ಬೆಂಗಳೂರು: ಮುಖ್ಯಮಂತ್ರಿಗಳ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪದಡಿ ಮುನೇಗೌಡ (50) ಎಂಬವರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಧಾನಸೌಧ ಮುಂಭಾಗ ಫೆ.8ರಂದು ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ನಡೆದಿದ್ದ ಘಟನೆ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರು. ಅದರ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾಅನೆ ಎಂದು ಪೊಲೀಸರು ಹೇಳಿದರು.
ದೊಡ್ಡಬಳ್ಳಾಪುರ ಮೂಲದ ಮುನೇಗೌಡ, ವಾಹನ ಚಾಲಕ. ತನ್ನ ಚಾಲನಾ ಪರವಾನಗಿ (ಡಿಎಲ್) ನವೀಕರಣಕ್ಕಾಗಿ ಆರ್‌ಟಿಒ ಕಚೇರಿಗೆ ಅರ್ಜಿ ಸಲ್ಲಿಸಿದ್ದ. ನಿಗದಿತ ಪ್ರಕ್ರಿಯೆಗಳನ್ನೂ ಪೂರ್ಣ ಗೊಳಿಸಿದ್ದ. ಆದರೆ, ಹಲವು ದಿನವಾದರೂ ಡಿ.ಎಲ್ ಕೈಗೆ ಸಿಕ್ಕಿರಲಿಲ್ಲ. ಡಿಎಲ್ ನೀಡುವಂತೆ ಹಲವು ಬಾರಿ ಆರ್‌ಟಿಒ ಕಚೇರಿ ಅಧಿಕಾರಿಗಳನ್ನು ಕೋರಿದ್ದ. ಆದರೆ, ಸ್ಪಂದನೆ ಸಿಕ್ಕಿರಲಿಲ್ಲ. ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದರು. ಅದರಿಂದ ನೊಂದ ಮುನೇಗೌಡ, ಜನಸ್ಪಂದನಾ ಕಾರ್ಯ ಕ್ರಮದಲ್ಲಿ ಅಹವಾಲು ಸಲ್ಲಿಸಲು ಬಂದಿದ್ದ. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಅಹವಾಲು ಆಲಿಸಿರಲಿಲ್ಲ. ಮತ್ತಷ್ಟು ಸಿಟ್ಟಾದ ಮುನೇಗೌಡ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ.
ಹೀಗಾಗಿ ಸಚಿವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆತನ ವಿರುದ್ಧ ಸಾರಿಗೆ ಅಧಿಕಾರಿಗಳು ದೂರು ನೀಡಿದ್ದರು. ಹೀಗಾಗಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.