Advertisement

ಡೆನ್‌ಡೆನ್‌ ಹಡಗು ದುರಂತ ಪಟ್ಟಿಗೆ “ಡ್ರೆಜರ್‌ ಐಬಿಎಸ್‌’ಬಾರ್ಜ್‌

11:06 AM Jun 08, 2017 | Harsha Rao |

ಮಂಗಳೂರು: ಎಂಟು ವರ್ಷಗಳ ಬಳಿಕ ಮಂಗಳೂರಿನಲ್ಲಿ ಮತ್ತೂಂದು ಕಡಲ ದುರಂತ ಸಂಭವಿಸಿದೆ. ಕಡಲ್ಕೊರೆತ ತಡೆ ಶಾಶ್ವತ ಕಾಮಗಾರಿಗೆ ಬಂದಿದ್ದ ಬಾರ್ಜ್‌ನಲ್ಲಿದ್ದ ಸಿಬಂದಿಯನ್ನು ರಕ್ಷಿಸಿದ್ದರೂ ಬಾರ್ಜ್‌ ಮೇಲಕ್ಕೆತ್ತುವ ಬಗ್ಗೆ ಇನ್ನೂ ಮೀನ-ಮೇಷ ಎಣಿಸಲಾಗುತ್ತಿದೆ. 

Advertisement

ಬಾರ್ಜ್‌ ಕಂಪೆನಿಯ ಅಧಿಕಾರಿಗಳ ನಡವಳಿಕೆಯನ್ನು ಗಮನಿಸಿದರೆ ಮಂಗಳೂರಿನ ಕರಾವಳಿಯಲ್ಲಿ ಈ ಹಿಂದೆ ಸಂಭವಿಸಿದ “ಡೆನ್‌ಡೆನ್‌’ ಮತ್ತು “ಏಶಿಯನ್‌ ಫಾರೆಸ್ಟ್‌ ‘ ಹಡಗುಗಳ ದುರಂತದ ಸಾಲಿಗೆ ಮತ್ತೂಂದು ದುರಂತ ಸೇರ್ಪಡೆ ಆಗುವ ಎಲ್ಲ ಲಕ್ಷಣ ಕಂಡು ಬರುತ್ತಿವೆ. 

ತಣ್ಣೀರುಬಾವಿ ಪ್ರದೇಶದ ಅರಬಿ ಸಮುದ್ರ ದಲ್ಲಿ ಈ ಹಿಂದೆ ಎರಡು ಮರ್ಚಂಟ್‌ ನೌಕೆಗಳು ಮುಳುಗಡೆಯಾಗಿವೆ ಹಾಗೂ ಒಂದು ಹಡಗು ಮುಳುಗಡೆ ಅಪಾಯದಿಂದ ಪಾರಾಗಿದೆ. 

ಇರೀಟ್ರಿಯಾ ದೇಶದ “ಡೆನ್‌ಡೆನ್‌’ ಹಡಗು (ಆಯಿಲ್‌ ಟ್ಯಾಂಕರ್‌) ಫರ್ನೇಸ್‌ಗೆ ಬಳಸುತ್ತಿದ್ದ 7000 ಮೆಟ್ರಿಕ್‌ ಟನ್‌ ಕಚ್ಛಾ ಇಂಧನವನ್ನು ನವ ಮಂಗಳೂರು ಬಂದರಿನಿಂದ ದುಬಾೖಗೆ ಸಾಗಿಸುತ್ತಿದ್ದಾಗ 2007ರ ಜೂನ್‌ 23ರಂದು ತಣ್ಣೀರುಬಾವಿ ಬಳಿ ಅಪಾಯಕ್ಕೆ ಸಿಲುಕಿ ಮುಳುಗಡೆಯಾಗಿತ್ತು. ಈ ನೌಕೆಯಲ್ಲಿದ್ದ 24 ಜನ ಸಿಬಂದಿಯ ಪೈಕಿ 3 ಮಂದಿ ಸಾವನ್ನಪ್ಪಿದ್ದು, 21 ಮಂದಿಯನ್ನು ರಕ್ಷಿಸಲಾಗಿತ್ತು. 

