ರಾಂಪುರದ ರೈತ ಸೋಮನ ಬಳಿ ಸಾಕಷ್ಟು ಸಾಕು ಪ್ರಾಣಿಗಳಿದ್ದವು. ಅವುಗಳಲ್ಲಿ ಆತನಿಗೆ ಕೊಟ್ಟಿಗೆಯಲ್ಲಿದ್ದ ಲಕ್ಷ್ಮೀ ಎಂಬ ದನ, ಮನೆಯೊಳಗಿದ್ದ ಚಿನ್ನು ಎನ್ನುವ ಬೆಕ್ಕು, ಮನೆಗೆ ಕಾವಲಾಗಿದ್ದ ಕರಿಯ ಎನ್ನುವ ನಾಯಿ ತುಂಬಾ ಪ್ರಿಯವಾಗಿತ್ತು. ಯಾಕೆಂದರೆ ಈ ಮೂವರು ಬಹಳ ಶ್ರದ್ಧೆಯಿಂದ ತಮ್ಮನ್ನು ಸಾಕುತ್ತಿದ್ದ ಸೋಮನ ಮಾತು ಕೇಳುತ್ತಿತ್ತು. ಅಲ್ಲದೇ ತಮ್ಮಿಂದಾದ ಎಲ್ಲ ಕೆಲಸವನ್ನು ಮಾಡುತ್ತಿತ್ತು.
ಒಂದು ಬಾರಿ ಪೇಟೆಗೆ ತರಕಾರಿ ತರಲೆಂದು ಹೋದ ಸೋಮ ಬರುವಾಗ ಒಂದು ಹೊಸ ಬೆಕ್ಕು ಚಿಂಟುವನ್ನು ತಂದು ಚಿನ್ನುವಿನ ಬಳಿಗೆ ಬಂದು ನೀನು ಇದನ್ನು ಚೆನ್ನಾಗಿ ನೋಡಿಕೋ. ರಸ್ತೆಯಲ್ಲಿ ಅನಾಥವಾಗಿತ್ತು. ಅದಕ್ಕಾಗಿ ನಾನು ಕರೆದುಕೊಂಡು ಬಂದೆ ಎಂದ. ಚಿನ್ನು ಆಯಿತೆಂದು ತಲೆ ಅಲ್ಲಾಡಿಸಿತು. ಸೋಮ ಅದರ ತಲೆಯನ್ನು ನೇವರಿಸಿ ತನ್ನ ಕೆಲಸಕ್ಕೆಂದು ಹೊರಹೋದ. ಇದಾಗಿ ವಾರಗಳು ಕಳೆಯಿತು. ಅಷ್ಟರಲ್ಲಿ ಲಕ್ಷ್ಮೀಗೆ ಹೆಣ್ಣು ಕರು ಹುಟ್ಟಿತು. ಅದಕ್ಕೆ ಗಂಗೆ ಎಂದು ನಾಮಕರಣ ಮಾಡಿದ ಸೋಮ ಹೆಚ್ಚಾಗಿ ಮುದ್ದು ಮಾಡ ತೊಡಗಿದ. ಕೆಲವು ದಿನಗಳು ಕಳೆದಾಗ ಸೋಮನ ಸ್ನೇಹಿತನೊಬ್ಬರ ಫಾರಿನ್‌ಗೆ ಹೋಗುವುದಾಗಿ ಹೇಳಿ ಅವನ ಬಳಿ ಇದ್ದ ಟಾಮಿ ಎನ್ನುವ ನಾಯಿ ಮರಿಯನ್ನು ಸೋಮನಿಗೆ ಕೊಟ್ಟ. ತುಂಬಾ ಮುದ್ದಾಗಿದ್ದ ಆ ನಾಯಿ ಮರಿ ಸದಾ ಸೋಮನ ಜತೆಯೇ ಇರಲಾರಂಭಿಸಿತು.
