಹಾ ಕೇಳಲು ಮರೆಯದಿರಿ.
ನಯನಾ ಗಾವ್ಕಂರ್,
ಈಡನ್ ಬರ್ಗ್