ನಾನು ಹಾಗೂ ನನ್ನ ಶ್ರೀಮತಿ ಯುಕೆಯಲ್ಲಿ ವಾಸಿಸುತ್ತೇವೆ. ನಾವು ಅಮೆರಿಕದಲ್ಲಿರುವ ನಮ್ಮ ಮೊಮ್ಮಕ್ಕಳನ್ನು ವರ್ಷಕ್ಕೆರಡು ಬಾರಿ, ಅಮೆರಿಕದಲ್ಲೋ ಅಥವಾ ಯುಕೆಯಲ್ಲಿ ಭೇಟಿಯಾಗುವ ಪದ್ಧತಿ ಇದೆ. ಈ ಸಾರಿ ಬೇಸಗೆ ರಜೆಗೆ ಅಮೆರಿಕದಿಂದ ನಮ್ಮಲ್ಲಿಗೆ ಭೇಟಿ ನೀಡಿದ ಮೊಮ್ಮಕ್ಕಳಾದ ಅಮೋಘ ಮತ್ತು ಮಾಯಾ ಜತೆ ಕಳೆದ ಪ್ರತೀ ದಿನವೂ ಆನಂದದ ಚಿಲುಮೆಯಾಗಿತ್ತು. ನಾವು ಹಲವಾರು ಚಟುವಟಿಕೆಗಳನ್ನು ಮಾಡಿದೆವು, ಅವುಗಳಲ್ಲಿ ಅನೇಕವು ಮಕ್ಕಳಿಗೆ ಮೊದಲ ಬಾರಿ ಅನುಭವವಾಗಿತ್ತು. ನಾವು ವೃತ್ತಿ ಅಥವಾ ಬೆಳವಣಿಗೆಯಲ್ಲಿ ವ್ಯಸ್ತರಾಗಿದ್ದುದರಿಂದ ನಮ್ಮ ಮಕ್ಕಳ ಜೀವನದಲ್ಲಿ ಕಳೆದುಕೊಂಡ ಕ್ಷಣಗಳನ್ನು ಅನುಭವಿಸಲು ಅಥವಾ ಅನುಭವಿಸಿದ ಕ್ಷಣಗಳನ್ನು ಪುನಃ ನೆನೆಪಿಸಿಕೊಳ್ಳಲು ನಿಸರ್ಗ ನಮಗೆ ಮತ್ತೊಂದು ಅವಕಾಶ ನೀಡುತ್ತದೆ. ಇದನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು. ಹೀಗೆ ಸಂದ ಪ್ರತಿಯೊಂದು ಕ್ಷಣವನ್ನೂ ಮನಸಾರ ಆನಂದಿಸುವುದು ಮುಖ್ಯ!
ಈ ಚಟುವಟಿಕೆಗಳಲ್ಲಿ ಅತ್ಯಂತ ಸ್ಮರಣೀಯವಾದುದು ಇಂಗ್ಲೆಂಡಿನ ವಿಶಿಷ್ಟತೆಯಾದ ಬಿ – ಬಿ ಅನುಭವ. ಯಾರದೋ ಮನೆಯೊಳಗೆ ಹಣ ಕೊಟ್ಟು ಇದ್ದು ಅವರ ಆತಿಥ್ಯ ಪಡೆಯುವುದು. ಅಮೆರಿಕದಲ್ಲಿ ಅಪರೂಪವಾದ ಈ ಅನುಭವ ಅವರಿಗೆ ಸೋಜಿಗವೆನಿಸಿತು. ಮಾಯಾಳಿಗೆ ಥೀಯೇಟರ್‌ನಲ್ಲಿ ಮೊದಲ ಬಾರಿಗೆ ಪೆಪ್ಪ ಪಿಗ್‌ನಂಥ ಶೋ ನೋಡುವ ಅವಕಾಶ ಸಿಕ್ಕಿತು. ಬರೀ ಟಿವಿಯಲ್ಲಿ ನೋಡುತ್ತಿದ್ದ ಪಾತ್ರಗಳು ಜೀವಂತವಾಗಿ ಬಂದಾಗ ಅವಳಿಗೆ ಖುಷಿಯೋ ಖುಷಿ. ಸ್ನೇಹಪ್ರಿಯನಾದ ಅಮೋಘ… ಹೊಸಹೊಸ ಸ್ನೇಹಿತರನ್ನು ಮಾಡಿಕೊಂಡ. ಮಾಯಾ ಲೀಡ್ಸ್ ಕ್ಯಾಸಲ್‌ನಲ್ಲಿ ಮನೆಮಂದಿಯೊಂದಿಗೆ ರಾಜಕುಮಾರಿಯಂತೆ ಮೆರೆದಳು.