ಹೀಗೆ ದಿನಗಳು ಉರುಳಿದಂತೆ ಲಕ್ಷ್ಮೀ, ಚಿನ್ನು, ಕರಿಯನಿಗೆ ಸೋಮ ತಮಗಿಂತ ಹೆಚ್ಚಾಗಿ ಬಂದ ಹೊಸಬರನ್ನು ಪ್ರೀತಿಸುತ್ತಿದ್ದಾನೆ ಎನ್ನುವ ಭಾವನೆ ಬರತೊಡಗಿತು. ಇದನ್ನು ಕೇಳಿ ಮೂಲೆಯಲ್ಲಿ ಮಲಗಿದ್ದ ಸೋಮನಿಂದ ಸದಾ ಬೈಸಿಕೊಳ್ಳುತ್ತಿದ್ದ ಮುಂಗ್ಲಿ ಬೆಕ್ಕು ಎದ್ದು ಕುಳಿತಿತು. ಇವರ ಮಧ್ಯೆ ಜಗಳ ತರಲು ಇದೇ ಸೂಕ್ತ ಸಮಯ. ಹೇಗಾದರೂ ಮಾಡಿ ಇವರನ್ನು ಇಲ್ಲಿಂದ ಓಡಿಸಬೇಕು. ಬಂದ ಹೊಸಬರಿಗೆ ನಾನು ಬುದ್ದಿ ಕಲಿಸುತ್ತೇನೆ ಎಂದು ಮನದಲ್ಲೇ ಯೋಚಿಸತೊಡಗಿತು. ಅದರಂತೆ ಅವರ ಮಾತುಕತೆಯ ಮಧ್ಯೆ ನುಗ್ಗಿ ಬಂದ ಮುಂಗ್ಲಿ, ಹೇಗಾದರೂ ನಿಮಗೆ ವಯಸ್ಸಾಗುತ್ತ ಬಂತು. ಇನ್ನು ನಿಮ್ಮಿಂದ ಸೋಮನಿಗೆ ಏನು ಲಾಭವಿದೆ. ಅದಕ್ಕಾಗಿ ಅವನು ಹೊಸಬರನ್ನು ಕರೆತಂದಿದ್ದಾನೆ. ಇನ್ನು ಕೆಲವೇ ದಿನಗಳಲ್ಲಿ ನಿಮ್ಮನ್ನು ಕಾಡಿಗೆ ಬಿಟ್ಟು ಬರಲು ಬಹುದು. ಯಾವುದಕ್ಕೂ ಸಿದ್ಧರಾಗಿರಿ ಎಂದಿತು. ಇದರಿಂದ ಅವುಗಳು ತುಂಬಾ ದುಃಖತಪ್ತವಾದವು.
ಮರುದಿನ ಸೋಮ ಎದ್ದವನೇ ಗಂಗೆಯ ಬಳಿ ಹೋಗಿ ಮುದ್ದು ಮಾಡಿದ. ಬಳಿಕ ಆಕೆಗೆ ಹುಲ್ಲು, ನೀರು ಕೊಟ್ಟ, ಅಷ್ಟರಲ್ಲಿ ಅಲ್ಲಿಗೆ ಬಂದ ಚಿಂಟು ಅವನ ಕಾಲು ನೇವರಿಸತೊಡಗಿತು. ಕೂಡಲೇ ಆತ ಅದನ್ನು ಮುದ್ದು ಮಾಡಿ ಅದಕ್ಕೆ ಕುಡಿಯಲು ಹಾಲು ಹಾಕಿದ. ಆಗ ಅಳುತ್ತ ಟಾಮಿ ಅವನ ಬಳಿ ಬರಲು ಅದನ್ನು ಮುದ್ದು ಮಾಡಿ ತಿನ್ನಲು ಬಿಸ್ಕೆಟ್ ನೀಡಿದ. ಬಳಿಕ ತಾನು ಮಾರುಕಟ್ಟೆಗೆ ಹೋಗಿ ಬರುವುದಾಗಿ ಅವುಗಳಿಗೆ ಹೇಳಿ ಹೊರನಡೆದ. ಇದನ್ನೆಲ್ಲ ದೂರದಿಂದಲೇ ಗಮನಿಸುತ್ತಿದ್ದ ಚಿನ್ನು, ಕರಿಯ, ಲಕ್ಷಿ$¾àಗೆ ನಿಜವಾಗಿಯೂ ಈಗ ಸೋಮನಿಗೆ ನಮ್ಮ ಅಗತ್ಯವಿಲ್ಲ ಎಂದೆನಿಸಿತು. ಇತ್ತ ಹಸಿವು ತಾಳಲಾರದೆ ಲಕ್ಷಿ$¾à ಅಳುತ್ತಿದ್ದಳು. ಇದನ್ನು ನೋಡಿದ ಸೋಮನ ಹೆಂಡತಿ ಬಂದು ಸಿಟ್ಟಿನಿಂದ ಅವಳಿಗೆ ಎರಡು ಪೆಟ್ಟು ಕೊಟ್ಟು ಸುಮ್ಮನಿರುವಂತೆ ಹೇಳಿದಳು. ಚಿನ್ನು ಮತ್ತೆ ಕರಿಯ ಅದರ ಬಳಿ ಹೋಗಿ ಸಮಾಧಾನ ಪಡಿಸಿ, ಸೋಮನಿಗೆ ಈಗ ನಾವು ಬೇಡವಾಗಿದ್ದೇವೆ. ಅವನು