ಹೊಸದಿಲ್ಲಿ: ದೇಸಿ ಗೋ ತಳಿಗಳು ಅವಸಾನವಾಗುತ್ತಿದ್ದು, ಇದನ್ನು ತಡೆಯಲು ರಾಷ್ಟ್ರೀಯ ನೀತಿಯೊಂದನ್ನು ರೂಪಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ನೀತಿ ರೂಪಿಸುವ ಸಂಬಂಧ ಎಲ್ಲಾ ರಾಜ್ಯ ಗಳೊಂದಿಗೆ ಚರ್ಚಿಸಲು ಪರಿಸರ ಸಚಿವಾಲಯ, ಪಶುಸಂಗೋಪನ ಇಲಾಖೆಗೆ ಎನ್‌ಜಿಟಿ ಅಧ್ಯಕ್ಷ ನ್ಯಾ| ಸ್ವತಂತ್ರ ಕುಮಾರ್ ಅವರ ಪೀಠ ಆದೇಶಿಸಿದೆ. ಇದೇ ವೇಳೆ ದೇಸಿ ಗೋ ತಳಿಗಳು ಅಳಿವಿನಂಚಿನಲ್ಲಿರುವ ಬಗ್ಗೆ ಎನ್‌ಜಿಟಿ ಕೇಂದ್ರವನ್ನು ಪ್ರಶ್ನಿಸಿತು.
ಗೋ ತಳಿಗಳು ಅಳಿಯುತ್ತಿರುವ ಬಗ್ಗೆ ವಿವಿಧ ರಾಜ್ಯಗಳಿಂದ ಸಲ್ಲಿಕೆಯಾದ ಅಂಕಿಅಂಶಗಳು ನೈಜ ಸ್ಥಿತಿಯನ್ನು ತೋರಿಸುತ್ತಿವೆ. ಇದನ್ನು ತಡೆಯಲು ನೀವು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ನ್ಯಾಯಮಂಡಳಿ ಪ್ರಶ್ನಿಸಿತು. ಇದು ಗಂಭೀರ ವಿಷಯವಾಗಿದ್ದು, ರಾಷ್ಟ್ರೀಯ ನೀತಿಯ ಅಗತ್ಯವಿದೆ ಎಂದು ಹೇಳಿತು.
ಇದೇ ವೇಳೆ 2003ರಿಂದ 2012ರ ಅವಧಿ ಯಲ್ಲಿ ಕೇರಳದಲ್ಲಿ ದೇಸಿ ಗೋ ತಳಿ ಸಂಖ್ಯೆ ಶೇ.80ರಷ್ಟು ಕುಸಿದಿದೆ ಎಂಬುದನ್ನು ಎನ್‌ಜಿಟಿ ಬೊಟ್ಟು ಮಾಡಿತು. ಬಳಿಕ ವಿಚಾರಣೆಯನ್ನು 22ಕ್ಕೆ ಮುಂದೂಡಿತು. ವಕೀಲ ಅಶ್ವಿನಿ ಕುಮಾರ್ ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ಎನ್‌ಜಿಟಿ ಈ ವಿಚಾರಣೆ ಕೈಗೆತ್ತಿಕೊಂಡಿತ್ತು. ಅರ್ಜಿಯಲ್ಲಿ ಅವರು, ದೇಶದಲ್ಲಿ ಆಸ್ಟ್ರೇಲಿಯಾ, ಯುರೋಪ್, ಅಮೆರಿಕದಿಂದ ಆಮದು ಮಾಡಿದ ತಳಿಗಳು, ತಳಿಸಂಕರ ಪ್ರವೃತ್ತಿಗಳಿಂದಾಗಿ ದೇಸಿ ಗೋ ತಳಿಗಳು ಅಪಾಯದ ಅಂಚಿನಲ್ಲಿವೆ. ಈ ಬಗ್ಗೆ ಸರಕಾರಗಳು ಮೂಕಪ್ರೇಕ್ಷಕವಾಗಿವೆ ಎಂದು ಆರೋಪಿಸಿದ್ದರು. ಇದಕ್ಕೂ ಮೊದಲು ದೇಶಾದ್ಯಂತ ದೇಸಿ ಗೋ ತಳಿಗಳ ಹತ್ಯೆ ನಿಷೇಧಿಸಬೇಕು ಎಂಬ ಕುರಿತ ಇನ್ನೊಂದು ಅರ್ಜಿ ಕುರಿತಂತೆ ಕೃಷಿ ಸಚಿವಾ ಲಯಕ್ಕೆ ನೋಟಿಸ್ ನೀಡಿತ್ತು.