Advertisement
ಅವಳು ಮೆಲ್ಲನೆ ಕೇಳಿದಳು. “ಕನ್ನಡದಲ್ಲಿ ಕಾಫಿಗೆ ಏನನ್ನುತ್ತಾರೆ ?” ಜಂಗಮವಾಣಿ (ಮೊಬೈಲ್)ನಿಂದ ತಲೆಯೆತ್ತಿ ಅವಳ ಕಡೆ ನೋಡುತ್ತಾ ಹೇಳಿದೆ. “ಕನ್ನಡದಲ್ಲಿ ಕೂಡ ಕಾಫಿಗೆ ಕಾಫಿ ಅಂತಲೇ ಅನ್ನುತ್ತಾರೆ…. ಅದು ಕರ್ನಾಟಕದ ಮೂಲವಸ್ತುವಲ್ಲ… ಹಾಗಾಗಿ ಅದಕ್ಕೆ ಕನ್ನಡದ ಮೂಲ ಪದ ಅಂತ ಇಲ್ಲ” ಎಂದೆ. ಅವಳ ಬಟ್ಟಲು ಕಂಗಳಲ್ಲಿ ಮಿಂಚೊಂದು ಹೊಳೆಯಿತು. “ಹೌದಾ? ಕರ್ನಾಟಕವೇ ಅತೀ ಹೆಚ್ಚು ಕಾಫಿ ಬೆಳೆಯುವ ಪ್ರದೇಶ ಅಂತ ಓದಿದ್ದೆ. ಅದು ಇಲ್ಲಿನ ಪಶ್ಚಿಮ ಘಟ್ಟಗಳ ಮೂಲ ಉತ್ಪನ್ನ ಅಂತಲೇ ಊಹಿಸಿದ್ದೆ. ” ನಾನು ಜಂಗಮವಾಣಿಯನ್ನು ಬದಿಗಿಟ್ಟು “ಹದಿನೇಳನೇ ಶತಮಾನದವರೆಗೂ ಭಾರತದಲ್ಲಿ ಕಾಫಿಯೇ ಇರಲಿಲ್ಲ. ಕಾಫಿ ನಮ್ಮ ನಾಡಿಗೆ ಬಂದದ್ದು ಅತ್ಯಂತ ರೋಚಕದ ಕಥೆ ” ಎಂದೆ. ತಾನು ಕುಳಿತಿದ್ದ ಕಡೆಯಿಂದ ನನ್ನ ಬಳಿ ಸಾರುತ್ತಾ, “ಸರಿ ಹೇಳು, ರಜೆ ಇದೆಯಲ್ಲ ಹೇಗೂ, ನಿಧಾನಕ್ಕೆ ಮಿಕ್ಕ ಕೆಲಸ ನೋಡಿದರೆ ಆಯಿತು ” ಎಂದಳು.
ಅಷ್ಟರಲ್ಲಿ ನಾನು “ಸರಿಯಾಗಿ ಹೇಳಿದೆ. ಹದಿನೈದನೆಯ ಶತಮಾನದಲ್ಲಿ ಅರೇಬಿಯಾದ ಸೂಫಿ ಸಂತರು ಆಫ್ರಿಕಾ ಖಂಡದ ಉದ್ದಗಲಕ್ಕೂ ಸಂಚರಿಸುತ್ತಾ ಇದ್ದರು.’
Related Articles
Advertisement
ತತ್‌ಕ್ಷಣವೇ ಇವರು ಕೂಡ ಆ ಮಿಶ್ರಣವನ್ನು ಸೇವಿಸಿ ಅದರಿಂದ ಒಂದು ರೀತಿಯ ಉನ್ಮಾದ ಉಂಟಾಗುವುದನ್ನು ಅನುಭವಿಸಿದರು. ಕಾಫಿಯಲ್ಲಿನ ‘ಕೆಫೀನ್’ ಎಂಬ ವಸ್ತುವಿನಿಂದ ಉಂಟಾಗುವ ಒಂದು ಬಗೆಯ ಶಕ್ತಿಯುತ ಉನ್ಮಾದ, ಎದ್ದು ಕುಣಿಯುವ ಬಯಕ ಬರುವ ಹಾಗೆ – ಅದನ್ನು ಅವರ ಅರೇಬಿಕ್ ಭಾಷೆಯಲ್ಲಿ ‘ಕುವ್ವಾ’ ಎಂದು ಕರೆದರು.’
