ಆತ ನನ್ನ ಆಪ್ತ ಗೆಳೆಯ. ನನ್ನದೇ ಹೈಟು. ನನ್ನದೇ ಬಣ್ಣ. ಹೆಣ್ಣಿನ ಸೌಂದಂರ್ಯ ನೋಡಿ ಹೃದಯ ಕುಣಿಯುವ ವಯಸ್ಸು ನಮ್ಮದು. ನಾನು ಲೇಖನ, ಕಥೆ, ಕಾದಂಬರಿಯೆಡೆಗೆ ಗಮನ ಹರಿಸಿದೆ. ಆದರೆ ಆತ ಹಾಗಲ್ಲ. ಸಿಗರೇಟು, ಕುಡಿತ ಹೀಗೆ ನೂರೆಂಟು ಚಟವನ್ನು ಅಂಟಿಸಿಕೊಂಡ. ಒಂದು ಹುಡುಗಿಯ ಹಿಂದೆ ಹೋಗಿ ಡೀಪ್ ಲವ್ವಲ್ಲಿ ಬಿದ್ದ.
ಕಾಲೇಜು ಬಂಕ್ ಮಾಡಿ ಹುಡುಗಿ ಕರೆದಲ್ಲೆಲ್ಲಾ ಹೋದ. ತೀರಾ ಆಕೆಯ ಮನೆ ತನಕ ಸುತ್ತಾಡಲಿಲ್ಲವಾದರೂ ಪಾರ್ಕು, ಸಿನಿಮಾ, ಹೋಟೆಲ್, ಫಾಲ್ಸ್ ಅಂತ ಆಕೆಯ ಹೆಗಲ ಮೇಲೆ ಕೈ ಹಾಕಿಕೊಂಡು ತಿರುಗಾಡಿದ. ತನ್ನ ಪ್ರೇಯಸಿಯ ಬಳಿ ಹೊಗಳಿಸಿಕೊಳ್ಳಲು ತನ್ನ ಚಟಗಳ ಸುದ್ದಿಯನ್ನೇ ಮುಚ್ಚಿಟ್ಟ. ತಮ್ಮ ಪ್ರೇಯಸಿಯ ಮುಂದೆ ಹೀರೋಗಳಾಗಲು ನಮ್ಮ ಹುಡುಗರು ತಾವು ಒಳ್ಳೆಯವರ ಥರ ನಟಿಸುವುದು ಹೊಸದೇನಲ್ಲವಲ್ಲ.
ಅವರ ಪ್ರೀತಿಗೆ ಒಂದು ವರ್ಷ ಕಳೆದಿತ್ತು. ಅವರ ಪ್ರೇಮಕ್ಕೆ ಬಲಿಯಾದದ್ದು ಅವರ ಎಕ್ಸಾಮ್ ರಿಸಲ್ಟಾ. ಆಕೆ ಎಕ್ಸಾಮ್ ಹಿಂದಿನ ದಿನವಾದರೂ ಕಷ್ಟಪಟ್ಟು ಓದಿ ಹೇಗೋ ಪಾಸಾಗಿ ಬಿಟ್ಟಿದ್ದಳು. ಆದರೆ ಈ ಪುಣ್ಯಾತ್ಮ ಮಾತ್ರ ಹಗಲು ರಾತ್ರಿ ಕನಸು ಕಂಡು ಫೇಲಾದ. ಫೇಲಾದ ನನ್ನ ಗೆಳೆಯನಿಗೆ ನಾನು ಹಲವಾರು ಬಾರಿ ತಿಳುವಳಿಕೆ ಹೇಳಿ ನೀನು ಚಟ ಬಿಡು, ಓದಿ ಮುಗಿಸುವ ತನಕ ಪ್ರೇಮ ಬೇಡ ಅಂತೆಲ್ಲಾ ಹೇಳಬೇಕು ಅಂದುಕೊಂಡೆ. ಆದರೆ ಅದನ್ನೆಲ್ಲಾ ಹೇಳಿದರೆ ಆತ ನನ್ನನ್ನು ಪರಮ ಹುಚ್ಚ ಎಂದು ಭಾವಿಸುವುದರಲ್ಲಿ ಯಾವುದೇ ಸಂಶಯವಿರಲಿಲ್ಲ.
ಆತ ಫೇಲಾದ ಅಂತ ಆಕೆಗೆ ದುಃಖ. ನನ್ನಿಂದಲೇ ಈತ ಫೇಲಾದ ಎಂದು ಸಂಕಟ ಅನುಭವಿಸಿದಳು. ಆತನ ಓದು ತನ್ನಿಂದ ಹಾಳಾಗಬಾರದೆಂದು. ಅವನಿಗೆ ಇನ್ನು ನಮ್ಮ ಡಿಗ್ರಿ ಮುಗಿಯುವವರೆಗೂ ಎಲ್ಲಿಯೂ ಸುತ್ತಾಡೋದು ಬೇಡ. ನಾನು ವಾರದಲ್ಲಿ ಒಂದು ದಿನ ಮಾತ್ರ ಕಾಲ್ ಮಾಡಿ ಮಾತನಾಡಿಕೊಳ್ಳೋಣ ಸಾಕು. ನೀನು ಚೆನ್ನಾಗಿ ಓದಿ ಒಂದೊಳ್ಳೆ ಜಾಬ್ ಹಿಡಿದ ಮೇಲೆಯೇ ನಮ್ಮ ಭೇಟಿ ಎಂದು ಹೇಳಿ ದುಃಖತಪ್ತಳಾಗಿ ಹೊರಟಳು.
