Advertisement

Desi Swara: ನೀನಿಲ್ಲದ ಈ ಸಂಜೆ…….ಬರೀ ನೆನಪುಗಳೇ ಕಾಡುತ್ತಿವೆ

06:45 PM Aug 29, 2023 | Team Udayavani |

ದೂರದ ಬಾನಿನಿಂದ ಭುವಿಗೆ ಹೊಂಬಣ್ಣವನ್ನು ಚೆಲ್ಲಿ ನೇಸರ ಜಾರಿ ಮರೆಯಾಗುತ್ತಿದ್ದಾನೆ….ಈ ಸಂಜೆ ಜತೆಯಲ್ಲಿ ನೀನಿರಬೇಕಿತ್ತು. ಪ್ರತೀ ಸಂಜೆಯೂ ಹೀಗೆಯೇ ಯೋಚಿಸುತ್ತೇನೆ. ಅದೇ ಏಕಾಂತ ಬಯಸುತ್ತೇನೆ, ಈ ಸಂಜೆ ಕಡಲ ತೀರದಲ್ಲಿ ನಾವಿಬ್ಬರೂ ಕೈ ಕೈ ಹಿಡಿದು ಕೊಂಚ ದೂರ ನಡೆಯಬೇಕಿತ್ತು. ಬೆಸೆಯುವುದು ಕೈಗಳನ್ನಾದರೂ ಅದು ಕೇವಲ ಕೈಗಳ ಬೆಸುಗೆಯಲ್ಲ, ಬದುಕಿನ ಆತ್ಮವಿಶ್ವಾಸ ಹೆಚ್ಚಿಸುವ ಪ್ರೀತಿಯ  ಬೆಸುಗೆಯಾಗುತ್ತಿತ್ತು. ಒಂದಷ್ಟು ಹೊತ್ತು ಭುಜದ ಮೇಲೆ ತಲೆಯಿಟ್ಟು ಹರಟಬೇಕಿತ್ತು…. ರಾತ್ರಿಯ ಸಮಯದಲ್ಲಿ ದೂರದ ಕಡಲಿನ ಭೋರ್ಗರೆತ ಕೇಳಿತೆಂದರೆ ಸಾಕು ನನ್ನ ಮನಸ್ಸೂ
ಅಲೆಯಂತೆ ಕುಣಿದು ಕುಪ್ಪಳಿಸುತ್ತದೆ…..

Advertisement

ಆ ರಾತ್ರಿಯ ಶೀತಲ ಗಾಳಿ ಕೆನ್ನೆ ಸವರಿದಂತೆಲ್ಲ ಯಾವುದೋ ಕನವರಿಕೆಯಲ್ಲಿದ್ದ ಹಾಗೇ ಕಾಡುತ್ತದೆ, ನಿನ್ನನ್ನು ಕಲ್ಲಿನ ಬಂಡೆಯ ಮೇಲೆ ಭುಜದಲ್ಲಿ ಹೊತ್ತು ತಿರುಗಿದ ನೆನಪು ಇನ್ನೂ ಜೀವಂತವಾಗಿದೆ….

“ಆ ತೇವದ ಮರಳಿನಲ್ಲಿ ನಿನ್ನಾ ಹೃದಯದ ಚಿತ್ತಾರ….
ಇನ್ನೂ ನನ್ನ ಎದೆಯಲ್ಲಿ ಕಡಲ ಅಲೆಯಂತೆ ಉಕ್ಕಿ ಬರುತಿದೆ
ಮೈ ನಡುಗುವ ಚಳಿಯಲ್ಲಿ ನಿನಗೆ ಶಾಲು ಹೊದಿಸಿ ಬೆಚ್ಚಗೆ ನನ್ನ ತೋಳಿನಲ್ಲಿ ಮಲಗಿಸಿದ ನೆನಪು ಕನಸುಗಳ ಮೂಟೆ ಹೊತ್ತು ಕಾಯುತ್ತಿದೆ

