Advertisement

ಜರ್ಮನಿ: ಸಿರಿಗನ್ನಡ ಕೂಟ ಮ್ಯೂನಿಕ್‌ – ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

01:16 PM Jul 06, 2024 | Team Udayavani |

ಜರ್ಮನಿ:“ಯೋಗಶ್ಚಿತ್ತ ವೃತ್ತಿ ನಿರೋಧ’ ಎಂದು ಪತಂಜಲಿಯವರು ಯೋಗಶಾಸ್ತ್ರದಲ್ಲಿ ತಿಳಿಸಿರುತ್ತಾರೆ. ಚಿತ್ತ ಎಂದರೆ ಮನಸ್ಸು, ವೃತ್ತಿ ಅಂದರೆ ಮನಸ್ಸಿನಲ್ಲೇಳುವ ಆಲೋಚನಾ ಲಹರಿಗಳು, ಗೊಂದಲಗಳು, ತಳಮಳ ಮುಂತಾದವು. ನಿರೋಧ ಅಂದರೆ ಮನಸ್ಸಿನ ಚಟುವಟಿಕೆಗಳನ್ನು ನಿಯಂತ್ರಣದಲ್ಲಿರಿಸಿಕೊಂಡು ಸಮತೋಲನವನ್ನು ಕಾಯ್ದುಕೊಳ್ಳುವುದು. ಈ ಜಗತ್ತಿಗೆ ನಮ್ಮ ಭಾರತ ದೇಶದ ಕೊಡುಗೆ ಅಪಾರ. ಹಾಗೆ ಸಾವಿರಾರು ವರ್ಷಗಳ ಹಿಂದೆ ಭಾರತದಲ್ಲಿ ಹುಟ್ಟಿಕೊಂಡ ಯೋಗ ಪದ್ಧತಿ ಇಂದು ವಿಶ್ವದೆಲ್ಲೆಡೆ ಜನರು ಅಭ್ಯಾಸ ಮಾಡುತ್ತಿದ್ದಾರೆ. ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಯೋಗದ ಮಹತ್ವನ್ನು ಜನರಿಗೆ ಸಾರುವ ಸಲುವಾಗಿ 2015ರಿಂದ ಜೂನ್‌ 21ನ್ನು ಅಂತಾರಾಷ್ಟ್ರೀಯ ಯೋಗದಿನವೆಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ.

Advertisement

ಜರ್ಮನಿಯ ಮ್ಯೂನಿಕ್‌ನಲ್ಲಿ ಜೂ.22ರಂದು ಸಿರಿಗನ್ನಡಕೂಟ ev. ವತಿಯಿಂದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ| ಅನೂಷ ಶಾಸ್ತ್ರಿ ಆಯುರ್ವೇದ ವೈದ್ಯೆ, ಭರತನಾಟ್ಯ ಕಲಾವಿದೆ, ಸ್ಥಾಪಕರು, ಸನಾತನ ಅಕಾಡೆಮಿ, ಮ್ಯೂನಿಕ್‌ ಇವರೊಂದಿಗೆ ಭಾರತದಿಂದ ಆಗಮಿಸಿದ ಹಿರಿಯ ದಂಪತಿಗಳು ದೀಪ ಬೆಳಗಿದರು. ವಿಘ್ನವಿನಾಶಕ ವಿನಾಯಕನ ಸ್ತೋತ್ರದಿಂದ ಆರಂಭಿಸಿ, ಕತ್ತಲೆಯನ್ನು ತೊಳೆದು ಬೆಳಕಿನಡೆಗೆ ಒಯ್ಯಲು ಕೋರಿ ಅಸತೋಮಾ ಸದ್ಗಮಯ ಮತ್ತು ದೀಪ ಜ್ಯೋತಿಗೆ ನಮಿಸಿ ಕಾರ್ಯಕ್ರಮ ಪ್ರಾರಂಭಿಸಲಾಯಿತು.

ಯೋಗ ದಿನಾಚರಣೆಗೆ ಆಗಮಿಸಿದ ಮುಖ್ಯ ಅತಿಥಿಗಳಿಗೆ, ಸಿರಿಗನ್ನಡಕೂಟದ ಅಧ್ಯಕ್ಷರಿಗೆ, ಸಿರಿಗನ್ನಡ ಕೂಟದ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ, ಯೋಗ ತರಬೇತಿದಾರರಿಗೆ ಮತ್ತು ಆಗಮಿಸಿದ ಕೂಟದ ಸದಸ್ಯರುಗಳಿಗೆ ಮತ್ತು ಇತರ ಯೋಗಪಟುಗಳಿಗೆ ಕೂಟದ ಸದಸ್ಯೆ ಅರುಣಾ ರೆಡ್ಡಿಯವರು ಆತ್ಮೀಯ ಸ್ವಾಗತ ಕೋರಿದರು ಮತ್ತು ಸಿರಿಗನ್ನಡ ಕೂಟದ ಕಾರ್ಯಕ್ರಮಗಳನ್ನು ಮತ್ತು ಯೋಗದ ಬಗ್ಗೆ ತಮ್ಮ ಅನಿಸಿಕೆಯನ್ನು ತಿಳಿಸಿದರು.

