Advertisement

ದೇಸಿ ಮನೆ

11:35 AM Oct 23, 2017 | |

ಮನೆ ಕಟ್ಟಲು ಈಗ ಮಾಡ್ರನ್‌  ಪ್ಲಾನ್‌ಗಳಿವೆ. ಅದರ ಭರಾಟೆಯಲ್ಲಿ  ನಮ್ಮ ಹಿರಿಯರು ಅನುಸರಿಸಿದ ವಿನ್ಯಾಸಗಳನ್ನೇ ನಾವೆಲ್ಲ ಮರೆತು ಬಿಟ್ಟಿದ್ದೇವೆ. ಅವರು ಸುಡು ಬೇಸಿಗೆ, ಫ್ಯಾನ್‌ ಇಲ್ಲದ ಕಾಲದಲ್ಲಿ ಮನೆಯನ್ನು ತಂಪಾಗಿಡುತ್ತ, ಕೊರೆಯುವ ಚಳಿಗೆ ಮನೆ ತೆರೆದುಕೊಳ್ಳದೆ ಬೆಚ್ಚಗಿರುವಂತೆ  ಪ್ಲಾನ್‌ ಮಾಡಿ ಜನರ ಆರೋಗ್ಯ ಕಾಪಾಡುತ್ತಿದ್ದ ವಿನ್ಯಾಸಗಳ ಬಗ್ಗೆ  ಗಮನ ಹರಿಸುವುದು ಈಗ ಮುಖ್ಯವಾಗುತ್ತದೆ. 

Advertisement

ಏನಿದು ದೇಸಿ ಪ್ಲಾನ್‌ ?
ಹಿಂದಿನ ಕಾಲದ ಮಾದರಿ ಮನೆಗಳಲ್ಲಿ ಕಂಡುಬರುತ್ತಿದ್ದ ಮುಖ್ಯ ಅಂಶ ಮಧ್ಯಭಾಗದಲ್ಲಿ ಇರುತ್ತಿದ್ದ ತೆರೆದ ಸ್ಥಳ- ಕೋರ್ಟ್‌ಯಾರ್ಡ್ಅಥವ “ತೊಟ್ಟಿ’. ಆ ಕಾಲದ ಅವಿಭಾಜ್ಯ ಅಂಗವಾಗಿದ್ದ ಈ ಜಾಗದಲ್ಲಿ ದೈನಂದಿನ ಅನೇಕ ಕಾರ್ಯಗಳ ಕೇಂದ್ರಬಿಂದು ಇದಾಗಿರುತ್ತಿತ್ತು. ಸಾಮಾನ್ಯವಾಗಿ ಹತ್ತು ಅಡಿಗೆ ಹತ್ತು ಅಡಿ ಇರುತ್ತಿದ್ದ ಈ ಕೋರ್ಟ್‌ಯಾರ್ಡ್  ಇಪ್ಪತ್ತು ಅಡಿಗೆ ಇಪ್ಪತ್ತು ಅಡಿಯವರೆಗೂ ಕೆಲವೊಮ್ಮೆ ಇರುತ್ತಿದ್ದು ಇನ್ನೂ ದೊಡ್ಡ ಮನೆಗಳಲ್ಲಿ, ಒಳಗೇ ಸಣ್ಣ ಮರಗಳನ್ನು ಬೆಳೆಸುವಷ್ಟು ದೊಡ್ಡದಿರುತ್ತಿತ್ತು.