ಜೂ.22ರಂದು ಎನ್‌ಎಂಪಿಟಿಯಿಂದ ಹೊರಟ ಕೆಲವೇ ಸಮಯದಲ್ಲಿ “ಡೆನ್‌ಡೆನ್‌’ ನೌಕೆಯ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ನೌಕೆಯನ್ನು ದುರಸ್ತಿ ಗಾಗಿ ವಾಪಸ್‌ ಎನ್‌ಎಂಪಿಟಿ ಕಡೆಗೆ ತರಲು ಯತ್ನಿಸಿದಾಗ ಬಲವಾದ ಗಾಳಿ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ತಣ್ಣೀರುಬಾವಿ ಕಡೆಗೆ ಸಾಗಿ ಅಲ್ಲಿ ತಳ ಭಾಗವು ನೆಲಕ್ಕೆ ತಗುಲಿ ಅಪಾಯಕ್ಕೆ ಸಿಲುಕಿ ಮರುದಿನ (ಜೂ.23) ಮುಳುಗಡೆಯಾಗಿತ್ತು. ಅದರಲ್ಲಿ ಪಾಕಿಸ್ಥಾನದ ಮೂವರು, ಇರಿಟ್ರಿಯಾದ 16, ಸುಡಾನ್‌ ಮತ್ತು ಘಾನಾದ ತಲಾ ಇಬ್ಬರು, ಶ್ರೀಲಂಕಾದ ಒಬ್ಬರು ಸೇರಿದಂದ 24 ಜನ ಸಿಬಂದಿ ಇದ್ದರು. 

Advertisement

ಈ ಹಡಗನ್ನು ಮೇಲೆತ್ತಲು ಸಾಧ್ಯವಾಗದ ಕಾರಣ ಎರಡು ವರ್ಷಗಳ ಬಳಿಕ ಅದನ್ನು ಗುಜರಿಗೆ ಮಾರಾಟ ಮಾಡಲಾಗಿತ್ತು. ಆದರೆ ಸಂಪೂರ್ಣವಾಗಿ ಅದನ್ನು ದುರಂತ ಸ್ಥಳದಿಂದ ವಿಲೆವಾರಿ ಮಾಡಲು ಸಾಧ್ಯವಾಗಿಲ್ಲ. ಅದರ ಅವಶೇಷಗಳು ಈಗಲೂ ಸಮುದ್ರದಲ್ಲಿ ಇವೆ. 

ಪಾರಾಗಿದ್ದ ಚಾನ್‌ ಲಿ ಮನ್‌
ಅದೇ ವರ್ಷ ಸೆಪ್ಟಂಬರ್‌ನಲ್ಲಿ ನವ ಮಂಗ ಳೂರು ಬಂದರಿನಿಂದ ಕಬ್ಬಿಣದ ಅದಿರನ್ನು ಹೇರಿ ಕೊಂಡು ಚೀನಕ್ಕೆ ಹೊರಟಿದ್ದ ಚೈನೀಸ್‌ ಹಡಗು “ಚಾಂಗ್‌ ಲಿ ಮನ್‌’ ಪ್ರತಿಕೂಲ ಹವಾಮಾನದಿಂದ ಗಾಳಿಯ ರಭಸಕ್ಕೆ ತಣ್ಣೀರು ಬಾವಿ ಕಡೆಗೆ ಚಲಿಸಿ ಅಪಾಯಕ್ಕೆ ಸಿಲುಕಿತ್ತು. ಆದರೆ ಈ ಹಡಗು ಮುಳುಗಡೆ ಆಗಿರಲಿಲ್ಲ. ಅದರಲ್ಲಿದ್ದ ಅದಿರನ್ನು ಬೇರೆ ನೌಕೆಗೆ ಸ್ಥಳಾಂತರಿಸಿ ಖಾಲಿ ಮಾಡಿ ಎರಡೇ ದಿನಗಳಲ್ಲಿ ಹಡಗನ್ನು ಆಳ ಸಮುದ್ರಕ್ಕೆ ಎಳೆದು ಸರಿ ಮಾಡಿ ಪ್ರಯಾಣ ಮುಂದುವರಿಸಲು ಅನುವು ಮಾಡಿ ಕೊಡಲಾಗಿತ್ತು. 

ಈ ಘಟನೆ ನಡೆದು ಒಂದು ವರ್ಷದ ಬಳಿಕ 2008ರ ಜುಲೈ 17ರಂದು ನವಮಂಗಳೂರು ಬಂದರಿನಿಂದ 13,000 ಟನ್‌ ಮ್ಯಾಂಗನೀಸ್‌ ಅದಿರು ಹೊತ್ತು ಚೀನಕ್ಕೆ ಹೊರಟಿದ್ದ ಇತಿಯೋಪಿಯಾದ “ಏಶಿಯನ್‌ ಫಾರೆಸ್ಟ್‌’ ಹಡಗು ಪ್ರತಿಕೂಲ ಹವಾಮಾನದಿಂದ ಮುಂದಕ್ಕೆ ಚಲಿಸಲಾಗದೆ ತಣ್ಣೀರುಬಾವಿ ಕಡೆಗೆ ಚಲಿಸಿ ಅಪಾಯಕ್ಕೆ ಸಿಲುಕಿ ಮರುದಿನ (ಜು.18) ಅರಬಿ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಈ ನೌಕೆಯಲ್ಲಿದ್ದ ಎಲ್ಲ 18 ಮಂದಿಯನ್ನು ರಕ್ಷಿಸಲಾಗಿತ್ತು. 