ನಮ್ಮನ್ನು ಕಾಡಿಗೆ ಅಟ್ಟುವ ಮೊದಲೇ ನಾವೇ ಹೊರಟುಹೋಗೋಣ ಇವತ್ತು ರಾತ್ರಿ. ಎಲ್ಲದಾರೂ ಒಟ್ಟಿಗೆ ನೆಲೆ ನಿಂತು ಬದುಕು ಕಟ್ಟಿಕೊಳ್ಳೋಣ ಎಂದಿತು. ಇದನ್ನು ಕೇಳಿದ ಮಂಗ್ಲಿಗೆ ಬಹಳ ಖುಷಿಯಾಯಿತು. ಇನ್ನು ಇವರ ಚಿಂತೆಯಿಲ್ಲ. ಹೊಸಬರನ್ನು ಇಲ್ಲಿಂದ ಓಡಿಸಬೇಕು ಎಂದು ಮನದಲ್ಲೇ ಲೆಕ್ಕಾಚಾರ ಶುರು ಮಾಡಿತು. ರಾತ್ರಿಯಾಗುತ್ತಲೇ ಲಕ್ಷಿ$¾à, ಕರಿಯ, ಚಿನ್ನು ಮನೆ ಬಿಟ್ಟು ತೆರಳಿದರು. ಮರುದಿನ ವಿಷಯ ತಿಳಿದ ಸೋಮ ಸಾಕಷ್ಟು ಹುಡುಕಾಡಿದರೂ ಸಿಗಲಿಲ್ಲ.
ಮರುದಿನವೇ ಮಂಗ್ಲಿ ಚಿಂಟುವಿನೊಡನೆ ಕಾದಾಟಕ್ಕೆ ಇಳಿದು ಅದನ್ನು ಓಡಿಸಿತು. ಬಳಿಕ ಗಂಗೆಯ ಬಳಿಗೆ ಬಂದು ನಿನ್ನ ತಾಯಿಗೆ ಸೋಮ ಸಾಕಷ್ಟು ಹೊಡೆದಿದ್ದ. ಹೀಗಾಗಿ ಆಕೆ ಯಾವಾಗಲೂ ಆವನೆದುರು ಭಯದಿಂದ ಇರುತ್ತಿದ್ದಳು. ಅವನು ಹೇಳಿದ ಎಲ್ಲ ಕೆಲಸ ಮಾಡುತ್ತಿದ್ದಳು ಎಂದೆಲ್ಲ ಹೇಳಿತು. ಇದರಿಂದ ಗಂಗೆಯ ಮನದೊಳಗೂ ಆತಂಕ ಹೆಚ್ಚಾಯಿತು. ನಿನ್ನ ತಾಯಿ ಎಲ್ಲಿದ್ದಾಳೆ ಎಂದು ನನಗೆ ಗೊತ್ತಿದೆ. ನೀನು ಇಷ್ಟಪಟ್ಟರೆ ನಾನು ಅವಳ ಬಳಿಗೆ ಕರೆದುಕೊಂಡು ಹೋಗುತ್ತೇನೆ ಎಂದಿತು. ಗಂಗೆ ಆಯಿತೆಂದು ಒಪ್ಪಿಕೊಂಡಳು. ಆ ದಿನ ರಾತ್ರಿ ಕಾಡಿನ ಸಮೀಪಕ್ಕೆ ಕರೆತಂದು ಗಂಗೆಯನ್ನು ಬಿಟ್ಟ ಮಂಗ್ಲಿ, ಇಲ್ಲಿಂದ ಸ್ವಲ್ಪ ದೂರದ ಗುಹೆಯಲ್ಲಿ ನಿನ್ನ ತಾಯಿ ಇದ್ದಾಳೆ ಹೋಗು ಎಂದಿತು. ಸರಿ ಎಂದು ಗಂಗೆ ಹೊರಟಿತು. ಮಂಗ್ಲಿ ಮರಳಿ ಮನೆಗೆ ಬಂದಳು. ಮರುದಿನ ಚಿಂಟು ಮತ್ತು ಗಂಗೆಯನ್ನು ಹುಡುಕಿ ಸುಸ್ತಾದ ಸೋಮನಿಗೆ ಇದರ ಹಿಂದೆ ಏನೋ ಸಂಚಿದೆ ಎನ್ನಿಸತೊಡಗಿತು. ಆದರೆ ಏನೆಂದು ಗೊತ್ತಾಗಲಿಲ್ಲ. ಬಳಿಕ ಮಂಗ್ಲಿಯ ಮುಂದಿನ ಗಮನ ಟಾಮಿಯನ್ನು ಓಡಿಸುವುದಾಗಿತ್ತು. ಆದರೆ ಚಾಣಾಕ್ಷ ಟಾಮಿ ಅದರ ಮಾತಿಗೆ ಮರುಳಾಗಲಿಲ್ಲ. ಈಗ ಸೋಮನ ದುಃಖ, ಮಂಗ್ಲಿಯ ಸಂಚಿನ ಅರಿವಾದ ಟಾಮಿ ಮರುದಿನ ಬೆಳಗ್ಗೆ ಎದ್ದ ತತ್‌ಕ್ಷಣ ಓಡಿಹೋಯಿತು. ಮೊದಲೇ ಎಲ್ಲರನ್ನು ಕಳೆದುಕೊಂಡಿದ್ದ ದುಃಖದಲ್ಲಿದ್ದ ಸೋಮ ಟಾಮಿಯನ್ನು ಗಮನಿಸಲಿಲ್ಲ.
