Advertisement

ಒಂದು ರಾಗದ ನೆನಪಿನ ಬಣ್ಣ !

02:04 PM May 19, 2021 | Team Udayavani |

ನಾವು ವಾಸವಾಗಿರುವ ಅಪಾರ್ಟ್‌ಮೆಂಟ್‌ನ ಗ್ರೌಂಡ್‌ ಫ್ಲೋರ್‌ನಲ್ಲಿ ಅಂಗಡಿಗಳಿವೆ. ಚಿಕ್ಕ ಸೂಪರ್‌ ಮಾರ್ಕೆಟ್‌, ಲಾಂಡ್ರಿ, ಫ್ಲೋರಿಸ್ಟ್‌ ಶಾಪ್‌,  ಒಂದು ಚಿಕ್ಕ ಬೇಕರಿ. ಇಲ್ಲಿ ನೆಲೆಸಿರುವವರ ಅನುಕೂಲಕ್ಕಾಗಿ. ಅದೊಂದು ದಿನ ಬೆಳಗ್ಗೆ ಯುನಿವರ್ಸಿಟಿಗೆ ಹೊರಟಿದ್ದೆ. ಲಿಫ್ಟ್ನಿಂದ ಹೊರಬಂದು ಹೂವಿನ ಅಂಗಡಿ ಎದುರು ಬರುತ್ತಿದ್ದಂತೆ ಇಂಪಾದ ಹಿತವಾದ ಹಿಂದಿಯ ಹಾಡೊಂದು ತೇಲಿಬಂತು.

Advertisement

ಅಪಾರ್ಟ್‌ ಮೆಂಟ್‌ ರಿಸೆಪ್ಶನಿಗೆ ತಾಗಿಕೊಂಡಿರುವ ಮೊದಲನೇ ಅಂಗಡಿಯೇ ಹೂವಿನದು. ಅಂಗಡಿಯನ್ನು ನೋಡುವುದೇ ಸಂತಸ. ಅಷ್ಟು ಚೆಂದವಾಗಿದೆ. ಅಲ್ಲಿ ಮೂವರು ಫಿಲಿಫಿನಿ ಜನರು ಕೆಲಸ ಮಾಡುತ್ತಾರೆ. ಮಾಲಕ ಸೌದಿ ಅರೇಬಿಯಾದವರು. ಅವರು ಹಿಂದಿ ಹಾಡುಗಳ ಅಭಿಮಾನಿ. ಅವರ ಮೊಬೈಲಿಂದ ತೇಲಿಬಂದ ಹಾಡು, ನಾನು ಕಾರಿನೊಳಗೆ ಕುಳಿತು ಯುನಿವರ್ಸಿಟಿಗೆ ಸಾಗುತ್ತಿರುವಾಗ ಹಳೆಯದೊಂದು ಅವಿಸ್ಮರಣೀಯ ನೆನಪು ರಂಗು ಪಡೆಯಲು  ಪ್ರೇರೇಪಿಸಿತು.

ಅಂದು ಬೆಳಗ್ಗೆ ದಿ| ಪಂಡಿತ ಕುಮಾರ ಗಂಧರ್ವರ ಮಗಳು ಕಲಾಪಿನಿ ಕೊಂಮಕಾಳಿ ಧಾರವಾಡದ ನಮ್ಮ ಮನೆಗೆ ಆಗಮಿಸಿದ್ದರು. ಬೆಳಗಿನ ತಿಂಡಿಯ ಅನಂತರ ನಾವೆಲ್ಲ ಹರಟುತ್ತ ಕುಳಿತಿದ್ದಾಗ ಕಲಾಪಿನಿ ಅವರು ಕುಮಾರ ಗಂಧರ್ವರ Tribute to Kumar Gandharva  ಎಂಬ 1993ರಲ್ಲಿ ಬಿಡುಗಡೆಯಾದ ಧ್ವನಿಸುರುಳಿಯನ್ನು ನಮ್ಮ ಕೈಗಿತ್ತರು. ಅಂದು ಕಲಾಪಿನಿಯವರ ಸಂಗೀತ ಕಛೇರಿಯಿತ್ತು.

