Advertisement

Desi Swara: ನೋಡಿ ಕಲಿಯುವ ಹಾದಿ… ಅಭ್ಯಾಸ – ಹವ್ಯಾಸವೆಂಬ ಗೊಂದಲದ ನಡುವೆ

06:25 PM Aug 29, 2023 | Team Udayavani |

ಜೀವನದಲ್ಲಿನ ಹೆಚ್ಚಿನ ಅಥವಾ ಪ್ರತಿಯೊಂದೂ ವಿಷಯವು ಒಂದು ನಾಣ್ಯದಂತೆ ಎರಡು ಮುಖಗಳನ್ನು ಹೊಂದಿರುತ್ತದೆ ಎನ್ನಬಹುದು. ಒಂದು ನಾವು ತೋರುವ ಮೊಗ, ಮಗದೊಂದು ಇತರರು ಅದನ್ನು ಅರ್ಥೈಸಿಕೊಳ್ಳುವ ಬಗೆ. ಒಂದು
ನಾವಂದುಕೊಂಡಂತೆ ಇರುವ ಮುಖವಾದರೆ, ಮತ್ತೂಂದು ಇತರರು ಅದನ್ನು ನೋಡುವ ಬಗೆ. ಯಾವುದು ಅಭ್ಯಾಸ? ಯಾವುದು ಹವ್ಯಾಸ? ಅದೇಕೆ ಅಭ್ಯಾಸ ? ಅದು ಹೇಗೆ ದುರಭ್ಯಾಸ? ಇತ್ತೀಚೆಗೆ ಒಂದೆಡೆ ಹೋಗಿದ್ದಾಗ ಈ ವಿಷಯವನ್ನು ಯಾರೋ ಮಾತನಾಡುತ್ತಿದ್ದರು ಮತ್ತು ಅದುವೇ ಈ ಬರಹಕ್ಕೆ ನಾಂದಿ ಎನ್ನಬಹುದು.

Advertisement

ಒಬ್ಬಾಕೆ ಆಡುತ್ತಿದ್ದ ಮಾತು ಹೀಗಿತ್ತು, “ನಮ್ಮ ಮನೆಯ ಫ್ಯಾಮಿಲಿ ರೂಮ್‌ನಲ್ಲಿ ದೊಡ್ಡ ಸೋಫಾ ಇದೆ. ಗೋಡೆಗೆ ದೊಡ್ಡ ಸೈಜಿನ ಟಿ.ವಿ. ಇದೆ. ಸೋಫಾದ ಒಂದು ತುದಿಯಿಂದ ಮತ್ತೂಂದು ತುದಿಯವರೆಗೆ ಹತ್ತು ಜನರು ಆರಾಮವಾಗಿ ಕುಳಿತುಕೊಳ್ಳಬಹುದು ಆದರೆ ಒಂದು ನಿರ್ದಿಷ್ಟ ಸ್ಥಾನ ನನ್ನದು. ಜನ ಬಂದಾಗ ಅಷ್ಟು ಅನ್ನಿಸದಿದ್ದರೂ, ನಾವು ನಾವೇ ಇದ್ದಾಗ ಆ ಜಾಗದಲ್ಲಿ ನಾನೇ ಕೂರಬೇಕು. ಆ ಜಾಗದಲ್ಲಿ ಬೇರಾರಾದರೂ ಕೂತಿದ್ರೆ ಕಂಡಾಪಟ್ಟೆ ಸಿಟ್ಟು ಬರುತ್ತೆ. ಈ ನನ್ನ ಗಂಡ ಬೇಕೂ ಅಂತ ಅಲ್ಲಿ ಕೂತು ಕಿರಿಕ್‌ ಮಾಡ್ತಾರೆ’ ಎನ್ನುತ್ತಿದ್ದರು. ಈ ಮಾತುಗಳು ಹಾಸ್ಯದಲ್ಲೇ ಶುರುವಾಗಿತ್ತು. ಆ ಮಾತಿಗೆ ಮತ್ತೂಬ್ಬರು ಹೇಳಿದ್ದು ಇನ್ನೂ ಸ್ವಾರಸ್ಯವಾಗಿತ್ತು.