ಟಾಮಿ ನೇರವಾಗಿ ಕಾಡಿನ ಒಳಗೆ ಬಂತು. ಅಷ್ಟರಲ್ಲಿ ಹುಲಿಯೊಂದು ಗಂಗೆಯನ್ನು ತಿನ್ನಲು ಹೊಂಚು ಹಾಕುತ್ತಿರುವುದನ್ನು ಗಮನಿಸಿ ಜೋರಾಗಿ ಬೊಬ್ಬೆ ಹೊಡೆಯಲು ಪ್ರಾರಂಭಿಸಿತು. ಟಾಮಿಯ ಧ್ವನಿ ಕೇಳಿ ಹತ್ತಿರವೇ ಇದ್ದ ಲಕ್ಷ್ಮೀ, ಕರಿಯ, ಚಿನ್ನು ಅಲ್ಲಿಗೆ ಓಡಿ ಬಂದರು. ಎಲ್ಲರೂ ಒಟ್ಟಾಗಿದ್ದನ್ನು ನೋಡಿ ಹುಲಿ ಓಡಿ ಹೋಯಿತು. ತಾಯಿಯನ್ನು ನೋಡಿದ ಗಂಗೆ ಓಡಿ ಬಂದು ತಬ್ಬಿ ದುಃಖೀಸಿದಳು. ಆಗ ಟಾಮಿ ಎಲ್ಲರಿಗೂ ಮಂಗ್ಲಿಯ ಸಂಚಿನ ಬಗ್ಗೆ ತಿಳಿಸಿತು. ಜತೆಗೆ ನೀವೆಲ್ಲರೂ ಮನೆಗೆ ಬನ್ನಿ. ಸೋಮ ನಿಮ್ಮನ್ನೆಲ್ಲ ಹುಡುಕಿ ಸುಸ್ತಾಗಿದ್ದಾನೆ. ಕಳೆದ ಮೂರುನಾಲ್ಕು ದಿನಗಳಿಂದ ಸರಿಯಾಗಿ ಊಟವನ್ನೂ ಮಾಡುತ್ತಿಲ್ಲ ಎಂದಿತು. ಸರಿ ಎಂದು ಎಲ್ಲರೂ ಮನೆಗೆ ಮರಳಿದರು. ಅವರನ್ನೆಲ್ಲ ನೋಡಿದ ಸೋಮನಿಗೆ ಅತೀವ ಸಂತೋಷವಾಗಿತ್ತು. ಎಲ್ಲರನ್ನೂ ಮುದ್ದು ಮಾಡಿ ತಿನ್ನಲು, ಕುಡಿಯಲು ಬೇಕಾದಷ್ಟನ್ನು ಕೊಟ್ಟ. ಅವುಗಳಿಂದ ನಡೆದ ವಿಷಯ ತಿಳಿದ ಸೋಮ ಸಿಟ್ಟಿನಿಂದ ಮಂಗ್ಲಿಯನ್ನು ಸರಿಯಾಗಿ ಹೊಡೆದು ಕಾಡಿಗೆ ಅಟ್ಟಿದ. ಇನ್ನು ಮುಂದೆ ಮನೆ ಕಡೆ ಕಾಲಿರಿಸದಂತೆ ಎಚ್ಚರಿಕೆ ನೀಡಿದ. ಇವರೆಲ್ಲ ಮನೆಗೆ ಹಿಂತಿರುಗಿದ್ದನ್ನು ಕೇಳಿದ ಚಿಂಟು ಕೂಡ ಮನೆಗೆ ಬಂತು. ಬಳಿಕ ಸೋಮ ಎಲ್ಲರಿಗೂ ಸಮಾನ ಪ್ರೀತಿ ತೋರಲಾರಂಭಿಸಿದ.
ರಿಷಿಕಾ