ಆ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಾವು ಮಾರನೇ ದಿನ ಅವರು ತೆರಳಿದ ಅನಂತರ ನಮಗಿತ್ತ ರೆಕಾರ್ಡಿಂಗ್‌ ಕೇಳತೊಡಗಿದೆವು. ಹಾಡು ಪ್ರಾರಂಭವಾಗಿ ಐದಾರು ನಿಮಿಷವಾಗಿರಬಹುದು. ಆಗ ಮನೆ ಯಲ್ಲಿದ್ದ 8 ತಿಂಗಳ ನನ್ನ ಪುಟ್ಟ ಮಗು ದಾಮಿನಿ, ಹಾಡಿಗೆ ನೃತ್ಯ ಮಾಡುವಂತೆ ಕೈಕಾಲು ಜೋರಾಗಿ ಬಡಿಯಲು ಪಾಾÅರಂಭಿಸಿದಳು. ಒಂದೆರಡು ಶಬ್ಧ ಮಾತನಾಡುತ್ತಿದ್ದ ನಡೆಯಲು ಬಾರದ ಮಗು ಹಾಗೂ ಹೀಗೂ ಎದ್ದು ನಿಲ್ಲುವ ಪ್ರಯತ್ನ ಸಾಗಿತ್ತು. ಸುಶ್ರಾವ್ಯವಾಗಿ ಕುಮಾರ ಗಂಧರ್ವರ ಸಿರಿ ಕಂಠದಿಂದ ಹಾಡು ಹೊಮ್ಮುತ್ತಿತ್ತು ನನ್ನ ಮಗಳು ತನ್ನದೇ ರಾಗದಲ್ಲಿ ಕಿರುಚುತ್ತಾ ಎದ್ದು ನಿಂತು ಹೆಜ್ಜೆ ಹಾಕಿ ನಡೆದು ಪ್ಲೇಯರ್‌ ತಬ್ಬಿಕೊಂಡಳು.

ಇದು ಇಂದಿಗೂ ನಮಗೆ ಮತ್ತೆ ಮತ್ತೆ ಕನಸಿನಂತೆ ಕಣ್ಣೆದುರು ಬರುವು ದೃಶ್ಯವಿದು. ಸ್ವರದ ಸ್ಪಂದನೆಯ ಶಕ್ತಿಯ ವಿಚಾರ ಅಲ್ಲೆಲ್ಲಿಯೋ ಓದಿ ತಿಳಿದುಕೊಂಡ ನಮಗೆ, ಭಾಷೆ ಅರಿಯದವರ ಮೇಲೂ ಸಂಗೀತ ಪ್ರಭಾವ ಬೀರುವುದೆನ್ನುವ ಪ್ರತ್ಯಕ್ಷ ದರ್ಶನದ ಅನುಭವವಾಯಿತು. ನಾನು ಉರುಳಿಕಾಂಚನ ನಿಸರ್ಗ ಆಶ್ರಮ ಪುಣೆಯಲ್ಲಿ ಕೆಲವು ತಿಂಗಳು ಕೆಲಸ ಮಾಡಿದಾಗ ಸಂಗೀತ ಚಿಕಿತ್ಸೆಯನ್ನೂ ಕಲಿತಿದ್ದೆ. ಶಿವಪುತ್ರ ಸಿದ್ಧರಾಮಯ್ಯ ಕೊಂಮಕಾಳಿಮಠ ಇವರ ಮೂಲ ನಾಮಧೇಯ, ಕುಮಾರ ಗಂಧರ್ವ ಇವರಿಗೆ ಅರ್ಪಿತವಾದ ಉಪಾಧಿ. 1924 ರಲ್ಲಿ ಜನ್ಮ, 1992ರಲ್ಲಿ ಮರಣ. ಬೆಳಗಾವಿಯ ಸುಲೇಭಾವಿ ಜನ್ಮಸ್ಥಳ, ಭೋಪಾಲದ ದೇವಾಸದಲ್ಲಿ ನೆಲೆಸಿದ್ದರು.

