Advertisement

Desi Swara: ಅಜ್ಮಾನ್‌- ಅದ್ದೂರಿಯ 10ನೇ ಸಾರ್ವಜನಿಕ ಗಣೇಶೋತ್ಸವ  

11:54 AM Sep 28, 2024 | Team Udayavani |

ಯುಎಇ: ಯುಎಇಯ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅದ್ದೂರಿಯಾಗಿ ಸಾರ್ವಜನಿಕ ಗಣೇಶೋತ್ಸವವನ್ನು ಸೆ.8ರಂದು ಅಜ್ಮಾನ್‌ನ ಇಂಡಿಯನ್‌ ಅಸೋಸಿಯೇಶನ್‌ ಸಭಾಂಗಣದಲ್ಲಿ ಶಾಸ್ತ್ರೋಕ್ತವಾಗಿ ಆಚರಿಸಿದರು. ಬೆಳಗ್ಗೆ 7 ಗಂಟೆಗೆ ಗಣಹೋಮದಿಂದ ಆರಂಭವಾದ ಕಾರ್ಯಕ್ರಮ, ಮೂರ್ತಿ ಪ್ರತಿಷ್ಠೆ , ಕಲ್ಪೋಕ್ತ ಪೂಜೆಯ ಅನಂತರ ಸುಬ್ರಹ್ಮಣ್ಯ ಹಾಗೂ ವಿಶ್ವೇಶ್ವರ ಅಡಿಗರ ವೇದಮಂತ್ರ ಘೋಷ ಸಭಾಂಗಣಕ್ಕೆ ದೇವಸ್ಥಾನದ ರೂಪು ತಂದು ಕೊಟ್ಟಿತು.

Advertisement

ಗಣೇಶೋತ್ಸವದ ಅಂಗವಾಗಿ ಮಾರ್ಗದೀಪ ಸಾಂಸ್ಕೃತಿಕ ಸಮಿತಿ, ಮೊಗವೀರ ಭಜನ ಸಂಘ ದುಬೈ, ಓಂ ಶ್ರೀ ಭಜನ ವೃಂದ ಶಾರ್ಜಾ, ಗುರು ರಾಘವೇಂದ್ರ ಬಳಗ ಯುಎಇ ಮತ್ತು ರಾಮಕ್ಷತ್ರಿಯ ಮಹಿಳಾ ವೃಂದದವರಿಂದ ಭಕ್ತಿಪೂರ್ವಕ ಭಜನೆಗಳು ಹಾಗೂ ಕುಣಿತ ಭಜನೆ ಕಾರ್ಯಕ್ರಮಗಳು ನೆರವೇರಿದವು.

ನವರಾಗಮ್‌ ಮೆಲೋಡೀಸ್‌ ತಂಡದ ವೃತ್ತಿಪರ ಪ್ರಭುದ್ದ ಕಲಾವಿದರ ನೇರ ವಾದ್ಯ ಗೋಷ್ಠಿಯೊಂದಿಗೆ “ಸಂಗೀತ ಭಕ್ತಿ ಗಾನ ಸುಧಾ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಯುಎಇಯ ಪ್ರತಿಭಾನ್ವಿತ ಗಾಯಕರಾದ ರಾಮಚಂದ್ರ ಬೆದ್ರಡ್ಕ, ರವಿರಾಜ್‌ ತಂತ್ರಿ, ಸುಕನ್ಯಾ ಶರತ್‌ ಹಾಗೂ ಸೂರ್ಯ ಕೇಶವ ಅವರು ಭಕ್ತಿಯ ಕಂಪನವನ್ನು ಸೃಷ್ಟಿಸಿದರು.