ಸಮುದ್ರ ಮಾಲಿನ್ಯದ ಭೀತಿಯಿಂದ “ಏಶಿಯನ್‌ ಫಾರೆಸ್ಟ್‌’ ಹಡಗಿನಲ್ಲಿದ್ದ ಇಂಧನ ವನ್ನು ಸಂಪೂರ್ಣವಾಗಿ ಮೇಲೆತ್ತುವ ತನಕ ಸುಮಾರು 5 ತಿಂಗಳ ಕಾಲ ಹಡಗಿನಲ್ಲಿದ್ದ 18 ಮಂದಿಯನ್ನು ಅವರ ದೇಶಕ್ಕೆ ಹೋಗಲು ಬಿಡದೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಮಂಗ ಳೂರಿನಲ್ಲಿಯೇ ಉಳಿಸಿಕೊಂಡಿತ್ತು. ಅದೇ ರೀತಿಯ ದೃಢ ನಿಲುವನ್ನು ಪ್ರಸ್ತುತ ಉಳ್ಳಾಲ ಕೋಟೆಪುರ ತೀರದಿಂದ 700 ಮೀ. ದೂರ ಅಪಾಯಕ್ಕೆ ಸಿಲುಕಿರುವ “ಡ್ರೆಜರ್‌ ಐಬಿಎಸ್‌ ಬಾರ್ಜ್‌’ಗೆ ಸಂಬಂಧಿಸಿ ಜಿಲ್ಲಾಡಳಿತವು ತಳೆಯ ಬೇಕಾದ ಆವಶ್ಯಕತೆ ಇದೆ. 

ಮಂಗಳೂರು ಕರಾವಳಿಯಲ್ಲಿ ಹಡಗುಗಳು ಮತ್ತು ಬಾರ್ಜ್‌ ಮುಳುಗಡೆಯಾಗಿ ಪರಿಸರ ಮಾಲಿನ್ಯ ಮತ್ತು ಮೀನುಗಾರಿಕಾ ದೋಣಿ ಗಳ ನಿರಾತಂಕದ ಸಂಚಾರಕ್ಕೆ ಅಡೆ-ತಡೆ ಉಂಟಾಗುತ್ತಿರುವ ಬಗ್ಗೆ ಮೀನುಗಾರರು ಆತಂಕ ವ್ಯಕ್ತ ಪಡಿಸಿದ್ದಾರೆ. ಈಗಾಗಲೇ “ಡೆನ್‌-ಡೆನ್‌’ ಮತ್ತು “ಏಶಿಯನ್‌ ಫಾರೆಸ್ಟ್‌’ ನೌಕೆಗಳ ಅವಶೇಷಗಳು ಇರುವ ಪ್ರದೇಶ ಗಳಲ್ಲಿ ಮೀನುಗಾರರು ಬಹಳಷ್ಟು ಜಾಗರೂಕತೆ ಯಿಂದ ತಮ್ಮ ದೋಣಿಗಳನ್ನು ಚಲಾಯಿಸ ಬೇಕಾಗಿದೆ. ಈಗ ಅವುಗಳ ಸಾಲಿಗೆ “ಡ್ರೆಜರ್‌ ಐಬಿಎಸ್‌ ಬಾರ್ಜ್‌’ ಸೇರ್ಪಡೆಗೊಳ್ಳದಿರಲಿ ಎನ್ನುವುದು ಅವರ ಆಶಯ. ಬಾರ್ಜ್‌ನಲ್ಲಿರುವ ತೈಲವನ್ನು ಆದಷ್ಟು ಶೀಘ್ರದಲ್ಲಿ ವಿಲೆವಾರಿ ಮಾಡಬೇಕು ಹಾಗೂ ಬಳಿಕ ಬಾರ್ಜ್‌ನ್ನು ಮೇಲೆತ್ತಲು ಸೂಕ್ತ ಕ್ರಮ ಜರಗಿಸಬೇಕು ಎನ್ನುವುದು ಅವರ ಒತ್ತಾಯ.

Advertisement

Udayavani is now on Telegram. Click here to join our channel and stay updated with the latest news.

Next