Advertisement

ನನ್ನ ಮಗಳು ಅವರನ್ನು ನೋಡಿಲ್ಲ, ಕೇವಲ ಸ್ವರದ ಸೆಳೆತ ಅವಳನ್ನು ಪ್ರೇರೇಪಿಸಿತು. ಸಂಗೀತ ಚೇತನ, ಸ್ವರ ಮಾಂತ್ರಿಕರು ಅವರು. ನಮ್ಮ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಪುರಾತನ ಹಿನ್ನೆಲೆಯಿದೆ. ವೇಳೆಗೆ ಅನುಗುಣವಾಗಿ ಮುಂಜಾನೆ, ಸಂಜೆ, ರಾತ್ರಿಯ ರಾಗಗಳು ಮತ್ತು  ರಾಗಗಳನ್ನು  ಪ್ರಹರಗಳಿಗೆ ಅನುಗುಣವಾಗಿ ಹಾಡಲಾಗುತ್ತದೆ. ಇನ್ನು ಋತುಗಳಿಗೆ ಹೇಮಂತ ರಾಗ, ರಾಗ ಬಸಂತ, ರಾಗ ಮೇಘ ಮಲ್ಹಾರ ಇತ್ಯಾದಿ ಹಲವು ಪ್ರಕಾರಗಳಿವೆ. ಮನುಷ್ಯನ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವ ರಾಗಗಳು, ತನ್ನದೇ ಆದ ವಾತಾವರಣ ಸೃಷ್ಟಿಸುವ ವಿಶಿಷ್ಟ ಸಾಮರ್ಥ್ಯ ಹೊಂದಿವೆ. ತಾನಸೇನ ಮೇಘ ಮಲ್ಹಾರ ರಾಗ ಹಾಡಿದಾಗ ವರ್ಷಧಾರೆಯಾಗುತ್ತಿತ್ತು, ರಾಗ ದೀಪಕ ಹಾಡಿದಾಗ ಬೆಳಕು ಪ್ರಜ್ವಲಿಸುತ್ತಿತ್ತು ಅನ್ನುವ ಉಲ್ಲೇಖಖವಿದೆ.

ನಾವೆಲ್ಲ ಗಮನಿಸುವಂತೆ ಮನುಷ್ಯ ಸಂತಸವಾಗಿದ್ದಾಗಲೂ ಮತ್ತು ದುಃಖ ತಪ್ತನಾದಾಗಲೂ ಹಾಡು ಕೇಳುತಾಾ¤ನೆ. ಇದನ್ನು ನೈಸರ್ಗಿಕ ಕ್ರಿಯೆ ಎನ್ನಬಹುದು. ಯಾರು ಯಾವ ಭಾವದೊಳಗೆ ಇರುತ್ತಾರೋ ಆ ಭಾವಕ್ಕೆ ಸಂಗೀತ ಸಹ ಸ್ಪಂದಿಸುವುದು. ಭಾಷೆ ಅರ್ಥವಾಗದಿದ್ದರೂ ಸಂಗೀತ ಮನದಾಳಕ್ಕೆ ಇಳಿದುಬಿಡುವುದು.

ದೈಹಿಕ ಮತ್ತು ಮಾನಸಿಕ ಏರುಪೇರಿನ ಚಿಕಿತ್ಸೆಗೆ ರಾಗ ಚಿಕಿತ್ಸೆ ಬಳಸುತ್ತಾರೆ. ನಾದ ಯೋಗ ಮತ್ತು ರಾಗ ಚಿಕಿತ್ಸೆ ಸಂಗೀತ ಚಿಕಿತ್ಸೆಯ ಪ್ರಾಚೀನ ವ್ಯವಸ್ಥೆಯ ಬೆನ್ನೆಲುಬು. ಜಗತ್ತಿನಲ್ಲಿ ಪ್ರಥಮ ರಾಗ ಚಿಕಿತ್ಸೆ 1800ರಲ್ಲಿ ಪ್ರಾರಂಭವಾಯಿತು.

