ಬಹ್ರೈನ್: ದ್ವೀಪ ರಾಷ್ಟ್ರ ಬಹ್ರೈನ್‌ನಲ್ಲಿ ತುಳು ಕಲೆ, ಭಾಷೆ, ಸಂಸ್ಕೃತಿಗೆ ವೇದಿಕೆಯನ್ನು ಕಲ್ಪಿಸಿ, ಅದನ್ನು ಉಳಿಸಿ ಬೆಳೆಸುವ ಸಲುವಾಗಿ ” ತುಳುಕೂಟ ಬಹ್ರೈನ್ ‘ ಗೆ ಇಲ್ಲಿನ ಪ್ಯಾಪಿಲಾನ್ ರೆಸ್ಟೋರೆಂಟ್‌ನ ಸಭಾಂಗಣದಲ್ಲಿ ದೀಪ ಬೆಳಗುವುದರೊಂದಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ದ್ವೀಪರಾಷ್ಟ್ರದಲ್ಲಿ ಸುಮಾರು ನಾಲ್ಕು ದಶಕಗಳಿಂದ ಕನ್ನಡ, ತುಳು ಭಾಷೆ, ಸಂಸ್ಕೃತಿಯ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವ ಆಸ್ಟಿನ್ ಸಂತೋಷ್, ರಾಜ್ ಕುಮಾರ್, ವಿಜಯ ನಾಯಕ್ ಹಾಗೂ ರಾಜೇಶ್ ಶೆಟ್ಟಿಯವರ ನೇತೃತ್ವದಲ್ಲಿ ತುಳು ಕೂಟ ಬಹ್ರೈನ್ ಸೆ.17ರಂದು ಲೋಕಾಪರ್ಣೆಗೊಂಡಿತು. ವಿವಿಧ ಸಂಘ, ಸಂಸ್ಥೆಗಳ ಅಧ್ಯಕ್ಷರು, ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಶುಭಕೋರಿದರು.
ಕನ್ನಡ ಸಂಘದ ಮಾಜಿ ಅಧ್ಯಕ್ಷರು ಹಾಗೂ ಇಂಡಿಯನ್ ಸ್ಕೂಲ್‌ನಲ್ಲಿ 1989 ರಲ್ಲಿ ಕನ್ನಡ ತರಗತಿಗಳನ್ನು ಪ್ರಾರಂಭಿಸಲು ಕಾರಣರಾಗಿದ್ದ ಸುರೇಂದ್ರ ಶೆಟ್ಟಿ, ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಶನ್‌ನ ಅಧ್ಯಕ್ಷರಾದ ಹಾಜಿ ಅಬ್ದುಲ್ ರಜಾಕ್, ಬಹ್ರೈನ್ ಬಂಟ್ಸ್ ನ ಮಾಜಿ ಅಧ್ಯಕ್ಷರಾದ ಭರತ್ ಶೆಟ್ಟಿ, ಅಲ್ ಹಿಲಾಲ್ ವೈದ್ಯಕೀಯ ಸಮೂಹ ಸಂಸ್ಥೆಗಳ ಉಪಾಧ್ಯಕ್ಷರಾದ ಆಸೀಫ್, ಅಮ್ಮ ಕಲಾವಿದರು ಸಂಘಟನೆಯ ಮುಖ್ಯಸ್ಥರಾದ ಮೋಹನ್ ದಾಸ್ ರೈ, ವಿಶ್ವಕರ್ಮ ಬಳಗದ ಅಧ್ಯಕ್ಷರಾದ ಸತೀಶ್ ಉಳ್ಳಾಲ್ , ಕೊಂಕಣ್ ಸಿಂಗರ್ಸ್‌ನ ಮಾಜಿ ಅಧ್ಯಕ್ಷರಾದ ವಾಲ್ಟರ್ ನೊರೊನ್ಹಾ, ಹಿರಿಯ ಕನ್ನಡಿಗರಾದ ಹುಂತ್ರಿಕೆ ಭಾಸ್ಕರ್ ಶೆಟ್ಟಿ, ಚಂದ್ರಹಾಸ ಐಲ್ , ರಾಬರ್ಟ್ ಡಿ’ ಸೋಜಾ ಮುಂತಾದವರು ಸಮಾರಂಭದಲ್ಲಿ ಭಾಗವಹಿಸಿ, ಶುಭಹಾರೈಸಿದರು.
ಎಡನೀರು ಮಠ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ತುಳುಕೂಟ ಬಹ್ರೈನ್ ಸಂಘಕ್ಕೆ, ಸಂಘಟಕರಿಗೆ
ಹಾಗೂ ಬಹ್ರೈನ್‌ನಲ್ಲಿರುವ ತುಳುವರಿಗೆ ಶುಭಹಾರೈಸಿದ ಸಂದೇಶ ಮತ್ತು ಆಶೀರ್ವಚನದ ವೀಡಿಯೋವನ್ನು ಪ್ರಸಾರ ಮಾಡಲಾಯಿತು.
ತುಳುಕೂಟದ ಚೊಚ್ಚಲ ಕಾರ್ಯಕ್ರಮವಾಗಿ ಅ.13ರಂದು ಹರಿಪ್ರಸಾದ್ ರೈ ನಿರ್ಮಾಣದ, ತ್ರಿಶೂಲ್ ಶೆಟ್ಟಿ ನಿರ್ದೇಶನದ ವಿನೀತ್ ಕುಮಾರ್, ಸಮತಾ ಅಮೀನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪುಳಿಮುಂಚಿ ತುಳು ಸಿನೆಮಾದ ಗ್ರ್ಯಾಂಡ್ ಪ್ರೀಮಿಯರ್ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಚಿತ್ರದ ಪೋಸ್ಟ್‌ರ್ ಅನ್ನು ಅನಾವರಣಗೊಳಿಸಲಾಯಿತು.
ವಿಜಯ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಶೆಟ್ಟಿ ವಂದಿಸಿದರು.
ವರದಿ – ಕಮಲಾಕ್ಷ ಅಮೀನ್