Advertisement
ಮೊದಲೆಲ್ಲ ಹೀಗೊಂದು ಪ್ರಶ್ನೆ ಯಾರಾದರೂ ನನಗೆ ಕೇಳಿದರೆ ಒಮ್ಮೆಲೇ ನನಗೆ ಉತ್ತರಿಸಲು ಕಷ್ಟ ವಾಗುತ್ತಿತ್ತು, ಹುಟ್ಟಿ ಬೆಳೆದ ಊರನ್ನು ನನ್ನದೆನ್ನಬೇಕೋ, ಸೇರು ಒದ್ದು ಕಾಲಿಟ್ಟ ಗಂಡನ ಮನೆ ಇರುವ ಊರನ್ನು ನನ್ನದು ಅನ್ನಬೇಕೋ ಅನ್ನುವ ತರ್ಕ ಮನದಲ್ಲಿ ನಡೆದು ಲೋಕಾರೂಢಿಯಂತೆ ಗಂಡನ ಊರನ್ನೇ ನನ್ನೂರು ಎಂದು ಹೇಳಿ ಸುಮ್ಮನಾಗುತ್ತಿದೆ .
Related Articles
Advertisement
ತವರು ಮನೆಗೆ ಅಂಟಿಕೊಳ್ಳುವುದನ್ನ ಹೆಣ್ಣು ಜೀವಕ್ಕೆ ಯಾರು ಹೇಳಿ ಕೊಡುತ್ತಾರೆ ? ನಮಗ್ಯಾಕೆ ತವರೆಂದರೆ ಅಷ್ಟು ಇಷ್ಟ ? ಅಲ್ಲಿ ಶ್ರೀಮಂತಿಕೆ ತುಂಬಿ ತುಳುಕಾಡಬೇಕು ಅಂತೇನೂ ಇಲ್ಲ. ನಮಗಲ್ಲಿ ಹೋದಾಗ ಕೂತು ತಿನ್ನಲು ಸಿಗುತ್ತದೆ ಅಂತಾನೂ ಅಲ್ಲ, ಅದೊಂಥರಾ ಮೋಹ, ವ್ಯಾಮೋಹ ! ಅಲ್ಲಿ ಯಾರೋ ನಮಗಾಗಿ ಕಾಯುತ್ತಾರೆ, ನಮ್ಮಿಷ್ಟದ ಹಣ್ಣು, ಹೂವು, ತರಕಾರಿ ಸಿಕ್ಕಾಗ ನನ್ನ ನೆನಪು ಮಾಡಿಕೊಳ್ತಾರೆ, ಯಾವುದೋ ನನ್ನಿಷ್ಟದ ಹಾಡು ಟಿವಿಯಲ್ಲಿ ಬಂತೆಂದರೆ ನಾನೇ ಅಲ್ಲಿ ಕಾಣಿಸಿಕೊಂಡೆನೇನೋ ಅನ್ನುವಷ್ಟು ಖುಷಿಯಲ್ಲಿ ಸಂಭ್ರಮಿಸುತ್ತಾರೆ.
ವರುಷದ ಹಪ್ಪಳ ಸಂಡಿಗೆ ಉಪ್ಪಿನ ಕಾಯಿಗಳನ್ನು ನಮಗೂ ಸೇರಿಸಿ ಮಾಡಲಾಗುತ್ತದೆ. ನಾವು ಅಲ್ಲಿ ಇರದಿದ್ದರೂ ನಮಗೊಂದು ಸ್ಥಾನವಿದೆ. ನಾನು ನನ್ನ ತವರ ಮುಖ ನೋಡದೆ 3 ವರ್ಷಗಳು ಕಳೆದವು. ಅಮ್ಮ ಪ್ರತಿ ಬಾರಿ ಸಂಪಿಗೆ ಹೂವು, ದುಂಡು ಮಲ್ಲಿಗೆಯ ಹಾಳಿ, ಹೊಸತರದ ಗೊಂಡೆ ಹೂವು, ಮನೆಯಲ್ಲಿ ಬಿಟ್ಟ ಹಣ್ಣು ತರಕಾರಿ ಫೋಟೋಗಳನ್ನು ನೋಡಿ ಕಣ್ಣು ತುಂಬಿಕೊಳ್ಳುವುದು ಬಿಟ್ಟರೆ ಪ್ರಸ್ತುತ ಸಂದರ್ಭದಲ್ಲಿ ಬೇರೆ ದಾರಿಯೇ ಇಲ್ಲ.
