” ಕೃಷ್ಣ ನೀನೇಕೆ ನನಗೆ ಇಷ್ಟು ಇಷ್ಟವಾದೆ…??’ ” ರಾಧೆ ನಿನ್ನೊಳಗೆ ನಾನಿರುವೆ ಅದಕ್ಕೆ…’ ” ಹಾಗಾದರೆ ಕೃಷ್ಣ ನೀನು ನನ್ನ ಅಷ್ಟೊಂದು ಪ್ರೀತಿಸುವೆಯಾ..??’ ಕುತೂಹಲ ತುಂಬಿದ ಧ್ವನಿಯಲ್ಲಿ ಕೇಳಿದಳು…. “ಛೇ ರಾಧೆ ನಾನ್ಯಾವಾಗ ನಿನ್ನನ್ನು ಪ್ರೀತಿಸುತ್ತಿರುವೆ ಎಂದೂ ಹೇಳಿರುವೆ…’ ಕೆಣಕುವಂತೆ ಉತ್ತರ ಕೊಟ್ಟ ಕೃಷ್ಣ. ” ಕೃಷ್ಣ ಸುಮ್ಮನೆ ನನ್ನನ್ನು ಸತಾಯಿಸಬೇಡ, ನಿಜ ಹೇಳು ನಿನಗೆ ನನ್ನ ಮೇಲೆ ಪ್ರೀತಿ ಇಲ್ಲವೇ…??’ ಕಣ್ಣ ತುಂಬಾ ಕಂಬನಿ ತುಂಬಿ ಕೇಳುವಳು.
Advertisement
” ಅಯ್ಯೋ ರಾಧೆ ಇಷ್ಟು ಚಿಕ್ಕ ವಿಷಯಕ್ಕೆ ಯಾರಾದರೂ ಅಳುತ್ತಾರ. ನಿನ್ನ ಪ್ರಶ್ನೆಗೆ ಉತ್ತರ ಬೇಕಲ್ಲವಾ ಸರಿ ಹೇಳುವೆ ಕೇಳು…., ನನ್ನ ನಾನು ಎಷ್ಟು ಪ್ರೀತಿಸುವೇನೋ ಅದಕ್ಕೂ ಮಿಗಿಲಾಗಿ ನಿನ್ನ ಪ್ರೀತಿಸುವೆ…ಪ್ರೇಮಿಸುವೆ…ಆರಾಧಿಸುವೆ…ನನ್ನ ಹೃದಯದ ಅರಮನೆಯಲ್ಲಿ ಎಂದಿಗೂ ಬಿಡುಗಡೆ ಸಿಗದಂತೆ ಪ್ರೀತಿಯಲ್ಲಿ ಬಂಧಿಸಿರುವೆ ನಿನ್ನ…ದೇವಕನ್ಯೆ…ಗಂಧರ್ವಕನ್ಯೆ…ಅಂದದ ರಾಶಿಯ ಅಪ್ಸರೆಯರೇ ಬಂದರು ನನ್ನ ಸಂಯಮ ಎಂದಿಗೂ ಕದಡದು. ನನ್ನ ತನು – ಮನ ಎಂದಿಗೂ ನಿನ್ನ ಸನಿಹಕ್ಕೆ ಮಾತ್ರ ಕಂಪಿಸುವುದು. ನನ್ನ ಹೃದಯ ಎಂದಿಗೂ ನಿನಗೆ ಮಾತ್ರ ಮೀಸಲು….ಅರ್ಥವಾಯಿತೇ ರಾಧೆ ‘ ಅವಳ ಮುಖವನ್ನು ತನ್ನ ಬೊಗಸೆಯಲ್ಲಿ ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿ ತುಂಬಿದ ಧ್ವನಿಯಲ್ಲಿ ಹೇಳಿದ…
Related Articles
Advertisement
“ಸರಿ ಹೇಳುವೆ ಕೇಳು…ರಾಧೆ ಪ್ರೀತಿ ಎಂದರೇ ಸಮುದ್ರದಷ್ಟು ವಿಶಾಲ. ಮುಳುಗಿದಷ್ಟು ಆಳ. ಅರಿಯದಷ್ಟು ಅರ್ಥ.ಪ್ರೀತಿ ಅಂದರೆ ಒಂದು ಸುಂದರ ಮೌನವಿದ್ದಂತೆ. ಆ ಮೌನವನ್ನು ಅರಿಯುವುದು ಒಂದು ಕಡೆ ಕಷ್ಟವೂ ಹೌದು….ಸುಖವೂ ಹೌದು. ನಾವು ಯಾರನ್ನು ಪ್ರೀತಿಸುತ್ತಿವೋ ಅವರ “ಮನಸ್ಸು’, “ಮೌನ’ ಇವೆರಡು ಅರ್ಥ ಮಾಡಿಕೊಂಡಿರುತ್ತಾರೋ ಅವರಿಗೆ ಪ್ರೀತಿ ಎಂದರೇನು ಎಂದು ಅರ್ಥವಾಗಿರುತ್ತೆ. ನೀ ನನಗೆ ಸಿಗದಿದ್ದರೂ ಪರವಾಗಿಲ್ಲ ಆದರೇ ಎಲ್ಲಿದ್ದರು ಹೇಗಿದ್ದರೂ ನಿನ್ನ ಮುಖದಲ್ಲಿ ಎಂದೂ ಮಾಸದ ಮುಗುಳುನಗೆ ಯಾವಾಗಲೂ ನಿನ್ನೊಂದಿಗೆ ಇರಲಿ ಎಂದು ಬಯಸುವುದೇ ಈ ನಿಜವಾದ ಪ್ರೀತಿ…, ಹರಿಯುವ ಗಂಗೆಯಷ್ಟು ಪವಿತ್ರ ಈ ಪ್ರೀತಿ…..’ ಅವನ ಉತ್ತರ ಕೇಳಿ ಮಾತು ಬರದಂತಾಯಿತು ಅವಳಿಗೆ. ಸುಮ್ಮನೆ ಮೌನದಿ ಬಿಗಿದಪ್ಪಿದಳು ಅವನನ್ನು…ಅವಳ ಅಪ್ಪುಗೆಯನ್ನೇ ಒಪ್ಪಿಗೆ ಎಂದೂ ತಿಳಿದು ಅವಳ ಮೃದುವಾದ ಕೈಗಳನ್ನು ಬಂಧಿಸಿ ಅವಳು ಸಾಕು ಎನ್ನುವವರೆಗೂ ಮುದ್ದಿಸಿ ಕೊನೆಗೆ ಅವಳ ಹಣೆಗೆ ಹೂ ಮುತ್ತು ನೀಡಿ, ನನ್ನ ಉಸಿರಿರುವ ವರೆಗೂ ನಿನ್ನ ಹೆಜ್ಜೆಗೆ ಹೆಜ್ಜೆ ಬೆಸೆದು ನಿನ್ನ ನೆರಳಿಗೂ ನೆರಳಂತೆ ಅಪ್ಪಿ ಕಣ್ಣಾರೆಪ್ಪೆಯಂತೆ ಸದಾ ಕಾವಲಾಗಿರುವೆ ಎಂದೂ ಅಪ್ಪುಗೆಯನ್ನು ಬಿಗಿಯಾಗಿಸಿದ….’ *ಮಹಾಲಕ್ಷ್ಮಿ ಸುಬ್ರಹ್ಮಣ್ಯ, ಶಾರ್ಜಾ