ರೋಹಟಕ್ : ಇಬ್ಬರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗೈದ ಅಪರಾಧಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಇಲ್ಲಿನ ಕಾರಾಗೃಹದಲ್ಲಿರುವ 50ರ ಹರೆಯದ, ಐಷಾರಾಮಿ ಬದುಕಿಗೆ ಹೆಸರುವಾಸಿಯಾಗಿದ್ದ, ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ “ದಿನಕಳೆದಂತೆ ಬೇಗನೆ ಹುಚ್ಚನಾಗುವ ಸಾಧ್ಯತೆಗಳಿವೆ’ ಎಂದು ಈಗಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿರುವ ಜೈಲುವಾಸಿ ಸ್ವದೇಶ್ ಕಿರಾಡ್ ಎಂಬಾತ ಹೇಳಿದ್ದಾನೆ.
“ರಾಮ್ ರಹೀಂ ಜೈಲು ಕೋಣೆಯಲ್ಲಿ ಅತ್ತಿಂದಿತ್ತ ನಡೆದಾಡುತ್ತಾ ಪಂಜಾಬಿ ಭಾಷೆಯಲ್ಲಿ “ದೇವರ ನನ್ನ ಗತಿ ಏನಾಗುವುದು’ ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಿರುವುದು ಕಂಡು ಬಂದಿದೆ.
ಪ್ರತ್ಯಕ್ಷದರ್ಶಿ ಕಿರಾಡ್ ಹೇಳುವ ಪ್ರಕಾರ “ರಾಮ್ ರಹೀಂ ಗೆ ಜೈಲಿನಲ್ಲಿ ಯಾವುದೇ ವಿಐಪಿ ಟ್ರೀಟ್‌ಮೆಂಟ್ ನೀಡಲಾಗುತ್ತಿಲ್ಲ. ಜೈಲು ಶಿಕ್ಷೆಯ ತೀರ್ಪಿನ ಬಳಿಕ ರೋಹಟಕ್ ಕಾರಾಗೃಹಕ್ಕೆ ಆ.28ರಂದು ಬಂದ ಮೊದಲ ದಿನದ ರಾತ್ರಿ ಆತ ನಿದ್ದೆಯನ್ನೇ ಮಾಡಿರಲಿಲ್ಲ; ಮರುದಿನ ಬೆಳಗ್ಗೆ ಆತ ನೀರು ಮತ್ತು ಹಾಲನ್ನು ಮಾತ್ರವೇ ಸೇವಿಸಿದ. ಆತನನ್ನು ಇತರ ಯಾವುದೇ ಸಾಮಾನ್ಯ ಕೈದಿಯಂತೆ ನಡೆಸಿಕೊಳ್ಳಲಾಗುತ್ತಿದೆ. ಆಗ “ಓ ದೇವರೇ ನನ್ನ ತಪ್ಪೇನಿದೆ; ನನ್ನ ಗತಿ ಏನಾಗುವುದು’ ಎಂದು ತನ್ನಷ್ಟಕ್ಕೆ ತಾನೇ ಗುಣುಗುಣಿಸುತ್ತಿದ್ದ. ಆತನ ಸ್ಥಿತಿ ಹೀಗೆಯೇ ಮುಂದುವರಿದರೆ ಆತ ಸದ್ಯದಲ್ಲೇ ಮನೋಬಲ ಕಳೆದುಕೊಂಡು ಹುಚ್ಚನಂತಾದಾನು ಎಂದು ಕಿರಾಡ್ ಹೇಳಿದ್ದಾನೆ.