ಹೊಸ ಹುದ್ದೆ, ಹೊಸ ಸ್ಥಳ ಇತ್ಯಾದಿ ಹೊಸ ತೆರವುಗಳನ್ನು ಕಂಡಾಗಲೆಲ್ಲ ಅನುಭವದ ಹೊಸ ಪಾಠಗಳು ಸಹಜ. ಈ ಹೆಜ್ಜೆಗಳಲ್ಲಿ ಒಂದಷ್ಟು ಖುಷಿಯ ಕ್ಷಣಗಳು ಎದುರಾದರೆ ಬಹುತೇಕ ಬಾರಿ ಕಹಿ ಘಟನೆಗಳೇ ನಮ್ಮನ್ನು ಸುತ್ತುವರಿಯುತ್ತವೆ. ಮೊದಲ ಬಾರಿಗೆ ಎಂದೂ ಕಂಡಿರದ ನಗರ ಪ್ರದೇಶಗಳಿಗೆ ಭೇಟಿ ಕೊಟ್ಟಾಗ ಕೆಲವು ಬುದ್ಧಿವಂತ ಜನರು ನಮ್ಮನ್ನು ವಂಚಿಸಲೆಂದೇ ಕಾದು ಕುಳಿತಿರುತ್ತಾರೆ. ಉದಾಹರಣೆಗೆ ಹೊಟೇಲ್, ಆಟೋ, ಅಂಗಡಿಗಳಲ್ಲಿ ಇತ್ಯಾದಿ ವ್ಯವಹಾರಿಕ ಸ್ಥಳಗಳಲ್ಲಿ ಈ ಘಟ್ಟದವರು ಚೌಕಾಸಿ ಮಾಡಿಯೇ ಮಾಡುತ್ತಾರೆ ಎಂದು ಎರಡು ಪಟ್ಟು ಮೊತ್ತವನ್ನು ಹೇಳಿ ಕಡೆಗೆ ಒಂದರ ಅರ್ಧ ಲಾಭವನ್ನು ಸಲೀಸಾಗಿ ಗಿಟ್ಟಿಸಿಕೊಳ್ಳುತ್ತಾರೆ. ಹೊಟೇಲ್‌ಗಳಲ್ಲಿ ಅಂತೂ ಚರ್ಚೆಗೆ ಇಳಿಯದೆ ಕ್ಯಾಶರ್ ಹೇಳಿದ ಮೊತ್ತವನ್ನೇ ತೆತ್ತು ಮುಂದೆ ಸಾಗುತ್ತಾರೆ. ಇದು ವ್ಯವಹಾರಿಕ ಚಾಣಾಕ್ಷತನವೋ ಅಥವಾ ಬದುಕಿನ ಕುತಂತ್ರವೋ ಅರಿಯುವುದು ಕಷ್ಟ.
ಇದೇ ರೀತಿಯ ಅನುಭವ ಕರಾವಳಿ ಸೇರಿದಂತೆ ಬೆಂಗಳೂರು, ಮೈಸೂರು ಭಾಗಗಳಿಗೆ ಹೋದಾಗ ನನಗಾಯಿತು. ಬೆಂಗಳೂರಿಗೆ ನನ್ನದು ಮೊದಲ ಭೇಟಿ ಇಲ್ಲಿ ಕಳೆದ ಕೆಲವು ವಾರದ ದಿನಗಳಲ್ಲಿ ನಂಬಿ ಮೂರ್ಖನಾಗಿದ್ದು ಮಾತ್ರ ಹಲವು ಬಾರಿ. ಕಾಲೇಜಿನ ಒಂದು ತಿಂಗಳ ರಜೆಯ ಮಧ್ಯ ಪತ್ರಿಕೋದ್ಯಮದ ಇಂಟರ್ನ್ಶಿಪ್‌ಗಾಗಿ ಒಂದು ಕನ್ನಡ ಪತ್ರಿಕೆಯನ್ನು ಆಯ್ಕೆ ಮಾಡಿಕೊಂಡಿದ್ದೆ.
