Advertisement
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರೊಬ್ಬರು ಕಡೂರು ತಾಲೂಕಿನಲ್ಲಿರುವ ತಮ್ಮ ಜಮೀನಿನ ಸರ್ವೆ ವಿಚಾರಕ್ಕೆ ಸಂಬಂಧಿಸಿದ ಮನವಿ ಸಲ್ಲಿಸಿದರು. ಆಗ ಸಭೆಗೆ ಕಡೂರು ತಾಲೂಕು ಎಡಿಎಲ್ ಆರ್ ಬಾರದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಡಿಡಿಎಲ್‌ಆರ್ ಅವರನ್ನು ಪ್ರಶ್ನಿಸಿದರು. ಆಗ ಅವರು ಕಡೂರು ಎಡಿಎಲ್‌ಆರ್ ಅವರು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಪ್ರಭಾರವನ್ನೂ ಹೊಂದಿದ್ದು, ಇಂದು ಅಲ್ಲಿಗೆ ಕರ್ತವ್ಯಕ್ಕೆ ಹೋಗಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಮೊದಲು ನಮ್ಮ ಜಿಲ್ಲೆಯ ಕೆಲಸ. ಆಮೇಲೆ ಬೇರೆಯದು. ಇಲ್ಲಿಯೇ ಸಾಕಷ್ಟು ಸಮಸ್ಯೆ ಇದೆ. ಇಂದು ಸಭೆಗೆ ಬರುವಂತೆ ನೋಟಿಸ್ಕೊಟ್ಟಿದ್ದರೂ ಏಕೆ ಬಂದಿಲ್ಲ ಎಂದು ಪ್ರಶ್ನಿಸಿದರು.
Related Articles
Advertisement
ಕಳೆದ 30 ವರ್ಷದಿಂದ ಬೆಳೆವಿಮೆ ಕಟ್ಟಿದ್ದೀನಿ ಎರಡು ವರ್ಷದಿಂದ ವಿಮೆ ಕೈಗೆ ಸಿಗುತ್ತಿಲ್ಲ. ಕೆರೆಕಟ್ಟೆ ಒಣಗಿ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಕಸಬಾ ಹೋಬಳಿಗೆ ಬೆಳೆ ವಿಮೆ ಕಡ್ಡಾಯಗೊಳಿಸುವುದು ಸರಿಯಲ್ಲ. ನಾವು ಬೆಳೆವಿಮೆ ಕಟ್ಟುವುದಿಲ್ಲ. ಪಹಣಿಯಲ್ಲಿ ಎಸ್.ಶಿವಪ್ಪ ಎಂದಾಗಬೇಕಿದ್ದು, ಬಿ.ಶಿವಪ್ಪ ಎಂದಾಗಿದೆ. ಬಿ. ಅಕ್ಷರ ತೆಗೆಯಲು ಎಷ್ಟು ದಿನ ಬೇಕು ಎಂದು ಜಿಲ್ಲಾಧಿಕಾರಿಗಳನ್ನೆ ಪ್ರಶ್ನಿಸಿದರು.
ನರಿಗುಡ್ಡನಹಳ್ಳಿಯಲ್ಲಿ ಖಾಸಗಿ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ಪಾತ್ರೆ ಇನ್ನಿತರೆ ವಸ್ತುಗಳನ್ನು ಮಾರಾಟ ಮಾಡಿ ಹಲವು ವರ್ಷಗಳಿಂದ ಜೀವನ ಸಾಗಿಸುತ್ತಿರುವ ಅಲೆಮಾರಿಗಳಿಗೆ ನಿವೇಶನ ನೀಡುವಂತೆ ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ತರೀಕೆರೆ ವೆಂಕಟೇಶ್ ಕೋರಿದರು. ಈ ಜನಾಂಗದ ಮಕ್ಕಳು ದಂಟರಮಕ್ಕಿ ಶಾಲೆಗೆ ಹೋಗುತ್ತಿದ್ದಾರೆ. ಮತ್ತೆ ಕೆಲವರ ಮಕ್ಕಳು ಅಂಗನವಾಡಿಗೆ ತೆರಳುತ್ತಿದ್ದಾರೆ. ಇಪ್ಪತ್ತು ವರ್ಷಗಳಿಂದ 15 ಕುಟುಂಬಗಳು ಜೀವನ ನಡೆಸುತ್ತಿವೆ. ಇವರು ಎಳವರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆಂದು ಮಾಹಿತಿ ನೀಡಿದರು.
