ಬಹ್ರೈನ್:ಇಲ್ಲಿನ ಕನ್ನಡ ಸಂಘವು ತನ್ನ ವಾರ್ಷಿಕ ಕಾರ್ಯಕ್ರಮವಾದ “ಕನ್ನಡ ವೈಭವ’ವನ್ನು ಕನ್ನಡ ಭವನದ ಸಭಾಂಗಣದಲ್ಲಿ ಕನ್ನಡ ನಾಡು-ನುಡಿಗಳ ಹಿರಿಮೆ, ಗರಿಮೆಗಳನ್ನು ಸಾರುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಡಿನ ಸಾಧಕ ಗಣ್ಯರುಗಳೊಂದಿಗೆ ಬಹಳ ಅದ್ದೂರಿಯಾಗಿ ಆಚರಿಸಿತು. ನೆರೆದ ನೂರಾರು ಜನರು ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಮುತ್ತುಗಳ ದ್ವೀಪದಲ್ಲಿ ಕರುನಾಡಿನ ವೈಭವವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.
ಈ ಕನ್ನಡ ವೈಭವ ಕಾರ್ಯಕ್ರಮದ ಉದ್ಘಾಟಕರಾಗಿ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಜಿ. ಆರ್. ಮೆಡಿಕಲ್ ಕಾಲೇಜ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾದ ಎಸ್ .ಗಣೇಶ್ ರಾವ್ , ಮುಖ್ಯ ಅತಿಥಿಗಳಾಗಿ ಶಿರಸಿಯ ಮಾನ್ಯ ಶಾಸಕರಾದ ಭೀಮಣ್ಣ ನಾಯ್ಕ್ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಕನ್ನಡ ಚಲನಚಿತ್ರರಂಗದ ಜನಪ್ರಿಯ ನಟರಾದ ರವಿಶಂಕರ್ ಗೌಡ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕನ್ನಡ ಸಂಘದ ಅಧ್ಯಕ್ಷರಾದ ಅಮರನಾಥ್ ರೈ ಅವರ ಸಾರಥ್ಯದಲ್ಲಿ ಜರಗಿದ ಈ ಕಾರ್ಯಕ್ರಮವನ್ನು ಉದ್ಘಾಟಕರಾದ ಎಸ್. ಗಣೇಶ್ ರಾವ್ ಮೊದಲ್ಗೊಂಡು ಇತರ ಅತಿಥಿಗಳು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಸೇರಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಗಾಯಕ, ಗಾಯಕಿಯರು ಒಂದಾಗಿ ಸುಶ್ರಾವ್ಯವಾಗಿ ನಾಡಗೀತೆಯನ್ನು ಹಾಡುವಾಗ ಎಲ್ಲರೂ ಎದ್ದು ನಿಂತು ನಾಡ ಗೀತೆಗೆ ಗೌರವ ಸಲ್ಲಿಸಿದರು. ಬೆಂಗಳೂರಿನ ಖ್ಯಾತ ಸಂಕರ್ಷಣ ನೃತ್ಯ ಅಕಾಡೆಮಿಯವರಿಂದ ಡಾ| ಸುಮನಾ ರಂಜಲ್ಕರ್ ಅವರ ನೇತೃತ್ವದಲ್ಲಿ ಸುಮಾರು ಒಂದು ಘಂಟೆಗಳ ಕಾಲ ವೈವಿಧ್ಯಮಯವಾದ ಶಾಸ್ತ್ರೀಯ ನೃತ್ಯ ಪ್ರದರ್ಶನಗಳು ವೇದಿಕೆಯಲ್ಲಿ ಮೂಡಿಬಂದು ಒಂದು ಅದ್ಭುತ ಲೋಕ ಸೃಷ್ಟಿಯಾಗಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.