ಈಗಾಗಲೇ ಎಂಟತ್ತು ದಿನಗಳನ್ನು ಇಲ್ಲಿ ಪೂರೈಸಿರುವುದರಿಂದ ಹೊಸ ಅನುಭವಗಳ ಮಹಾಪೂರ. ಈ ನಡುವೆ ಒಂದು ಕಾರ್ಯಕ್ರಮದ ನಿಮಿತ್ತ ಬೆಂಗಳೂರಿನಿಂದ ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾನಿಲಯ ಕಾಲೇಜಿಗೆ ತೆರಳಬೇಕಾಗಿ ಬಂತು. ಮೈಸೂರು ನನಗೆ ಪ್ರಾಕ್ಟಿಕಲ್ ಆಗಿ ಹೊಸ ಪ್ರಪಂಚ.
ಒಬ್ಬನೇ ಪ್ರಯಾಣಿಸುತ್ತಿದ್ದ ಕಾರಣ ಕಾಲೇಜು ತಲುಪಲು ಗೂಗಲ್ ಮ್ಯಾಪ್ ಒಂದೇ ನನ್ನ ಅಸ್ತ್ರ. ಆಗಾಗ ಮಿತ್ರನ ಮಾರ್ಗದರ್ಶನ. ಬಸ್ ಸ್ಟ್ಯಾಂಡ್ ತಲುಪಿದ ನನಗೆ ಕಾಲೇಜಿನ ರಾಣಿ ಬಹದ್ದೂರ್ ಸಭಾಂಗಣ ತಲುಪಬೇಕಿತ್ತು. ಊಟ ಮುಗಿಸಿ ಹೊಟೇಲ್‌ನಿಂದ ಹೊರ ಬರುತ್ತಿದ್ದಂತೆ, ಖಾಕಿ ಪಡೆಗಳಂತೆ ಆಟೋ ಚಾಲಕರ ದಂಡೆ ಹೊರಗೆ ನಿಂತಿತ್ತು. ಹೊಟೇಲ್‌ಗೆ ಬರುವ ಪ್ರಯಾಣಿಕರ ಸೀಟಿಗಾಗಿ ಚಾಲಕರು ಕಾಯುತ್ತಿದ್ದರೂ, ಮತ್ತೂಂದು ಕಡೆಯಲ್ಲಿ ಎದುರುಗಡೆ ತಿರುಗಾಡುವ ಪ್ರಯಾಣಿಕರ ಪೈಕಿ ಅಮಾಯಕರಂತೆ ಕಾಣುವ ಅಪರೂಪದ ಪ್ರಯಾಣಿಕರನ್ನು ವಂಚಿಸಲೆಂದೇ ಬರುವವರನ್ನೆಲ್ಲ ನೋಡುತ್ತಿದ್ದರು. ಈ ರೀತಿ ಆಗುತ್ತದೆ ಎಂದು ಮಿತ್ರ ಮೊದಲೇ ಮುನ್ಸೂಚನೆ ನೀಡಿದ್ದ. ಆದರೆ “ನಾನು ಓದಿಕೊಂಡಿರುವ ಹುಡುಗ ನನ್ನನ್ನು ಯಾರು ವಂಚಿಸುತ್ತಾರೆ’ ಎಂದು ಧೈರ್ಯವಾಗಿಯೇ ಇದ್ದೆ.