“ನಮ್ಮ ಮನೆಯ ಸೋಫಾದ ಒಂದು ಕೊನೆಯಲ್ಲಿ ಕಾಲು ಚಾಚಿ ಕುಳಿತುಕೊಳ್ಳುವ ಲಾಂಗ್‌ ಚೇರ್‌ ಇದೆ. ನಮ್ಮ ಮನೆಗೆ ಕೋವಿಡ್‌ ಸಮಯದಲ್ಲಿ ನಾಯಿ ಕೊಂಡು ತಂದೆವು. ಮೊದಲ ಕೆಲವು ದಿನಗಳು ಅಲ್ಲಿ ಕೂರಿಸುತ್ತಿದ್ದೆವು. ಅದನ್ನೇ ಅಭ್ಯಾಸ ಮಾಡಿಕೊಂಡ ನಾಯಿ ಈಗ ಬೆಳೆದು ದೊಡ್ಡವನಾಗಿದ್ದು ಆ ಇಡೀ ಭಾಗ ಅವನದ್ದೇ ಆಗಿದೆ. ಅಲ್ಲಿ ಯಾರು ಕೂತರೂ ಬೊಗಳುತ್ತಾನೆ.’

ಇಂಥಾ ಮಾತುಗಳು ಹೇಗೆ ಎಂದರೆ ದೀಪದಿಂದ ದೀಪ ಬೆಳಗುವಂತೆ. ಇದನ್ನು ಮುಂದುವರಿಸಿದ ಮತ್ತೂಬ್ಬರು ಹೇಳಿದ್ದು, “ನಾನು ಹಾಸಿಗೆಯಲ್ಲಿ ಮಲಗುವಾಗ ನನಗಂತೂ ಹಾಸಿಗೆಯ ಎಡ ಭಾಗವೇ ಆಗಬೇಕು. ಯಾವುದೇ ಕಾರಣಕ್ಕೆ ಬಲಭಾಗ ಸಿಕ್ಕಿತೋ, ಆ ಇಡೀ ರಾತ್ರಿ ನಿದ್ದೆಯೇ ಬರೋದಿಲ್ಲ. ನಾನು ಮಲಗುವ ಮುನ್ನ ನನ್ನ ಗಂಡ ಆ ಜಾಗದಲ್ಲಿ ಮಲಗಿದ್ದ ಅಂದ್ರೆ, ಅವನನ್ನು ಎಬ್ಬಿಸಿ ಆ ಕಡೆ ಕಳಿಸಿ ಅಥವಾ ನೂಕಿ ಎಡಭಾಗದಲ್ಲಿ ಮಲಗ್ತೀನಿ’ ಅಂತ ಬಲು ಮೋಜಾಗಿ ಹೇಳಿದರು.

ಸದ್ಯಕ್ಕೆ ಇಷ್ಟು ವಿಷಯ ಇಟ್ಟುಕೊಂಡು ನಮ್ಮ, ನಿಮ್ಮ ಹವ್ಯಾಸಗಳನ್ನು ನೋಡೋಣ. ಮೊದಲಿಗೆ ಇವರೆಲ್ಲರ ಮಾತುಗಳನ್ನು ವಿಶ್ಲೇಷಣೆ ಮಾಡುವ. ಸೋಫಾದ ಮೇಲೆ ಒಂದು ಬದಿಯಲ್ಲಿ ಕೂರುವುದು ಸರಿ ಆದರೆ ಅದೇ ಬದಿಯಲ್ಲಿ ಸದಾ ಕೂರುವುದು ಸರಿಯೇ? ಹೌದು ಮತ್ತು ಇಲ್ಲ ಎನ್ನಬಹುದು. ಒಂದರ್ಥದಲ್ಲಿ, ಇಡೀ ಸೋಫಾಗೆ ಹಣ ನೀಡಿರು ವುದರಿಂದ ಬರೀ ಒಂದು ಭಾಗ ಬಳಸಿದರೆ ಮಿಕ್ಕೆಲ್ಲ ಇಟ್ಟುಕೊಂಡು ಮಾಡೋದೇನು? ಸದಾ ಸರ್ವದಾ ಮನೆಗೆ ಅತಿಥಿಗಳಂತೂ ಬರುವುದಿಲ್ಲ ಹಾಗಾಗಿ
ಹೆಚ್ಚಿನ ವೇಳೆ ಮಿಕ್ಕ ಬದಿಗಳು ಷೋ ಪೀಸ್‌ ಅಷ್ಟೇ.

