Advertisement

ಉಪ ಚುನಾವಣೆ: ನೀತಿ ಸಂಹಿತೆ ಜಾರಿ

12:25 PM Mar 10, 2017 | Team Udayavani |

ಮೈಸೂರು: ನಂಜನಗೂಡು ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆ ಯಲ್ಲಿ ಜಿಲ್ಲೆಯಲ್ಲಿ ಮಾ. 9ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್‌ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ತಮ್ಮನ್ನು ಸೇರಿದಂತೆ ಚುನಾವಣಾ ಕೆಲಸಕ್ಕೆ ನಿಯೋಜನೆಯಾದ ಅಧಿಕಾರಿ ಗಳನ್ನು ಬರ ಪರಿಹಾರ ಕಾಮಗಾರಿ, ಬರ ಪರಿಹಾರಕ್ಕೆ ಸಂಬಂಧಿಸಿದ ಪರಿಶೀಲನಾ ಸಭೆ ಹೊರತುಪಡಿಸಿ ಬೇರಾವುದೇ ಸಭೆ, ಸಮಾರಂಭ ಗಳಿಗೆ ಕರೆಯುವಂತಿಲ್ಲ ಎಂದು ಹೇಳಿದರು.

2016ರ ಏಪ್ರಿಲ್‌ನಲ್ಲಿ ಕೇಂದ್ರ ಚುನಾವಣಾ ಆಯೋಗ ಹೊಸದಾಗಿ ಚುನಾವಣಾ ವೆಚ್ಚ ನಿಗದಿ ಪಡಿಸಿದ್ದು, ವಿಧಾನಸಭಾ ಚುನಾವಣೆಗೆ 28 ಲಕ್ಷ ರೂ. ವೆಚ್ಚ ನಿಗದಿ ಪಡಿಸಲಾಗಿದೆ. ಒಂದೆರಡು ದಿನಗಳಲ್ಲಿ ಕೇಂದ್ರ ಚುನಾವಣಾ ಆಯೋಗ ಕ್ಷೇತ್ರಕ್ಕೆ ಚುನಾವಣಾ ವೀಕ್ಷಕರನ್ನು ನೇಮಕ ಮಾಡಲಿದೆ ಎಂದರು.

236  ಮತಗಟ್ಟೆಗಳ ಸ್ಥಾಪನೆ: ಕ್ಷೇತ್ರ ದಲ್ಲಿ 1,01,267 ಪುರುಷ ಮತ್ತು 99,231 ಮಹಿಳಾ ಹಾಗೂ 8 ಸೇವಾ ಮತದಾರರು ಸೇರಿದಂತೆ ಒಟ್ಟಾರೆ 2,00,506 ಮತದಾರರಿದ್ದಾರೆ. ಕ್ಷೇತ್ರದಲ್ಲಿ 236 ಮತಗಟ್ಟೆಗಳಿದ್ದು, ಈ ಪೈಕಿ 72 ಅತಿಸೂಕ್ಷ್ಮ, 124 ಸೂಕ್ಷ್ಮ ಹಾಗೂ 40 ಸಾಮಾನ್ಯ ಮತಗಟ್ಟೆಗಳೆಂದು ವಿಂಗಡಿಸಲಾಗಿದೆ.

ಹೆಚ್ಚು ಮತದಾರರು ಕಂಡು ಬಂದರೆ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು. ಚುನಾವಣೆ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ ಸಿ ಪರೀಕ್ಷೆ ಎದುರಾಗುವುದರಿಂದ ಸುಮಾರು 20 ಮತಗಟ್ಟೆಗಳು ಈ ಪರೀûಾ ಕೇಂದ್ರಗಳಲ್ಲಿ ಬರುವುದರಿಂದ ಈ ಮತಗಟ್ಟೆಗಳನ್ನು ಸ್ಥಳಾಂತರಿಸಬೇಕೇ ಎಂಬ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