ಡಾ| ಅನೂಷಾ ಶಾಸ್ತ್ರಿ ಅವರು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕನಸುಗಳನ್ನು ಬೆನ್ನಟ್ಟಿ ನಮ್ಮ ಗುರಿ ತಲುಪುವ ಯೋಚನೆಯಲ್ಲಿ ದೈಹಿಕ, ಮಾನಸಿಕ ಆರೋಗ್ಯವನ್ನು ಕಳೆದು ಕೊಳ್ಳುತ್ತಿದ್ದೇವೆ. ಯೋಗಾಸನಗಳನ್ನು ನಿಯಮಿತವಾಗಿ ಮಾಡಿದರೆ ಆರೋಗ್ಯವಂತರಾಗಿರಲು ಸಾಧ್ಯವೆಂದು ತಿಳಿಸಿದರು. ದಿನನಿತ್ಯ ಕನಿಷ್ಠ 10 ನಿಮಿಷವಾದರೂ ಯೋಗಾಭ್ಯಾಸ ಮಾಡಬೇಕು ಮತ್ತು ಅಭ್ಯಾಸದ ಸಮಯದಲ್ಲಿ ಉಸಿರಾಟದ ಬಗ್ಗೆ ಗಮನಕೊಡುವುದು ಅತೀ ಮುಖ್ಯವೆಂದು ಹೇಳಿದರು. ಯೋಗಾಸನದ ಸಮಯದಲ್ಲಿ ಕುತ್ತಿಗೆಯ ಹಿಂಭಾಗ, ಬೆನ್ನುಹುರಿಯ ಮಧ್ಯೆ ಮತ್ತು ಬೆನ್ನು ಮೂಳೆಯ ತುದಿಯಲ್ಲಿ (ಟೈಲ್‌ ಬೋನ್‌ ) ಮನಸ್ಸನ್ನು ಕೇಂದ್ರಿಕರಿಸಿ ಮಾಡಿದರೆ ಒತ್ತಡ, ಆಯಾಸ, ನೋವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ವಿವರಿಸಿದರು.

Advertisement

ಆಗೊಮ್ಮೆ, ಈಗೊಮ್ಮೆ ಸಮಸ್ಯೆ ಬಂದಾಗ, ಯೋಗ ಮಾಡುವ ಬದಲಿಗೆ ಪ್ರತೀದಿನ ಒಂದು ಸಮಯ ನಿಗದಿಕರಿಸಿ ಯೋಗಾಭ್ಯಾಸ ನಡೆಸಿದರೆ ಉತ್ತಮವೆಂದು ತಿಳಿಸಿದರು. ಅವರ ಸನಾತನ ಅಕಾಡೆಮಿಯ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 21 ದಿನಗಳ ಯೋಗ ಚಾಲೆಂಜ್‌ನ್ನು ಆರಂಭಿಸಿದ್ದು ಆಸಕ್ತರು ಪಾಲ್ಗೊಳ್ಳಬೇಕಾಗಿ ತಿಳಿಸಿದರು. ಈ 21 ದಿನ ನಿತ್ಯ ಯೋಗಾಭ್ಯಾಸ ಮಾಡಿದರೆ ಅದು ದಿನಚರಿಯಲ್ಲೊಂದು ಆಗುತ್ತದೆ ಎಂದು ತಿಳಿಸಿ ಯೋಗಪಟುಗಳಿಗೆ ಶುಭ ಹಾರೈಸಿದರು.

ಅನಂತರ ಯೋಗ ತರಬೇತಿದಾರರು ಮತ್ತು ಸಿರಿಗನ್ನಡ ಕೂಟದ ಸಾಂಸ್ಕೃತಿಕ ವಿಭಾಗದ ಪದಾಧಿಕಾರಿ ದಿವ್ಯ ಎಚ್‌. ನಾರಾಯಣಯ್ಯ ಓಂಕಾರ, ಭೂ ನಮನ ಮಾಡಿಸಿ ವಾರ್ಮ್ ಅಪ್‌ ಕ್ರಿಯೆಯೊಂದಿಗೆ ಸೂರ್ಯನಿಗೆ 12 ನಮಸ್ಕಾರ ಸಲ್ಲಿಸಿ ಯೋಗಾಸನಗಳನ್ನು ಆರಂಭಿಸಲಾಯಿತು.