Advertisement

ಜತೆಗೆ ಒಂದೇ ಬದಿಯನ್ನು ಬಳಕೆ ಮಾಡುತ್ತಿದ್ದಾ ಗ, ಮಿಕ್ಕ ಬದಿಗಳು ಹೊಚ್ಚ ಹೊಸದಾಗಿ ಕಾಣುತ್ತ ಈ ಒಂದು ಜಾಗ ಮಾತ್ರ ಹಳತಾಗಿ ಕಾಣ ಬಹುದು ಅಲ್ಲವೇ? ಲೆದರ್‌ ಸೋಫಾ ಆದರಂತೂ ಆ ಭಾಗ ಮಾತ್ರ ಮಾಸಿದಂತೆ ಕಾಣಬಹುದು ಅಲ್ಲವೇ? ಈ ಕುಳಿತುಕೊಳ್ಳುವ ಕ್ರಿಯೆಯ ಬಗ್ಗೆ ಇರುವ ಸಿಂಡ್ರೋಮ್‌ ಹಲವು ವಿಷಯದಲ್ಲಿ costly ಆಗಬಹುದು ಕೂಡ. ಹೇಗೆ?

ಒಂದು ಲಾಂಗ್‌ ಜರ್ನಿ ಅಂತ ವಿಮಾನದಲ್ಲಿ ಸಾಗುವಾಗ ಇಂತಹ ತೊಂದರೆಗಳು ಎದ್ದು ಕಾಣುತ್ತದೆ. ಕೆಲವರಿಗೆ ಕಿಟಕಿಯ ಬದಿಯ ಸೀಟ್‌ ಇಷ್ಟವಾಗುತ್ತದೆ. ಕೆಲವರಿಗೆ ಐಲ್‌ ಸೀಟ್‌ ಅಥಾವ  ಮತ್ತೊಂದು ಕೊನೆಯ ಸೀಟ್‌ ಆಗಬೇಕು. ಒಂದೇ ಸೀಟು ಇರುವ ಚಿಕ್ಕ flightಗಳಲ್ಲಿ ಅದೇ ವಿಂಡೋ ಸೀಟ್‌, ಅದುವೇ ಐಲ್‌ ಸೀಟು ಕೂಡ. ಯಾವುದೇ ಸಮಸ್ಯೆ ಇಲ್ಲ. ಇಂಥವು ಹೆಚ್ಚೆಂದರೆ
ಒಂದೆರಡು ಗಂಟೆಗಳ ಫ್ಲೈಟ್‌ ಅಷ್ಟೇ. ಎರಡು ಸೀಟುಗಳು ಇರುವ ಸಂದರ್ಭದಲ್ಲಿ ಐಲ್‌ ಸೀಟು ಸಿಕ್ಕವರಿಗೆ ವಿಂಡೋ ಸೀಟ್‌ ಬೇಕು ಎಂದರೆ ಪಕ್ಕದವರನ್ನು ಕೇಳಬೇಕು. ಅವರೂ ಇಂಥವರೇ ಆಗಿದ್ದರೆ ತೊಂದರೆ. ಹಾಗೆಯೇ ಇಬ್ಬರಿಗೂ ಐಲ್‌ ಸೀಟು ಬೇಕು ಎಂದರೆ ತೊಂದರೆ. ಈಗ ಮುಂದಿನ ಹಂತ ಬಲು ಹಿಂಸೆ.

ಮೂರು ಸೀಟುಗಳು ಇರುವ ಸಂದರ್ಭದಲ್ಲಿ ಮಧ್ಯಭಾಗದ ಸೀಟಿನಲ್ಲಿ ಕೂರುವುದು ಹಿಂಸೆಯೇ ಸರಿ. ಒಂದಷ್ಟು stretch ಮಾಡುವ ಉದ್ದೇಶದಿಂದ ಕಿಟಕಿಯಾಚೆ ಹೋಗುವುದಿಲ್ಲ ಬಿಡಿ. ಫ್ರೆಶ್‌ ಗಾಳಿ ಬರಲಿ ಅಂತಲೂ ಕಿಟಕಿ ತೆರೆಯಲು ಕೇಳಲಾಗುವುದಿಲ್ಲ ಸರಿ. ಆದರೆ ಊಟದ ವಿಷಯದಲ್ಲಿ ಕೊಂಚ ತೊಂದರೆ. ಪಕ್ಕಾ ಸಸ್ಯಾಹಾರಿಗಳಾದವರಿಗೆ ಆಚೆ ಈಚೆ ಇರುವವರು ಬೇರೆ ರೀತಿಯ ಊಟ ಮಾಡಿದರೆ ಇವರದ್ದೇ ಊಟ ಮಾಡಲೂ ತೊಂದರೆ ಪಟ್ಟುಕೊಳ್ಳುವವರು ಹಲವಾರು. ನಿನ್ನ ಊಟ ನಿನ್ನದು, ನನ್ನ ಊಟ ನನ್ನದು ಎನ್ನುವವರಿಗೆ ಈ ತೊಂದರೆ ಇಲ್ಲ.