ಇಲ್ಲಿಗೆ ಬಂದ ಅನಂತರ ಬರೀ ಮುಂಡಗೋಡವಲ್ಲ. ಇಡೀ ಭಾರತವೇ ನನ್ನ ತವರು, ನಿನ್ನ ಊರು ಯಾವುದು ಅನ್ನುವ ಬದಲು ದೇಶ ಅನ್ನುತ್ತಾರೆ. ಈಗ ಆ ಓಣಿ , ಈ ಗುಡಿಯಬಗ್ಗೆ ಕೇಳುವುದಿಲ್ಲ , ಅಪ್ಪಿತಪ್ಪಿ ಕೇಳಿದರೆ ತಾಜ್ ಮಹಲ್ ಬಗ್ಗೆ ಕೇಳಿ, ನೋಡಿಲ್ಲ ಅಂದಾಗ ಭಾರತದವರಾಗಿ ತಾಜ್‌ಮಹಲ್ ನೋಡಿಲ್ವಾ ಅನ್ನುವ ಮಾತು ಅವರು ಆಡಲ್ಲ. ಆದರೆ ನನಗದು ಸ್ಪಷ್ಟವಾಗಿ ಅವಳ ಮುಖಭಾವದಲ್ಲೇ ಕೇಳಿಸುತ್ತದೆ.
ಭಾರತದಲ್ಲಿ ಕೋವಿಡ್ ಎರಡನೇ ಅಲೆಯ ಅಬ್ಬರ ಶುರುವಾಗಿ, ಮಾಧ್ಯಮಗಳು ಅದನ್ನು ವಿಪರೀತ ವಾಗಿ ಬಿತ್ತರಿಸುತ್ತಿದ್ದಂತೆ , ಈ ನಾಡಿನ ಅದೆಷ್ಟು ಜನ ನನಗೆ ಮೆಸೇಜ್ ಕಳಿಸಿ, ನಿಮ್ಮ ಮನೆಯಲಿ ನಿಮ್ಮ ಭಾಗದಲ್ಲಿ ಎಲ್ಲವು ಕ್ಷೇಮವಲ್ಲವೇ? ಎಂದು ಕೇಳಿದಾಗೆಲ್ಲ ಮನಸು ತುಂಬಿ ಬಂದಿದೆ. ಒಂದು ರೀತಿಯ ಅಯೋಮಯ ಸ್ಥಿತಿ, ಸಹಾಯ ಯಾರಿಗೆ ಹೇಗೆ ಮಾಡುವುದು ? ಧನಸಹಾಯಗಳು ನಿಜಕ್ಕೂ ಅಗತ್ಯ ಇರುವವರಿಗೆ ತಲುಪುತ್ತಿದೆಯ?ಹೀಗೆ ಪ್ರಶ್ನೆಗಳ ಮಳೆಗೆ ಮನಸು ರೋಸಿ ಹೋಗಿತ್ತು. ಇನ್ನೆಷ್ಟು ದಿನ ಹೀಗೆ? ಇದಕ್ಕೆಲ್ಲ ಅಂತ್ಯವೇ ಇಲ್ಲವೇ ? ನಲುಗುತ್ತಿರುವ ನನ್ನ ನಾಡನ್ನು ಕಂಡು ಅಸಹಾಯಕ ಭಾವ ತುಳುಕಾಡುತ್ತಿತ್ತು.
ಆಗಲೇ ಆ ಸುದ್ದಿ ನೋಡಿದೆ. ನಾರ್ದರ್ನ್ ಐರ್ಲೆಂಡ್‌ನಲ್ಲಿ ತಯಾರಾದ ಮೂರು ಆಕ್ಸಿಜನ್ ತಯಾರಿಕಾ ಯಂತ್ರಗಳನ್ನು ಮತ್ತು ಯುಕೆಯ ಎಲ್ಲೆಡೆಯಿಂದ ಒಂದು ಸಾವಿರದಷ್ಟು ವೆಂಟಿಲೇಟರ್‌ಗಳನ್ನು ಬೆಲ್ಫಾ… ವಿಮಾನ ನಿಲ್ದಾಣದಿಂದಲೇ ಕಳಿಸುತ್ತಿದ್ದಾರೆ.