ಮನೆಯ ಮಧ್ಯಭಾಗ ತೆರೆದಿದ್ದರೆ ಗಾಳಿಬೆಳಕು ಸರಾಗವಾಗಿ ಕೊಠಡಿಗಳ ಒಳಗೆಲ್ಲ ಹರಿದಾಡಿ ನೈಸರ್ಗಿಕವಾಗಿಯೇ ಆಯಾಕಾಲಕ್ಕೆ ತಕ್ಕಂತೆ ಬದಲಾಗುವ ವಾತಾವರಣವನ್ನು ಸರಿದೂಗಿಸುತ್ತದೆ. ಈಗೀಗ ಪಕ್ಕದ ಮನೆಯವರು ನಿವೇಶನದ ತುದಿಯವೆಗೂ ಬಂದಿರುವರು, ನಾವೇಕೆ ಖಾಲಿಜಾಗ ಬಿಡಬೇಕು ಎಂಬ ಧಾವಂತದಲ್ಲಿ ಮನೆಗಳಿಗೆ ನೈಸರ್ಗಿಕ ವಾಗಿ ಗಾಳಿಬೆಳಕು ಬರುವುದೇ ದುಸ್ತರವಾಗಿಬಿಟ್ಟಿದೆ. ಪರಿಣಾಮ, ಬೆಳಗಿನ ಹೊತ್ತೂ ವಿದ್ಯುತ್‌ ದೀಪದ ಮೊರೆಹೋಗುವಂತಾಗಿದೆ. ಜೊತೆಗೆ ವರ್ಷದ ಹನ್ನೆರಡೂ ತಿಂಗಳು ಫ್ಯಾನ್‌ ಬರ್‌ರನೆ ತಿರುಗುವುದು ಅನಿವಾರ್ಯ! ಅದೇ ಸಣ್ಣದೊಂದು ಕೋರ್ಟ್‌ಯಾರ್ಡ್  ಇದ್ದರೂ ಸಾಕು, ಸಾಕಷ್ಟು ವಿದ್ಯುತ್‌ ಉಳಿಸುವುದರ ಜೊತೆಗೆ ಮನೆಯ ಒಳಗಿನ ಪರಿಸರವೂ ಆರೋಗ್ಯಕರವಾಗಿರುತ್ತದೆ.

ಕಾಲಕ್ಕೆ ತಕ್ಕಂತೆ ಆಕಾಶಕ್ಕೆ ತೆರೆದಿಡುವ ಸ್ಥಳದ ಗಾತ್ರ (ಓಪನ್‌ ಸ್ಕೈ) ಕೂಡ ಚಿಕ್ಕದಾಗಿದೆ. ಈಗೀಗ ಹತ್ತು ಅಡಿಗೆ ಐದು ಅಡಿ ಇಲ್ಲ ಕಡೆ ಪಕ್ಷ ಅಂದರೆ ಆರು ಅಡಿಗೆ ಆರು ಅಡಿ ಸ್ಥಳವನ್ನಾದರೂ ತೆರೆದಿಟ್ಟರೆ, ಸಾಕಷ್ಟು ಗಾಳಿಬೆಳಕು ಮನೆಗೆ ಹರಿದುಬರುತ್ತದೆ. ಹಿತ ಮಿತವಾಗಿ ಸಣ್ಣ ನಿವೇಶನದಲ್ಲೂ ವಿನ್ಯಾಸ ಮಾಡಿದರೆ ಸಣ್ಣ ಸೈಜಿನ ಒಂದು ತೆರೆದ ಸ್ಥಳವನ್ನು ಕೊಡುವುದು ಕಷ್ಟವಲ್ಲ!

ಎರಡು ಮೂರು ಅಂತಸ್ತಿನ ಮನೆಗಳಲ್ಲೂ ಸಣ್ಣದೊಂದು ತೆರೆದ ಖಾಸಗಿ ಸ್ಥಳವನ್ನು ವಿನ್ಯಾಸಮಾಡಿದರೆ ಇಡೀ ವರ್ಷ ನಮ್ಮ ಮನೆ ನೈಸರ್ಗಿಕವಾಗಿಯೇ ಹವಾನಿಯಂತ್ರಿತವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಈ ರೀತಿಯ ವಿನ್ಯಾಸ ಒಳ್ಳೆಯದು. 

Advertisement

ಕೋರ್ಟ್‌ಯಾರ್‌x  ಮನೆಯ ಮಧ್ಯಭಾಗದಲ್ಲಿಯೇ ಇರಬೇಕೆಂದೇನೂ ಇಲ್ಲ, ಒಂದು ಬದಿಗೆ ಇಟ್ಟರೆ, ಮನೆಯ ಸುತ್ತಮುತ್ತ ಅನಿವಾರ್ಯವಾಗಿ ಬಿಡುವ ಖಾಲಿಜಾಗವೂ ಲಾಭದಾಯಕವಾಗುವಂತೆ ವಿನ್ಯಾಸ ಮಾಡಬಹುದು! ಕೋರ್ಟ್‌ಯಾರ್‌x ಒಳಗೆ ನಮ್ಮ ಖಾಸಗಿ ಪ್ರದೇಶಕ್ಕೆ ಪೂರಕವಾಗಿ ಕಡ್ಡಾಯವಾಗಿ ಬಿಡುವ ಓಪನ್‌ ಸ್ಪೇಸ್‌ ಕಡೆ ಟೆರ್ರಾಕೋಟ ಗ್ರಿಲ್‌ – ಸಿಮೆಂಟ್‌ ಕಾಂಕ್ರಿಟ್‌ ಜಾಲಿವರ್ಕ್‌ ಇತ್ಯಾದಿಯಿಂದ ಗಾಳಿ ಬೆಳಕು ಸರಾಗವಾಗಿ ಹರಿದುಬರುವಂತೆ ಮಾಡಬಹುದು!

