ರಾಯಚೂರು: ಕಳೆದ ವರ್ಷ ನೆರೆಯಿಂದ 700 ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿದ್ದು, ಸಾಕಷ್ಟು ಗ್ರಾಮಗಳನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲಾಗಿದೆ.
ಈ ಬಾರಿಯೂ ನೆರೆ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವುದರ ಜತೆಗೆ ವಾಸ್ತು ಪೂಜೆಗೂ ಹಣ ನೀಡಿದೆ.
ಸಾಕಷ್ಟು ಕಡೆ ತಾವು ವಾಸಿಸುತ್ತಿದ್ದ ಹಳೆ ಊರುಗಳನ್ನು ತೊರೆಯಲು ಜನ ಒಪ್ಪಿಲ್ಲ. ಅದು ಕಷ್ಟದ ಕೆಲಸ ಕೂಡ. ಆದರೆ, ಅವರಿಗೆ ಸಮೀಪದಲ್ಲೇ ಸೂಕ್ತ ಭೂಮಿ ನಿಗದಿಪಡಿಸಿ, ಅಭಿವೃದ್ಧಿಪಡಿಸಿ ಮನೆ ಕಟ್ಟಿಕೊಡುವ ಕೆಲಸ ಸರಕಾರ ಮಾಡಲಿದೆ. ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ ಎಂದರು. ಈ ಬಾರಿಯೂ ಎ, ಬಿ ಮತ್ತು ಸಿ ಎಂದು ವರ್ಗೀಕರಿಸಿ ನೆರೆಪೀಡಿತರಿಗೆ ಪರಿಹಾರ ಕಲ್ಪಿಸಲಾಗುವುದು.
ಜಲಾಶಯಗಳ ಹಿನ್ನೀರು, ನದಿ ಪಾತ್ರದಲ್ಲಿ ನೆರೆಗೆ ತುತ್ತಾಗುವ ಗ್ರಾಮಗಳಿಗೆ ಆದ್ಯತೆ ನೀಡಲಾಗುವುದು. ತೀರ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಸ್ಥಳಾಂತರಿಸಲಾಗುವುದು. ನೆರೆಗೆ ಸಂಬಂಧಿಸಿ ಕಾಲಕಾಲಕ್ಕೆ ಸೂಕ್ತ ಮಾಹಿತಿ ಪಡೆದು ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು.
ಲಿಂಗಸೂಗೂರು ತಾಲೂಕಿನ ಕಡದರಗಡ್ಡೆ ಸ್ಥಳಾಂತರ ವಿಚಾರ ನ್ಯಾಯಾಲಯ ಹಂತದಲ್ಲಿದ್ದು, ಸರಕಾರಿ ವಕೀಲರಿಗೆ ಅದನ್ನು ಗಮನಿಸುವಂತೆ ತಿಳಿಸಲಾಗುವುದು. ಜಿಲ್ಲೆಯ ನೆರೆಪೀಡಿತ ಗ್ರಾಮಗಳ ಪುನರ್ವಸತಿ ಸಹಿತ ಇನ್ನಿತರ ಮಾಹಿತಿ ಪಡೆಯಲಾಗುವುದು ಎಂದರು.