ಆಕೆಯ ಮನಸ್ಸಿನಲ್ಲಿ ದುಃಖದ್ದರೂ ಆತನ ಭವಿಷ್ಯದ ಸಲುವಾಗಿ ದಿನವಿಡೀ ಆತನ ನೆಪದಲ್ಲಿ ಕಳೆಯುತ್ತಿದ್ದಳು. ಆದರೆ ಆತ ಮಾತ್ರ ಓದೋದು ಬಿಟ್ಟು ತನ್ನ ಪೋಲಿ ಗ್ಯಾಂಗ್ ಜೊತೆ ಸೇರಿ ಚಟದ ಸಹವಾಸಕ್ಕೆ ಬಿದ್ದ. ಆಕೆ ಇತನನ್ನು ವಿಚಾರಿಸಿಕೊಳ್ಳುವವರೆಗೂ ಆಕೆಯ ಮೇಲಿನ ಪ್ರೀತಿಗೋ ಅಥವಾ ಭಯಕ್ಕೋ ಚಟದಿಂದ ತುಸು ದೂರ ಇದ್ದ. ಈಗ ಚಟ ಮುಂದುವರಿಸಲು ಸ್ವಾತಂತ್ರ್ಯಸಿಕ್ಕಿತ್ತು. ಯಾವಾಗಲೂ ನಶೆ ಗುಂಗಲ್ಲೇ ಇರುತ್ತಿದ್ದ.
ಆಕೆಯ ಬಳಿ ಮಾತಾಡುವಾಗ ತಾನು ಕಷ್ಟ ಪಟ್ಟು ಓದುತ್ತಿದ್ದೇನೆ ಎಂದು ಬುರುಡೆ ಬಿಡುತ್ತಿದ್ದ. ಆಕೆಯೂ ಈತನ ಮಾತಿ ನಂಬಿ ಮಾತು ಮುಗಿಸುವ ಸಂತೋಷದಿಂದಲೇ ಕಂಬನಿ ಹರಿಸುತ್ತಿದ್ದಳು. ಈತನಿಗೂ ದುಃಖಕ್ಕೆ ಚಟ ಮಿತಿ ಮೀರಿತ್ತು.
ಹೀಗೆ ಎಲ್ಲಾ ದಿನದಂತೆ ಒಂದು ದಿನ ಅಂಗಡಿಯ ಮುಂದೆ ಸ್ಟೈಲಾಗಿ ಸಿಗರೇಟು ಎಳೆಯುತ್ತಾ ಗೆಳೆಯರ ಜೊತೆ ಹರಟೆ ಹೊಡೆಯುತ್ತಾ ನಿಂತಿದ್ದ. ಆದಿನ ಅದೇ ಅಂಗಡಿಯ ಮುಂದೆ ಆಕೆ ಸ್ಕೂಟಿ ಹೊಡೆದುಕೊಂಡು ಬರುತ್ತಿರುವಾಗ ಈತನ ನಿಜ ಬಣ್ಣ ಅವಳ ಮುಂದೆ ಬಯಲಾಯಿತು. ಆಕೆ ಎಲ್ಲರ ಮುಂದೆಯೇ ಆತನ ಕಪಾಳಕ್ಕೆ ಬಾರಿಸಿ ನಿನ್ನ ಪ್ರೀತಿ ನನಗಿನ್ನು ಅವಶ್ಯಕತೆ ಇಲ್ಲ ಎಂದು ಕೂಗಾಡಿದಳು. ಅವನಿಗೆ ಆಗ ತನ್ನ ತಪ್ಪಿನ ಅರಿವಾದರೂ ಕಾಲ ಕೈಮೀರಿ ಹೋಗಿತ್ತು. ಅವಳಿಗೆ ಅಂಗಲಾಚಿ ಬೇಡಿಕೊಂಡ. ಅದರೆ ಆಕೆ ನಿನ್ನ ಮೋಸದ ಪ್ರೀತಿ ನನಗೆ ಬೇಡ. ನನ್ನ ಜೀವನ ಪೂರ್ತಿ ನಿನ್ನಂತಹ ಮೋಸಗಾರನ ಪ್ರೀತಿಯಲ್ಲಿ ಬದುಕುವ ಬದಲು ನಾನು ಸಾಯುವುದೇ ಮೇಲು ಎಂದು ಹೇಳಿ ಹೊರಟು ಹೋದಳು.
– ರಾಘವೇಂದ್ರ ಹೆಗಡೆ ಹೊನ್ನಜ್ಜಿ
ಬಿ.ಎ. ದ್ವಿತೀಯ ಎಂ.ಎಂ. ಕಾಲೇಜ್,
ಶಿರಸಿ.