Advertisement

ಕನ್ನಡ ಕಲಿ 5ನೇ ಹಂತದ ಶಿಬಿರಕ್ಕೆ ಚಾಲನೆ

05:04 PM May 18, 2021 | Team Udayavani |

ಕನ್ನಡಿಗರು ಯುಕೆ ಸಂಸ್ಥೆಯು ಕನ್ನಡ ಕಲಿ ಅಭಿಯಾನದಲ್ಲಿ ನಿರಂತರತೆಯನ್ನು ಕಾಪಾಡಿಕೊಂಡು ಬರುತ್ತಿದೆ. ಈ ನಿರಂತರತೆ ಮುಂದುವರಿಯಲಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್‌. ನಾಗಾಭರಣ ಹೇಳಿದರು.

Advertisement

ಮೇ 1ರಂದು ನಡೆದ ಕನ್ನಡಿಗರು ಯುಕೆಯ 5ನೇ ಹಂತದ ಕನ್ನಡ ಕಲಿ ಆನ್‌ಲೈನ್‌ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಯಾವಾಗಲೂ ನಿಮ್ಮ ಜತೆ ಇರುತ್ತದೆ. ಸದ್ಯದಲ್ಲೇ ಆನ್‌ಲೈನ್‌ ಜಾಲ ಸಂಪರ್ಕ ಶಿಬಿರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹಮ್ಮಿಕೊಳ್ಳಲಾಗುತ್ತದೆ ಎಂದು ನುಡಿದರು. ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ| ಗವಿ ಸಿದ್ದಯ್ಯ ಉಪಸ್ಥಿತರಿದ್ದರು.

ಕಳೆದ 12 ವರ್ಷಗಳಿಂದ ನಿರಂತರವಾಗಿ ಕನ್ನಡ ಕಲಿ ಅಭಿಯಾನವನ್ನು ಯುಕೆಯಾದ್ಯಂತ ನಡೆಸಿಕೊಂಡು ಬಂದಿರುವ ಕನ್ನಡಿಗರು ಯುಕೆ ಸಂಸ್ಥೆ, 2020 ಮಾರ್ಚ್‌ ತಿಂಗಳಿಂದ ಹೊಸದಾದ ಆಯಾಮದೊಂದಿಗೆ ಕಾಯಕಲ್ಪವನ್ನು ನೀಡುವ ನಿಟ್ಟಿನಲ್ಲಿ ಕನ್ನಡಿಗರಿಗೆ ಮತ್ತು ಅವರ ಕುಟುಂಬದ ಮಕ್ಕಳಿಗೆ ಕನ್ನಡವನ್ನು ಕಲಿಯಲು ಮತ್ತು ಶಿಕ್ಷಕ ಶಿಕ್ಷಕಿಯರಿಗೆ ಕನ್ನಡವನ್ನು ಕಲಿಸಲು ಇನ್ನಷ್ಟು ಸರಳವಾಗುವಂತೆ ಹಲವಾರು ಬದಲಾವಣೆಗಳೊಂದಿಗೆ ಈವರೆಗೆ ಒಟ್ಟು 4 ಹಂತಗಳ  ಆನ್‌ಲೈನ್‌ ತರಗತಿಗಳನ್ನು ಆರಂಭ ಮಾಡಿತ್ತು.

ಸುಮಾರು 300 ಕ್ಕೂ ಹೆಚ್ಚು ವಿವಿಧ ವಯೋಮಿತಿಯ ಆಸಕ್ತರು ತರಗತಿಗಳಿಗೆ ನೋಂದಾಯಿಸಿಕೊಂಡಿದ್ದು, ಬದಲಾವಣೆ ಮತ್ತು ಹೊಸ ಆಯಾಮದ ಪಠ್ಯಕ್ರಮಗಳೊಂದಿಗೆ  ಕಲಿಕೆ ಭರದಿಂದ ಸಾಗಿರುವಾಗಲೇ ಹಲವಾರು ಕೋರಿಕೆಗಳು ಇನ್ನುಳಿದ ಕಲಿಕಾ ಆಸಕ್ತರ ಕಡೆಯಿಂದ ಬರಲಾರಂಭಿಸಿದ್ದವು. ಈ ಹಿನ್ನೆಲೆಯಲ್ಲಿ ಈಗ ಕನ್ನಡಿಗರು ಯುಕೆ ತನ್ನ 5ನೇ ಹಂತದ ಕನ್ನಡ ಕಲಿ ಆನ್‌ಲೈನ್‌ ಶಿಬಿರಕ್ಕೆ ಚಾಲನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next