Advertisement

ಉಪ ಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿಗಳೂ ಅಂತಿಮ

12:52 AM Apr 28, 2019 | sudhir |

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಚಿಂಚೋಳಿ ಕ್ಷೇತ್ರಕ್ಕೆ ಕಲಬುರಗಿ ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷ ಸುಭಾಸ್‌ ರಾಠೊಡ್‌, ಕುಂದಗೋಳ ಕ್ಷೇತ್ರಕ್ಕೆ ಮಾಜಿ ಸಚಿವ ಸಿ.ಎಸ್‌.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

Advertisement

ಶನಿವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣು ಗೋಪಾಲ್‌ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ| ಜಿ. ಪರ ಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಭಾಗವಹಿಸಿದ್ದ ಸಭೆಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.

ಕುಂದಗೋಳ ಕ್ಷೇತ್ರಕ್ಕೆ ಹತ್ತಕ್ಕೂ ಹೆಚ್ಚು ಜನ ಆಕಾಂಕ್ಷಿಗಳಿದ್ದರೂ ಪಕ್ಷದ ರಾಜ್ಯದ ನಾಯಕರು ಅನುಕಂಪದ ಆಧಾರದಲ್ಲಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್‌ ನೀಡಬೇಕೆಂಬ ನಿರ್ಧಾರ ತೆಗೆದುಕೊಂಡರು. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್‌ ನೀಡಿದರೆ ಅನುಕಂಪದ ಆಧಾರದಲ್ಲಿ ಗೆಲುವು ಸುಲಭವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ಚಿಂಚೋಳಿ ಕ್ಷೇತ್ರದಲ್ಲಿ ಮಾಜಿ ಸಚಿವ ಬಾಬುರಾವ್‌ ಚೌಹಾಣ್‌, ಬಾಬು ಹೊನ್ನಾ ನಾಯಕ್‌ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೂ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ
ಸೇರ್ಪಡೆಗೊಂಡು ಮಲ್ಲಿಕಾರ್ಜುನ ಖರ್ಗೆ ಅವರ ಪರ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷ ಸುಭಾಸ್‌ ರಾಠೊಡ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಕ್ಷೇತ್ರದಲ್ಲಿ ಲಂಬಾಣಿ ಸಮುದಾಯ ಹೆಚ್ಚಿರುವುದರಿಂದ ಅವರಿಗೇ ಟಿಕೆಟ್‌ ನೀಡಿದರೆ ಗೆಲ್ಲುವುದು ಸುಲಭ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ಸುನೀಲ್‌ ವಲ್ಯಾಪುರೆ ಬಗ್ಗೆಯೂ ಪ್ರಸ್ತಾವ ಬಿಜೆಪಿಯಲ್ಲಿ ಟಿಕೆಟ್‌ ಸಿಗದೆ ಅಸಮಾಧಾನಗೊಂಡಿರುವ ಮಾಜಿ ಸಚಿವ ಸುನೀಲ್‌ ವಲ್ಯಾಪುರೆ ಅವರನ್ನು
ಕಾಂಗ್ರೆಸ್‌ಗೆ ಕರೆ ತರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ಯಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಉಪ ನಾವಣೆಯಲ್ಲಿ ಗೆಲ್ಲಲು ಬಿಜೆಪಿಯಲ್ಲಿ ಟಿಕೆಟ್‌ ಸಿಗದೆ ಅಸಮಾಧಾನಗೊಂಡಿರುವ ಸುನೀಲ್‌ ವಲ್ಯಾಪುರೆ ಅವರನ್ನು ಕರೆತಂದರೆ ಗೆಲವು ಸುಲಭವಾಗಲಿದೆ ಎಂದು ಪ್ರಸ್ತಾವಿಸಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕರೆತರುವುದರಿಂದ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಖರ್ಗೆ-ಖಂಡ್ರೆ ಪೈಪೋಟಿ
ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮವರೇ ಅಭ್ಯರ್ಥಿಯಾಗಬೇಕೆನ್ನುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ನಡುವೆ ಮುಸುಕಿನ ಪೈಪೋಟಿ ನಡೆಯಿತು.

ಚಿಂಚೋಳಿ ವಿಧಾನಸಭಾ ಕ್ಷೇತ್ರ ಕಲಬುರಗಿ ಜಿಲ್ಲೆಯಲ್ಲಿದ್ದರೂ ಬೀದರ್‌ ಲೋಕಸಭಾ ಚುನಾವಣ ವ್ಯಾಪ್ತಿಗೆ ಬರುವುದರಿಂದ ಈಶ್ವರ್‌ ಖಂಡ್ರೆ ತಮ್ಮ ಆಪ್ತ ಜೈಸಿಂಗ್‌ ರಾಠೊಡ್‌ ಅವರಿಗೆ ಟಿಕೆಟ್‌ ಕೊಡಿಸಲು ಪ್ರಯತ್ನ ನಡೆಸಿದ್ದರು. ಆದರೆ ರಾಜ್ಯ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರು ಸೂಚಿಸಿದ ವ್ಯಕ್ತಿಗೆ ಟಿಕೆಟ್‌ ಕೊಡಲು ನಿರ್ಧರಿಸಿ ರುವುದರಿಂದ ಸುಭಾಸ್‌ ರಾಠೊಡ್‌ಗೆ ಅವಕಾಶ ದೊರೆಯುವಂತಾಯಿತು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next