ನನಗೆ ಅಲ್ಲಿಂದ ಪ್ರಯಾಣಿಸಬೇಕೆಂದಿದ್ದು ಕೇವಲ ನಾಲ್ಕು ಕಿಲೋಮೀಟರ್ ಮಾತ್ರ. ಮಿತ್ರ ಕರೆ ಮಾಡಿ “ನೀನು ಮಂಗಳೂರು ಕಡೆ ಸಾಗುವ ಯಾವ ಬಸ್ಸನ್ನಾದರೂ ಹತ್ತಿಕೊಂಡು ಬಾ ಕಾಲೇಜು ಬಳಿ ಸ್ಟಾಪ್ ಕೊಡ್ತಾರೆ’ ಎಂದಿದ್ದ. ಆಟೋ ಚಾಲಕ ಅಷ್ಟೊತ್ತಿಗಾಗಲೇ ಮಾತಿನ ಮೋಡಿಯಿಂದ ನನ್ನನ್ನು ಮರಳು ಮಾಡಿಬಿಟ್ಟಿದ್ದ. 100 ಮೀ. ದೂರವಿರುವ ಬಸ್ ಸ್ಟ್ಯಾಂಡನ್ನು 2 ಕಿ.ಮೀ. ದೂರವಿದೆ, ಗೌರ್ಮೆಂಟ್ ಬಸ್ ಅಲ್ಲಿ ಸ್ಟಾಪ್ ಕೊಡಲ್ಲ, ಅಲ್ಲಿ ಟೈಮಿಗ್ ಸರಿಯಾಗಿ ಬಸ್ ಸಿಗಲ್ಲ, ಸಿಕ್ಕಿದರೂ ಅದು ದೂರದ ಮಾರ್ಗವಾಗಿ ಸುತ್ತಿ ಬಳಸಿ ಹೋಗುತ್ತದೆ ಇತ್ಯಾದಿ ಸುಳ್ಳುಗಳನ್ನು ಪುಂಖಾನು ಪುಂಖವಾಗಿ ಹೇಳಿ ನಂಬಿಸಿ ಆಟೋದಲ್ಲಿ ನನ್ನನ್ನು ಕೂರಿಸಿಕೊಂಡೇ ಬಿಟ್ಟ. ಎಲ್ಲೆಲ್ಲೂ ತಿರುಗಿ ಕಾಲೇಜು ಮುಂದೆ ಬಿಟ್ಟ. ಕೊನೆಗೆ ಪರ್ಸ್‌ನಿಂದ ಹಣ ಕೊಟ್ಟು ಗೇಟ್ ಒಳಗಡೆ ಬರುವಾಗ ಗೇಟ್ ಬಳಿ ಇದ್ದ ವಾಚ್ ಮ್ಯಾನ್ ನನ್ನ ನೋಡಿ ನಗುತ್ತಾ ಕೇಳಿದ “ಎಷ್ಟು ಕೊಟ್ರೀ ಸರ್?’. ತತ್‌ಕ್ಷಣ 150 ಎಂದ ನನಗೆ ಮೈಸೂರಿಗೆ ಹೊಸಬರೇ ನೀವು ಎಂದು ನಗಲಾರಂಭಿಸಿದ. ಒಟ್ಟಾರೆ ಆ ನಗುವಿನ ಸಾರಾಂಶವನ್ನು ಅಯ್ಯೋ ಎಂದು ವಿವರಿಸಿದಾಗಲೇ ನನಗೆ ಗೊತ್ತಾಗಿದ್ದು 12ರೂ. ಪ್ರಯಾಣಕ್ಕೆ 150ರೂ. ನೀಡಿ ವಂಚಿತನಾಗಿದ್ದೇನೆ ಎಂದು. ಆಟೋದವನು ಆಡಿದ ಐದು ನಿಮಿಷದ ಮಾತಿಗೆ 140 ಲಾಭ ಪಡೆದುಕೊಂಡಿದ್ದಾನೆ ಎಂದು.
ಹೀಗೆ ಪ್ರಯಾಣದುದ್ದಕ್ಕೂ ಕೊಂಚ ಅರಿವಿನ ಮತ್ತು ಹೊಸ ಒಬ್ಬಂಟಿ ಪ್ರಯಾಣವಾಗಿದ್ದರಿಂದ, 350ರೂ. ನಲ್ಲಿ ಮುಗಿಯಬೇಕಿದ್ದ ಪ್ರವಾಸ 680ರೂ. ನಲ್ಲಿ ಮುಗಿಸಬೇಕಾಯಿತು. ಕಡೆಗೂ ಕಾಡಿದ್ದೆಂದರೆ 130 ಕಿ.ಮೀ. ಗೆ ನೀಡಿದ್ದ 140ರೂ. ಗಿಂತ 2 ಕಿ. ಮೀ. ಗೆ 150 ಕೊಟ್ಟು ಮೋಸಕ್ಕೊಳಗಾದೆನಲ್ಲ ಎಂದು. ಈ ರೀತಿ ಅನುಭವಗಳು ಅನೇಕರ ಪ್ರಯಾಣದಲ್ಲಾಗಿರಬಹುದು. ಹಾಗಾಗಿ ವಂಚನೆಗೊಳಗಾಗುವ ಮುನ್ನ ಎಚ್ಚರದಿಂದಿರೋಣ. ಮರಳು ಮಾತಿಗೆ ಮಂಕಾಗದಿರೋಣ.
- ಅರವಿಂದ, ಎಸ್.ಡಿ.ಎಂ., ಉಜಿರೆ