ಇದರ ಜತೆಗೆ ಒಂದು ವಾರದ ಕೊನೆಯಲ್ಲಿ ನಾವುಗಳು ಪ್ಯಾರಿಸ್‌ಗೂ ಭೇಟಿಕೊಟ್ಟೆವು. ಮೊದಲು ನಾವು ಜಗತ್ಪ್ರಸಿದ್ಧವಾದ ಐಫಲ್ ಟವರ್ ಅನ್ನು ನೋಡಲು ಹೋಗಿದ್ದೆವು. ಒಲಿಂಪಿಕ್ಸ್ ನಿಮಿತ್ತ ಐಫಲ್ ಟವರ್ ಮುಚ್ಚಲಾಗಿತ್ತು ಮತ್ತು ನಾವು ಅದಕ್ಕೆ ಏರಲು ಸಾಧ್ಯವಾಗಲಿಲ್ಲ. ಆದರೆ ವಿಶೇಷವಾಗಿ ಅಲಂಕೃತಗೊಂಡ ಟವರ್ ಮತ್ತು ಅದರ ಸುತ್ತಮುತ್ತಲಿನ ನೋಟವನ್ನು ದೂರದಿಂದ ವೀಕ್ಷಿಸುವುದು ಸಹ ಸುಂದರವಾಗಿತ್ತು.
ಅದರ ಅನಂತರ ಮರುದಿವಸ ನಾವು ವೆರ್ಸೈ ಲೆಸ್ ಅರಮನೆಯನ್ನು ಭೇಟಿ ನೀಡಿದೆವು. ವೆರ್ಸೈ ಲೆಸ್, ತನ್ನ ಅದ್ಭುತ ಆವರಣ, ವಿಶಾಲ ಗಾರ್ಡನ್‌ಗಳು ಮತ್ತು ಐಷಾರಾಮಿ ಇಂಟೀರಿಯರ್‌ಗಳೊಂದಿಗೆ ಇತಿಹಾಸದ ವೈಭವವನ್ನು ಪ್ರತಿಬಿಂಬಿಸುತ್ತದೆ. ಅರಮನೆಯ ಚಿತ್ತಾಕರ್ಷಕ ಕೋಟೆಯ ಕೊಠಡಿಗಳು, ದರ್ಪಣಗಳ ಸಭಾಂಗಣ, ಮತ್ತು ರಾಜಮನೆತನದ ವಾಸಸ್ಥಾನಗಳನ್ನು ವೀಕ್ಷಿಸಿ ಆಮೋಘ ಇತಿಹಾಸವನ್ನು ಅನುಭವಿಸಿದೆವು. ಕನ್ನಡಿಗಳ ಸಭಾಂಗಣವಂತೂ (Hall of mirrors) ಒಂದು ರೋಮಾಂಚಕಾರಿ ಅನುಭವ.
ಮಧ್ಯಾಹ್ನದ ಮೇಲೆ, ನಾವು ಲೂವ್ರ್ ಮ್ಯೂಸಿಯಂಗೆ ಭೇಟಿ ನೀಡಿದೆವು. 1793ರಲ್ಲಿ ಸಾರ್ವಜನಿಕರಿಗೆ ತೆರೆದ ಲೂವ್ರ್, ಪ್ರಪಂಚದ ಅತ್ಯಂತ ಪ್ರಸಿದ್ಧ ಮತ್ತು ಐತಿಹಾಸಿಕ ಕಲಾ ಮ್ಯೂಸಿಯಂಗಳಲ್ಲಿ ಒಂದಾಗಿದೆ. ಲೂವ್ರ್ ಮ್ಯೂಸಿಯಂನ ಬೃಹತ್ ಕಟ್ಟಡದಲ್ಲಿ 35,000ಕ್ಕೂ ಹೆಚ್ಚು ಕಲಾಕೃತಿಗಳು ಮತ್ತು ಐತಿಹಾಸಿಕ ವಸ್ತುಗಳು ಪ್ರದರ್ಶನಗೊಳ್ಳುತ್ತವೆ. ಮೊದಲಿಗೆ ನಾವು ಚಾರಿತ್ರಿಕ ಹಾಗೂ ಅತೀ ಪ್ರಸಿದ್ಧವಾದ ಮೊನಾಲಿಸಾ ಚಿತ್ರವನ್ನು ನೋಡಿದೆವು.
