Advertisement
ದೇಹಕ್ಕೆ ರೋಗವೇ ಇಲ್ಲ. ಇರುವ ರೋಗಗಳೆಲ್ಲವೂ ಮನಸ್ಸಿನ ರೋಗಗಳು. ಮನಸ್ಸನ್ನು ಹದ ಮಾಡದಿದ್ದಲ್ಲಿ ಮನಸ್ಸಿನ ಚಿಂತೆಗಳು, ಗೊಂದಲಗಳು ಉಪಪ್ರಜ್ಞೆಯಿಂದ ಅತಿಪ್ರಜ್ಞೆಯನ್ನು ತಲುಪಿ ಅಲ್ಲಿಯೂ ನೆಲೆ ಸಿಗದಿದ್ದಾಗ ನಿಧಾನವಾಗಿ ದೇಹಕ್ಕೆ ಸೇರಿ ದೈಹಿಕ ರೋಗಗಳಾಗುತ್ತವೆ. ಹೀಗಾಗಿ ರೋಗವು ಮನಸ್ಸನ್ನು ಆವರಿಸುವ ಮುನ್ನ ಯೋಗಾಭ್ಯಾಸವನ್ನು ಪ್ರಾರಂಭಿಸಬೇಕು. ಯೋಗ ಎಂದರೆ ದೇಹ ಮತ್ತು ಮನಸ್ಸನ್ನು ಒಂದು ಮಾಡುವುದು.
Related Articles
Advertisement
ಶ್ರದ್ಧೆ, ಆಸಕ್ತಿ ಇಲ್ಲದಿದ್ದರೆ ಕಲಿಯುವುದು ಕಷ್ಟ
ಯೋಗದ ಕುರಿತಾಗಿ ಕೆಲವ ರಲ್ಲಿ ಭ್ರಮೆ ಇದೆ. ಸಂಪೂರ್ಣವಾಗಿ ಇದನ್ನು ತಿಳಿದುಕೊಂಡವನು ಹಾಗೂ ತುಂಬಾ ದಡ್ಡನಾದವನು ಯಾವತ್ತೂ ಭ್ರಮೆಯಲ್ಲಿ ಇರುವುದಿಲ್ಲ. ತಪ್ಪು ತಿಳುವಳಿಕೆ ಯಾವಾಗ ಇರುತ್ತದೆ ಎಂದರೆ ವಿಷಯದ ಬಗ್ಗೆ ಪೂರ್ತಿ ಅರಿವಿಲ್ಲದಾಗ ಮಾತ್ರ. ಯೋಗವನ್ನು ತಿಳಿಯಬೇಕಾದರೆ ಅದರ ಪರಿಣಾಮವನ್ನು ಅನುಭವಿಸಬೇಕು. ಆಗ ಮಾತ್ರ ವಾಸ್ತವದಲ್ಲಿ ಬದುಕಲು ಸಾಧ್ಯ. ಶ್ರದ್ಧೆ, ಆಸಕ್ತಿ ಇಲ್ಲದಿದ್ದರೆ ಎಲ್ಲವೂ ಸವಾಲುಗಳಾಗಿ ಕಾಣಿಸುತ್ತದೆ. ಹೀಗಾಗಿ ಯೋಗಭ್ಯಾಸವನ್ನು ಪ್ರಾರಂಭಿಸಬೇಕಾದರೆ ಮೊದಲು ಅದರ ಕುರಿತಾಗಿ ಶ್ರದ್ಧೆ, ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು.
ಎಲ್ಲ ಯೋಗವೂ ಒಂದೇ
ಪತಂಜಲಿ, ಅಷ್ಟಾಂಗ ಯೋಗ, ಆಸನ ಗಳು, ಹಠಯೋಗ, ರಾಜಯೋಗ… ಹೀಗೆ ಯೋಗದಲ್ಲಿ ಹಲವಾರು ವಿಧಗಳನ್ನು ಗುರುತಿಸುತ್ತೇವೆ. ಹೀಗಾಗಿ ಯಾರನ್ನು ಅನುಸರಿಸಬೇಕು, ಯಾವುದನ್ನು ಮಾಡಬೇಕು, ಬಿಡಬೇಕು ಎನ್ನುವ ಗೊಂದಲಗಳು ಉಂಟಾಗುತ್ತದೆ. ಮುಖ್ಯವಾಗಿ ನಾವು ಇಲ್ಲಿ ತಿಳಿಯಬೇಕಾದ ವಿಚಾರವೆಂದರೆ ಯೋಗ ಎನ್ನುವುದು ಒಂದೇ, ಅದು ಒಂದು ವಿಧಾನ ಮಾತ್ರ. ಯೋಗದಲ್ಲಿ ಅಷ್ಟಾಂಗವನ್ನು ಸೇರಿಸಿದರೆ ಅದು ಅಷ್ಟಾಂಗ ಯೋಗವಾಗುತ್ತದೆ, ಆಸನಗಳನ್ನು ಸೇರಿಸಿದರೆ ಹಠ ಯೋಗವಾಗುತ್ತದೆ, ನೃತ್ಯ ಶೈಲಿಯನ್ನು ಸೇರಿಸಿದರೆ ವಿನ್ಯಾಸ ಯೋಗ, ಸೂತ್ರಗಳನ್ನು ಅಳವಡಿಸಿದರೆ ಪತಂಜಲಿ ಯೋಗವಾಗುತ್ತದೆ.
