ಬಂಟ್ವಾಳ: ಸಿ.ಎಂ.ಇಬ್ರಾಹಿಂ ಅವರ ಅಸಮಾಧಾನದ ವಿಚಾರಕ್ಕೂ ತನಗೆ ನೀಡಿದ ವಿಧಾನಸಭಾ ಉಪನಾಯಕನ ಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲವಾಗಿದೆ. ಇಬ್ರಾಹಿಂ ಅವರು ನಮ್ಮ ಹಿರಿಯ ನಾಯಕರಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್‌ಗೆ ಮುಂದೆಯೂ ಅವರ ಕೊಡುಗೆ ಅಗತ್ಯವಾಗಿದ್ದು, ಹೀಗಾಗಿ ಅವರು ಕಾಂಗ್ರೆಸ್‌ನಲ್ಲೇ ಇರುತ್ತಾರೆ ಎಂದು ವಿಧಾನಸಭೆಯ ವಿಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಬಂಟ್ವಾಳದಲ್ಲಿ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿಯವರನ್ನು ಭೇಟಿಯಾದ ಬಳಿಕ ಪತ್ರಕರ್ತರ ಜತೆ ಮಾತನಾಡಿದರು. ಪರಿಷತ್ತಿನ ವಿಪಕ್ಷ ನಾಯಕ ಸ್ಥಾನ ಸಿಗಲಿಲ್ಲ ಎಂದು ಸಿ.ಎಂ.ಇಬ್ರಾಹಿಂ ಅವರು ಅಸಮಾಧಾನದ ವ್ಯಕ್ತಪಡಿಸಿದ ಬಳಿಕ ಅಲ್ಪಸಂಖ್ಯಾಕ ಸಮುದಾಯದ ಯು.ಟಿ.ಖಾದರ್ ಅವರಿಗೆ ವಿಧಾನಸಭಾ ವಿಪಕ್ಷ ಸ್ಥಾನ ಸಿಕ್ಕಿದೆ ಎಂಬ ಮಾತುಗಳ ಕುರಿತು ಅವರು ಪ್ರತಿಕ್ರಿಯಿಸಿದರು.
ಅದಕ್ಕೂ ವಿಧಾನ ಪರಿಷತ್ತೇ ಬೇರೆ, ವಿಧಾನಸಭೆಯೇ ಬೇರೆ, ಉಪನಾಯಕನ ಸ್ಥಾನದ ಕುರಿತು ಹಿಂದೆಯೇ ಚರ್ಚೆಯಾಗಿತ್ತು. ಅದಕ್ಕೂ-ಇದಕ್ಕೂ ಯಾವುದೇ ಸಂಬಂಧವಿಲ್ಲ. ತಾನು ಸಣ್ಣ ವಯಸ್ಸಿನಿಂದಲೂ ಕಾಂಗ್ರೆಸ್‌ನಲ್ಲಿ ಬೇರೆ ಬೇರೆ ಸ್ಥಾನಗಳನ್ನು ಅಲಂಕರಿಸಿ ಶಾಸಕನಾಗಿ, ಸಚಿವನಾಗಿ ಪ್ರಮುಖ ಇಲಾಖೆಗಳನ್ನು ಪ್ರಮಾಣಿಕನಾಗಿ ಕೆಲಸ ಮಾಡಿದ ಕಾರಣ ಈ ಸ್ಥಾನ ಲಭಿಸಿದೆ ಎಂದರು.
ಬಳಿಕ ಖಾದರ್ ಅವರು ಮಾಜಿ ಸಚಿವ ಬಿ.ರಮಾನಾಥ ರೈ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಪೂಜಾರಿಯವರ ಭೇಟಿಯ ವೇಳೆ ಪಕ್ಷದ ಪ್ರಮುಖರಾದ ಉಮ್ಮರ್ ಫಾರೂಕ್ ಫರಂಗಿಪೇಟೆ, ಸದಾಶಿವ ಉಳ್ಳಾಲ್, ಬೇಬಿ ಕುಂದರ್, ಲುಕ್ಮಾನ್ ಬಂಟ್ವಾಳ, ರಮ್ಲಾನ್ ಮಾರಿಪಳ್ಳ, ಅಬ್ದುಲ್ ರಝಾಕ್ ಕುಕ್ಕಾಜೆ, ದಿನೇಶ್ ಪೂಜಾರಿ, ಜಬ್ಬಾರ್ ಬೋಳಿಯಾರ್, ಮಜೀದ್ ಫರಂಗಿಪೇಟೆ, ಇಕ್ಬಾಲ್ ಸುಜೀರ್ ಮೊದಲಾದವರಿದ್ದರು.