ಅಂತಾರಾಷ್ಟ್ರೀಯ ಯೋಗ ದಿನದ ಶಿಷ್ಟಾಚಾರ (ಪ್ರೋಟೋಕಾಲ್‌ )ದಲ್ಲಿ ತಿಳಿಸಿದ ಆಸನಗಳನ್ನು ತರಬೇತಿದಾರರು ಯೋಗಾಸಕ್ತರಿಗೆ ಮಾಡಿಸಿದರು. ತಾಡಾಸನ, ವೃಕ್ಷಾಸನ , ತ್ರಿಕೋಣಾಸನ, ಬದ್ಧಕೋನಾಸನ, ವಕ್ರಾಸನ, ಉಷ್ಟ್ರಾಸನವನ್ನು ಅಶ್ವಿ‌ನಿ ಸೋಮಸುಂದರ್‌ ಅವರು ವಿವರಿಸಿದರು. ಧನುರಾಸನ, ಶಲಭಾಸನ, ಸರ್ವಂಗಾಸನ, ಪವನಮುಕ್ತಾಸನವನ್ನು ದಿವ್ಯ ಎಚ್‌. ನಾರಾಯಣಯ್ಯ ಅವರು ಮಾಡಿಸಿದರು. ಕಪಾಲಭಾತಿ, ಭ್ರಮರಿ ಪ್ರಾಣಾಯಾಮ ಮತ್ತು ಧ್ಯಾನವನ್ನು ಕ್ರಮಬದ್ಧವಾಗಿ ಮಾಡಲು ಮಲ್ಲಿಕಾರ್ಜುನ ಅವರು ಮಾರ್ಗದರ್ಶನ ಮಾಡಿದರು. ಶವಾಸನದೊಂದಿಗೆ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕೂಟದ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ ಎಲ್ಲರಿಗೆ ಹಣ್ಣುಹಂಪಲುಗಳು, ಸಿಹಿ ತಿಂಡಿ ಮತ್ತು ಬಿಸಿಬಿಸಿ ಚಹಾವನ್ನು ನೀಡಿ ವಂದನೆ ಸಲ್ಲಿಸಿದರು.

ಸಿರಿಗನ್ನಡಕೂಟ ev. ಅಧ್ಯಕ್ಷರಾದ ಶ್ರೀಧರ್‌ ಲಕ್ಷ್ಮಾಪುರ ಮತ್ತು ಸಾಹಿತ್ಯ ವಿಭಾಗದ ಪದಾಧಿಕಾರಿ ಕಮಲಾಕ್ಷ ಎಚ್‌.ಎ. ಅವರು ಕಾರ್ಯಕ್ರಮದ ಮುಖ್ಯಅತಿಥಿಗಳಿಗೆ, ಯೋಗ ತರಬೇತಿದಾರರಿಗೆ, ಯೋಗ ದಿನಾಚರಣೆ ಸಂಬಂಧ ಕೆಲಸ ಮಾಡಿದ ಸ್ವಯಂಸೇವಕರಿಗೆ ಕಿರುಕಾಣಿಕೆಯನ್ನು ನೀಡಿದರು. 7 ವರ್ಷದಿಂದ ಹಿಡಿದು 75 ವರ್ಷದ ವರೆಗಿನ ಯೋಗಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸಿರಿಗನ್ನಡ ಕೂಟದ ಸಾಂಸ್ಕೃತಿಕ ವಿಭಾಗದ ಪದಾಧಿಕಾರಿ ದಿವ್ಯ ಎಚ್‌. ನಾರಾಯಣಯ್ಯ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಯವರಿಗೆ, ಸದಸ್ಯರಿಗೆ, ಯೋಗಪಟುಗಳಿಗೆ ಮತ್ತು ಸ್ವಯಂಸೇವಕರಿಗೆ ಧನ್ಯವಾದ ಸಮರ್ಪಣೆಗೈದರು.