ಕಿಟಕಿಗಾಜು ನಮ್ಮ ದೇಶಕ್ಕೆ ಕಾಲಿಟ್ಟದ್ದು ತೀರ ಇತ್ತೀಚಿನ ಶತಮಾನಗಳಲ್ಲಿ, ಅದಕ್ಕೂ ಮುಂಚೆ ಹೆಚ್ಚಿಗೆ ಬಳಕೆಯಲ್ಲಿದ್ದದ್ದು ಜಾಲಿವರ್ಕ್‌ – ಜಾಲಾಂದ್ರಗಳು! ಹಳೆಮನೆಗಳಲ್ಲಿ, ಬೇಲೂರು ಹಳೆಬೀಡು ದೇವಸ್ಥಾನದಲ್ಲೂ ಕೂಡ ಸುಂದರ ಜಾಲಾಂದ್ರಗಳನ್ನು ನೋಡಬಹುದು. ಜಾಲಾಂದ್ರಗಳು ಮನೆಗೆ ಸದಾಕಾಲ ಗಾಳಿಹರಿಸುವ ಕಾರ್ಯಮಾಡುತ್ತಿದ್ದು, ಮನೆಯನ್ನು ಫ್ರೆಶ್‌ ಆಗಿ ಇಡುತ್ತಿದ್ದವು. ಗ್ಲಾಸ್‌ ಹೆಚ್ಚಿದ್ದಷ್ಟೂ ನಮ್ಮ ಮನೆ ಹೆಚ್ಚು ಹೈಟೆಕ್‌ ಎಂದು ನಂಬಿದ ಮಂದಿ ಎಲ್ಲಿಬೇಡವೋ ಅಲ್ಲೂ ಕೂಡ ಗಾಜನ್ನು ಬಳಸಿ ಫ‌ಜೀತಿಗೆ ಸಿಲುಕಿಕೊಳ್ಳುತ್ತಿರುವುದು ಈಗ ಸಾಮಾನ್ಯವಾಗುತ್ತಿದೆ. ಹಾಗಾಗಿ, ಎಲ್ಲಿ ಬೇಡವೋ ಅಲ್ಲೆಲ್ಲ ಗಾಜನ್ನು ಬಳಸದೆ ಜಾಲಾಂದ್ರಗಳನ್ನು ಬಳಸಿದರೆ ಸಾಕಷ್ಟು ಹಣ ಉಳಿತಾಯವಾಗುವುದರೊಂದಿಗೆ ನಮ್ಮ ಆರೋಗ್ಯಕೂಡ ಸುಧಾರಿಸುತ್ತದೆ. 