ಕಿಟಕಿಯ ಬಳಿ ಕೂಡುವವರಿಗೆ ಆಗಾಗ ಟಾಯ್ಲೆಟ್‌ಗೆ ಹೋಗುವ ತೊಂದರೆ ಇದ್ದರೆ ಮಿಕ್ಕ ಇಬ್ಬರೂ ಆಗಾಗ ಏಳಲೇಬೇಕು. ಕೇಳಲು ಸಂಕೋಚ ಎಂದವರು ಎಷ್ಟೂ ಎಂದು ತಡೆದಾರು? ಇದೇ ಸಮಸ್ಯೆ ಮಧ್ಯದಲ್ಲಿ ಕೂತವರಿಗೂ. ಹಾಗಿದ್ದರೆ ಕೊನೆಯಲ್ಲಿ ಕೂರುವುದೇ ಒಳಿತೇ? food cartನವರು ಓಡಾಡುವಾಗ, ಟಾಯ್ಲೆಟ್‌ ಕಡೆ ಹೋಗುವ ಬರುವ ಮಂದಿ,stretch ಮಾಡಲೆಂದು ಓಡಾಡುವ ಮಂದಿಯವರು ಆಗಾಗ ತಾಕಿಸಿಕೊಂಡು ಓಡಾಡಿದರೆ ತೊಂದರೆಯಾಗುತ್ತಲೇ ಇರುತ್ತದೆ. ಮನೆಯಲ್ಲಿ ಅಥವಾ ಹೋಗಿಬಂದ ಕಡೆ ಏನೇ ಅಭ್ಯಾಸವಿದ್ದರೂ ಅದನ್ನು flight ವಿಷಯಕ್ಕೆ ಬಂದಾಗ ಬದಿಗೆ ಇರಿಸಲೇಬೇಕು.

ಒಬ್ಬರು ತಮ್ಮ ಅಭ್ಯಾಸವಿದು ಎಂದು ಹೇಳಿಕೊಳ್ಳುವುದು ಮತ್ತೂಬ್ಬರಿಗೆ ಹಿಂಸೆಯೇ ಸರಿ. ಬಹಳ ಹಿಂದೆ ನಾನೊಂದು ಫ್ಯಾಕ್ಟರಿಯಲ್ಲಿ ಕೆಲಸದಲ್ಲಿದ್ದೆ. ಹಿರಿಯರೊಬ್ಬರು ಎಲ್ಲರಿಗಿಂತ ಮೊದಲು ಕ್ಯಾಂಟೀನ್‌ ಊಟಕ್ಕೆ ಹೋಗುವ ಅಭ್ಯಾಸ ಉಳ್ಳವರಾಗಿದ್ದರು. ಅವರು ತಿನ್ನುತ್ತಿದ್ದುದು ಹಪ್ಪಳ ಮತ್ತು ಮಜ್ಜಿಗೆ ಅನ್ನ ಮಾತ್ರ. ಇವರು ಊಟ ಮುಗಿಸಿ, ಅಲ್ಲೇ ಬದಿಯಲ್ಲಿರುವ ಸಿಂಕ್‌ಗೆ ಹೋಗಿ ಕೈ ತೊಳೆಯುವುದೇ ಅಲ್ಲದೇ ಗಂಟಲು ತೊಳೆಯುವ ಕ್ರಿಯೆಯಲ್ಲಿ ಭೀಕರ ಸದ್ದು ಮಾಡುವುದು ದುರಭ್ಯಾಸವೇ ಅಲ್ಲವೇ? ಕಚೇರಿ ಎಂದಾಗ ಇಂದಿನ ಐಟಿ ಯುಗದ ಅಭ್ಯಾಸಗಳ ಬಗ್ಗೆ ಹೇಳಲೇಬೇಕು. ಕೆಲವರಿಗೆ ಕೆಲಸಕ್ಕೆ ಬೇಗ ಬಂದು ಸಂಜೆಯ ವೇಳೆ ಬೇಗ ತೆರಳುವ ಅಭ್ಯಾಸವಿರುತ್ತದೆ. ಕಚೇರಿಯ ಕೆಲಸದ ಅನಂತರ ಅದರ ಬಗ್ಗೆ ಆಲೋಚನೆಯನ್ನೂ ಮಾಡದೇ ತಮ್ಮ ಕೆಲಸದಾಚೆಗಿನ ಹವ್ಯಾಸಗಳತ್ತ ಗಮನ ನೀಡುತ್ತಾರೆ.

