ಬೆಂಗಳೂರು: ಹಿಂದೆ ಧರ್ಮಸಿಂಗ್ ಮುಖ್ಯಮಂತ್ರಿ ಆಗುವ ಸಂದರ್ಭದಲ್ಲೇ ಸಿಎಂ ಹುದ್ದೆಗೆ ಆರ್.ವಿ.ದೇಶಪಾಂಡೆ ಅವರ ಹೆಸರು ಕೇಳಿ ಬಂದಿತ್ತು. ಅವರು ಕೂಡ ಅನುಭವಿಯಾಗಿದ್ದು, ಕೈಗಾರಿಕಾ ಸಚಿವರಾಗಿ ಸಾಕಷ್ಟು ಅನುಭವ ಪಡೆದಿದ್ದಾರೆ. ಹೀಗಾಗಿ, ಅವರ ಹೆಸರು ಮತ್ತೆ ಮುಂಚೂಣಿಗೆ ಬಂದಿದೆ. ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸುವ ಮೂಲಕ ದೇವೇಗೌಡರು
ಕುಮಾರಸ್ವಾಮಿ ಹೇಳಿಕೆಗೆ ಸಾಥ್ ನೀಡಿದ್ದಾರೆ.
ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಬ್ರಿಟಿಷ್ ಹೈಕಮಿಷನರ್ ಡೊನಾಲ್ಡ… ಮೈಕ್ ಅಲಿಸ್ಟರ್ ಜತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು,ಕಂದಾಯ ಸಚಿವ ದೇಶಪಾಂಡೆ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವುದು ಹಳೆಯ ವಿಚಾರ. ಆದರೆ,ಸದ್ಯಕ್ಕಂತೂ ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
“ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ನಾನು, ದೇಶಪಾಂಡೆ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರ ಅನುಭವ ಆಧರಿಸಿ ದೇಶಪಾಂಡೆ ಅವರಿಗೂ ಮುಖ್ಯಮಂತ್ರಿಯಾಗುವ ಅರ್ಹತೆಯಿದೆ. ಅವರು ಮುಖ್ಯಮಂತ್ರಿಯಾಗಬೇಕೆಂದು ಕೆಲವರು ಬಯಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಅಷ್ಟೆ. ಅದರಲ್ಲಿ ವಿಶೇಷತೆ ಏನೂ ಇಲ್ಲ’ಎಂದರು.
ಬ್ರಿಟಿಷ್ ಹೈಕಮಿಷನರ್‌ಗೂ ಸರ್ಕಾರದ ಬಗ್ಗೆ ಗೊಂದಲ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆಂಬ ಗೊಂದಲ ಉಂಟಾಗಿದ್ದು, ಬ್ರಿಟಿಷ್ ಹೈಕಮಿಷನರ್ ಅವರೂ ಈ ಗೊಂದಲದ ಬಗ್ಗೆ ಮಾಧ್ಯಮಗಳಿಂದ ತಿಳಿದು ಇಲ್ಲಿಗೆ ಬಂದಿದ್ದರು. ಆದರೆ, ರಾಜ್ಯದಲ್ಲಿ ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷಗಳು ಬಿಜೆಪಿ ಜತೆ ಹೋಗಲು ಸಿದ್ಧವಿಲ್ಲ. ಹೀಗಾಗಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂಬುದನ್ನು ಅವರಿಗೆ ತಿಳಿಸಿದ್ದೇನೆ.
ಈಗ ಅವರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.ಬ್ರಿಟಿಷ್ ಹೈಕಮಿಷನರ್ ಜತೆಗಿನ ಭೇಟಿ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಬೇರೆ, ಬೇರೆ ರಾಜ್ಯಗಳ ರಾಜಕೀಯ ಪರಿಸ್ಥಿತಿ ಬಗ್ಗೆ ಅವರು ತಿಳಿದುಕೊಳ್ಳುತ್ತಾರೆ. ರಾಜ್ಯ ರಾಜಕೀಯದಲ್ಲಿ ಆಡಳಿತ ಪಕ್ಷಗಳ ಮಧ್ಯೆ ಗೊಂದಲವಿದೆ ಎಂಬುದನ್ನು ತಿಳಿದು ಈ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದಾರೆ. ಇದೊಂದು ಸೌಜನ್ಯದ ಭೇಟಿಯಷ್ಟೆ ಎಂದರು.