ಮನೆ ಮುಂದಿನ ಜಗುಲಿ ಇಲ್ಲವೇ ವರಾಂಡ
ಇತ್ತೀಚಿನ ದಿನಗಳಲ್ಲಿ ಮಾಯವಾಗುತ್ತಿರುವ ಮತ್ತೂಂದು ದೇಸಿ ವಿನ್ಯಾಸ ಎಂದರೆ ಮನೆ ಪ್ರವೇಶಕ್ಕೆ ಮೊದಲು ಸಿಗುತ್ತಿದ್ದ ಜಗುಲಿ ಇಲ್ಲವೇ ವರಾಂಡ. ಈ ಸ್ಥಳ ಕೆಲವೇ ಅಡಿ ಅಗಲವಿರುತ್ತಿದ್ದರೂ ಮನೆಯ ಒಳ ಹಾಗೂ ಹೊರಭಾಗವನ್ನು ನಿಖರವಾಗಿ ಗುರುತಿಸಿ ಟ್ರಾನ್ಸ್‌ಫ‌ರ್‌ವೆುàಶನ್‌ ಸ್ಪೇಸ್‌ – ಹೊರಗಿನ ತೆರೆದ ರಸ್ತೆಗೂ ಒಳಗಿನ ಖಾಸಗಿ ಕೊಠಡಿಗಳಿಗೂ ಮಧ್ಯದ ಮುಖ್ಯ ಘಟಕವಾಗಿ ಕಾರ್ಯನಿರ್ವಸುತ್ತಿತ್ತು. ಈಗ ರೋಡಿಗೇ ಮನೆಗಳನ್ನು ಕಟ್ಟಲಾಗುತ್ತಿದ್ದು, ಬಾಗಿಲು ತೆಗೆದರೆ ರಸ್ತೆ ಎಂದಾಗಿಬಿಟ್ಟಿದೆ. ರಸ್ತೆಯ ಪ್ರತಿಯೊಂದು ಶಬ್ಧ ಹಾಗೂ ಇತರೆ  ಮಾಲಿನ್ಯ ನೇರವಾಗಿ ಮನೆಯನ್ನು ಹೊಕ್ಕು ಕಿರಿಕಿರಿ ಉಂಟುಮಾಡುತ್ತದೆ. ಹಾಗಾಗಿ ಮನೆ ವಿನ್ಯಾಸ ಮಾಡುವಾಗ, ಸಣ್ಣದೊಂದು ಸ್ಥಳವನ್ನು ವರಾಂಡದ ರೂಪದಲ್ಲಿ ಬಿಡುವುದು ಉತ್ತಮ. ಹೊರಗಿನವರನ್ನು ಹಾಗೆಯೇ ಹೊರಗೆ ಕೂರಿಸಿ ವ್ಯವಹಾರ ಮುಗಿಸಿ ಕಳುಹಿಸಲೂ ಕೂಡ ಈ ಸ್ಥಳ ಅನುಕೂಲಕರ. ಇನ್ನು ಚಪ್ಪಲಿ. ಶೂ, ಕೊಡೆ ಇತ್ಯಾದಿಯನ್ನೂ ಸಹ ಮನೆಯೊಳಗೆ ಒಯ್ಯದೆ, ಸ್ವಲ್ಪ ಹೊರಗೆ ಎನ್ನುವಂತಿರುವ ವರಾಂಡಗಳಲ್ಲೇ ಬಿಟ್ಟು ಮುಂದುವರೆಯಲು ಅನುಕೂಲ!

“ಮನೆ’ ಆಗುವುದೇ ಅಡಿಗೆ ಒಲೆಯಿಂದ!
ಚಳಿ ಪ್ರದೇಶದಲ್ಲಿ ಇಡೀ ಮನೆಗೆ ಒಂದು ರೀತಿಯಲ್ಲಿ ಕೇಂದ್ರ ಬಿಂದುವಾಗಿರುತ್ತಿದ್ದದ್ದು ಒಲೆ. ಅದರ ಬೆಚ್ಚನೆಯ ಇರುವಿಕೆ ಇಡಿ ಮನೆಯನ್ನೇ ಆತ್ಮೀಯವಾಗಿರಿಸುತ್ತಿತ್ತು. ಈಗೀಗ ಓಪನ್‌ ಕಿಚನ್‌ ಮತ್ತೆ ಆ ರೀತಿಯ ಬೆಚ್ಚನೆಯ ವಾತಾವರಣವನ್ನು ಉಂಟುಮಾಡುತ್ತಿದೆ.   ಎಣ್ಣೆಯಿಂದ ಕರಿಯುವಾಗ ಬರುವ ಹೊಗೆಯನ್ನು ಹೊರಹಾಕುವುದು ಅನಿವಾರ್ಯವಾದರೂ ಇತರೆ ಕಾರ್ಯಗಳಿಂದ ಉಂಟಾಗುವ ಶುದ್ಧಹಬೆ ಹಾಗೂ ಬಿಸಿ, ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿಡುತ್ತದೆ. ಆದರೆ ಬೇಸಿಗೆಯಲ್ಲಿ ಈ ಶಾಖ ಹಾಗೂ ಹಬೆ ಹೊರಹೋಗುವಂತೆ ವಿನ್ಯಾಸಮಾಡುವುದನ್ನು  ಮರೆಯಬಾರದು!

ಹೆಚ್ಚಿನ ಮಾತಿಗೆ ಫೋನ್‌  98441 32826

ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next