ಅಭ್ಯಾಸವೇ ಬೇರೆ, ಹವ್ಯಾಸವೇ ಬೇರೆ. ಕೆಲಸವೇ ಬೇರೆ, ಹವ್ಯಾಸವೇ ಬೇರೆ. ಮತ್ತೆ ಕೆಲವರ ಅಭ್ಯಾಸ ಎಂದರೆ ಕೆಲಸಕ್ಕೆ ತಡವಾಗಿ ಬಂದು ತಡವಾದರೂ ಮನೆಗೆ ತೆರಳದೇ ಕಚೇರಿಯನ್ನೇ ಮನೆ ಮಾಡಿಕೊಂಡಿರೋದು. ಒಂದರ್ಥದಲ್ಲಿ ಮನೆಯ ಮಂದಿಗೆ ಯಾವುದೇ ರೀತಿ ಸಹಾಯವಾಗದೇ, ಮಕ್ಕಳೊಂದಿಗೂ ಸಮಯ ಕಳೆಯದೇ, ತಮ್ಮದೇ ಕೆಲಸದಲ್ಲಿ ವಿಪರೀತ ತೊಡಗಿಸಿಕೊಳ್ಳುವುದು ಅಥವಾ ಕೆಲಸದ ವೇಳೆಯ ಆಚೆಗೂ ಸ್ನೇಹಿತರ ಜತೆಯೇ ಕಳೆಯುವುದೂ ಒಂದು ಹವ್ಯಾಸ. ಈ
ಹವ್ಯಾಸವನ್ನು ಬಹಳ ಮುಂಚಿನಿಂದಲೂ ಅಭ್ಯಾಸ ಮಾಡಿಕೊಂಡು ಬಂದಿದ್ದು, ಜವಾಬ್ದಾರಿ ಅರಿಯುವ ಅಥವಾ ಹೊರುವ ಸಮಯದಲ್ಲೂ ಅದನ್ನೇ ಹವ್ಯಾಸ ಮಾಡಿಕೊಂಡು, ಮನೆಯವರ ಪಾಲಿಗೆ ಅದೊಂದು ದುರಭ್ಯಾಸದಂತೆ ಕಂಡು ನೊಂದಾಗ ಒಂದು ಮನೆಯ ಮಂದಿಯ ನಡುವಿನ ಸಾಮರಸ್ಯ ಹಾಳಾಗಿ ಬರೀ ಸಮಸ್ಯೆ ಉಳಿಯುತ್ತದೆ.

ಅಭ್ಯಾಸಗಳತ್ತ ಗಮನವಿರಲಿ. ಉತ್ತಮ ಅಭ್ಯಾಸಗಳು ಹವ್ಯಾಸವಾಗಲಿ. ಅಂಥಾ ಅಭ್ಯಾಸಗಳನ್ನು ಪಸರಿ ಸುವ ಯತ್ನವೂ ಅಭ್ಯಾಸವಾಗಲಿ ಆದರೆ ನಮ್ಮ ಅಭ್ಯಾಸವೇ ಉತ್ತಮ ಎಂದು ಬೇಕಿಲ್ಲ  ದಿದ್ದರೂ ಪ್ರಚಾರ ಮಾಡುತ್ತಾ, ಅದನ್ನೇ ಹೆಗ್ಗಳಿಕೆಯಾಗಿ ತೋರುತ್ತಾ ನಿಮ್ಮ ಹವ್ಯಾಸವನ್ನು ಬೇರೊಬ್ಬರ ಪಾಲಿನ ದುರಭ್ಯಾಸ ಮಾಡದಿರಿ.

ತಿಳಿಸಿ ಕಲಿಯುವಂತೆ ಮಾಡುವುದಕ್ಕಿಂತಾ, ನೋಡಿ ಕಲಿಯುವ ಹಾದಿಯಲ್ಲಿ ಸಾಗುವುದು ಉತ್ತಮ. ಮೇಲೆ ಹೇಳಿದ ವಿಷಯಗಳಾವುದೂ ನಿಮಗೆ ಗೊತ್ತಿಲ್ಲ ದೇನಿಲ್ಲ. ಗೊತ್ತಿರುವುದನ್ನೇ ಭಿನ್ನವಾಗಿ ಹೇಳು ವುದು ಅಭ್ಯಾಸ ಮಾಡಿಕೊಂಡ ನನಗೆ ಇದೊಂದು ಹವ್ಯಾಸವೇ ಆಗಿದೆ. ದುರಭ್ಯಾಸ ಎನಿಸಿದರೆ ಹೇಳಿಬಿಡಿ ಆಯ್ತಾ?

ಶ್ರೀನಾಥ್‌ ಭಲ್ಲೆ,ರಿಚ್ಮಂಡ್

Advertisement

Udayavani is now on Telegram. Click here to join our channel and stay updated with the latest news.

Next