Advertisement
ಮಗುವನ್ನು ಸಮಾಧಾನ ಪಡಿಸಲೆತ್ನಿಸಿ ಸೋಲುತ್ತಿದ್ದರೂ ಸುಮ್ಮನೆ ಕೂರುವ ಮನಸ್ಥಿತಿ ಅವಳದಾಗಿಲ್ಲ ಈಗ. ಹಾಗೆ ಯಾವ ತಾಯಿ ತಾನೇ ಕುಳಿತುಕೊಳ್ಳಲು ಸಾಧ್ಯ. ಮಗುವಿಗಾಗಿ ಹೊಸಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಇದ್ದಾಳೆ. ಇಲ್ಲಿ ಅವಳ ಯಾವ ಸರ್ಟಿಫಿಕೇಟ್‌ಗಳೂ ಉಪಯೋಗಕ್ಕೆ ಬರುವುದಿಲ್ಲ ಎಂದು ಗೊತ್ತಿದ್ದರೂ ತನ್ನ ಮನೆಯಲ್ಲಿ ದಿನ ನಿತ್ಯ ವೈಜ್ಞಾನಿಕ ಪ್ರಯೋಗ ಮಾಡುತ್ತ ಇಡೀ ಜೀವನವೇ ಒಂದು ಪ್ರಾಯೋಗ ಶಾಲೆ ಮಾಡಿ ಬಿಟ್ಟಿದ್ದಾಳೆ.
Related Articles
Advertisement
ಆಗ ಅಮ್ಮ ಸ್ವಲ್ಪ ಜಾಣತನದಿಂದ ಹೇಳುತ್ತಾಳೆ. ಕೇಳು ಕಂದ ಯಾರು ಎಲ್ಲರಿಗೂ ಬೇಕಾದವ ರಾಗಿರುತ್ತಾರೋ, ಎಲ್ಲರ ಪ್ರೀತಿ ಗಳಿಸಿರುತ್ತಾರೋ, ಭೂಮಿ, ನಕ್ಷತ್ರ, ಸೂರ್ಯ, ಮೋಡ, ಆಕಾಶ, ನವಗ್ರಹಗಳಿಗೆ ಚಂದಿರನೆಂದರೆ ತುಂಬಾ ಪ್ರೀತಿಯ ದೊರೆ. ಹೀಗಾಗಿ ಎಲ್ಲರೂ ಚಂದಿರನನ್ನು ಹುಡುಕುವ ಪ್ರಯತ್ನ ಮಾಡುತ್ತಾರೆ. ಮೋಡ ಅದನ್ನೇ ಮಾಡಿದ್ದು ಎಂದು ಅಮ್ಮ ಮಗುವಿಗೆ ಹೇಳುತ್ತಾಳೆ. ಆಗ ಮಗು ಯೋಚನೆ ಮಾಡುತ್ತದೆ ಮತ್ತು ಚಂದಿರನಿಗೆ ತನ್ನನ್ನು ಹೋಲಿಸಿಕೊಳ್ಳುತ್ತದೆ. ಮತ್ತೆ ಪ್ರಶ್ನೆ ಕೇಳಲು ಮುಂದಾಗುತ್ತದೆ. ಅಮ್ಮ ನಾನು ಚಂದಿರನ ಹಾಗೆ ಎಲ್ಲರಿಗೂ ಪ್ರೀತಿಯವನಾಗಲು, ನನ್ನನ್ನು ಎಲ್ಲರೂ ಹುಡುಕಿಕೊಂಡು ಬರಲು ಏನು ಮಾಡಬೇಕು ಎಂದು ಕೇಳುತ್ತದೆ.
