ಚಿಕ್ಕಬಳ್ಳಾಪುರ: ವಿಶ್ವ ವಿಖ್ಯಾತ ನಂದಿಗಿರಿ ಧಾಮ, ಸೆಲ್ಪಿ ಖ್ಯಾತಿಯ ಅವುಲುಬೆಟ್ಟ, ಟ್ರಕ್ಕಿಂಗ್ ಪ್ರಿಯರ ಮೋಹಕ ಸೆಲೆ ಸ್ಕಂದಗಿರಿ, ಸ್ವಾತಂತ್ರ್ಯ ಸೇನಾನಿಗಳ ವೀರಸೌಧ ವಿಧುರಾಶ್ವತ್ಥ, ರಾಜರು ಅಳಿದ ಗೋಮ್ಮನಾಯಕನಪಾಳ್ಯ, ಕೈವಾರ, ಕೈಲಾಸಗಿರಿ ಹೀಗೆ ಸಾಲು ಸಾಲು ಪ್ರವಾಸಿ ತಾಣಗಳನ್ನು ತನ್ನ ಒಡಲಲ್ಲಿಟ್ಟುಕೊಂಡು ಪ್ರವಾಸೋದ್ಯಮಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ದಶಕಗಳು ಕಳೆದರೂ ಕಾಯಂ ಉಪ ನಿರ್ದೇಶಕರು ಇಲ್ಲ.
ಹೌದು ದೇಶ, ವಿದೇಶಿಗರ ಗಮನ ಸೆಳೆದು ರಾಜ್ಯದ ಪ್ರವಾಸೋದ್ಯಮಕ್ಕೆ ಮುಕಟ ಪ್ರಾಯವಾಗಿ ರುವ ಐತಿಹಾಸಿಕ ನಂದಿಗಿರಿ ಧಾಮ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆ ಪ್ರವಾಸೋದ್ಯಮ ಇಲಾಖೆ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಲೋ ಏನು ದಶಕಗಳಿಂದ ನಾವಿಕ ನಿಲ್ಲದ ದೋಣಿಯಂತೆ ಅನ್ಯ ಇಲಾಖೆ ಅಧಿಕಾರಿಗಳ ಪ್ರಭಾರಿಯಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ಸೊರುಗುತ್ತಿರುವುದು ಎದ್ದು ಕಾಣುತ್ತಿದೆ.
ಸದ್ಭಳಕೆಯಾಗುತ್ತಿಲ್ಲ ಸರ್ಕಾರಿ ಅನುದಾನ: ಮೊದಲೇ ತೋಟಗಾರಿಕೆ, ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಮನ್ವಯತೆಯ ಕೊರತೆಯಿಂದ ಮೂಲ ಸೌಕರ್ಯಗಳು ಸಮರ್ಪಕವಾಗಿ ಇಲ್ಲದೇ ಐತಿಹಾಸಿಕ ನಂದಿಗಿರಿಧಾಮ ದಿನೇ ದಿನೆ ತನ್ನ ಪ್ರಾಕೃತಿಕ ಮೂಲ ಸೊಬಗನ್ನು ಕಳೆದು ಕೊಳ್ಳುತ್ತಿದೆ. ಜಿಲ್ಲೆಯಲ್ಲಿನ ಅನೇಕ ಪ್ರವಾಸೋದ್ಯಮ ತಾಣಗಳು ಸಹ ಇಲಾಖೆಗೆ ಕಾಯಂ ಅಧಿಕಾರಿಗಳು ಇಲ್ಲದ ಕಾರಣದಿಂದ ಅಭಿವೃದ್ಧಿಗೆ ಪ್ರತಿ ವರ್ಷ ಸರ್ಕಾರಗಳು ಬಿಡುಗಡೆ ಮಾಡುವ ಕೋಟ್ಯಂತರ ರೂ. ಅನುದಾನ ಸಮರ್ಪಕವಾಗಿ ಸದ್ಭಳಕೆಯಾಗದೇ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಜೇಬು ತುಂಬುವಂತಾಗಿದೆ. ದಕ್ಷಿಣ ಕರ್ನಾಟಕದ ಊಟಿ ಎಂದು ಪ್ರಸಿದ್ಧ ಪಡೆದಿರುವ ಪ್ರೇಮಿಗಳ ಪಾಲಿಗೆ ಸ್ವರ್ಗವಾಗಿ ಪರಿಸರ ಪ್ರಿಯರ ಅಚ್ಚುಮೆಚ್ಚಿನ ತಾಣವಾಗಿರುವ ನಂದಿಗಿರಿಧಾಮ ಬರೀ ಪ್ರವಾಸಿ ತಾಣವಾಗದೇ ಅನೇಕ ಐತಿಹಾಸಿಕ ಕುರುಹುಗಳನ್ನು ಹೊಂದಿದೆ. ರಾಜಧಾನಿ ಬೆಂಗಳೂರಿಗೆ ಹತ್ತಿರವಿರು ವುದರಿಂದ ಪ್ರತಿ ಶನಿವಾರ, ಭಾನುವಾರ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಗಿರಿಧಾಮದ ತುದಿ ಮುಟ್ಟುತ್ತಾರೆ. ಪ್ರವಾಸೋದ್ಯಮ ಇಲಾಖೆ ಬೇಜವಾಬ್ದಾರಿತನದಿಂದ ಅಲ್ಲಿ ಮೂಲ ಸೌಕರ್ಯಗಳ ಕೊರತೆ ಉಂಟಾಗಿದೆ.
ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಬರವಿಲ್ಲ: ಹೇಳಿ ಕೇಳಿ ಚಿಕ್ಕಬಳ್ಳಾಪುರ ಬರದ ಜಿಲ್ಲೆಯಾದರೂ ಪ್ರವಾಸೋದ್ಯಮಕ್ಕೆ ಯಾವುದೇ ಬರ ಇಲ್ಲ. ನಾಡಿನ ಭವ್ಯವಾದ ಕಲೆ, ಸಂಸ್ಕೃತಿ, ಶಿಲ್ಪ ಕಲೆಗಳನ್ನು ಸಾರುವ ಭೋಗನಂದೀಶ್ವರ, ಯೋಗನಂದೀಶ್ವರ, ಕೈವಾರದ ಬೀಮಲಿಂಗೇಶ್ವರ ದೇಗುಲಗಳು, ಕಲ್ಯಾಣಿಗಳು, ಬಾಗೇ ಪಲ್ಲಿ ಗುಮ್ಮನಾಯಕಪಾಳ್ಯ, ಚಿಂತಾಮಣಿ ಕೈಲಾಸಗಿರಿ, ಅಲಂಬಗಿರಿ, ಗೌರಿಬಿದನೂರು ವಿದು ರಾಶ್ವತ್ಥ, ಚಿಕ್ಕ ಬಳ್ಳಾಪುರದ ಅವುಲುಬೆಟ್ಟ ಹೀಗೆ ಸಾಕಷ್ಟು ಪ್ರವಾಸಿ ತಾಣಗಳು, ಜೀವ ವೈವಿದ್ಯತೆಯ ಪರಿಸರ ವನ್ನು ಒಳಗೊಂಡ ಬೆಟ್ಟಗುಡ್ಡಗಳು ಪ್ರವಾಸಿ ಕೇಂದ್ರ ಗಳಿಗೆ ಹೇಳಿ ಮಾಡಿಸಿ ದಂತೆ ಇದೆ. ಆದರೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಕಾಯಂ ಅಧಿಕಾರಿಗಳು ಇಲ್ಲದೆ ಜತೆಗೆ ಜಿಲ್ಲಾ ಡಳಿತ ಹಾಗೂ ಜಿಲ್ಲೆಯ ಚುನಾ ಯಿತ ಜನಪ್ರತಿನಿಧಿಗಳ ಅಸಡ್ಡೆಯಿಂದ ಜಿಲ್ಲೆಯ ಪ್ರವಾಸೋದ್ಯಮ ಮುಂಚೂಣಿಗೆ ಬರದೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಗೈಡ್‌ಗಳಿಗೆ ಕೊಡಲು ಹಣ ಇಲ್ಲವಂತೆ: ನಂದಿಗಿರಿ ಧಾಮದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರವಾಸೋದ್ಯಮ ಇಲಾಖೆ ಗೈಡ್‌ಗಳನ್ನು ನೇಮಿಸಿಲ್ಲ. ಈ ಬಗ್ಗೆ ಹಲವಾರು ಬಾರಿ ಪ್ರವಾಸೋದ್ಯಮ ಇಲಾಖೆಗೆ ಗಮನಕ್ಕೆ ತರಲಾಗಿದೆ. ಆದರೂ ಗೈಡ್‌ಗಳನ್ನು ನೇಮಿಸಿಲ್ಲ. ಎರಡು ವರ್ಷಗಳ ಹಿಂದೆ 50 ಮಂದಿಗೆ ನಂದಿಗಿರಿಧಾಮದಲ್ಲಿ ಕಾರ್ಯನಿರ್ವಹಿಸಲು ಗೈಡ್ ತರಬೇತಿ ನೀಡಲಾಗಿತ್ತು. ಆದರೆ ಅವರಿಗೆ ಸಂಭಾವನೆ ಕೊಡಲು ಇಲಾಖೆಯಲ್ಲಿ ಅನುದಾನದ ಕೊರತೆ ಯಿಂದ ಆ ಕಾರ್ಯವನ್ನು ಕೈಬಿಟ್ಟವು ಎಂದು ಜಿಲ್ಲೆ ಪ್ರವಾಸೋದ್ಯಮ ಇಲಾಖೆ ಯನ್ನು ಉಪ ನಿರ್ದೇಶಕರಾಗಿ ಪ್ರಭಾರಿಯಾಗಿ ಕಾರ್ಯನಿರ್ವಹಿಸಿ ಸೋಮವಾರ ವಷ್ಟೆ ಜಿಲ್ಲೆಯಿಂದ ವರ್ಗಾವಣೆ ಗೊಂಡಿರುವ ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕ ವಿ.ಅಜ್ಜಪ್ಪ ಉದಯವಾಣಿಗೆ ತಿಳಿಸಿದರು. ಪ್ರವಾಸೋದ್ಯಮ ಇಲಾಖೆಯಲ್ಲಿ ಪ್ರವಾಸಿ ಮಿತ್ರ ಎಂದು ಹಲವರನ್ನು ಗೈಡ್‌ಗಳಾಗಿ ನೇಮಿಸಲಾಗಿದೆ. ಆದರೆ ನಂದಿಗಿರಿ ಧಾಮಕ್ಕೆ ಯಾರನ್ನು ಇಲಾಖೆ ನೇಮಿಸಿಲ್ಲ ಎಂದರು.
ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶಗಳು ಇದ್ದರೂ ಇಂದು ಪ್ರವಾಸಿ ತಾಣಗಳು ಮೂಲ ಕರ್ಯಗಳು ಇಲ್ಲದೇ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ಜಿಲ್ಲೆಗೆ ಬರುವ ಪ್ರವಾಸಿಗ ರಲ್ಲಿ ಬೇಸರ ಉಂಟು ಮಾಡುತ್ತಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಜಿಲ್ಲೆಯ ಪ್ರವಾಸೋ ದ್ಯಮದ ಪುನಶ್ಚೇತನಕ್ಕಾಗಿ ವಿಶೇಷ ಆಸಕ್ತಿ ವಹಿಸಬೇಕಿದೆ.
ನಂದಿ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಆಗುತ್ತಾ?
ಈಗಾಗಲೇ ನಂದಿಗಿರಿಧಾಮಕ್ಕೆ ಕೇಬಲ್ ಕಾರ್ ಅಳವಡಿಸುವ ಮಹತ್ವಕಾಂಕ್ಷಿ ಯೋಜನೆ ಇದೆ. ಈ ಭಾಗದ ಸಂಸದ ಎಂ.ವೀರಪ್ಪ ಮೊಯ್ಲಿ ನಂದಿಗಿರಿಧಾಮದ ಸಮಗ್ರ ಅಭಿವೃದ್ಧಿಗೆ ನಂದಿ ಪ್ರಾಧಿಕಾರ ರಚನೆ ಮಾಡುತ್ತೇವೆ. ಅದನ್ನು ನಮ್ಮ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದೇವೆಂದು ಸಿಕ್ಕಸಿಕ್ಕ ಸಭೆ, ಸಮಾರಂಭಗಳಲ್ಲಿ ಹೇಳುತ್ತಿದ್ದಾರೆ. ಇತ್ತೀಚೆಗೆ ಗಿರಿಧಾಮಕ್ಕೆ ಭೇಟಿ ನೀಡಿದ್ದ ತೋಟಗಾರಿಕಾ ಸಚಿವ ಎಂ.ಸಿ.ಮನಗೊಳಿ ಗಿರಿಧಾಮದ ನಿರ್ವಹಣೆಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಹೀಗಾಗಿ ಮೈತ್ರಿ ಸರ್ಕಾರದಲ್ಲಾದರೂ ನಂದಿಗಿರಿಧಾಮದ ಅಭಿವೃದ್ಧಿಗೆ ನಂದಿ ಪ್ರಾಧಿಕಾರ ರಚನೆ ಆಗುತ್ತಾ? ಎಂಬುದನ್ನು ಕಾದು ನೊಡಬೇಕಿದೆ
ಕಾಗತಿ ನಾಗರಾಜಪ್ಪ