ಭಾರ್ಯೆಯ ಕಣ್ಣುಗಳು ಮಿನುಗಿದವು. ‘ಕುವ್ವಾ’ ಅಂದರೆ ಏನು ? ನಾನು “ಅಂದರೆ ಶಕ್ತಿ ಎಂದು….’ ಆ ಪದ ಭಾರತಕ್ಕೆ ಬರುತ್ತಾ ಬರುತ್ತಾ ‘ಕಾವಾ’ ಎಂದು ಆಯಿತು. ಡಚ್ಚರ ಬಾಯಿಗೆ ಸಿಕ್ಕು ‘ಕುಫೆÂà’ ಆಗಿ ಅನಂತರ ಬ್ರಿಟಿಷರಿಂದ ‘ಕಾಫಿ’ ಎಂದು ನಾಮಕರಣಗೊಂಡಿತು.ಅವಳು ಕೇಳಿದಳು. “ಅರಬ್ಬರಿಂದ ಡಚ್, ಬ್ರಿಟಿಷ್ ಮುಂತಾದವರು ಕೊಂಡು ಪ್ರಪಂಚವೆಲ್ಲ ಹರಡಿದರೇ?’ ನಾನು ಉತ್ತರಿಸುತ್ತಾ ‘ಹೌದು, ಆದರೆ ಮೊದಲು ಆಫ್ರಿಕಾದಿಂದ ಅರಬ್ಬರ ಕೈಗೆ ಸಿಕ್ಕಿತಲ್ಲ ಅದು ಆಫ್ರಿಕಾದ ಬಹುಮುಖ್ಯ ರಫ್ತುಗಳಲ್ಲಿ ಒಂದಾಯಿತು. ಸೊಮಾಲಿಯಾದ ಸಮುದ್ರ ವ್ಯಾಪಾರಿಗಳು ಯುರೋಪಿನ ಕಾಫಿ ಹುಚ್ಚನ್ನು ಅನುಮೋದಿಸಿ, ಅವರ ಹಡಗುಗಳಲ್ಲಿ ಬಹಳಷ್ಟು ಕಾಲ ಕಾಫಿಯ ರಫ್ತು ಅರೇಬಿಯಾವರೆಗೆ ನಡೆಸಿದರು.
ಸೋಮಾಲಿಯಾದಿಂದ ಯೆಮೆನ್‌ಗೆ ಸಮುದ್ರಮಾರ್ಗವಾಗಿ ಕಾಫಿಯ ಬೀಜಗಳು ರಫ್ತಾಗುತ್ತಿದ್ದವು ಇಲ್ಲಿ . ಅರಬ್ಬರು ಕಾಫಿಯನ್ನು ಪುಡಿಯ ಸ್ವರೂಪಕ್ಕೆ ತಂದು ಅದರಲ್ಲಿ ಬೇರೆ ಮಸಾಲೆಗಳನ್ನು ಸೇರಿಸಿ blendಗಳನ್ನು ಮಾಡಿ ಅದನ್ನು ಹಲವಾರು ಬಗೆಗಳಲ್ಲಿ ಯುರೋಪಿಗೆ ಮಾರುತ್ತಿದ್ದರು. ಅರಬ್ಬರು ಮಾದಕ ವಸ್ತುಗಳನ್ನು ಕೂಡ ಸೇರಿಸಿ ಮಾರುತ್ತಿದ್ದರು.’
ಅವಳು ನಗೆ ಬೀರುತ್ತಾ, “ಅಂತೂ ಇಥಿಯೋಪಿಯಾದ ಬುಡಕಟ್ಟಿನವರಿಂದ ಸಂಶೋಧಿಸಲ್ಪಟ್ಟು ಎಲ್ಲೆಲ್ಲೋ ತಿರುಗಿ, ಏನೇನೋ ಆಗಿ, ದಕ್ಷಿಣ ಭಾರತದ ಸಾಂಪ್ರದಾಯಿಕ ಮಹಿಳೆಯರ ಮುಂಜಾನೆಯ ಅವಿಭಾಜ್ಯ ಅಂಗವಾಗಿದ್ದು ಹೇಗೆ ಅನ್ನೋದು ಇನ್ನೂ ಗೊತ್ತಾಗಲಿಲ್ಲ.’
