Advertisement

Congress “ಹಳಿ ತಪ್ಪಿದ ಸಮನ್ವಯ’ ಕಾಂಗ್ರೆಸ್‌ಗೆ 2028ಕ್ಕೆ 2018ರ ಫ‌ಲಿತಾಶ!

01:25 AM Jul 12, 2024 | Team Udayavani |

ಬೆಂಗಳೂರು: ಅಧಿಕಾರಕ್ಕೆ ಬಂದಾಗಿನಿಂದಲೂ ಸರಕಾರ ಮತ್ತು ಪಕ್ಷದ ನಡುವೆ ಸಮನ್ವಯ ಇಲ್ಲ. ಕಾರ್ಯಕರ್ತರನ್ನು ಸಂಪೂರ್ಣವಾಗಿ ಅವಗಣಿಸಲಾಗಿದೆ. ಇದೇ ಧೋರಣೆ ಮುಂದುವರಿದರೆ, 2018ರ ವಿಧಾನಸಭಾ ಚುನಾವಣ ಫ‌ಲಿತಾಂಶ ಮುಂಬರುವ 2028ರ ಚುನಾವಣೆಗಳಲ್ಲಿ ಪುನರಾವರ್ತನೆ ಆಗಲಿದೆ.

Advertisement

– ಇದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರು ಎಐಸಿಸಿ ನೇಮಿಸಿದ ಸತ್ಯಶೋಧನ ಸಮಿತಿಗೆ ನೀಡಿದ ದೂರು.

ಲೋಕಸಭಾ ಚುನಾವಣೆ ಪೂರ್ವ ಮತ್ತು ಫ‌ಲಿತಾಂಶದ ಅನಂತರ ಆಡಳಿತಾರೂಢ ಕಾಂಗ್ರೆಸ್‌ನ ಬಣಗಳ ಬಡಿದಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ ಗುರುವಾರ ಸ್ವತಃ ಸಮಿತಿ ಆಹ್ವಾನದ ಮೇರೆಗೆ ಭೇಟಿ ನೀಡಿದ ಶೇ. 70ಕ್ಕೂ ಅಧಿಕ ಜಿಲ್ಲಾ ಘಟಕಗಳ ಅಧ್ಯಕ್ಷರು, ಸರಕಾರ ಮತ್ತು ಪಕ್ಷದ ನಡುವಿನ “ಸಮನ್ವಯ ಕೊರತೆ’ ಬಗ್ಗೆ ಗಮನಸೆಳೆದರು. ಆ ಮೂಲಕ ಹೈಕಮಾಂಡ್‌ಗೆ ತಮ್ಮ ಸಂದೇಶ ತಲುಪಿಸುವ ಪ್ರಯತ್ನ ಮಾಡಿದರು.

ಒಂದೆಡೆ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಅವರು, ಪಕ್ಷದ ಕಾರ್ಯಕರ್ತರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ನಿಯಮಿತವಾಗಿ ಅವರ ಅಹವಾಲು ಆಲಿಸಬೇಕು ಎನ್ನುತ್ತಾರೆ. ಆದರೆ ಇಲ್ಲಿ ಸ್ಥಿತಿ ತದ್ವಿರುದ್ಧವಾಗಿದೆ. 2013- 2017ರಲ್ಲಿನ ವಾತಾವರಣವೇ ಕಂಡುಬರುತ್ತಿದೆ. ಸಚಿವರು ತಮಗೆ ಬೇಕಾದವರ ಕೆಲಸಗಳನ್ನು ಮಾಡಿಕೊಡುತ್ತಾರೆ ಎಂದು ದೂರಿದರು ಎನ್ನಲಾಗಿದೆ.

ಡಿಸಿಸಿಗಳನ್ನು ಪರಿಗಣಿಸಿ
ನಿಗಮ- ಮಂಡಳಿಗಳ ಅಧ್ಯಕ್ಷರು/ ಉಪಾಧ್ಯಕ್ಷರ ನೇಮಕ ಮಾಡುವಾಗ ಜಿಲ್ಲಾ ಕಾಂಗ್ರೆಸ್‌ ಸಮಿತಿಗಳನ್ನು ಪರಿಗಣಿಸಲೇ ಇಲ್ಲ. ನಾಯಕರೇ ತಮ್ಮ ಬಣಗಳಿಗೆ ಹಂಚಿಕೆ ಮಾಡಿಕೊಂಡರು. ಗ್ಯಾರಂಟಿ ಅನುಷ್ಠಾನ ಸಮಿತಿಗಳಲ್ಲೂ ಇದನ್ನು ಕಾಣಬಹುದು. ಗ್ಯಾರಂಟಿ ಫ‌ಲಾನುಭವಿ ಕುಟುಂಬಗಳಿಗೆ ಯೋಜನೆಗಳಿಂದಾದ ಅನುಕೂಲಗಳೇನು ಎಂಬ ಬಗ್ಗೆ ಜನರಿಗೆ ಮನ ದಟ್ಟು ಮಾಡುವ ಕೆಲಸ ಆಗಿಲ್ಲ. ಜಿಲ್ಲಾ ಕಾಂಗ್ರೆಸ್‌ ಸಮಿತಿಗಳಿಗೆ ಮನ್ನಣೆ ನೀಡುವ ಆವಶ್ಯಕತೆ ಇದೆ ಎಂದು ಜಿಲ್ಲಾಧ್ಯಕ್ಷರು ಆಗ್ರಹಿಸಿದರು.

Advertisement

ಹಲವು ನಾಯಕರ ಗೈರು
ಸ್ವತಃ ಎಐಸಿಸಿ ನೇಮಿಸಿದ ಸತ್ಯಶೋಧನ ಸಮಿತಿ ಕರೆದಿದ್ದ ಸಭೆಗೆ ಅರ್ಧಕ್ಕರ್ಧ ಸಚಿವರು, ಕೆಲವು ನಾಯಕರು ಗೈರುಹಾಜರಾಗಿದ್ದರು. ಜಿಲ್ಲಾ ಘಟಕಗಳ ಅಧ್ಯಕ್ಷರಲ್ಲಿಯೂ ಹಲವರು ಬಂದಿರಲಿಲ್ಲ. ಪೂರ್ವನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆಲವು ಸಚಿವರು, ಶಾಸಕರು ಗೈರುಹಾಜರಾಗಿದ್ದರು. ಇದನ್ನು ಕೆಪಿಸಿಸಿ ಗಮನಕ್ಕೂ ತಂದಿದ್ದರು ಎನ್ನಲಾಗಿದೆ. ಅವಕಾಶ ಸಿಕ್ಕರೆ, ಈ ಪೈಕಿ ಹಲವರು ಶುಕ್ರವಾರ ಸಮಿತಿಯನ್ನು ಭೇಟಿಯಾಗಿ ಅಭಿಪ್ರಾಯಗಳನ್ನು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next