ಹುಬ್ಬಳ್ಳಿ: ಮಾನಸಿಕ ಖಿನ್ನತೆ ಸಾಮಾನ್ಯ ಕಾಯಿಲೆಯಾಗಿದ್ದು, ದಶಕದ ಹಿಂದೆ ಇದರ ಸ್ಥಾನ 10ಕ್ಕೆ ಇತ್ತು. ಇತ್ತೀಚೆಗೆ ಅದು 2ನೇ ಸ್ಥಾನಕ್ಕೆ ಬಂದಿದ್ದು, ಇದನ್ನು ಹೀಗೆ ಬಿಟ್ಟರೆ 2030ರಲ್ಲಿ ಮಾನಸಿಕ ಖಿನ್ನತೆ ಇನ್ನಿತರೆ ಕಾಯಿಲೆಗಳಿಗಿಂತ ಮೊದಲ ಸ್ಥಾನ ಪಡೆಯುವುದರಲ್ಲಿ ಸಂದೇಹವಿಲ್ಲವೆಂದು ಕಿಮ್ಸ್‌ನ ಮಾನಸಿಕ ಆರೋಗ್ಯ ವಿಭಾಗದ ಮುಖಿಯಸ್ಥ ಡಾ| ಮಹೇಶ ದೇಸಾಯಿ ಅಭಿಪ್ರಾಯಪಟ್ಟರು.
ಇಲ್ಲಿನ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾನಸಿಕ ಖಿನ್ನತೆ ವಿಷಯವಾಗಿ ಉಪನ್ಯಾಸ ನೀಡಿದರು. ವಿಶ್ವದಲ್ಲಿ 30 ಕೋಟಿ ಜನ ಖಿನ್ನತೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ 5 ಕೋಟಿಗೂ ಅಧಿಕ ಜನ ಇದರಿಂದ ಬಳಲುತ್ತಿದ್ದಾರೆ.
ವಿಶ್ವ ಮಾನಸಿಕ ಆರೋಗ್ಯ ಸಮೀಕ್ಷೆ ಪ್ರಕಾರ 20 ಜನರಲ್ಲಿ ಒಬ್ಬರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಮತ್ತು ವೃದ್ಧರಲ್ಲಿ ಇದು ಹೆಚ್ಚು ಕಂಡುಬರುತ್ತದೆ. ಚಿಕ್ಕ ಮಕ್ಕಳಲ್ಲೂ ಖಿನ್ನತೆ ಆಗುತ್ತಿದೆ. ಈ ಕಾಯಿಲೆಗೆ ವಯಸ್ಸಿನ ಇತಿಮಿತಿ ಇಲ್ಲ. ಕಾಯಿಲೆ ಬಗ್ಗೆ ಹೇಳಿಕೊಳ್ಳಲು, ಚಿಕಿತ್ಸೆ ಪಡೆದುಕೊಳ್ಳಲು ಸಂಕೋಚ ಪಡುತ್ತೇವೆ.
ಕಾಯಿಲೆ ಬಗ್ಗೆ ಕೀಳರಿಮೆ ಇರುವುದರಿಂದ ಇದರ ಬಗ್ಗೆ ಚರ್ಚೆಗಳು ಆಗುತ್ತಿಲ್ಲ. ಸಮಾಜದಲ್ಲಿ ಮನೋರೋಗಿಗಳನ್ನು ಅಸಡ್ಡೆಯಿಂದ ನೋಡಲಾಗುತ್ತದೆ. ಸಮಾಜದಲ್ಲಿನ ಅಜ್ಞಾನದಿಂದಾಗಿ ಖಿನ್ನತೆಗೊಳಗಾದವರನ್ನು ಬಲಿ ತೆಗೆದುಕೊಳ್ಳಲು ಆಸ್ಪದ ನೀಡಲಾಗುತ್ತಿದೆ. ಮಾನಸಿಕ ಖಿನ್ನತೆಯು ಆರೋಗ್ಯದ ಮೇಲೆ ಹಾಗೂ ಆತ್ಮಹತ್ಯೆಗೂ ಕಾರಣವಾಗಬಹುದು.
ಜಗತ್ತಿನಾದ್ಯಂತ 1.80 ಲಕ್ಷ ಜನ ಆತ್ಮಹತ್ಯೆಗೊಳಗಾಗುತ್ತಿದ್ದಾರೆ. ಸದ್ಯ ಹೃದಯಾಘಾತ, ಲಕ್ವಾ ಮೊದಲ ಸ್ಥಾನದಲ್ಲಿದ್ದರೆ, ಮುಂದಿನ ದಿನಗಳಲ್ಲಿ ಮಾನಸಿಕ ಖಿನ್ನತೆ ಮೊದಲ ಸ್ಥಾನ ಪಡೆಯಲಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನೇತ್ರತಜ್ಞ ಡಾ| ಎಂ.ಎಂ. ಜೋಶಿ, ಇಂದಿನ ಪಾಲಕರು ಮಕ್ಕಳಿಗೆ ಸಂಸ್ಕಾರ ಕಲಿಸುವುದು ಹಾಗೂ ಹಿರಿಯರಿಗೆ ಮಾತಿಗೆ ಬೆಲೆ ಕೊಡವುದು ಕಡಿಮೆಯಾಗಿದೆ.
ನಮ್ಮ ಸಂಸ್ಕಾರ ಮರೆಯುತ್ತಿರುವುದರಿಂದಲೇ ವೃದ್ಧಾಶ್ರಮಗಳು ಸ್ಥಾಪನೆಯಾಗುತ್ತಿವೆ. ಇದನ್ನು ಬಿಟ್ಟು ಹಿರಿಯರನ್ನು ಆಧರದಿಂದ ಉಪಚರಿಸಬೇಕು. ಗೌರವಿಸಬೇಕು. ಅವರ ಅನುಭವ ಪಡೆದುಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ| ಎಸ್.ಎಸ್. ಹಿರೇಮಠ, ಡಾ| ಆರ್.ಎನ್. ಜೋಶಿ ಅವರಿಗೆ ಜೀವಮಾನದ ಶ್ರೇಷ್ಠ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ರೆಡ್‌ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಾ| ಜಿ.ಆರ್. ತಮಗೊಂಡಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ಕೆಎಲ್‌ಇ ಆಸ್ಪತ್ರೆಯ ನಿರ್ದೇಶಕ ಡಾ| ಎಂ.ವಿ. ಜಾಲಿ ಉಪನ್ಯಾಸ ನೀಡಿದರು. ಡಾ| ವಿ.ಬಿ. ನಿಟಾಲಿ ಸ್ವಾಗತಿಸಿದರು. ಸುರೇಶ ಹೊರಕೇರಿ ನಿರೂಪಿಸಿದರು. ಡಾ| ಪಿ.ಎನ್. ಬಿರಾದಾರ ವಂದಿಸಿದರು.