ಮಗುವಿಗೆ ನಾವು ಸಣ್ಣ ಸಣ್ಣ ವಿಚಾರ ಹೇಳಿಕೊಟ್ಟರೆ ದೊಡ್ಡ ದೊಡ್ಡ ವಿಚಾರವನ್ನೇ ಕಲಿಯುತ್ತದೆ. ನಾವು ಮಗುವಿನಿಂದ ಕಲಿಯುವ ವಿಚಾರಗಳೂ ಬಹಳಷ್ಟಿವೆ. ಹೀಗೆ ಅಮ್ಮ ಒಂದೊಂದು ತುತ್ತಿನಲ್ಲೂ ಮುತ್ತಿನಂತ ನುಡಿಗಳನ್ನು ವಿವರಿಸಿದಾಗ ಮಾತ್ರ ಉತ್ತಮ ವಿಚಾರಧಾರೆ ಹರಿಸುವಲ್ಲಿ ಅಮ್ಮ ಮುಖ್ಯ ಶಕ್ತಿಯಾಗಿ ಸಮಾಜದ ಸರ್ವಸ್ವವೂ ಆಗುತ್ತಾಳೆ. ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎನ್ನುವ ಮಾತು ಅಕ್ಷರಶಃ ನಿಜ.
ಮಗುವಿಗೆ ಉಣಿಸುವ ಒಂದು ತುತ್ತು ಸಾಮಾನ್ಯವಲ್ಲ. ಮಗುವಿನ ಮಾನಸಿಕ, ದೈಹಿಕ ಬೆಳವಣಿಗೆಗೆ ಪೂರಕವಾದ ಶಿಸ್ತಿನ ಪಾಠಶಾಲೆಯನ್ನೇ ಅದು ತೆರೆಯುತ್ತದೆ.
ಎಲ್ಲಿಂದ ಎಲ್ಲಿಗೆ ಹೋಯಿತು ವಿಚಾರ ಅಂದರೆ ಚಂದಿರ ನಿಂದಾ ಹಿಡಿದು ನಭೋಮಂಡಲ ದವರೆಗೆ. ಸುಮ್ಮನೆ ತರಗತಿಯಲ್ಲಿ ಸಾಮಾನ್ಯ ವಿಜ್ಞಾನ ಎಂದು ಹೇಳಿ ಸೂರ್ಯ, ಚಂದಿರ ಒಂಬತ್ತು ಗ್ರಹಗಳು ಮತ್ತು ಅವುಗಳ ಹೆಸರು, ಭೂಮಿ ಅಂದರೆ ಏನು ಎಂದು ಹೇಳಿಕೊಟ್ಟರೆ ಮಗುವಿಗೆ ತಲೆಗೆ ಹೋಗೋದು ತುಂಬಾ ಕಷ್ಟ ಮತ್ತು ಫಾರ್ಮುಲಾ ಹಾಕಿ ಪುಟ್ಟ ಮಕ್ಕಳಿಗೆ ಹೇಳಿದರೆ ಅದರ ಆಲೋಚನೆ ಶಕ್ತಿಗೆ ಕಷ್ಟ ಸಾಧ್ಯ. ಆದರೆ ಅಮ್ಮ ಅದನ್ನು ಪ್ರೀತಿಯಿಂದ ಭೂಮಿ, ಸೂರ್ಯ, ಗ್ರಹಗಳ ಬಗ್ಗೆ ಪ್ರಕೃತಿಯ ಮಡಿಲಲ್ಲಿ ನಿಂತು ನೈಜ ಚಿತ್ರಣ ತೋರಿಸಿ ಹೇಳಿಕೊಟ್ಟಾಗ ಮಗು ಅದಕ್ಕೆ ತನ್ನನು ತಾನೇ ಅಳವಡಿಸಿಕೊಂಡು ನೋಡಿನೋಡಿ ಕಲಿಯುತ್ತದೆ.
