Advertisement

government bus ವಂಚಿತ ಕೊಲ್ಲೂರು ಮಹಿಳಾ ಯಾತ್ರಿಕರಲ್ಲಿ ನಿರಾಸೆ!

12:38 AM Jun 25, 2023 | Team Udayavani |

ಕೊಲ್ಲೂರು: ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಇದ್ದರೂ ಕರಾವಳಿಯ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಕೊಲ್ಲೂರು ಮತ್ತು ಉಡುಪಿ ಜಿಲ್ಲೆಯ ಹಲವಾರು ದೇವಸ್ಥಾನಗಳಿಗೆ ಸರಕಾರಿ ಬಸ್‌ ಸಂಪರ್ಕವೇ ಇಲ್ಲದ ಕಾರಣ ಮಹಿಳೆಯರ ನಿರಾಸೆಗೆ ಕಾರಣವಾಗಿದೆ.

Advertisement

ಧರ್ಮಸ್ಥಳ, ಸುಬ್ರಹ್ಮಣ್ಯ, ಉಡುಪಿ ಮುಂತಾದೆಡೆ ಬಹಳಷ್ಟು ಸರಕಾರಿ ಬಸ್‌ಗಳು ಓಡಾಡುತ್ತವೆ. ಹಾಗಾಗಿ ರಾಜ್ಯದ ವಿವಿಧ ಜಿಲ್ಲೆಗಳ ಮಹಿಳೆಯ ಆ ಕ್ಷೇತ್ರಗಳಿಗೆ ಉಚಿತವಾಗಿ ಯಾತ್ರೆಗೈಯುತ್ತಿದ್ದಾರೆ. ಆದರೆ ಉಡುಪಿಯಿಂದ ಕೋಟ ಅಮೃತೇಶ್ವರಿ ದೇಗುಲ, ಮಂದಾರ್ತಿ, ಆನೆಗುಡ್ಡೆ, ಕೋಟೇಶ್ವರ, ಹಟ್ಟಿಯಂಗಡಿ, ಸೌಕೂರು, ಬಗ್ವಾಡಿ, ಮಾರಣಕಟ್ಟೆ ಹಾಗೂ ಕೊಲ್ಲೂರು, ಬೈಂದೂರು ಕ್ಷೇತ್ರಗಳಿಗೆ ತೆರಳುವ ಮಹಿಳೆಯರಿಗೆ ಸರಕಾರಿ ಬಸ್‌ಗಳ ಸೌಲಭ್ಯ ಇಲ್ಲ.
ಕೊಲ್ಲೂರು-ಧರ್ಮಸ್ಥಳ ನಡುವೆ ಇದ್ದ 2 ಕೆಎಸ್ಸಾರ್ಟಿಸಿ ಬಸ್‌ಗಳು ಮತ್ತು ಕೊಲ್ಲೂರು-ಮೈಸೂರು ನಡುವೆ ಇದ್ದ ಬಸ್‌ ಕೂಡ ರದ್ದಾಗಿದೆ. ಈ ಮಾರ್ಗವಾಗಿ ಉದ್ಯೋಗ ನಿಮಿತ್ತ ನಿತ್ಯ ಸಂಚರಿಸುವ ಮಹಿಳೆಯರು ಕೂಡ ಹಣ ತೆತ್ತು ಸಂಚರಿಸುವ ಅನಿವಾರ್ಯ ಎದುರಾಗಿದೆ.

ಹೆಚ್ಚುವರಿಗೆ ಬಸ್‌ಗೆ ಬೇಡಿಕೆ
ಉಚಿತ ಪ್ರಯಾಣದಿಂದ ವಂಚಿತರಾಗಿರುವ ಉಡುಪಿ ಜಿಲ್ಲೆಯ ಮಹಿಳಾ ಪ್ರಯಾಣಿಕರು ಹೆಚ್ಚುವರಿ ಸಾರಿಗೆ ಬಸ್‌ಗಳನ್ನು ಈ ಮಾರ್ಗವಾಗಿ ಸಂಚರಿಸಲು ಕ್ರಮ ಕೈಗೊಳ್ಳುವಂತೆ ಕೆಎಸ್ಸಾರ್ಟಿಸಿಯನ್ನು ಆಗ್ರಹಿಸಿದ್ದಾರೆ.

ಕನಿಷ್ಠ 8 ಸಾವಿರ ಯಾತ್ರಿಕರು
ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ಕೊಲ್ಲೂರು ಸಹಿತ ಉಡುಪಿ ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಸಾವಿರಾರು ಮಹಿಳಾ ಯಾತ್ರಾರ್ಥಿಗಳು ಆಗಮಿಸುತ್ತಾರೆ. ಅದರಲ್ಲೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ
ಪ್ರತೀ ದಿನ ಕನಿಷ್ಠ 8 ಸಾವಿರ ಭಕ್ತರು ಆಗಮಿಸುತ್ತಿದ್ದು, ಅವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು. ಉತ್ತರ ಕರ್ನಾಟಕದ ಅನೇಕ ಭಕ್ತರು ಸರಕಾರಿ ಬಸ್‌ಗಳಲ್ಲಿ ಉಡುಪಿಗೆ ಆಗಮಿಸಿ ಅಲ್ಲಿಂದ ಖಾಸಗಿ ಬಸ್‌ಗಳಲ್ಲಿ ವಿವಿಧ ದೇವಸ್ಥಾನಗಳಿಗೆ ತೆರಳುತ್ತಾರೆ. ಕೊಲ್ಲೂರಿಗೆ ಕೆಎಸ್ಸಾರ್ಟಿಸಿ ಬಸ್‌ ಇಲ್ಲದಿರುವುದರಿಂದ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.

ಕೊಲ್ಲೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಾಗಲು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಬಸ್‌ ಸೌಲಭ್ಯ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಬೈಂದೂರು ಕ್ಷೇತ್ರದಲ್ಲಿ ಸರಕಾರಿ ಬಸ್‌ ಸೌಲಭ್ಯ ಹೆಚ್ಚಿಸುವಂತೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು.
– ಗುರುರಾಜ ಗಂಟಿಹೊಳೆ, ಶಾಸಕರು, ಬೈಂದೂರು ಕ್ಷೇತ್ರ

Advertisement

ಹುಬ್ಬಳ್ಳಿಯಿಂದ ಉಡುಪಿ ತನಕ ಸರಕಾರಿ ಬಸ್‌ನಲ್ಲಿ ಬಂದೆವು. ಆದರೆ ಉಡುಪಿಯಿಂದ ಕೊಲ್ಲೂರಿಗೆ ಸಾಗಲು ಸರಕಾರಿ ಬಸ್‌ ಸೌಲಭ್ಯವಿಲ್ಲದಿರುವುದು ಶಕ್ತಿ ಯೋಜನೆಯ ಸೌಲಭ್ಯದಿಂದ ನಮ್ಮನ್ನು ವಂಚಿತರಾಗುವಂತೆ ಮಾಡಿದೆ. ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.
– ಸಿಂಗಾರಮ್ಮ,
ಹುಬ್ಬಳ್ಳಿ, ಪ್ರಯಾಣಿಕರು

Advertisement

Udayavani is now on Telegram. Click here to join our channel and stay updated with the latest news.

Next