ಗೋಲ್ಡನ್‌ ಸ್ಟಾರ್‌ ಮ್ಯೂಸಿಕ್‌ ಶಾರ್ಜಾ, ಸಂಸ್ಕೃತಿ ನೃತ್ಯ ಶಾಲೆ ದುಬೈ ಮತ್ತು ವಿದೂಷಿ ರೂಪಕಿರಣ್‌ ತಂಡದಿಂದ ದೇವರ ಹಾಡುಗಳಿಗೆ ಶಾಸ್ತ್ರೀಯ ಹೆಜ್ಜೆಯ ನೃತ್ಯ ಸೇವೆ ನಡೆಯಿತು. ಸರಸ್ವತಿ ವಾದ್ಯ ಸಂಘ ಮತ್ತು ಎಸ್‌.ಟಿ .ಬಿ ಬ್ಯಾಂಡ್‌ ತಂಡದಿಂದ ವಾದ್ಯ ಸೇವೆಯು ಗಣಪನನ್ನು ಪ್ರಸನ್ನಗೊಳಿಸಿತು. ಪುರೋಹಿತರುಗಳಾದ ರಾಜೇಶ್‌ ಪ್ರಸಾದ್‌ ಅಡಿಗ ಮತ್ತು ಲಕ್ಷ್ಮೀಕಾಂತ್‌ ಭಟ್‌ ತಂಡದವರು ವಿಧಿವತ್ತಾಗಿ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ದಶಮಾನೋತ್ಸವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಕೃಷ್ಣ ಪಾಲೆಮಾರ್‌ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿಶೇಷ ಅತಿಥಿಯಾಗಿ ಆಗಮಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಾಂತಾರದಲ್ಲಿ ಅಭಿನಯಿಸಿದ ದಡ್ಡ ಪ್ರವೀಣ ಖ್ಯಾತಿಯ ರಂಜನ್‌ ಅವರು ನೆರೆದ ಭಕ್ತರ ಮನವನ್ನು ಪುಳಕಿತಗೊಳಿಸಿದರು. ಅತಿಥಿಗಳಾದ ಸ್ಥಳೀಯ ಉದ್ಯಮಿ ಫಾರ್ಚ್‌ಯೂನ್‌ ಗ್ರೂಪ್‌ ಹೊಟೇಲ್‌ನ ಮಾಲಕ ಪ್ರವೀಣ್‌ ಶೆಟ್ಟಿ ವಕ್ವಾಡಿ ಮತ್ತು ACME ಬಿಲ್ಡಿಂಗ್‌ ಮೆಟೀರಿಯಲ್ಸ್‌ ನ ಮಾಲಕರಾದ ಹರೀಶ್‌ ಶೇರಿಗಾರ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಅಜಿತ್‌ ಕೊರಕ್ಕೋಡು, ಉಪಾಧ್ಯಕ್ಷರಾದ ಸಂದೀಪ್‌ ರಾವ್‌, ಕಾರ್ಯದರ್ಶಿಗಳಾದ ಮಹೇಶ್‌ ಚಂದ್ರಗಿರಿ, ಕೋಶಾಧಿಕಾರಿ ರಾಜೇಶ್‌ ರಾವ್‌, ಮಹಿಳಾ ವೃಂದದ ಸಂಘಟಕರಾದ ಶಾಲಿನಿ ಹವಾಲ್ದಾರ್‌ಮತ್ತು ಉತ್ಸವ ಸಮಿತಿಯ ಸಂಚಾಲಕರಾದ ಸುಗಂಧ ರಾಜ್‌ ಬೇಕಲ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

1500ಕ್ಕೂ ಮಿಕ್ಕಿ ಭಕ್ತರು ಪಾಲ್ಗೊಂಡಿದ್ದ ಗಣೇಶೋತ್ಸವದ ಭಜನ ಕಾರ್ಯಕ್ರಮಗಳನ್ನು ನಿರೂಪಕ ವಿಘ್ನೇಶ್‌ ಕುಂದಾಪುರ ಹಾಗೂ ಸಭಾ ಕಾರ್ಯಕ್ರಮ ನಿರೂಪಣೆಯನ್ನು ಶ್ರೀನಿವಾಸ್‌ ಕೃಷ್ಣಾಪುರ ನಡೆಸಿಕೊಟ್ಟರೆ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ಆರತಿ ಅಡಿಗ ಅವರು ನಿರ್ವಹಿಸಿದರು. ಸಂಜೆ ಮಹಾ ಮಂಗಳಾರತಿ ಅನಂತರ ವಿವಿಧ ವಾದ್ಯಗಳ ತಾಳಮೇಳಗಳೊಂದಿಗೆ ವಿಜೃಂಭಣೆಯಿಂದ ಗಣೇಶ ಮೂರ್ತಿಯನ್ನು ವಿಸರ್ಜನೆಗೊಳಿಸಿ ಈ ವರ್ಷದ ಗಣೇಶೋತ್ಸವಕ್ಕೆ ಮಂಗಳ ಹಾಡಲಾಯಿತು.

ವರದಿ: ಆರತಿ ಅಡಿಗ, ದುಬೈ

Advertisement

Udayavani is now on Telegram. Click here to join our channel and stay updated with the latest news.

Next