ಲಕ್ನೋ : ಅತ್ಯಾಚಾರ ಅಪರಾಧಿಯಾಗಿ ಜೈಲು ಪಾಲಾಗಿರುವ ಡೇರಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್‌ನ ಹರಿಯಾಣದ ಸಿರ್ಸಾ ಪ್ರಧಾನ ಕೇಂದ್ರದಲ್ಲಿ ನಡೆಯುತ್ತಿದ್ದ ಅತ್ಯಾಚಾರ, ಅನಾಚಾರಗಳ ವಿವರಗಳು ಈಗ ಒಂದೊಂದಾಗಿ ಹೊರಬರುತ್ತಿವೆ.
ಸಿರ್ಸಾದಲ್ಲಿನ ಡೇರಾ ಪ್ರಧಾನ ಕಾರ್ಯಾಲಯದಿಂದ ಖಾಸಗಿ ವೈದ್ಯಕೀಯ ಕಾಲೇಜಾಗಿರುವ ಜಿಸಿಆರ್‌ಜಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್‌ಗೆ ಯಾವುದೇ ಮರಣ ಪ್ರಮಾಣ ಪತ್ರ ಅಥವಾ ಅನುಮತಿ ಪತ್ರ ಇಲ್ಲದೇನೇ ಹದಿನಾಲ್ಕು ಶವಗಳನ್ನು ರವಾನಿಸಲಾಗಿತ್ತೆಂಬ ಅತ್ಯಾಶ್ಚರ್ಯಕರ ವಿಷಯ ಈಗ ಬಹಿರಂಗವಾಗಿದೆ.
ಉತ್ತರ ಪ್ರದೇಶ ಸರಕಾರಕ್ಕೆ ಈ ಸಂಬಂಧ ಕಳೆದ ಆಗಸ್ಟ್ 19ರಂದು ಕಳುಹಿಸಲಾಗಿರುವ ಟಿಪ್ಪಣಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಟೈಮ್ಸ್ ಆಫ್ ಇಂಡಿಯಾ ಬಳಿ ಈ ಟಿಪ್ಪಣಿಯ ಪ್ರತಿ ಇದೆ.
ಡೇರಾ ಸಚ್ಚಾ ಸೌಧಾದಿಂದ, ಯಾವುದೇ ಮರಣ ಪ್ರಮಾಣ ಪತ್ರ ಅಥವಾ ಅನುಮತಿ ಪತ್ರ ಇಲ್ಲದೇನೆ ಜಿಸಿಆರ್‌ಜಿ ಮೆಡಿಕಲ್ ಕಾಲೇಜು ಆಸ್ಪತ್ರೆಯು ಹದಿನಾಲ್ಕು ಶವಗಳನ್ನು ಸ್ವೀಕರಿಸಲಾದ ಘಟನೆ ಅತ್ಯಂತ ಗಂಭೀರದ ವಿಷಯವಾಗಿದೆ ಎಂದು ವಿಚಾರಣಾ ಸಮಿತಿಯು ಹೇಳಿದೆ.
ಜಿಸಿಆರ್‌ಜಿಗೆ ಮಾನ್ಯತೆ ನೀಡುವ ಕುರಿತಾದ ವಿವಾದಕ್ಕೆ ಸಂಬಂಧಪಟ್ಟು ಅಲಹಾಬಾದ್ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಅನುಗುಣವಾಗಿ ಈ ವಿಚಾರಣಾ ಸಮಿತಿಯನ್ನು ರೂಪಿಸಲಾಗಿತ್ತು.
ಜಿಸಿಆರ್‌ಜಿ ಆಡಳಿತೆಯ ಓರ್ವ ಸದಸ್ಯರಾಗಿರುವ ಓಂಕಾರ್ ಯಾದವ್ ಅವರು, ಭಾರತೀಯ ಮೆಡಿಕಲ್ ಕೌನ್ಸಿಲ್‌ನ ಒಂದು ತಂಡ ಕಳೆದ ಆಗಸ್ಟ್ 16ರಂದು ಕಾಲೇಜಿನ ತಪಾಸಣೆಯನ್ನು ಕೈಗೊಂಡಿದ್ದಾಗ ಕಾಲೇಜಿನ ಅನಾಟಮಿ ವಿಭಾಗದಲ್ಲಿ ಡೇರಾ ಸಚ್ಚಾ ಸೌಧಾ ಪ್ರಧಾನ ಕಾರ್ಯಾಲಯದಿಂದ ಬಂದಿದ್ದ 14 ಶವಗಳನ್ನು ಪತ್ತೆ ಹಚ್ಚಿತ್ತು ಎಂದು ಹೇಳಿದ್ದಾರೆ.