ಇನ್ನೆರಡು ದಿನಕ್ಕೆ ವಿಮಾನದಲ್ಲಿ ಮಷಿನ್‌ಗಳನ್ನೂ ಹಾಕುವ, ಅದನ್ನು ಹೊತ್ತೂಯ್ಯುವ ವಿಮಾನದ ಚಿತ್ರಗಳನ್ನ ಹಾಕುತ್ತಿದ್ದರು. ಆ ಬೃಹತ್ ವಿಮಾನ, ನನಗ್ಯಾಕೋ ಅಮ್ಮ ಪಾರ್ಸೆಲ್ ಕಳಿಸುತ್ತಿದ್ದ ಆ ಕೆಂಪು ಬಣ್ಣದ ಬೆಳಗಾವಿ – ಉಡುಪಿ ಬಸ್ ಮತ್ತು ಅದು ಬರುವ ತನಕ ಹುಬ್ಬಳ್ಳಿ ರಸ್ತೆಯತ್ತ ತಿರುಗಿ ನಿಂತು ಬಸ್ ಬಂದು ಇನ್ನು ಚಕ್ರವೂರುವ ಮೊದಲೇ ಆ ಪಾರ್ಸೆಲ್ ಅನ್ನು ಡ್ರೈವರ್ ಬಳಿ ಕೊಟ್ಟು ಮರಳುವಾಗ ಅಮ್ಮ ಅನುಭವಿಸುತ್ತಿದ್ದ ಆ ನಿರುಮ್ಮಳತೆ, ತವರಿಗೆ ಏನೋ ಕಳಿಸಿದೆ ಎಂಬ ಆ ಕಂಡು ಕಾಣಿಸದ ಆ ಚಿಕ್ಕ ಹೆಮ್ಮೆ, ಇಂದು ನಾನೂ ಅನುಭವಿಸಿದೆ. ಬರೀ ಚಿತ್ರ ವೀಡಿಯೊಗಳ ಮೂಲಕ.
ಪೃಥ್ವಿಯ ಯಾವ ಭಾಗದಲ್ಲಿ ಇದ್ದರೇನು? ನಾವು ಎಲ್ಲಿ ನೆಲೆಯೂರುತ್ತೇವೆಯೋ ಅಲ್ಲೇ ನಮ್ಮದೊಂದು ಪರಿಚಿತರೇ ನಮ್ಮ ಬಂಧುಬಳಗವಾದರೆ, ಆತ್ಮೀಯ ರಾಗುವ ಸ್ನೇಹಿತರು ತವರಿನ ಮನೆಯವರೆನಿಸುತ್ತಾರೆ. ಮೊನ್ನೆ ಕೋವಿಡ್ ವ್ಯಾಕ್ಸಿನ್ ತೆಗೆದುಕೊಂಡು ಬಂದ ನಾಲ್ಕು ದಿನ ಕುಳಿತುಕೊಳ್ಳಲೂ ಆಗದಷ್ಟು ಜ್ವರ, ನಿಶ್ಯಕ್ತಿ ಅದೆಷ್ಟು ಬಾರಿ ಅಪ್ಪ ಅಮ್ಮ ನೆನಪಾದರೋ , ಸಂಕಟಕ್ಕೆ ಸುಮ್ಮನೆ ದುಃಖ ಉಕ್ಕುತ್ತಿತ್ತು. ಕೆಟ್ಟ ಆಲೋಚನೆಗಳು ಬಂದು ಮುಕ್ಕುತ್ತಿದ್ದವು. ಈ ಮಧ್ಯೆ ನನ್ನ ಬೆಲ್ಫಾ… ತವರಿನವರು ಮುಂಜಾನೆ, ಮಧ್ಯಾಹ್ನ, ರಾತ್ರಿ ಎಂಬಂತೆ ಪಾಳಿಯಲ್ಲಿ ರುಚಿ ರುಚಿಯಾದ ಊಟ ಕಳಿಸಿಕೊಟ್ಟು , ನನ್ನ ಮಕ್ಕಳ ಕಾಳಜಿಯನ್ನೂ ಮಾಡಿ ಪದೇ ಪದೇ ಆರೋಗ್ಯ ವಿಚಾರಿಸುತ್ತಿದ್ದರು.
ಆ ದಿನ ಬೆಳಗ್ಗೆ ಬಿಸಿ ಚಪಾತಿ ಮುರಿದು, ಸಪ್ಪೆ ಬೇಳೆಯಲ್ಲಿ ಅದ್ದಿ ಬಾಯಿಗಿಟ್ಟರೆ ಬೇಡ ಬೇಡವೆಂದರೂ ಕಣ್ಣೀರು ಜಾರಿತು. ಇವೆಲ್ಲ ಬರೀ ಥ್ಯಾಂಕ್ಯೂ ಹೇಳಿ ಮುಗಿಸಿ ಬಿಡುವ ಋಣವಲ್ಲ !
ಹಾಲುಂಡ ತವರಿಗೆ ಏನೆಂದು ಹಾಡಲಿ.. ಹೊಳೆದಂಡಿಯಲಿರುವ ಕರಕಿಯ ಕುಡಿ ಹಂಗ| ಹಬ್ಬಲಿ ಅವರ ರಸಬಳ್ಳಿ.. ನನ್ನ ತವರೂ ನಾನಿರುವ ಊರಿನ ಒಳ್ಳೆತನದ, ನಿಸ್ಪೃಹತೆಯ ರಸಬಳ್ಳಿ ಅನಂತವಾಗಲಿ ಎಂಬುದೊಂದೇ ಹಾರೈಕೆ.