Advertisement

Desi Swara: ಬಹ್ರೈನ್‌ ಬಿಲ್ಲವಾಸ್‌-ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

02:59 PM Apr 27, 2024 | Team Udayavani |

ಬಹ್ರೈನ್‌: ಇಲ್ಲಿನ ಅನಿವಾಸಿ ಬಿಲ್ಲವ ಸಮುದಾಯದ ಒಕ್ಕೂಟವಾದ ಬಹ್ರೈನ್‌ ಬಿಲ್ಲವಾಸ್‌ ಇತ್ತೀಚಿಗೆ ಇಲ್ಲಿನ ಮನಾಮದಲ್ಲಿರುವ ಕೃಷ್ಣ ದೇಗುಲದ ಸಭಾಂಗಣದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಿದ್ದು ಸುಮಾರು 800 ಕ್ಕೂ ಹೆಚ್ಚು ಭಕ್ತರು ತನ್ಮಯತೆಯಿಂದ ಭಕ್ತಿಪರವಶರಾಗಿ ಪೂಜಾ ವಿಧಿ, ವಿಧಾನಗಳಲ್ಲಿ ಪಾಲ್ಗೊಂಡು ಶ್ರೀಸತ್ಯನಾರಾಯಣ ದೇವರ ಅನುಗ್ರಹಕ್ಕೆ ಪಾತ್ರರಾದರು.

Advertisement

ಹರೀಶ್‌ ಪೂಜಾರಿಯವರ ನೇತೃತ್ವದಲ್ಲಿ ಸಂಘಟನೆ ಇಪ್ಪತ್ತೂಂದನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಅವಸರದಲ್ಲಿ ಸಂಘಟನೆಯ ಪ್ರಥಮ ಕಾರ್ಯಕ್ರಮವಾಗಿ ಈ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಿದ್ದರು. ಈ ಪೂಜಾ ಕೈಂಕರ್ಯವನ್ನು ನಡೆಸಿಕೊಡಲು ನಾಡಿನಿಂದ ದ್ವೀಪಕ್ಕೆ ವಿಶೇಷವಾಗಿ ಆಗಮಿಸಿದ್ದ ವೈದಿಕರಾದ ರಾಕೇಶ್‌ ಶಾಂತಿಯವರು ಪೂಜಾ ವಿಧಿ, ವಿಧಾನಗಳನ್ನು ಸಾಂಗವಾಗಿ ನೆರವೇರಿಸಿಕೊಟ್ಟರು.

ಪೂಜೆಯುದ್ದಕ್ಕೂ ಭಜನ ಮಂಡಳಿಯಿಂದ ಭಜನ ಕಾರ್ಯಕ್ರಮವನ್ನು ಏರ್ಪಡಿಸಿದ್ದು ವಾದ್ಯವ್ರಂದದೊಂದಿಗೆ ಸುಶ್ರಾವ್ಯವಾದ ಭಜನೆಗಳು ನೆರೆದ ಭಕ್ತರನ್ನು ಭಕ್ತಿಪರವಶರಾಗುವಂತೆ ಮಾಡಿತು. ಬಹ್ರೈನ್‌ ಬಿಲ್ಲವಾಸ್‌ನ ಅಧ್ಯಕ್ಷರಾದ ಹರೀಶ್‌ ಪೂಜಾರಿ ಹಾಗೂ ಆಡಳಿತ ಮಂಡಳಿಯ ಇತರ ಪದಾಧಿಕಾರಿಗಳು, ಬಿಲ್ಲವ ಬಾಂಧವರು ಮತ್ತು ಆಹ್ವಾನಿತ ಅತಿಥಿಗಳು ಸರ್ವರ ಪರವಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಅನಂತರ ಸಂಕಲ್ಪದೊಂದಿಗೆ ಪೂಜಾ ವಿಧಿ ವಿಧಾನಗಳು ಪ್ರಾರಂಭವಾಯಿತು. ಗಣಪತಿ ಪೂಜೆ, ಕಳಸ ಪೂಜೆ, ನವಗ್ರಹ ಪೂಜೆ, ಗುರು ಪೂಜೆ ಸತ್ಯನಾರಾಯಣ ದೇವರ ವೃತ ಕಲ್ಪೋಕ್ತಿ ಪೂಜೆ, ಭಜನೆ ಸಂಕೀರ್ತನೆ, ಸತ್ಯನಾರಾಯಣ ದೇವರ ಕಥೆಯ ಅನಂತರ ಮಹಾಮಂಗಳಾರತಿ ನಡೆಯಿತು.

ಬಹ್ರೈನ್‌ ಬಿಲ್ಲವಾಸ್‌ನ ನೂತನ ಅಧ್ಯಕ್ಷರಾದ ಹರೀಶ್‌ ಪೂಜಾರಿಯವರು ನೆರೆದ ಭಕ್ತರನ್ನು ಉದ್ದೇಶಿಸಿ ಮಾತನಾಡಿ, ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿ ಸಮುದಾಯದ ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗಲು ಎಲ್ಲರ ಸಹಕಾರ ಅತ್ಯಗತ್ಯ ಎಂದರು. ವೈದಿಕರಾದ ರಾಕೇಶ್‌ ಶಾಂತಿಯವರನ್ನು ಇದೇ ಸಂದರ್ಭದಲ್ಲಿ ಶಾಲು ಹೊದಿಸಿ , ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಅಲ್ಲದೆ ನಿರ್ಗಮಿಸುವ ಪ್ರಧಾನ ಕಾರ್ಯದರ್ಶಿಗಳಾದ ರೂಪೇಶ್‌ ಸಾಲ್ಯಾನ್‌ ಹಾಗೂ ಭಕ್ತಿವೃಕ್ಷ ಭಜನ ಮಂಡಳಿಯನ್ನು ಸ್ಮರಣಿಕೆಯನ್ನು ನೀಡಿ ಸಮ್ಮಾನಿಸಲಾಯಿತು. ಅಲ್ಲದೆ ಉನ್ನತ ವ್ಯಾಸಂಗಕ್ಕಾಗಿ ತಾಯ್ನಾಡಿಗೆ ತೆರಳುತ್ತಿರುವ ಬಹ್ರೈನ್‌ ಬಿಲ್ಲವಾಸ್‌ನ ಸದಸ್ಯರುಗಳ ಮಕ್ಕಳನ್ನು ಉಡುಗೊರೆ ನೀಡಿ, ಶುಭ ಹಾರೈಸಿ ಬೀಳ್ಕೊಡಲಾಯಿತು.

ಬಹ್ರೈನ್‌ ಬಿಲ್ಲವಾಸ್‌ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಗೆ ದ್ವೀಪದ ಎಲ್ಲ ಸಮುದಾಯ ಮತ್ತು ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದ್ದರು ಮಹಾಮಂಗಾಳಾರತಿಯ ಅನಂತರ ಭಕ್ತ ಸಮೂಹ ತೀರ್ಥ ಪ್ರಸಾದ, ಸಪಾತ ಭಕ್ಷ್ಯ ಸ್ವೀಕರಿಸಿದ ಅನಂತರ ಮಹಾಪ್ರಸಾದದ ಅಂಗವಾಗಿ ರುಚಿಯಾದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

Advertisement

ವರದಿ: ಕಮಲಾಕ್ಷ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next