ಅನಂತರ ಜರಗಿದ ಸಭಾಕಾರ್ಯಕ್ರಮದಲ್ಲಿ ಉದ್ಘಾಟಕರಾದ ಎಸ್. ಗಣೇಶ್ ರಾವ್, ಮುಖ್ಯ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಸಾಂಪ್ರಾದಾಯಿಕವಾಗಿ ಸಮ್ಮಾನಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಅತಿಥಿಗಳೂ ತಾಯ್ನಾಡಿನಿಂದ ಸಾವಿರಾರು ಮೈಲು ದೂರವಿದ್ದೂ ದ್ವೀಪದ ಕನ್ನಡಿಗರ ಕನ್ನಡದ ಕಾಳಜಿ, ಅಪ್ಪಟ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸರಲ್ಲದೆ ಬಹ್ರೈನ್ ಕನ್ನಡಿಗರಿಗೆ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕಲೆಯ ಮೇಲಿರುವ ಪ್ರೀತಿ, ಅಭಿಮಾನ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಸಂಘದ ಅಧ್ಯಕ್ಷರಾದ ಅಮರನಾಥ್ ರಾಯ್ ಅವರು ಎಲ್ಲರಿಗೂ ಶುಭಹಾರೈಸಿ ಮಾತನಾಡಿ, ಸಂಘವು ಮುಂದಿನ ದಿನಗಳಲ್ಲಿ ಹಾಕಿಕೊಂಡಿರುವ ಹೊಸ ಹೊಸ ಯೋಜನೆಗಳ ಬಗ್ಗೆ ಮಾತನಾಡಿ ಇದಕ್ಕೆ ಸರ್ವ ಸದಸ್ಯರ ಸಹಕಾರ ಅತ್ಯಗತ್ಯ ಎಂದರು. ಇದೆ ಸಂದರ್ಭದಲ್ಲಿ ಕನ್ನಡ ಸಂಘದ ವಾರ್ಷಿಕ ಸ್ಮರಣ ಸಂಚಿಕೆ “ಕಾವೇರಿ’ಯನ್ನು ಶಾಸಕ ಭೀಮಣ್ಣ ನಾಯ್ಕ್ ಅವರು ಬಿಡುಗಡೆಗೊಳಿಸಿದರು. ಕಾವೇರಿ ಸಂಪಾದಕ ಸಮಿತಿಯ ಕೃಷ್ಣ ಭಟ್ , ಡಿ.ರಮೇಶ್, ಕಿರಣ್ ಉಪಾಧ್ಯಾಯ, ಪೂರ್ಣಿಮಾ ಜಗದೀಶ್, ಮಾಧ್ಯಮ ಸಹಕಾರಕ್ಕಾಗಿ ಕಮಲಾಕ್ಷ ಅಮೀನ್ , ಸ್ವಯಂಸೇವಕರಾದ ಸಂಧ್ಯಾ ಪೈ, ಸತೀಶ್ ಮಲ್ಪೆ, ಪುಷ್ಪರಾಜ್ ಪೂಜಾರಿಯವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಆಭ್ಯಾಗತರಾಗಿ ಉಪಸ್ಥಿತರಿದ್ದ ಸಮಾಜಸೇವಕ ವೆಂಕಟೇಶ್ ಹೆಗಡೆ ಹೊಸಬಾಳೆ ಅವರನ್ನು ಗೌರವಿಸಲಾಯಿತು. ಕನ್ನಡ ಸಂಘವು ಜನವರಿ 2024ರಲ್ಲಿ ಬ್ರಹತ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದು ಅದರ ಕರಪತ್ರವನ್ನು ರವಿಶಂಕರ್ ಗೌಡ ಅವರು ಬಿಡುಗಡೆಗೊಳಿಸಿದರು. ಈ ವೇಳೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ರವಿಶಂಕರ್ ಗೌಡ ಅವರು ಕನ್ನಡದ ಹಿರಿಮೆ ಗರಿಮೆಗಳನ್ನು ಸಾರುವ ಕನ್ನಡ ಚಲನ ಚಿತ್ರಗೀತೆಗಳನ್ನು ಹಾಡಿ ತಮ್ಮ ಸುಮಧುರ ಧ್ವನಿಯಿಂದ ಪ್ರೇಕ್ಷಕರನ್ನು ರಂಜಿಸಿದರು. ಸಂಘದ ಪ್ರತಿಭಾನ್ವಿತ ಕಲಾವಿದರುಗಳಿಂದ ವೈವಿಧ್ಯಮಯವಾದಂತಹ ನೃತ್ಯ ಪ್ರದರ್ಶನಗಳು,ಪ್ರಹಸನಗಳು ರಂಗದಲ್ಲಿ ಮೂಡಿಬಂದು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಮಹೇಶ್ ಕುಮಾರ್ ಅವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಾಮ್ ಪ್ರಸಾದ್ ಅಮ್ಮೆನಡ್ಕ ಸ್ವಾಗತಿಸಿ ಸಭಾಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಸಮರ್ಪಣೆ ಮಾಡಿದರೆ. ದೀಪಕ್ ರಾವ್ ಪೇಜಾವರ ಹಾಗೂ ಹೇಮಾ ಶಿವಾನಂದ್ ಪಾಟೀಲ್ ಒಟ್ಟು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ವರದಿ-ಕಮಲಾಕ್ಷ ಅಮೀನ್