Advertisement

ವಾಯುಭಾರ ಕುಸಿತ : ರಾಜ್ಯದ ಕೆಲವೆಡೆ ಅಕಾಲಿಕ ಮಳೆ

06:50 AM Feb 08, 2018 | Team Udayavani |

ಬೆಂಗಳೂರು: ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಏಕಕಾಲದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಬುಧವಾರ ರಾಜ್ಯದ ವಿವಿಧೆಡೆ ಅಕಾಲಿಕ ಮಳೆಯಾಗಿದ್ದು, ಗುರುವಾರ ಕೂಡ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

Advertisement

ಅರಬ್ಬೀ ಸಮುದ್ರದ ಮಾಲ್ಡವೀಸ್‌ನಿಂದ ಕರ್ನಾಟಕದ ಕರಾವಳಿವರೆಗೆ ವಾಯುಭಾರ ಕುಸಿತ ಕಂಡುಬಂದಿದೆ. ಅದೇ ರೀತಿ, ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಹಾಗೂ ಕರಾವಳಿಯ ಆಯ್ದ ಭಾಗಗಳಲ್ಲಿ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಎಸ್‌.ಎಂ. ಮೇತ್ರಿ ತಿಳಿಸಿದ್ದಾರೆ.

ಎರಡೂ ಕಡೆಗಳಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ರಾಜ್ಯದ ಬಹುಭಾಗ ಈ ಅಕಾಲಿಕ ಮಳೆಗೆ ಸಾಕ್ಷಿಯಾಗಿದೆ. ಗುರುವಾರ ಕೂಡ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಹಗುರವಾದ ಮಳೆ ಮತ್ತು ಮೋಡಕವಿದ ವಾತಾವರಣ ಇರಲಿದೆ. ಆದರೆ, ಉತ್ತರ ಒಳನಾಡಿನಲ್ಲಿ ಮಳೆ ಸಾಧ್ಯತೆ ತುಂಬಾ ಕಡಿಮೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಏರುತ್ತಿರುವ ಉಷ್ಣಾಂಶ ಕಾರಣ?
ಸಾಮಾನ್ಯವಾಗಿ ಚಳಿಗಾಲದಲ್ಲಿ ಅದರಲ್ಲೂ ಫೆಬ್ರವರಿಯಲ್ಲಿ ಮಳೆ ಆಗುವುದಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಉಷ್ಣಾಂಶದಲ್ಲಿನ ಏರಿಕೆ ಈ ಬೆಳವಣಿಗೆಗೆ ಕಾರಣವಾಗಿರಬಹುದು. ನಗರದಲ್ಲೇ ಕಳೆದ ಎರಡು-ಮೂರು ದಿನಗಳ ಅಂತರದಲ್ಲಿ ಚಳಿಗಾದಲ್ಲೂ ಗರಿಷ್ಠ ಉಷ್ಣಾಂಶ 30ರಿಂದ 31 ಡಿಗ್ರಿ ಸೆಲ್ಸಿಯಸ್‌ ಆಸುಪಾಸು ಇದೆ. ಹಾಗಂತಾ ಇದಕ್ಕೂ ಮತ್ತು ವಾಯುಭಾರ ಕುಸಿತಕ್ಕೂ ಸಂಬಂಧ ಇಲ್ಲ. ಸಮುದ್ರದ ಮೇಲಿನ ಬೆಳವಣಿಗೆಗಳಿಗೆ ಬೇರೆ ಬೇರೆ ಕಾರಣಗಳಿರಬಹುದು ಎಂದೂ ಮೇತ್ರಿ ತಿಳಿಸಿದ್ದಾರೆ.

ಈ ಮಧ್ಯೆ ಬೆಂಗಳೂರು, ರಾಮನಗರ, ಹುಬ್ಬಳ್ಳಿ-ಧಾರವಾಡ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತಿತರ ಕಡೆಗಳಲ್ಲಿ ಮಳೆಯಾಗಿದೆ. ಜತೆಗೆ ತಣ್ಣನೆಯ ಗಾಳಿ ಬೀಸುತ್ತಿರುವುದರಿಂದ ಚಳಿಯ ಅನುಭವ ಎಂದಿಗಿಂತ ತುಸು ಹೆಚ್ಚಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next