ಸಿರಿಗನ್ನಡ ಕೂಟ ev. ಮ್ಯೂನಿಕ್‌ ಯಾವಾಗಲೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ನಮ್ಮ ಹಬ್ಬಹರಿದಿನಗಳು, ಯೋಗ, ಕ್ರೀಡೆ , ಸಾಹಿತ್ಯ ಆಸಕ್ತರಿಗೆ ಕನ್ನಡ ಕಹಳೆ, ಹೊನ್ನುಡಿ ಪತ್ರಿಕೆ. ಪಟ್ಟಿ ಮಾಡುತ್ತಾ ಹೋದರೆ ಪುಟ ಸಾಲದು. ಕೂಟದ ಸದಸ್ಯರಲ್ಲದೆ ಇತರ ಕೂಟದ ಸದಸ್ಯರು, ವಿದೇಶಿಯರೂ ಕೂಡ ಪಾಲ್ಗೊಳ್ಳುವುದು ವಿಶೇಷ. ಹಾಗೆಯೇ ಕೂಟದ ಸೂರ್ಯನಮಸ್ಕಾರ ಯಜ್ಞ ಬಹಳ ಉತ್ತಮ ಕಾರ್ಯಕ್ರಮ. ಸಂಕ್ರಾಂತಿಯಿಂದ ಆರಂಭಿಸಿ ರಥಸಪ್ತಮಿಯ ವರೆಗೆ ಕೂಟದ ಸ್ವಯಂ ಸೇವಕ ನುರಿತ ಯೋಗ ತರಬೇತಿ ದಾರರು ಉಚಿತವಾಗಿ ಆಸಕ್ತ ಯೋಗಪಟುಗಳಿಗೆ ಮಾರ್ಗದರ್ಶನ ನೀಡುತ್ತಾರೆ. ರಥಸಪ್ತಮಿಯಂದು 108 ಸೂರ್ಯನಮಸ್ಕಾರಗಳನ್ನು ಯೋಗಪಟುಗಳು ಮಾಡುತ್ತಾರೆ. ಈ ಕಾರ್ಯಕ್ರಮವನ್ನು ಕೂಟವು ಕಳೆದ 2 ವರ್ಷಗಳಿಂದ ನಡೆಸಿಕೊಂಡು ಬಂದಿರುತ್ತದೆ.

ಮ್ಯೂನಿಕ್‌ನ ಭಾರತೀಯ ರಾಯಭಾರಿ ಕಚೇರಿಯವರು ( Consulate General of India, Munich) ಜೂ.16ರಂದು 10ನೇ ಅಂತಾರಾಷ್ಟ್ರೀಯ ಯೋಗದಿನವನ್ನು ಹಮ್ಮಿಕೊಂಡಿದ್ದು ಪ್ರಥಮ ಬಾರಿಗೆ ಸಿರಿಗನ್ನಡಕೂಟ EV. ಮ್ಯೂನಿಕ್‌ನ ತಂಡ ಅಶ್ವಿ‌ನಿ ಸೋಮಸುಂದರ್‌, ರೇಶ್ಮಾ ಎಂ., ಸೀತಾರಾಮ ಶರ್ಮ, ದಿವ್ಯ ಎಚ್‌. ನಾರಾಯಣಯ್ಯ ಅವರ ನೇತೃತ್ವದಲ್ಲಿ ಭಾಗವಹಿಸಿ ನೆರೆದಿರುವ ಯೋಗಾಸಕ್ತರಿಗೆ ಯೋಗಮುದ್ರೆಗಳು ಮತ್ತು ಕಣ್ಣಿನ ವ್ಯಾಯಾಮಗಳನ್ನು ಮಾಡುವ ರೀತಿ ಮತ್ತು ಉಪಯೋಗಗಳನ್ನು ಕಾರ್ಯಕ್ರಮದಲ್ಲಿ ವಿವರವಾಗಿ ತಿಳಿಸಿ ಅಭ್ಯಾಸ ಮಾಡಲು ಹೇಳಿಕೊಡಲಾಯಿತು. ಹೀಗೆ ಕೂಟವು ತನ್ನದೇ ಆದ ರೀತಿಯಲ್ಲಿ ನಮ್ಮ ಸಂಸ್ಕೃತಿ, ಕಲೆ, ಆಚಾರ ವಿಚಾರಗಳಿಗೆ ಕಿರು ಕಾಣಿಕೆಯನ್ನು ನೀಡುತ್ತಿದೆ.

ಯೋಗೈನ ಚಿತ್ತಸ್ಯ ಪದೇನ ವಾಚಂ
ಮಲಂ ಶರೀರಸ್ಯ ಚ ವೈದ್ಯಕೇನ
ಯೋ ಪಾಕರೋತ್ತಂ ಪ್ರವರಂ ಮುನೀನಾಂ
ಪತಂಜಲಿ ಪ್ರಾಂಜಲಿರಾನತೋಖಸ್ಮಿ||

ಕೂಟದ ಚಟುವಟಿಕೆಗಳನ್ನು ಕೂಟದ ಫೇಸ್‌ಬುಕ್‌:https://www.facebook.com/sirigannadakootamunich ಹಾಗೂ ಇನ್‌ಸ್ಟಾಗ್ರಾಮ್‌ https://www.instagram.com/sirigannadakootamunich ಖಾತೆಗಳಲ್ಲಿ ಅನುಸರಿಸಬಹುದು.

ವರದಿ: ರೇಶ್ಮಾ ಎಂ.

Advertisement

Udayavani is now on Telegram. Click here to join our channel and stay updated with the latest news.

Next