ನಾನು ಹೇಳಿದೆ “ಅಲ್ಲಿಗೆ ಬರ್ತಾ ಇದ್ದೀನಿ. ಅರೇಬಿಯಾದಲ್ಲಿ ಇದು ಅತ್ಯಂತ ಯಶಸ್ವೀ ರಫ್ತಿನ ಸಾಮಗ್ರಿ ಆದ ಕಾರಣ, ಬೇರೆಯವರಿಗೆ ಕಾಫಿ ಗಿಡವನ್ನು ಬೆಳೆಯುವ, ಅದರ ಬೀಜಗಳನ್ನು ಸಂಸ್ಕರಿಸುವ ಕಲೆ ಹಾಗೂ ಅನುಮತಿ ಇರಲಿಲ್ಲ. ಇದನ್ನು ಅತ್ಯುಗ್ರವಾಗಿ ಅರಬ್ಬರು ಕಾಪಾಡಿಕೊಂಡಿದ್ದರು. ಆಗ ಭಾರತದ ಒಬ್ಬ ಸೂಫಿ ಸಂತ ಬಾಬಾ ಬುಡನ್ ಎಂಬಾತ ಅರೇಬಿಯಾದ ಮಕ್ಕಾ ಎಂಬ ಊರಿನ ತನ್ನ ಹಜ್ ಯಾತ್ರೆಯಿಂದ ಮರಳುತ್ತಿದ್ದಾಗ ಕೇವಲ ಏಳು ಕಾಫಿಯ ಬೀಜಗಳನ್ನು ಕದ್ದು ಹಡಗಿನಲ್ಲಿ ಭಾರತಕ್ಕೆ ಸಾಗಿಸಿದರಂತೆ. ಹಾಗೆ ತಂದ ಆ ಬೀಜಗಳನ್ನು ಚಿಕ್ಕಮಗಳೂರಿನ ಚಂದ್ರಗಿರಿ ಎಂಬ ಬೆಟ್ಟದ ತಪ್ಪಲಲ್ಲಿ ನೆಟ್ಟಾಗ ಆ ಏಳು ಗಿಡಗಳು ನೂರಾಗಿ, ಸಾವಿರವಾಗಿ ಕಾಫಿಯ ತವರೂರು ಚಿಕ್ಕಮಗಳೂರು ಎಂಬ ಹೆಸರು ಬರಲು ಕಾರಣವಾಯಿತು. ಆಮೇಲೆ ಚಂದ್ರಗಿರಿ ಎನ್ನುವ ಬೆಟ್ಟವನ್ನು ಆ ಸಂತರ ಹೆಸರಿನಂತೆ, ಬಾಬಾ ಬುಡನಗಿರಿ ಎಂದು ಹೆಸರಿಸಿದರು.’
ಅವಳ ಸಂಪಿಗೆಯ ನಾಸಿಕವನ್ನು ಮೇಲೆ ಮಾಡುತ್ತಾ ಹೇಳಿದಳು “ಪ್ರಪಂಚಕ್ಕೆಲ್ಲ ಸಾಂಬಾರು ಪದಾರ್ಥಗಳನ್ನು ಕೊಟ್ಟ ಪಶ್ಚಿಮ ಘಟ್ಟಗಳಿಗೆ ಹಿಂತಿರುಗಿ ಬಂದ return gift ಕಾಫಿ ಅನ್ನು ಮತ್ತೆ.’ ನಾನೆಂದೆ “ಒಂದು ರೀತಿಯಲ್ಲಿ ನೋಡಿದರೆ, ಹೌದು.’ತತ್‌ಕ್ಷಣವೇ ಉಲಿದಳು. “ಆದರೆ ದಿನಾ ಮೂರು ಹೊತ್ತು ಗಂಡಂದಿರು ಕಾಫಿ, ಕಾಫಿ ಎಂದು ಬೊಬ್ಬೆ ಹಾಕುವಾಗ ಯಾರಪ್ಪ ಕಂಡುಹಿಡಿದರು ಇದನ್ನು ಅನ್ನಿಸುತ್ತೆ.’ ನಾನು ನಗುತ್ತಾ ಹೇಳಿದೆ “ನೀನೊಬ್ಬಳೇ ಅಲ್ಲ ಹೀಗೆ ಹೇಳೋದು, ಹದಿನೇಳನೆಯ ಶತಮಾನದಲ್ಲಿ ಬ್ರಿಟಿಷರ ಕಾಫಿ ಹೌಸ್‌ಗಳು ಅದೆಷ್ಟು ಜನಪ್ರಿಯವಾಗಿದ್ದವು ಎಂದರೆ ಆಗಿನ ರಾಜನಿಗೆ ಬ್ರಿಟಿಷ್ ಮಹಿಳೆಯರೆಲ್ಲ ಸೇರಿ “Women’s Petition againist British Coffee Houses” ಎಂಬ ಅಹವಾಲು ಕೊಟ್ಟಿದ್ದರಂತೆ.’ ಅವಳು ಹುಬ್ಬು ಹಾರಿಸುತ್ತಾ, “ಹೌದಾ?” ಆ petitionನಲ್ಲಿ ಏನಿತ್ತೋ!? ಎಂದಳು. ನಾನು ಹೇಳಿದೆ ‘‘ಇನ್ನೇನು, ಮನೆಯ ಗಂಡಸರೆಲ್ಲ ಮೂರು ಹೊತ್ತು ಕಾಫಿ ಹೌಸ್‌ಗಳಲ್ಲಿ ಕುಳಿತು ಪಟ್ಟಾಂಗ ಹೊಡೆಯುತ್ತಾ, ಕೆಲಸ ಕಾರ್ಯ ಮರೆತು, ಉಡಾಳರಾಗುತ್ತಾ ಇದ್ದಾರೆ ಎಂದು ಇತ್ತಂತೆ. East India Company ಎಂಬ ವ್ಯಾಪಾರೀ ಸಂಸ್ಥೆ ಹೀಗೊಂದು ಕಾಫಿ ಹೌಸ್‌ನಲ್ಲಿಯೇ ಶುರು ಆದದ್ದು ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ.” ಅವಳ ಕನಸುಗಣ್ಣುಗಳನ್ನು ನನ್ನೆಡೆಯಿಂದ ಸೂರಿನ ಕಡೆಗೆ ತಿರಿಗಿಸುತ್ತಾ ಹೇಳಿದಳು. ‘ಆಗಿನ ಕಾಲದ ಕಾಫಿ ಹೌಸ್‌ನಲ್ಲಿ ಕುಳಿತು ಕವನ, ಹಾಡು ಹಸೆಗಳು ಹೇಗೆ ನಡೆಯುತ್ತಿರಬಹುದು ಅಂತ ಸೋಜಿಗ ಅನ್ನಿಸುತ್ತೆ.’ ನಾನು ಉತ್ತರಿಸಿದೆ, ‘ಆಗಿನ ಕಾಲಕ್ಕಂತೂ ಕರೆದುಕೊಂಡು ಹೋಗಲಾರೆ. ಆದರೆ ಮೊನ್ನೆ ತಾನೇ ಕಾಫಿಯ ಬಗ್ಗೆ ಒಂದು ಕವನ ಬರೆದಿದ್ದೇನೆ ಕೇಳುತ್ತೀಯಾ’ ಹೇಳಿದಳು. ‘ಇಷ್ಟೇ ಕೇಳಿದೀನಂತೆ. ಅದನ್ನೂ ಹೇಳಿಬಿಡು ಹೋಗಲಿ.’
ನಾನು ಕವಿಯಂತೆ ರಾಗದಲ್ಲಿ,
“ಹರಿವ ಹಾಲೊಳು ಅಲಕನಂದಾ
ತೆರೆಯ ಉಕ್ಕಿಸೆ ಕೃಷ್ಣೆ ಯಮುನಾ
ಸರಸಿ ಸರಸತಿ ಗುಪ್ತ ಗಾಮಿನಿ ಸಂಗಮಿಸಿ ಸುಧೆಯೋ
ನೊರೆಯ ಹಾಲೊಳು ಸೇರಿ ಕೆನೆಯೂ
ಕರಿ ಡಿಕಾಕ್ಷನು ಪರಿ ಘಮ್ಮನ್ನೆಲೂ
ಬೆರೆತ ಸಕ್ಕರೆ ಗುಪ್ತ ಗಾಮಿನಿ ಕಾಫಿ ಭೂಸುಧೆಯೋ” * ಪ್ರಶಾಂತ್ ಸುಬ್ಬಣ್ಣ, ಟೊರಂಟೋ