Advertisement

ಉಪನೋಂದಣಾಧಿಕಾರಿ ಕಚೇರಿ ಉದ್ಘಾಟನೆ

01:34 AM Jun 11, 2019 | Lakshmi GovindaRaj |

ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 3.4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಉಪ ನೊಂದಣಾಧಿಕಾರಿಗಳ ಕಚೇರಿಯ ನೂತನ ಕಟ್ಟಡವನ್ನು ಸೋಮವಾರ ಸಾಂಕೇತಿಕವಾಗಿ ಉದ್ಘಾಟಿಸಲಾಯಿತು. ಈ ವೇಳೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್‌ ಕಾರ್ನಾಡ್‌ ಅವರ ಸಾವಿಗೆ ಸಂತಾಪವನ್ನು ಸೂಚಿಸಲಾಯಿತು.

Advertisement

ಕೊಡಿಗೇಹಳ್ಳಿಯ ಟಾಟಾ ನಗರದಲ್ಲಿ ನಿರ್ಮಿಸಿರುವ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಕಚೇರಿ ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್‌ ಕಾರ್ನಾಡ್‌ ಅವರು ಮೃತಪಟ್ಟಿರುವ ಸುದ್ದಿ ತಿಳಿಯಿತು. ಸರ್ಕಾರಿ ರಜೆ ಹಾಗೂ ಮೂರು ದಿನಗಳ ಶೋಕಾಚರಣೆ ಘೋಷಣೆ ಮಾಡಿದ್ದರಿಂದ ಉದ್ಘಾಟನಾ ಕಾರ್ಯಕ್ರಮವನ್ನು ಸಂತಾಪ ಕಾರ್ಯಕ್ರಮವಾಗಿ ಪರಿವರ್ತಿಸಲಾಯಿತು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ರಾಜ್ಯ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಕಾರ್ನಾಡರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

3.4 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಚೇರಿ: ಬ್ಯಾಟರಾಯನಪುರ ಉಪನೋಂದಣಿ ಕಚೇರಿಯನ್ನು ಸುಮಾರು 3.4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 36 ಚ.ಮೀ ಪಾರ್ಕಿಂಗ್‌ ವ್ಯವಸ್ಥೆ, 243 ಚ.ಮೀ ನೆಲಮಹಡಿ, 243 ಚ.ಮೀ ಮೊದಲ ಮಹಡಿ ಕಟ್ಟಡಗಳಿವೆ. ಆತ್ಯಾಧುನಿಕ ಸೌಲಭ್ಯ ಇರುವ ಸುಸಜ್ಜಿತ ದಾಖಲೆಗಳ ಕೊಠಡಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊಠಡಿಗಳನ್ನು ನಿರ್ಮಿಸಲಾಗಿದೆ.

ಈ ಮೊದಲು ಕೊಡಿಗೇಹಳ್ಳಿ ಮುಖ್ಯರಸ್ತೆಯಲ್ಲಿ ಬಾಡಿಗೆ ಕಟ್ಟಡದಲ್ಲಿದ್ದ ಕಚೇರಿ ಕಟ್ಟಡದಲ್ಲಿ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ಸಮಸ್ಯೆಯಾಗುತಿತ್ತು. ಸ್ವಂತ ಕಟ್ಟಡದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next