ನೀ ಮೈದುಂಬಿ ಧೋ ಎಂದು ಸುರಿವಾಗ ನಾ ಎದೆನೆರೆದು ಬಿಗುಮಾನದಲಿ ಬಿಡಿಬಿಡಿಯಾಗಿ ಅರಳಿ ಮತ್ತೆ ಲಜ್ಜೆ ಕಳೆದು ಅಣುರೇಣು ಅರಳರಳಿ ನೆನೆನೆನೆದು – ಆ ಸೊಬಗಿನ ಸವಿ ಸಂಗಮ…

ಮಳೆದುಂಬಿ ಮೈತುಂಬಿ, ಜೀವಂತ, ಸೆರೆಸಿಕ್ಕಿರುವ ವಸುಧೆ ಒಡಲಿನ ಕಂಪು…’

Advertisement

* * *
ಒಡೆದ ಚೂರು ಚೂರು ನೆನಪುಗಳು, ಆ ನೆನಪುಗಳ ಅಡಿಯಲ್ಲಿ ಅಳಿಯದೆ ಉಳಿದ ಭಾವನೆಗಳು. ಭಾವನೆಗಳು ಸುರಿಯುವ ತುಂತುರು ಮಳೆಯಲ್ಲಿ ಕೊಡೆ ಹಿಡಿಯದೆ ನೆನೆದ ಆ ದಿನಗಳು,

ಮೈಮನಗಳು ಉರಿಯುವ ಬಿಸಿಲಿನಲ್ಲಿ ನೆರಳಾದ ನಿನ್ನ ಕೈಗಳು ಮುಂಜಾನೆಯ ಇಬ್ಬನಿಯಲ್ಲಿ ಜತೆ ನೆಡೆದ ಹೆಜ್ಜೆಯ ಗುರುತುಗಳು….ಎಲ್ಲವೂ ಇನ್ನೂ ಅಮರ

ಮುಸ್ಸಂಜೆಯ ಮುಸುಕಿನಲ್ಲಿ ಜತೆ ಬಿಡದ ನೋವು ನಲಿವುಗಳು, ನೀ ಇಲ್ಲದ ಬದುಕಲ್ಲಿ ಸಮಯ ಹೇಗೆ ಕಳೆಯಲಿ ? ಪ್ರತೀ ದಿನಗಳು, ಅದೆಷ್ಟೋ ರಾತ್ರಿಗಳು, ನಾನು ಪಟ್ಟಿರುವ ವೇದನೆ, ನಿನ್ನ ಸೇರುವ ಆಸೆಯಲ್ಲಿ ಹಾತೊರೆವ ನನ್ನ ನಯನಗಳು ನಿನ್ನ ಬಾಹುಬಂಧನದಲ್ಲಿ. ಕೊನೆಯ ಉಸಿರು ಹೇಗೆ ತಾನೇ ಮರೆಯಲು ಸಾಧ್ಯ.
“ಏನು ಮಾಡಲಿ ಹೇಳು
ಜನುಮಾಂತರದ ಒಲವೆ,
ನಿನ್ನ ಮಾತಿನ ಸುರಿಮಳೆ,

ನೀನು ನಡೆಯುವಾಗ ಜೋರಾಗಿ ಸದ್ದು ಮಾಡುತ್ತಿದ್ದ ಆ ನಿನ್ನ ಕೈ ಬಳೆ…… ಆ ಸದ್ದು ಈಗ ಮೌನವಾಗಿದೆ…ಎಲ್ಲವೂ ಸ್ತಬ್ಧ
ಕಿವಿ ಕೇಳಿಸುವುದಿಲ್ಲ, ಕಣ್ಣೆಲ್ಲ ಮಂಜಾಗಿದೆ ಯಾವುದೋ ಒಂದು ನಶೆಯಲ್ಲಿ ತೆಲಾಡುತ್ತಿದ್ದೇನೆ….

ಈ ಎಲ್ಲವ ದಾಟಿ ಮತ್ತೆ ಬರುವುದಾದರೆ ಬಾ ಆ ನಿನ್ನ ನಗುವಿಗೆ ಜೀವ ತುಂಬುವೆ ಗೆಳತಿ……’

* * *
“ನಿನಗೆ ಒಲವು ಮೂಡುವುದೆಂದೋ. ಈ ನಿರೀಕ್ಷೆಗಳಿಗೆ ಆದಿ ಎಂದೋ, ಅಂತ್ಯ ಎಂದೋ ಒಂದು ಅರಿಯೇ ನಾನು….’

