Advertisement

ಪಾಳು ಬಿದ್ದ ಅಮೀನಗಡ ಉದ್ಯಾನವನ; ಸಾರ್ವಜನಿಕರ ಆಕ್ರೋಶ

06:28 PM Aug 07, 2023 | Team Udayavani |

ಅಮೀನಗಡ: ಪಟ್ಟಣದ 14ನೇ ವಾರ್ಡ್‌ನಲ್ಲಿರುವ ಉದ್ಯಾನವನ ಸಮರ್ಪಕ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ. ಮನಸ್ಸಿಗೆ ಆಹ್ಲಾದಕರ ಅನುಭವ ನೀಡುವ ಮತ್ತು ನಗರದ ಸೌಂದರ್ಯ ಹೆಚ್ಚಿಸುವ ಸ್ಥಳವೆಂದರೆ ಉದ್ಯಾನವನ. ಆದರೆ ಕರದಂಟು ಖ್ಯಾತಿಯ ಅಮೀನಗಡ ಉದ್ಯಾನವನಕ್ಕೆ ಹೋದರೆ ಖುಷಿಗಿಂತ ಬೇಸರವಾಗುವುದೇ ಹೆಚ್ಚು, ಹೌದು, ಒಂದೂವರೆ ವರ್ಷದ ಹಿಂದೆ ಪಟ್ಟಣ ಪಂಚಾಯಿತಿಯ ಲಕ್ಷಾಂತರ ರೂ. ಅನುದಾನದಲ್ಲಿ ಪಟ್ಟಣದ 14ನೇ ವಾರ್ಡ್‌ನಲ್ಲಿ ಉದ್ಯಾನವನ ನಿರ್ಮಾಣ ಮಾಡಿ
ಉದ್ಘಾಟನೆ ಮಾಡಲಾಗಿದೆ. ಆದರೆ, ನಿರ್ವಹಣೆ ಇಲ್ಲದ್ದರಿಂದ ಪಾಳು ಬಿದ್ದಿದ್ದು, ಉದ್ಯಾನವನಕ್ಕೆ ಹೋಗುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ.

Advertisement

ಪಪಂ ನಿರ್ಲಕ್ಷ್ಯ: ಪಪಂ 15ನೇ ಹಣಕಾಸು ಯೋಜನೆಯಡಿ 4.60ಲಕ್ಷ ರೂ, ಅನುದಾನ ಬಳಸಿ ಪಟ್ಟಣದಲ್ಲಿ ಮೊದಲ ಉದ್ಯಾನವನದಲ್ಲಿ ಮಕ್ಕಳ ಆಟಕ್ಕೆ ಉಯ್ನಾಲೆ, ಜಾರು ಬಂಡಿ, ಕುಳಿತುಕೊಳ್ಳಲು ಆಸನ ಮೊದಲಾದ ವ್ಯವಸ್ಥೆ ಮಾಡಲಾಗಿದೆ. ಆದರೆ, ಮಕ್ಕಳ ಆಟಿಕೆಯ ಕೆಲ ಸಾಮಗ್ರಿಗಳು ಮುರಿದು ಬಿದ್ದಿವೆ. ಎಲ್ಲೆಂದರಲ್ಲಿ ಕಸದ ಗಿಡಗಳು, ಪ್ಲಾಸ್ಟಿಕ್‌ಗಳ ರಾಶಿ ಕಂಡು
ಬರುತ್ತಿವೆ.ನಿರ್ವಹಣೆಯ ಬಗ್ಗೆ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿರುವ ಪಪಂ ಅಧಿಕಾರಿಗಳ ಕಾರ್ಯವೈಖರಿಗೆ ಸಾರ್ವಜನಿಕರು
ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಯೊಬ್ಬರ ಕಾಳಜಿ ಅವಶ್ಯ: ಆಧುನಿಕ ಭರಾಟೆಯಲ್ಲಿ ಒತ್ತಡದ ಬದುಕಿನಿಂದ ಹೊರಬಂದು ನೆಮ್ಮದಿ ಬದುಕಿಗೆ ಕೆಲ
ಸಮಯ ಮೀಸಲಿರಿಸಲು ಮತ್ತು ದಣಿದ ಜನರಿಗೆ ವಿಶ್ರಾಂತಿ ನೀಡುವ ಕೆಲಸ ಉದ್ಯಾನವನದಲ್ಲಿ ಆಗಬೇಕಿದೆ, ಅದಕ್ಕಾಗಿ ಉದ್ಯಾನವನದಲ್ಲಿ ಪಪಂ ಅಧಿಕಾರಿಗಳು ಸಿಬ್ಬಂದಿ ನೇಮಕ ಮಾಡಿ ಸ್ವತ್ಛತೆಗೆ ಆದ್ಯತೆ ನೀಡಬೇಕು. ಜತೆಗೆ ಸಾರ್ವಜನಿಕರು ಕೂಡಾ ಸರ್ಕಾರದ ಯೋಜನೆಯಾದ ಉದ್ಯಾನವನದಲ್ಲಿರುವ ಸಾಮಗ್ರಿಗಳನ್ನು ಸಮರ್ಪಕವಾಗಿ ಬಳಕೆ ಮಾಡಿ ಅಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಉದ್ಯಾನವನದ ಕಾಳಜಿ ತೆಗೆದುಕೊಳ್ಳಬೇಕು ಎಂಬುದು ಪ್ರಜ್ಞಾವಂತರ ಆಗ್ರಹ.