ಜೀವನದ ಅತ್ಯಂತ ಸರಳ ಪ್ರೇರಣೆ ದೊರೆಯುವುದು ಸಂಗೀತದಿಂದ. ನಾನು ಪ್ರತಿದಿನ ಕೆಲಸದಿಂದ ಮನೆಗೆ ಮರಳಿದ ಅನಂತರ ಆಯಾಸದಿಂದ ನನ್ನನ್ನು ದೂರ ಮಾಡುವುದೇ ಶಿವಕುಮಾರ ಶರ್ಮಾ ಅವರ ಸಂತೂರ, ಭೀಮಸೇನ ಜೋಶಿ ಅವರ ಗಾಯನ, ಪರವೀನ್‌ ಸುಲ್ತಾನರ ಹಾಡು ಹೀಗೆ ಮುಂದುವರಿಯುವ ನಮ್ಮ ದೇಶದ ಗಾನ ಗಂಧರ್ವರ ಗಾಯನಗಳು.

ಊರು, ದೇಶ ತಿರುಗುವ ನಾನು ಹಲವಾರು ದಿಗ್ಗಜರ, ಪಾಶ್ಚಾತ್ಯ ಸಂಗೀತ ಸೇರಿದಂತೆ ಅರಬ್‌ ರಾಷ್ಟ್ರಗಳ ಸೂಫಿ ಕಛೇರಿ ಕೇಳಿ ಆನಂದಿಸಿದ್ದೇನೆ. ಯುರೋಪ ದೇಶಗಳ ರಸೆೆ¤ಯಂಚಿನ ಮಾಡರ್ನ ವಿಧಾನದ ಸಂಗೀತವನ್ನೂ ಸವಿದಿರುವೆ.

ಸಂಗೀತದ ಸ್ವರಗಳು ಅಜರಾಮರ

ಹೀಗೆ ಸಾಗುತ್ತಿರುವಾಗ ನಾನಿರುವ ದೇಶದಲ್ಲಿ, ಇಲ್ಲ ಇನ್ನಾವುದೇ ದೇಶದಲ್ಲಿ ಮಾತೃಭೂಮಿಯ ಸ್ವರ ಮಾಧುರ್ಯ  ಕಿವಿಗೆ ಬಿದ್ದರೆ ಆಗುವ ರೋಮಾಂಚನವೇ ಬೇರೆ. ಜಗತ್ತಿನ ಅದಾವುದೇ ಮೂಲೆಯಲ್ಲಿ ಎಲ್ಲಿಯೇ ಅಲೆದರೂ ಸ್ವರ ಮಾಂತ್ರಿಕರನ್ನು ಮರೆಯಲಾದೀತೆ ? ಸಂಗೀತದ ಉತ್ತುಂಗದ ಶ್ರೇಯಸ್ಸಿನ ಕುಮಾರ ಗಂಧರ್ವರನ್ನು ಮರೆಯುವುದೆಂತು…

ಇಂತಹ ಹಲವಾರು ಸಂಗೀತ ದಿಗ್ಗಜರನ್ನು ಪಡೆದ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯ ದೇಶ ನಮ್ಮದು ಎನ್ನುವ ಹೆಗ್ಗಳಿಕೆ. ಬೆಲೆ ಕಟ್ಟಲಾಗದ ಅದ್ಭುತಗಳನ್ನು ಹೊಂದಿದ ಸಿರಿವಂತಿಕೆ ನಮ್ಮ ದೇಶದ ಆಸ್ತಿ. ನಾವು ಎಲ್ಲಿಯೇ ನೆಲೆಸಿರಲಿ ತವರಿನ ನಾಜೂಕಿನ ಸ್ವರಗಳು ಮನಸಿನ ಅದಾವುದೋ ಒಂದು ತಿರುವಿನಲ್ಲಿ ಗುನುಗುತ್ತಲೇ ಇರುತ್ತವೆ.  ಜೀವಜಲದ  ಹರಿವು  ನಮ್ಮ ಜತೆಗೇ ಸಾಗುತ್ತಿರುತ್ತವೆ…

 

ಡಾ| ವಾಣಿ ಸಂದೀಪ ,ಸೌದಿ ಅರೇಬಿಯ

Advertisement

Udayavani is now on Telegram. Click here to join our channel and stay updated with the latest news.

Next