ಮೊನಾಲಿಸಾ, ಲಿಯೋನಾರ್ಡೊ ದ ವಿಂಚಿ ಅವರ ಕಲೆ, ತನ್ನ ಅನನ್ಯ ನಗು ಮತ್ತು ಮರ್ಮಭರಿತ ಅಭಿವ್ಯಕ್ತಿಗಾಗಿ ಪ್ರಸಿದ್ಧವಾಗಿದೆ. ಈ ಚಿತ್ರವು ಸುಮಾರು 1503ರಿಂದ 1506ರ ವರೆಗೆ ಫ್ಲಾರೆನ್ಸ್‌ನಲ್ಲಿ ಚಿತ್ರಿಸಲಾದ ಮಹಾನ್ ಕಲಾಕೃತಿ. ಚಿತ್ರದಲ್ಲಿ ಕಾಣುವ ಮಹಿಳೆ ಲಿಸಾ ಗೆರಾರ್ಡಿನಿ, ಫ್ಲಾರೆನ್ಸ್‌ನ ವ್ಯಾಪಾರಿಯೊಬ್ಬನ ಪತ್ನಿ ಎಂದು ಹೇಳುತ್ತಾರೆ. ಮೊನಾಲಿಸಾದ ನಗು, ಕಣ್ಣಿನ ನೋಟ, ಮತ್ತು ಹಿನ್ನೆಲೆಯ ದೃಶ್ಯ, ಚಿತ್ರಕ್ಕೆ ವಿಶಿಷ್ಟತೆಯನ್ನು ತರುತ್ತವೆ.
ಚಿತ್ರವನ್ನು ಲಿಸಾ ಗೆರಾರ್ಡಿನಿಯ ಪತಿ, ಫ್ರಾಂಚೆಸ್ಕೊ ದೆಲ್ ಜಿಯೋಕೊಂಡೋ, ಅವರ ಪತ್ನಿಯ ಸ್ಮರಣಾರ್ಥವಾಗಿ ಚಿತ್ರಿಸಲಾಯಿತಂತೆ. ದ ವಿಂಚಿಯ ಅಸಾಧಾರಣ ಕಲಾತ್ಮಕತೆಯ ಮೆಲುಕು ಚಿತ್ರದಲ್ಲಿ ಪ್ರತಿಬಿಂಬಿಸುತ್ತದೆ. ಮೊನಾಲಿಸಾ ಪ್ರಾರಂಭದಲ್ಲಿ ವಿವಿಧ ಅರಮನೆಗಳಲ್ಲಿ ಇಡಲಾಗಿತ್ತು, ಮತ್ತು ನಪೋಲಿಯೆನ್ ಅವರ ಕಾಲದಲ್ಲಿ, ಚಿತ್ರವನ್ನು ಅವರ ರೋಜಮರಿ ಕೋಣೆಯಲ್ಲಿ ಇಡಲಾಗಿತ್ತು. 1797ರಲ್ಲಿ, ಚಿತ್ರವನ್ನು ಲೂವ್ರ್ ಮ್ಯೂಸಿಯಂಗೆ ಸ್ಥಳಾಂತರಿಸಲಾಯಿತು, ಅಂದಿನಿಂದಲೂ ಈ ಖ್ಯಾತ ಕಲಾಕೃತಿ ಲೂವ್ರ್ ಮ್ಯೂಸಿಯಂನ ಪ್ರಮುಖ ಆಕರ್ಷಣೆಯಾಗಿದೆ.