Advertisement

ಬಿಗಿ ಬಂದೋಬಸ್ತ್: ಇಬ್ಬರು ಡಿಸಿಪಿ, ಆರು ಮಂದಿ ಸಿಪಿಐ, 24 ಪಿಎಸ್‌ಐ, 50 ಎಎಸ್‌ಐ, 133 ಮುಖ್ಯಪೇದೆ, 160 ಪೇದೆಗಳು, 300 ಎಚ್‌.ಜಿ ಜತೆಗೆ 5 ಕೆಎಸ್‌ಆರ್‌ಪಿ ತುಕಡಿ, 14 ಡಿಎಆರ್‌, 1 ಸಿಪಿಎಂಎಫ್ ತುಕಡಿಗಳನ್ನು ಚುನಾವಣೆ ಬಂದೋಬಸ್ತ್ಗೆ ಬಳಸಿಕೊಳ್ಳಲಾಗುವುದು ಎಂದರು. ಜತೆಗೆ ಚುನಾವಣಾ ಬಂದೋಬಸ್ತ್ಗಾಗಿ ಅರೆ ಸೇನಾಪಡೆಯನ್ನು ಕರೆಸಲು ನಿರ್ಧರಿಸಲಾಗಿದ್ದು, ಎಷ್ಟು ಕಂಪನಿಗಳನ್ನು ಕರೆಸಬೇಕು ಎಂಬುದನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜತೆಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ನೀತಿ ಸಂಹಿತೆ ಜಾರಿ ಸಂಬಂಧ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ತಂಡ ರಚಿಸಲಾಗಿದ್ದು, ಮೈಸೂರು ಮತ್ತು ಹುಣಸೂರು ಉಪ ವಿಭಾಗಾಧಿಕಾರಿಗಲು ಈ ತಂಡದ ಸದಸ್ಯರಾಗಿರುತ್ತಾರೆ. ಜತೆಗೆ ನಂಜನಗೂಡು ತಾಲೂಕಿನ ತಹಶೀಲ್ದಾರ್‌, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ, ನಗರಸಭೆ ಪೌರಾ ಯುಕ್ತರು, ಆರಕ್ಷಕ ವೃತ್ತ ನಿರೀಕ್ಷಕರು, ಪಿಡಿಒಗಳು ತಂಡದ ಸದಸ್ಯರಾಗಿರುತ್ತಾರೆ.

ಇಂದು ಚುನಾವಣಾಧಿಕಾರಿಗಳೊಂದಿಗೆ ಸಭೆ: ಉಪ ಚುನಾವಣೆ ನಡೆಯುವ ನಂಜನಗೂಡಿಗೆ ಯಾವುದೇ ಮಂತ್ರಿಗಳು ಸರ್ಕಾರಿ ಕಾರ್ಯಕ್ರಮ ಹಾಗೂ ಚುನಾವಣಾ ಕಾರ್ಯವನ್ನು ಒಟ್ಟಿಗೆ ಜೋಡಿಸಿಕೊಂಡು ಬರುವಂತಿಲ್ಲ. ಚುನಾವಣಾ ಪ್ರಚಾರಕ್ಕೆ ಸರ್ಕಾರಿ ವಾಹನ ಬಳಸುವಂತಿಲ್ಲ. ಹಾಗೊಂದು ವೇಳೆ ಬಳಸಿದ್ದು ಕಂಡುಬಂದಲ್ಲಿ ವಶಕ್ಕೆ ಪಡೆದುಕೊಳ್ಳಲಾಗುವುದು ಎಂದರು.

ಈಗಾಗಲೇ ಸರ್ಕಾರಿ ಅತಿಥಿಗೃಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಅಲ್ಲಿ ಯಾವುದೇ ರಾಜಕೀಯ ಸಭೆಗಳನ್ನು ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವ ಸಂಬಂಧ ಶುಕ್ರವಾರ ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌, ಡಿಸಿಪಿ ರುದ್ರಮುನಿ ಸುದ್ದಿಗೋಷ್ಠಿಯಲ್ಲಿದ್ದರು.

ಏ.13ಕ್ಕೆ ಮತ ಎಣಿಕೆ
ಮಾ.14ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದ 21ರ ವರೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ (ಮಾ.19ರ ಭಾನುವಾರ ಹೊರತು ಪಡಿಸಿ) ನಂಜನಗೂಡಿನ ಚುನಾವಣಾಧಿಕಾರಿಗಳಿಗೆ ಉಮೇದುವಾರಿಕೆ ಸಲ್ಲಿಸಬಹುದಾಗಿದೆ. 22ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮಾ.24 ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ. ಏ.9ರಂದು ಮತದಾನ ನಡೆಯಲಿದ್ದು, 13ರಂದು ಮತಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next