ನಿತ್ಯಯೋಗದಲ್ಲಿರಲಿ ಪ್ರಾಣಾಯಾಮ
ನಿತ್ಯ ಯೋಗದಲ್ಲಿ ವಿವಿಧ ಆಸನಗಳನ್ನು ಮಾಡಿದರೆ ಸಾಕಾಗದು. ಜತೆಗೆ ಪ್ರಾಣಾಯಾಮ ಇರಲೇಬೇಕು. ಪ್ರಾಣಾ ಯಾಮ ಒಂದು ಅನುಭವ. ಸಾವಕಾಶವಾಗಿ ಅವುಗಳನ್ನು ಮಾಡಿದರೆ ಅದರಿಂದ ಉತ್ತಮ ಫಲಿತಾಂಶ ದೊರೆಯುವುದು. ಮನಸ್ಸಿನ ಸ್ಥಿಮಿತವನ್ನು ಪ್ರಾಣಾಯಾಮದಿಂದ ಕಾಪಾಡಿ ಕೊಳ್ಳಬಹುದು. ಮನುಷ್ಯನ ಪ್ರತಿಯೊಂದು ಕಾರ್ಯಗಳೂ ಉಸಿರಾಟದ ಮೇಲೆ ನಿರ್ಭರವಾಗಿದೆ. ಹಾಗಿದ್ದಲ್ಲಿ ಆ ಉಸಿರಾಟದ ಸಮತೋಲನ ಮಾಡುವುದರಿಂದ ಮನಸನ್ನು ನಿಯಂತ್ರಣದಲ್ಲಿಡಲು ಸಾಧ್ಯವಿದೆ.
ಯೋಗವು ಅನ್ನದೇವೋ ಭವ! ಪ್ರಾಣ ದೇವೋ ಭವ! ಮನೋ ದೇವೋ ಭವ! ವಿಜ್ಞಾನ ದೇವೋ ಭವ! ಆನಂದ ದೇವೋ ಭವ!
ಹೀಗಾಗಿ ಮನೆಮಂದಿಯೊಡನೆ ಸೇರಿ ನಿತ್ಯವೂ ಯೋಗ ಮಾಡೋಣ, ಆರೋಗ್ಯವಾಗಿ ಬದುಕೋಣ.
ಮನೆ ಮನೆಗೆ ಹೋಗಿ ಯೋಗ ಪ್ರಚಾರ ಮಾಡುವ ಕಾಲ ಮುಗಿಯಿತು. ಯಾಕೆಂದರೆ ನಿಧಾನವಾಗಿಯಾದರೂ ಭಾರತೀಯ ಪುರಾತನ ಜೀವನಶೈಲಿಯ ಭಾಗವಾಗಿದ್ದ ಯೋಗದ ಮಹತ್ವವನ್ನು ಎಲ್ಲರೂ ಅರಿತುಕೊಂಡಿದ್ದಾರೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ಬಹುತೇಕ ಎಲ್ಲ ಕಾರ್ಯಗಳು ವರ್ಚುವಲ್ ಮೂಲಕವೇ ನಡೆಯುತ್ತಿದೆ. ಹೀಗಾಗಿ ಯೋಗವೂ ಪ್ರತಿ ಮನೆಮನೆಯನ್ನೂ ತಲುಪುತ್ತಿದೆ. 2015ರಲ್ಲಿ ಮೊದಲ ಬಾರಿಗೆ ವಿಶ್ವ ಯೋಗ ದಿನಾಚರಣೆಯನ್ನು ಆರಂಭಿಸಿದಾಗ 177ಕ್ಕೂ ಅಧಿಕ ರಾಷ್ಟ್ರಗಳು ಇದರ ಭಾಗವಾಗಿದ್ದವು. ಆದರೆ, 2019ರಿಂದ ಇಡೀ ವಿಶ್ವವೇ ಯೋಗಕ್ಕೆ ಶರಣಾಗಿದ್ದು, ಈಗ ಮನೆಮನೆಯಲ್ಲೂ ಯೋಗ ಎಂಬಂತಾಗಿದೆ. ವಿದೇಶಗಳಲ್ಲಿ ನಾವಿದನ್ನು ಭಾರತದ ಕೊಡುಗೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆದರೆ, ಹಿತ್ತಲ ಗಿಡ ಮದ್ದಲ್ಲ ಅನ್ನುವ ಹಾಗೆ ಭಾರತೀಯರು ಮಾತ್ರ ಇನ್ನೂ ಸಂಪೂರ್ಣವಾಗಿ ತಮ್ಮ ದಿನಚರಿಯಲ್ಲಿ ಯೋಗ ಅಳವಡಿಸಿಕೊಳ್ಳುವಲ್ಲಿ ಸೋತಿದ್ದಾರೆ.
ಡಾ| ಭಾಗೀರಥಿ ಕನ್ನಡತಿ,
ಅಂತಾರಾಷ್ಟ್ರೀಯ ಯೋಗ ತಜ್ಞರು, ದುಬೈ