ಈಗ ನೋಡು ಗೆಳತಿ ನನ್ನ ಬಾಳೆ ಬರಿದಾಗಿದೆ, ನೋಡಿದೆಲ್ಲವೂ, ಮುಟ್ಟಿದೆಲ್ಲವೂ ಶೂನ್ಯ ಎನಿಸಿಬಿಡುತ್ತದೆ. ನನ್ನ ಮುಖದ ಮೇಲೆ ದಟ್ಟ ಕಾನನದ ಹಾಗೆ ಗಡ್ಡ ಮೀಸೆ ಬೆಳೆದು ನಿಂತಿದೆ, ನಾನು ಯಾರಿಗೋಸ್ಕರ ಇಷ್ಟೆಲ್ಲ ಮಾಡಲಿ, ನೋಡಲು ನೀನೇ ಇಲ್ಲದ ಮೇಲೆ! ಹೂವು ನಕ್ಕಾಗ ತಾನೇ ಅರುಣೋದಯ, ಹಾಗೆ ನಿನ್ನ ಮುಖದಲ್ಲಿ ನಗು ಕಂಡ ಮೇಲೆ ನನಗೆ ಸೂರ್ಯೋದಯ,
ಸೂರ್ಯಾಸ್ತ ಎಲ್ಲವನು ಅನುಭವಿಸುವ ಅವಕಾಶ ನನಗೆ ಇಲ್ಲದಾಗಿದೆ, ಮುಂಜಾನೆ ಕಾಫೀ ಕೂಡ ನಿನ್ನ ಬಿಟ್ಟು ಕುಡಿಯುತ್ತಿರಲಿಲ್ಲ….

ಆದರೆ ಈಗ ಈ ಹುಚ್ಚು ಮನಸ್ಸು ಮೂಕವಿಸ್ಮಿತವಾಗಿದೆ, ಎಲ್ಲೋ ಗಾಳಿಯಲ್ಲಿ ತೇಲಾಡುತ್ತಿದೆ.

ನೀನು ನಡೆಯುವಾಗ ಬರುತ್ತಿದ್ದ ಆ ಗೆಜ್ಜೆ ಸದ್ದು ಈಗಲೂ ನನ್ನ ಹೃದಯಕ್ಕೆ ಕೇಳಿಸುತ್ತಿದೆ, ನಾನು ಈಗಲೂ ಆ ಗೆಜ್ಜೆ ಜತೆಯಲ್ಲೇ ಮಲಗುತ್ತಿದ್ದೇನೆ! ಎಂತಹ ಹುಚ್ಚು ಮನಸ್ಸು ನನ್ನದಲ್ಲವೇ. ಅತ್ತ ಸಾಯಲು ಮನಸಿಲ್ಲ, ಇತ್ತ ಬದುಕಲು ಮನಸಿಲ್ಲದೆ ಒದ್ದಾಡುತ್ತಿದ್ದೇನೆ, ರಾತ್ರಿ-ಹಗಲು ಗೊತ್ತಾಗದೆ , ಅರೆ ಪ್ರಜ್ಞಾ ಸ್ಥಿತಿಗೆ ತಲುಪಿದ್ದೇನೆ, ನಿನ್ನಾ ಕಂಗಳೇ ನನಗೆ ಬೆಳದಿಂಗಳು ಹೇಗೆ ನೋಡಲಿ ಆ ನಿರ್ಜೀವ ಬೆಳಕನ್ನು…..ಮುಂದಿನ ಜನ್ಮದಲ್ಲಿ ನೀನೇ ನನ್ನ ಪ್ರೇಯಾಸಿಯಾಗಿ ಬಾ

ಇನ್ನೂ ಬರೀ ನಿನ್ನ ನೆನಪುಗಳು ಮಾತ್ರ ನನ್ನಲ್ಲಿ ಉಳಿದಿದೆ ಈ ಸಂಜೆ ಯಾಕಾಗಿದೆ ನೀನಿಲ್ಲದೆ…….!!!

*ಮಹಾಲಕ್ಷ್ಮೀ, ದುಬೈ

Advertisement

Udayavani is now on Telegram. Click here to join our channel and stay updated with the latest news.

Next