ಹುಬ್ಬಳ್ಳಿ: ಸಣ್ಣ ಉದ್ಯಮ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವವರಿಗೆ ದೇಶಪಾಂಡೆ ಫೌಂಡೇಷನ್ ಗಾಡ್‌ಫಾದರ್ ಇದ್ದಂತೆ ಎಂದು ಶಾಸಕ, ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ದೇಶಪಾಂಡೆ ಪ್ರತಿಷ್ಠಾನದ ಸ್ಟಾರ್ಟ್‌ಅಪ್ಸ್‌ನ ಸಣ್ಣ ಉದ್ದಿಮೆದಾರರ ಅಭಿವೃದ್ಧಿ ಕಾರ್ಯಕ್ರಮ (ಎಂಇಡಿಪಿ) ಸಂಘಟನೆಯು ಜೆಎಸ್‌ಡಬ್ಲ್ಯೂ ಫೌಂಡೇಶನ್ ಸಹಯೋಗದಲ್ಲಿ ದೇಶಪಾಂಡೆ ನಗರದ ಸವಾಯಿ ಗಂಧರ್ವ ಭವನದಲ್ಲಿ ಮೂರು ದಿನಗಳ ವರೆಗೆ ಆಯೋಜಿಸಿರುವ ಮೆಗಾ ಉದ್ಯಮಿ ಸಂತೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ನವ ಉದ್ಯಮಿಗಳಿಗೆ ತರಬೇತಿ, ತಾಂತ್ರಿಕ ಶಿಕ್ಷಣ ನೀಡುವಲ್ಲಿ ದೇಶಪಾಂಡೆ ಫೌಂಡೇಷನ್ ಉತ್ತಮ ಕೆಲಸ ಮಾಡುತ್ತಿದೆ. ಸ್ವಾವಲಂಬನೆಗೆ ಹೆಚ್ಚು ಪ್ರೋತ್ಸಾಹ ಹಾಗೂ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಮತ್ತು ಆರ್ಥಿಕವಾಗಿ ಸಬಲರಾಗಲು ಸಹಕಾರಿ ಆಗಿದೆ. ಆ ಮೂಲಕ ಪ್ರತಿಷ್ಠಾನವು ನವೋದ್ಯಮಿಗಳಿಗೆ ಗಾಡ್ ಫಾದರ್ ಆಗಿದೆ ಎಂದರು.
ನಮ್ಮಲ್ಲಿರುವ ಕೌಶಲ ಹೇಗೆಲ್ಲ ಸದ್ಬಳಕೆ ಮಾಡಿಕೊಂಡು ಉದ್ಯಮಿಯಾಗಬಹುದು ಎನ್ನುವುದಕ್ಕೆ ದೇಶಪಾಂಡೆ ಫೌಂಡೇಶನ್ ನಡೆಸುತ್ತಿರುವ ಮೆಗಾ ಉದ್ಯಮಿ ಮೇಳ ನಿದರ್ಶನವಾಗಿದೆ. ಇಂದಿನ ಯುವ ಜನಾಂಗವು ಸರಕಾರಿ ಹಾಗೂ ದೊಡ್ಡ ಖಾಸಗಿ ಕಂಪನಿಗಳ ಉದ್ಯೋಗಿ ಆಗಬೇಕೆನ್ನುವ ಮಾನಸಿಕತೆಯಿಂದ ಹೊರಬಂದು, ತಾವೇ ಉದ್ಯಮ ಸ್ಥಾಪಿಸಿ ಆರ್ಥಿಕವಾಗಿ ಸ್ವಾವಲಂಬಿಯಾಗಲು ಮುಂದಾಗಬೇಕು. ಇದಕ್ಕೆ ದೇಶಪಾಂಡೆ ಫೌಂಡೇಷನ್ ಸೂಕ್ತ ಮಾರ್ಗದರ್ಶನ ನೀಡಲಿದೆ. ನೌಕರಿ ಬಗ್ಗೆ ಯುವಕರು ಮತ್ತು ಅವರ ಪಾಲಕರಲ್ಲಿರುವ ಮಾನಸಿಕತೆ ಹೋಗಲಾಡಿಸಿ ಆರ್ಥಿಕವಾಗಿ ಸ್ವಾವಲಂಬಿಯಾಗಲು ಮೆಗಾ ಉದ್ಯಮ ಸಂತೆ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.
ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಯೂರ ಕಾಂಬಳೆ ಮಾತನಾಡಿ, ದೇಶಪಾಂಡೆ ಫೌಂಡೇಶನ್ ಮತ್ತು ನಬಾರ್ಡ್‌ನ ಸಹಯೋಗದಲ್ಲಿ 90 ಮಹಿಳೆಯರಿಗೆ ಆರಿ ಎಂಬ್ರಾಯಡರಿ ತರಬೇತಿ ನೀಡಲಾಗುತ್ತಿದೆ. ಮುಂದೆ ಇವರು ಸ್ವಾವಲಂಬಿ ಸಖೀ ಉತ್ಪಾದಕರ ಕಂಪನಿಯಲ್ಲಿ ಸೇರ್ಪಡೆಯಾಗಲಿದ್ದಾರೆ. ಹೆಚ್ಚಿನ ಆದಾಯ ತರುವಂತಹ ಉದ್ಯಮಗಳನ್ನು ಗಮನದಲ್ಲಿಟ್ಟುಕೊಂಡು ಕೌಶಲ ಮತ್ತು ವ್ಯಾಪಾರದ ಅವಶ್ಯಕತೆಯಿದೆ. ಆ ಮೂಲಕ ಇನ್ನಷ್ಟು ಜನರಿಗೆ ನೌಕರಿ ಕೊಡಬಹುದಾಗಿದೆ. ಸಂಸ್ಥೆಯ ಕೃಷಿ ಹೊಂಡ ಪ್ರೊಜೆಕ್ಟ್‌ನಲ್ಲಿ ರೈತರ ಆದಾಯ ವೃದ್ಧಿಯಾಗಿದೆ. ಇದು ಭಾರತದ ಟಾಪ್ 3 ಪ್ರೊಜೆಕ್ಟ್‌ನಲ್ಲಿ ಒಂದಾಗಿದೆ. ಸಂಸ್ಥೆಯಿಂದ ನಗರದ ವಿಮಾನ ನಿಲ್ದಾಣದಲ್ಲಿ ಮಳಿಗೆ ನಿರ್ಮಿಸಲಾಗಿದ್ದು, ಇದು ರಾಜ್ಯದಲ್ಲೇ ಮೊದಲನೆಯದ್ದಾಗಿದೆ. ಮಹಿಳೆಯರು ಮತ್ತು ಸಣ್ಣ ಉದ್ದಿಮೆದಾರರಿಗೆ ಉತ್ತಮ ಪ್ಲಾಟ್‌ಫಾರ್ಮ್ ಸಿಗಬೇಕೆಂಬುವುದೆ ನಮ್ಮ ಉದ್ದೇಶವಾಗಿದೆ ಎಂದರು.
ಮಹಿಳಾ ನವೋದ್ಯಮಿಗಳು ಮತ್ತು ಸ್ಟಾರ್ಟ್ ಅಪ್ ಉದ್ಯಮಿಗಳಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆ ನೀಡಲಾಯಿತು. ಸ್ವಯಂ ಶಿಕ್ಷಣ ಪ್ರಯೋಗದ ಕಾರ್ಯಕ್ರಮ ನಿರ್ದೇಶಕ ಉಪಮನ್ಯು ಪಾಟೀಲ, ದೇಶಪಾಂಡೆ ಸ್ಟಾರ್ಟ್‌ಅಪ್ಸ್‌ನ ಹಿರಿಯ ನಿರ್ದೇಶಕ ವಿಜಯ ಪುರೋಹಿತ ಮೊದಲಾದವರಿದ್ದರು. ಸುರೇಖಾ ಪ್ರಾರ್ಥಿಸಿದರು. ಮಂಜುಳಾ ಕರಡಿ ನಿರೂಪಿಸಿದರು. ಶಿವಾನಂದ ಸೋಮಣ್ಣವರ ವಂದಿಸಿದರು.
ಸಣ್ಣ ಉದ್ಯಮಿಗಳೇ ಹೀರೋಗಳು
ದೇಶಪಾಂಡೆ ಸ್ಟಾರ್ಟ್‌ಅಪ್ಸ್ ಸಿಇಒ ಅರವಿಂದ ಚಿಂಚೋರೆ ಮಾತನಾಡಿ, ಸಂಸ್ಥೆಯು 12 ವರ್ಷದ ಹಿಂದೆ 100ರಷ್ಟು ಸಣ್ಣ ಉದ್ಯಮಿಗಳಿಗೆ ಕೌಶಲ ತರಬೇತಿ ನೀಡುತ್ತಿತ್ತು. ಇದೀಗ 10 ಸಾವಿರಕ್ಕೂ ಹೆಚ್ಚು ಉದ್ಯಮಿಗಳು ತರಬೇತಿ ಪಡೆದು ಸಣ್ಣ ಉದ್ಯಮಿಗಳಾಗಿದ್ದಾರೆ. ನಮ್ಮ ಸಂಸ್ಥೆಗೆ ಸಣ್ಣ ಉದ್ಯಮಿಗಳೇ ನಿಜವಾದ ಹೀರೋಗಳು. ಅವರೇ ನಮಗೆ ಪ್ರೇರಣೆ. ಇನ್ನಷ್ಟು ಪ್ರಗತಿ ಸಾಧಿಸಲು ಮುಂದಾಗಬೇಕು. ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಸಣ್ಣ ಉದ್ಯಮಿಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಮೌಲ್ಯ ಕೊಂಡಿ ಮಾದರಿಯಲ್ಲಿ ಫುಡ್ ಕ್ಲಸ್ಟರ್ ಮಾಡಲು ಸಂಸ್ಥೆ ಸಿದ್ಧವಿದೆ. ಮಾವು ಹಾಗೂ ಇತರೆ ಹಣ್ಣುಗಳನ್ನು ಶೂನ್ಯತ್ಯಾಜ್ಯದೊಂದಿಗೆ ಉತ್ಪಾದಿಸಲು ಯೋಜಿಸಲಾಗಿದೆ. ಆ ಮೂಲಕ ಬ್ರಾಂಡ್ ನೇಮ್ ಕ್ರಿಯೇಟ್ ಮಾಡಿ ವ್ಯಾಪಾರ ವಹಿವಾಟು ಹೆಚ್ಚಿಸಿಕೊಳ್ಳಬಹುದು ಎಂದರು.