ಸೀತಾಪುರ ಎಂಬ ಊರಿನಲ್ಲಿ ಬಡತನವೇ ತುಂಬಿ ತುಳುಕುತ್ತಿತ್ತು. ಅಲ್ಲಿ ವೆಂಕಟಪ್ಪ ಮತ್ತು ದೇವಮ್ಮ ಎಂಬ ಬಡ ದಂಪತಿಗಳು ವಾಸಿಸುತ್ತಿದ್ದರು. ಅವರು ಕಾಡಿನ ಕಟ್ಟಿಗೆಗಳನ್ನು ಮಾರಿ ಜೀವನ ಸಾಗಿಸುತ್ತಿದ್ದರು. ಒಂದು ದಿನ ಕಟ್ಟಿಗೆಗಳಿಗಾಗಿ ಕಾಡಿನಲ್ಲಿ ಬಹಳ ದೂರ ಪ್ರಯಾಣಿಸಿದರೂ ಕಟ್ಟಿಗೆಗಳು ಸಿಗಲಿಲ್ಲ. ಆಯಾಸಗೊಂಡ ದಂಪತಿಗಳು ಒಂದು ದೊಡ್ಡ ಮರದ ಕೆಳಗಿದ್ದ ಕುಳಿತುಕೊಂಡರು.
ವೆಂಕಟಪ್ಪನ ಹೆಂಡತಿ, ಒಣಗಿದ ಕಟ್ಟಿಗೆಗಳಿಗಾಗಿ ಇಷ್ಟು ದೂರ ಬರುವುದಕ್ಕಿಂತ ಒಂದು ಕೊಡಲಿಯನ್ನು ಕೊಂಡು ಹತ್ತಿರದಲ್ಲಿರುವ ಮರಗಳನ್ನು ಕಡಿದು ಜೀವನ ಸಾಗಿಸುವುದು ಒಳ್ಳೆಯದು ಎಂದಳು. ಅದಕ್ಕೆ ವೆಂಕಟಪ್ಪ “ಕೊಡಲಿ ಖರೀದಿಸುವಷ್ಟು ಹಣ ನಮ್ಮ ಹತ್ತಿರ ಇಲ್ಲ. ಆದರೂ ನೀನು ಹೇಳಿದ್ದು ಸರಿ’ ಎಂದನು.
ವನದೇವತೆ ಪ್ರತ್ಯಕ್ಷಗೊಂಡು “ಮರಗಳನ್ನು ಕಡಿಯುವುದೆಂದರೆ ಪ್ರಕೃತಿಯನ್ನು ನಾಶ ಮಾಡಿದಂತೆ. ಪ್ರಕೃತಿಯಿಲ್ಲದೆ ಈ ಪ್ರಪಂಚ ಉಳಿಯದು’ ಎಂದು ಹೇಳಿದಳು.
ಆಗ ದೇವಮ್ಮ “ನಿನಗೇನಮ್ಮ, ನೀನು ಸಂತೋಷವಾಗಿದ್ದೀಯ. ನಮ್ಮ ಕಷ್ಟ ನಿನಗೆಲ್ಲಿ ಗೊತ್ತಾಗಬೇಕು?’ ಎಂದಳು. ಆಗ ವನದೇವತೆ ಉಂಗುರವೊಂದನ್ನು ನೀಡಿ “ನೀವು ನಿಸ್ವಾರ್ಥತೆಯಿಂದ ಬೇಡಿಕೊಂಡಾಗ ಈ ಉಂಗುರ ನಿಮ್ಮ ಇಷ್ಟಾರ್ಥವನ್ನು ಪೂರೈಸುತ್ತದೆ’ ಎಂದು ಹೇಳಿ ಮಾಯವಾದಳು.
ಆ ಉಂಗುರವನ್ನು ಸ್ವೀಕರಿಸಿದ ದಂಪತಿಗಳು ಆ ಕೂಡಲೆ ಮನೆಗೆ ತೆರಳಿ ದೇವರಿಗೆ ಪೂಜೆ ಮಾಡಿದರು. ನಂತರ ಒಳ್ಳೆಯ ಸಮಯ ನೋಡಿ ಉಂಗುರ ಹಿಡಿದು ತಮಗೆ ಸಾಕೆನಿಸುವಷ್ಟು ಬಂಗಾರ ಬೇಕು ಎಂದು ಕೋರಿಕೊಂಡರು. ಆದರೆ ಅವರ ಕೋರಿಕೆ ಫಲಿಸಲಿಲ್ಲ. ಮತ್ತೆ ಉಂಗುರವನ್ನು ಮುಟ್ಟಿ ತಾವು ಕೋಟ್ಯಾಧೀಶ್ವರರಾಗ ಬೇಕೆಂದು ಬೇಡಿಕೊಂಡರು. ಅದೂ ನೆರವೇರಲಿಲ್ಲ. ಕೋಪಗೊಂಡ ದಂಪತಿಗಳಿಬ್ಬರೂ ಮೋಸ ಮಾಡಿದಳೆಂದು ವನದೇವತೆಯನ್ನು ಬೈಯತೊಡಗಿದರು. ವನದೇವತೆಯೊಡನೆ ನಡೆದ ಸಂಭಾಷಣೆಯಷ್ಟನ್ನೂ ಜನರಿಗೆ ವರದಿಯೊಪ್ಪಿಸಿದರು. ಆಗ ಅಲ್ಲಿ ಸೇರಿದ್ದವರಲ್ಲಿ ಒಬ್ಬ ಮುದುಕ ಮುಂದೆ ಬಂದು “ವನದೇವತೆ ನಿಮಗೆ ನಿಸ್ವಾರ್ಥತೆಯಿಂದ ಕೋರಿಕೊಳ್ಳಿ ಎಂದು ಹೇಳಿರುವುದು.’ ಎಂದು ಸಲಹೆ ನೀಡಿದಾಗ ದಂಪತಿಗಳಿಗೆ ಜ್ಞಾನೋದಯವಾಯಿತು. ದಂಪತಿಗಳು ಉಂಗುರವನ್ನು ಮುಟ್ಟಿಕೊಂಡು ಊರವರಿಗೆಲ್ಲಾ ಹಬ್ಬದೂಟ ಸಿಗಲಿ ಎಂದು ಕೋರಿಕೊಂಡರು. ತಕ್ಷಣ ವಿವಿಧ ಬಗೆಯ ಆಹಾರಭಕ್ಷ್ಯಗಳು ಪ್ರತ್ಯಕ್ಷಗೊಂಡವು. ಅಂದಿನಿಂದ ಊರು ಸುಭಿಕ್ಷವಾಯಿತು.
– ಅಕ್ರಂ ಪಾಷಾ