ಮೊನಾಲಿಸಾ ಕುರಿತಾಗಿ ಹಲವಾರು ರಹಸ್ಯಗಳನ್ನು, ಆಸಕ್ತಿಕರ ವಿಚಾರಗಳನ್ನು ಪ್ರತಿಪಾದಿಸಲಾಗಿದೆ. ಉದಾಹರಣೆಗೆ ಮೊನಾಲಿಸಾಳ ಕಣ್ಣುಗಳು ನೀವು ಚಿತ್ರಕಲೆಯ ಮುಂದೆ ಯಾವ ದಿಕ್ಕಿನಲ್ಲಿ ನಿಂತರೂ ನಿಮ್ಮನ್ನೇ ನೋಡುತ್ತಿರುವಂತೆ ಭಾಸವಾಗುತ್ತದೆ. ಇದೆಲ್ಲದರ ನಡುವೆ, ಈ ಕೃತಿಗೆ ಇಷ್ಟೆಲ್ಲ ಖ್ಯಾತಿ ಸಮ್ಮತವೇ ಎನಿಸಲೂಬಹುದು.
ಸಂಜೆಯ ವೇಳೆಗೆ ನಾವು ಶಾಂಪ್ಸ್-ಎಲಿಸೆ (Champs&Élysées) ರಸ್ತೆಗೆ ಹೋದೆವು. ಈ ಪ್ರಸಿದ್ಧ ಬೀದಿ ತನ್ನ ವಿಸ್ತ್ರತ ಶಾಪಿಂಗ್ ಮಾರ್ಗ, ರೆಸ್ಟೋರೆಂಟ್‌ಗಳು, ಕಾಫಿ ಹೌಸ್‌ಗಳು ಮತ್ತು ಐಷಾರಾಮಿ ಬೂಟಿಕ್‌ಗಳಿಗಾಗಿ ಪ್ರಸಿದ್ಧವಾಗಿದೆ. ಈ ರಸ್ತೆಯ ಸಜೀವ ವಾತಾವರಣ ಮತ್ತು ಚಟುವಟಿಕೆಗಳು ಪ್ಯಾರಿಸ್‌ನ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಇಲ್ಲಿ ಲೂಯಿಸ್ ವಿಟ್ಟೋನ್ ಅಂಗಡಿಗೆ ಭೇಟಿ ನೀಡುವುದು ವಿಶೇಷ ಸಂಪ್ರದಾಯವಾಗಿರುತ್ತದೆ. ಇಲ್ಲಿ ಒಂದು ಸಣ್ಣ ಜಂಬದ ಚೀಲಕ್ಕೆ (vanity bag) ಲಕ್ಷಾಂತರ ರೂಪಾಯಿ ತೆರಬೇಕು!.
ನಮ್ಮ ಪ್ಯಾರಿಸ್ ಪ್ರವಾಸವಂತೂ ಅತ್ಯಂತ ಆಸಕ್ತಿದಾಯಕವಾಗಿ ಕೊನೆಗೊಂಡಿತು. ಒಟ್ಟಿನಲ್ಲಿ ಮೊಮ್ಮಕ್ಕಳೊಂದಿಗೆ ಕಳೆದ ಮೂರು ವಾರದ ಪ್ರತೀ ಕ್ಷಣವೂ ಅವಿಸ್ಮರಣೀಯ ಹಾಗೂ ಆನಂದವೋ ಆನಂದ. ಮುಂದಿನ ಅವರ ಭೇಟಿಯವರೆಗೆ ಮೆಲುಕು ಹಾಕಲು ಇರುವ ಸಾಧನ. ಮೊಮ್ಮಕ್ಕಳು ನೀಡುವ ಸಂತೋಷಕ್ಕೆ ಹೋಲಿಸಿದರೆ ಇತರ ಎಲ್ಲ ಸಂತೋಷವೂ ಅಲ್ಪ ಎನಿಸುತ್ತದೆ.
*ತುರುವೇಕೆರೆ ಮಂಜುನಾಥ, ಮಿಲ್ಟನ್ ಕೇನ್ಸ್