14ನೇ ವಾರ್ಡ್‌ನಲ್ಲಿ ಉದ್ಯಾನವನ ಮಾಡಲಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದ ಸಾರ್ವಜನಿಕರು ಹೋಗಲು ಹಿಂಜರಿಕೆ ಮಾಡುತ್ತಿದ್ದಾರೆ.ನಿರ್ವಹಣೆ ಬಗ್ಗೆ ಪಪಂ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ
ಸಂಜಯ ಐಹೊಳ್ಳಿ, ಪಪಂ ಸದಸ್ಯರು

ಉದ್ಯಾನವನ ಸಾರ್ವಜನಿಕರ ಆಸ್ತಿ ಪಟ್ಟಣದ 14ನೇ ವಾರ್ಡ್‌ನಲ್ಲಿರುವ ಉದ್ಯಾನವನದ  ನಿರ್ವಹಣೆ ಕೈಗೊಂಡಾಗ ಮಾತ್ರ ಅಭಿವೃದ್ಧಿ ಕಾರ್ಯಗಳು ಸದುಪಯೋಗವಾಗುತ್ತವೆ.ಅಲ್ಲಿಯ ಸಮಸ್ಯೆ ಬಗ್ಗೆ ವಿಷಯ ಗಮನಕ್ಕೆ ಬಂದಿದೆ. ಶೀಘ್ರ ಸ್ವಚ್ಛಗೊಳಿಸಲು ಸಿಬ್ಬಂದಿಗೆ ತಿಳಿಸುತ್ತೇನೆ.
ಮಹೇಶ ನೀಡಶೇಶಿ, ಮುಖ್ಯಾಧಿಕಾರಿ, ಪಪಂ

Advertisement

14ನೇ ವಾರ್ಡ್‌ನಲ್ಲಿರುವ ಉದ್ಯಾನವನ ಮಾಡಿ ಒಂದುವರೇ ವರ್ಷ ಆಗಿದೆ. ಎರಡು ವರ್ಷದವರೆಗೆ ಅಲ್ಲಿಯ ಸಾಮಗ್ರಿಗಳ ನಿರ್ವಹಣೆಯನ್ನು ಗುತ್ತಿಗೆದಾರರು ಮಾಡುತ್ತಾರೆ. ಉದ್ಯಾನವನದ ಸ್ವತ್ಛತೆಯ ನಿರ್ವಹಣೆ ಪಪಂ ವತಿಯಂದ ಮಾಡಬೇಕು. ಉದ್ಯಾನವನ ನಿರ್ವಹಣೆಗೆ ಸಿಬ್ಬಂದಿ ನೇಮಕ ಮಾಡುವಂತೆ ಮುಖ್ಯಾಧಿಕಾರಿಗಳ ಗಮನಕ್ಕೆ ತರುತ್ತೇನೆ.
ಎನ್‌.ಎನ್‌.ಖಾಜಿ, ಜೆಇ,ಪಪಂ

ಉದ್ಯಾನವನದಲ್ಲಿರುವ ಮಕ್ಕಳ ಆಟಿಕೆ ಸಾಮಗ್ರಿಗಳ ರಕ್ಷಣೆ ಮತ್ತು ಅಲ್ಲಿ ಸ್ವಚ್ಛತೆ ಕಾಪಾಡಲು ಪಪಂ ವತಿಯಿಂದ ಸಿಬ್ಬಂದಿ ನೇಮಕ ಮಾಡಬೇಕು. ಇದರಿಂದ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ. ಆಗ ಮಾತ್ರ ಸಂರಕ್ಷಣೆ ಸಾಧ್ಯ.
ಶಶಿಕಾಂತ ಮಜ್ಜಗಿಯವರ, ಯುವ ಮುಖಂಡರು

*ಎಚ್‌.ಎಚ್‌.ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next