ಧಾರವಾಡ: ಗ್ರಾಮೀಣ ಸೊಗಡು ಮತ್ತು ಧಾರವಾಡೀ ಶೈಲಿಯ ಕವಿತೆ, ನಾಟಕಗಳ ಮೂಲಕ ಸಿದ್ಧಲಿಂಗ ದೇಸಾಯಿ ಬಂಡಾಯವನ್ನು ಗಟ್ಟಿಗೊಳಿಸಿದ ಲೇಖಕ ಎಂದು ನಿವೃತ್ತ ವಯಸ್ಕರ ಶಿಕ್ಷಣಾಧಿಕಾರಿ ಸೋಮಲಿಂಗ ಉಳ್ಳಿಗೇರಿ ಹೇಳಿದರು.
ಕವಿಸಂನಲ್ಲಿ ದಿ| ಸಿದ್ಧಲಿಂಗ ದೇಸಾಯಿ ದತ್ತಿ ಅಂಗವಾಗಿ ಅಭಿಷೇಕ ಸಿದ್ಧಲಿಂಗ ದೇಸಾಯಿ ಬಳಗದಿಂದ ಅಭಿಷೇಕ ಸಿದ್ಧಲಿಂಗ ದೇಸಾಯಿ ನಿರ್ದೇಶನದ ಎಲೆಕ್ಷನ್ ಮೊದಲ ಸರಣಿ ಸಂಚಿಕೆ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಿದ್ಧಲಿಂಗ ದೇಸಾಯಿ ಅವರು ತಮ್ಮ ನಾಟಕಗಳ ಮೂಲಕ ಜನಸಾಮಾನ್ಯರ ಸಾಹಿತಿ ಎನಿಸಿಕೊಂಡವರು. ಅವರ ನಾಟಕಗಳು ಗ್ರಾಮೀಣ ಭಾಷೆಯ ಸೊಗಡನ್ನು ಬಿಂಬಿಸುತ್ತಲೇ ಬಂಡಾಯವನ್ನು ಧ್ವನಿಸುತ್ತವೆ. ಕೆಲವೇ ನಾಟಕ ಬರೆದಿದ್ದರೂ ಅವು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದವು. ಅವರ ಮಾತು ಮತ್ತು ನಡೆ ಗ್ರಾಮಿಣ ಸಂಸ್ಕೃತಿಯನ್ನೇ ಪ್ರತಿಬಿಂಬಿಸುವಂತಿವೆ ಎಂದರು.
ಪ್ರಗತಿಪರ ಚಿಂತಕ ರಾಜೇಂದ್ರ ಸಾವಳಗಿ ಮಾತನಾಡಿ, ಸಿದ್ಧಲಿಂಗ ದೇಸಾಯಿಯವರು ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಹೊಂದಿದ್ದರು. ನಾಡಿನ ಶ್ರೇಷ್ಠ ಸಾಹಿತಿಗಳ, ರಾಜಕಾರಣಿಗಳ ಹಾಗೂ ಜನಸಾಮಾನ್ಯರೊಂದಿಗೆ ನಿಕಟ ಸಂಪರ್ಕ ಮತ್ತು ಒಡನಾಟ ಹೊಂದಿ ಸಾಹಿತಿ-ರಾಜಕಾರಣಿ ನಡುವೆ ಕೊಂಡಿಯಾಗಿ ನಿಂತು ರಾಜಕಾರಣಿಗಳಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿಸಿದ್ದರು ಎಂದು ಹೇಳಿದರು.
ನಟ, ನಿರ್ದೇಶಕ ಜಗದೀಶ ಮೂಕಿ, ಕಾಂಗ್ರೆಸ್ ಮುಖಂಡ ಅರವಿಂದ ಏಗನಗೌಡರ, ಚೆನ್ನಬಸಪ್ಪ ಕಾಳೆ ಮಾತನಾಡಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಉಪಸ್ಥಿತರಿದ್ದರು. ದತ್ತಿದಾನಿಗಳ ಪರವಾಗಿ ಅಭಿಷೇಕ ಸಿದ್ಧಲಿಂಗ ದೇಸಾಯಿ ಮಾತನಾಡಿದರು. ಕೋಶಾಧ್ಯಕ್ಷ ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಸಹ ಕಾರ್ಯದರ್ಶಿ ಶಂಕರ ಕುಂಬಿ ವಂದಿಸಿದರು.