ಸೂರ್ಯ, ಚಂದ್ರ, ಭೂಮಿ ಎಲ್ಲ ತನ್ನ ಸ್ನೇಹಿತರು ಎಂಬಂತೆ ತಿಳಿದು ಅದರ ಮಾರ್ಗದಲ್ಲಿ ಸಂಚರಿಸುವ ಒಂದು ಪ್ರಕ್ರಿಯೆ ಹೀಗೆ ಇಲ್ಲೂ ಅಮ್ಮ ಅದನ್ನೇ ಹೇಳುತ್ತಾಳೆ ಮಗುವಿಗೆ. ಇದಕ್ಕೆ ನಾವು ದೊಡ್ಡ ದೊಡ್ಡ ಸರ್ಟಿಫಿಕೇಟ್ ಇಟ್ಟುಕೊಂಡು ಶಿಕ್ಷೆ ಕೊಡೋದು ಅಲ್ಲ, ಸಾಕಪ್ಪಾ ಅಮ್ಮ ಎಂದು ಮಗು ಹೇಳುವಂತೆ ಮಾಡುವುದು ಅಲ್ಲ. ಹೀಗೆ ಅಮ್ಮ ಮಗುವಿಗೆ ಮಳೆ ತೋರಿಸಿ, ಗುಡುಗು, ಮಿಂಚು ಎಂದರೇನು? ಎಲ್ಲ ಮಗುವಿನ ಖುಷಿಯಲ್ಲಿ ತಾನು ಮಗುವಾಗುತ್ತ ನೀನು ಚಂದಿರನ ಹಾಗೆ ಆಗ್ಬೇಕು, ಭೂಮಿ ಹಾಗೆ ಸಹನೆಯ ಪಾಠ ಕಲಿಬೇಕು, ನವಗ್ರಹಗಳ ಹಾಗೆ ನವ ಶಕ್ತಿ ಯಾಗಿ ಸಮಾಜದ ಸರ್ವಸ್ವವೂ ನೀನೇ ಆಗಬೇಕು ಎನ್ನುತ್ತಾಳೆ.
ಆಗ ಮಗು ಮತ್ತೆ ಯೋಚನೆ ಮಾಡಿ ಮನೆಯಂಗಳದ ಗಿಡದಲ್ಲಿ ಬಿರಿದ ಹೂವನ್ನು ನೋಡಿ ಅಮ್ಮ ಹೂ ಹೇಗೆ ಬಂತು ಎಂದು ಕೇಳಿದಾಗ ಅಮ್ಮ ಮತ್ತೆ ಮತ್ತೆ ಕೈ ತುತ್ತು ಕೊಡುತ್ತಾ ಸಸ್ಯ ಗಳಿಗೂ ನಮ್ಮಂತೆ ಜೀವವಿದೆ ಕಂದ. ನಾವು ಅದಕ್ಕೆ ನೋವು ಮಾಡಬಾರದು. ನೋವಾದರೆ ಅದು ಸಾಯುತ್ತದೆ. ನಿನ್ನ ಅಮ್ಮನಿಗೆ ನೋವಾದರೆ ಹೇಗೋ ಗಿಡಕ್ಕೂ ಹಾಗೆ ಎಂದಾಗ ಮಗು ಹೌದು ನನ್ನ ಅಮ್ಮನಿಗೆ ನೋವು ಆಗೋದು ಬೇಡ, ಹಾಗೇ ಗಿಡಕ್ಕೂ ಎಂದುಕೊಂಡು ಅದನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಅಲೋಚಿಸುತ್ತದೆ. ಈ ಸಂಸ್ಕಾರದ ಶಿಕ್ಷಣ ಎಲ್ಲೂ ಹಾದಿ ತಪ್ಪಲು ಸಾಧ್ಯವೇ ಇಲ್ಲ. ಇಲ್ಲಿ ಬರಿ ಪಾಠ ಮಾತ್ರವಲ್ಲ ಅನುರಾಗದ ಆಲಾಪವೇ ನಡೆದು ಬಿಡುತ್ತದೆ. ಮತ್ತೆ ಮತ್ತೆ ತುತ್ತು ಬರಿ ಗಂಟಲಿನಿಂದ ಇಳಿಯುವುದಷ್ಟೇ ಅಲ್ಲ ಇಡೀ ಸೃಷ್ಟಿಯ ಪರಿಚಯವಾಗುತ್ತದೆ. ಶಾರೀರಿಕ, ಮಾನಸಿಕ, ಬೌದ್ಧಿಕ ವಿಕಾಸಕ್ಕೆ ಪೂರಕವಾದ ವಾತಾವರಣ ಇಲ್ಲಿ ಸಿಗುತ್ತದೆ.
ಮೌನ ಮುರಿದು ಮಾತನಾಡಿ ಕಂದನ ಎದೆಯ ಭಾವಕ್ಕೆ ದನಿಯ ನೀಡಿ ಚಂದಿರನಿಂದ ಇಡೀ ಜಗತ್ತನ್ನೇ ಪರಿಚಯಿಸುತ್ತದೆ ಅಮ್ಮನ ಕೈ ತುತ್ತು.