ನಿವೇಶನ ಪಡೆದುಕೊಂಡಮೇಲೆ ಸಾವಿರಾರು ರೂ. ಗಳಿಗೆ ಮಾರಾಟ ಮಾಡಿ ಹೋಗಬೇಡಿ ಎಂದು ಸಲಹೆ ನೀಡಿದ ಜಿಲ್ಲಾಧಿಕಾರಿಗಳು ಮಲ್ಲೇದೇವಿಹಳ್ಳಿಯಲ್ಲಿ ಗ್ರಾಮಠಾಣಾ ಜಾಗ ಗುರುತಿಸಿ ಫಲಾನುಭವಿಗಳ ಪಟ್ಟಿ ತಯಾರಿಸಿಕೊಂಡು ಬರುವಂತೆ ರಾಜಸ್ವ ನಿರೀಕ್ಷಸತ್ಯನಾರಾಯಣ ಅವರಿಗೆ ಸೂಚಿಸಿದರು. 50 ಜನರಿಗೆ ಮಾಸಾಶನವಿಲ್ಲ: ಅಂಗವಿಕಲ ಮತ್ತು ಸಂಧ್ಯಾ ಸುರಕ್ಷೆ ಯೋಜನೆಯಡಿ ಮಾಸಾಸನ ನೀಡುವಂತೆ ಆವತಿಯ ದಂಪತಿ ಬಿಳಿಗಮ್ಮ ಮತ್ತು
ಬಸಪ್ಪಶೆಟ್ಟಿ ಜಿಲ್ಲಾಧಿಕಾರಿಗಳನ್ನು ಕೋರಿದರು. ಜಿಲ್ಲಾ ಖಜಾನೆಯ ಸಹಾಯಕ ಖಜಾನಾಧಿಕಾರಿ ಮೋಹನ್ ದಾಸ್ ಮಾತನಾಡಿ, ಚಿಕ್ಕಮಗಳೂರು ತಾಲೂಕಿನ 50 ಜನರಿಗೆ ಜನವರಿ ತಿಂಗಳಿನಿಂದ ವಿವಿಧ ಮಾಸಾಶನಗಳು ಬರುತ್ತಿಲ್ಲ ಎಂಬ ಉತ್ತರ ನೀಡಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಈ ಕುರಿತು ತಮ್ಮ ಅಥವಾ ಅಪರ ಜಿಲ್ಲಾಧಿಕಾರಿಯ ಗಮನಕ್ಕೆ ತಾರದಿರುವ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಆಗಿರುವ ಸಮಸ್ಯೆ ಏನೆಂಬುದನ್ನು ತಮ್ಮ ಗಮನಕ್ಕೆ ತರುವಂತೆ ಸೂಚಿಸಿದರು. ನಿವೇಶನ ನೀಡುವುದಾಗಿ ಸಾವಿರಾರು ರೂಪಾಯಿ ಹಣಪಡೆದು ಸ್ಥಳೀಯ ಪಕ್ಷವೊಂದರ ಮುಖಂಡರೊಬ್ಬರು ವಂಚಿಸಿದ್ದಾರೆ. ಹಣ ಮರಳಿ ನೀಡುವಂತೆ ಕೇಳಿದರೆ ಗಲಾಟೆ ಮಾಡುತ್ತಾರೆಂದು ಇಂದಾವರ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ತಿಳಿಸಿದರು. ಹಣ ನೀಡದಿದ್ದರೆ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗೆ ದೂರು ನೀಡುವಂತೆ ಸಲಹೆ ನೀಡಿದರು. ಅಪರ ಜಿಲ್ಲಾಧಿಕಾರಿ ವೈಶಾಲಿ, ಉಪವಿಭಾಗಾಧಿಕಾರಿ ಸಂಗಪ್ಪ ಇದ್ದರು.