Advertisement

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ

06:55 AM Sep 17, 2017 | Team Udayavani |

ಮಂಗಳೂರು/ಉಡುಪಿ: ಅರಬ್ಬಿ ಸಮುದ್ರ ದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಶುಕ್ರವಾರ ತಡರಾತ್ರಿಯಿಂದಲೇ ಮಳೆಯಾಗಿದ್ದು, ಶನಿವಾರ ದಿನವಿಡೀ ಧಾರಾಕಾರ ಮಳೆ ಸುರಿದಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸಹಿತ ಕರಾವಳಿ ಭಾಗದಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆ ಸುರಿಯುವ ಸಂಭವವಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ಅಲ್ಲಲ್ಲಿ ಹಾನಿ ಆಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 

Advertisement

ಮಂಗಳೂರಿನಲ್ಲಿ ಶುಕ್ರವಾರ ತಡರಾತ್ರಿ ಬಳಿಕ ಸುರಿದ ಮಳೆ ಶನಿವಾರ ದಿನವಿಡೀ ಮುಂದುವರಿಯಿತು. ನಗರ ಮತ್ತು ಹೊರವಲಯದಲ್ಲಿ ಉತ್ತಮ ವರ್ಷಧಾರೆಯಾಗಿದೆ. ಕೊಡಿಯಾಲ್‌ಬೈಲ್‌, ಬಿಜೈ, ಅತ್ತಾವರ ಮೊದಲಾದ ಕಡೆಗಳಲ್ಲಿ ಕೃತಕ ನೆರೆ ಉಂಟಾಗಿದ್ದು, ಟಾಗೋರ್‌ ಪಾರ್ಕ್‌ ಬಳಿ ಕಟ್ಟಡದ ಆವರಣ ಗೋಡೆ ಕುಸಿದು ನಿಂತಿದ್ದ ಮೂರು ಕಾರುಗಳಿಗೆ ಹಾನಿಯಾಗಿದೆ. 

ಪುರಭವನ ಬಳಿ ನೂತನವಾಗಿ ನಿರ್ಮಾಣಗೊಂಡ ಮಿನಿ ಸಭಾಂಗಣದ ಮೇಲ್ಛಾವಣಿ ಕುಸಿದಿದೆ. ಶಕ್ತಿನಗರ ಕುಂಟಲ್ಪಾಡಿಯ ದಿನೇಶ್‌ ರೈ ಅವರ ಮನೆ ಹಿಂಭಾಗ ಭಾಗಶಃ ಕುಸಿದು ನಷ್ಟ ಉಂಟಾಗಿದೆ. ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಬಳಿ ಪ್ರದೀಪ್‌ ಮತ್ತು ದಿನೇಶ್‌ ಅವರ ಮನೆ ಪಕ್ಕದ ಗುಡ್ಡ ಕುಸಿದಿದೆ. ಯೆಯ್ನಾಡಿಯ ಕುಂಟಲ್ಪಾಡಿ ಜಗದೀಶ್‌ ರೈ ಅವರ ಮನೆ ಕುಸಿದು 3 ಲಕ್ಷ ರೂ. ನಷ್ಟ ಸಂಭವಿಸಿದೆ.

ಒಂದೇಸಮನೆ ಸುರಿದ ಮಳೆಯಿಂದಾಗಿ ನಗರ ದಲ್ಲಿ ಟ್ರಾಫಿಕ್‌ ಜಾಂ ಉಂಟಾಗಿದ್ದು, ಮಳೆಯಲ್ಲಿಯೇ ನೆನೆಯುವ ಪ್ರಸಂಗ ದ್ವಿಚಕ್ರ ವಾಹನ ಸವಾರರಿಗೆ ಎದುರಾಯಿತು. ಜಿಲ್ಲೆಯ ಅಲ್ಲಲ್ಲಿ ಮನೆ, ಅಂಗಡಿಮುಂಗಟ್ಟುಗಳ ಒಳಗೆ ನೀರು ಹೋಗಿ ವ್ಯಾಪಾರ-ವ್ಯವಹಾರಗಳಿಗೂ ಸಮಸ್ಯೆಯಾಯಿತು. 

ಸುಬ್ರಹ್ಮಣ್ಯ, ಕಿನ್ನಿಗೋಳಿ, ಕಟೀಲು, ಹಳೆಯಂಗಡಿ, ಸುರತ್ಕಲ್‌, ವಾಮಂಜೂರು, ಪುಂಜಾಲಕಟ್ಟೆ, ಮಡಂತ್ಯಾರು, ಮಚ್ಚಿನ, ವಗ್ಗ, ಕಾವಳಕಟ್ಟೆ, ಕಡಬ, ವೇಣೂರು, ವಿಟ್ಲ, ಮೂಲ್ಕಿ, ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಮಳೆ ಸುರಿದಿದೆ. 
ಉಡುಪಿ ಜಿಲ್ಲೆ: ಉತ್ತಮ ಮಳೆ ಪಡುಬಿದ್ರಿ, ಶಿರ್ವ, ಕಾಪು, ಕಟಪಾಡಿ, ಬ್ರಹ್ಮಾವರ, ಉಡುಪಿ, ಕುಂದಾಪುರ ತಾ|ನ ತೆಕ್ಕಟ್ಟೆ, ಕುಂಭಾಶಿ, ಬೇಳೂರು, ಕೊಲ್ಲೂರು, ವಂಡ್ಸೆ, ಕೋಟೇಶ್ವರ, ಕಾರ್ಕಳ, ಬೆಳ್ಮಣ್ಣು, ಮುಂಡ್ಕೂರು ಮೊದಲಾದೆಡೆ ದಿನವಿಡೀ ಉತ್ತಮ ಮಳೆಯಾಗಿದೆ. 

Advertisement

ನಾಲ್ಕು ದಿನ ಉತ್ತಮ ಮಳೆ
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಶುಕ್ರವಾರ ತಡರಾತ್ರಿಯಿಂದಲೇ ಮಳೆಯಾಗಿದ್ದು, ಶನಿವಾರ ದಿನವಿಡೀ ಧಾರಾಕಾರ ಮಳೆ ಸುರಿದಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆ ಸುರಿಯುವ ಸಂಭವವಿದೆ.

ವಾತಾವರಣದಲ್ಲಿನ ಉಷ್ಣಾಂಶದ ಏರಿಳಿತವೂ ಹವಾಮಾನದ ಬದ ಲಾವಣೆಗೆ ಕಾರಣವಾಗಿದ್ದು, ಮಳೆ ಮುಂದುವರಿಯಲಿದೆ ಎಂದು ಕೆಎಸ್‌ಎನ್‌ಡಿಎಂಸಿ ಹೇಳಿದೆ.

ಮುಂಜಾಗ್ರತಾ ಕ್ರಮ-ಡಿಸಿ ಸೂಚನೆ
ಈಗಾಗಲೇ ನಿರಂತರ ಮಳೆ ಬರುತ್ತಿರುವುದರಿಂದ ಎಲ್ಲ ತಹಶೀಲ್ದಾರರು ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ ಸೂಚಿಸಿದ್ದಾರೆ. ಭಾರೀ ಮಳೆಯಿಂದಾಗಿ ಸಂಚಾರಕ್ಕೆ ತೊಂದರೆ ಉಂಟಾದಲ್ಲಿ ಶಾಲಾ ಕಾಲೇಜಿಗೆ ರಜೆ ನೀಡುವ ನಿಟ್ಟಿನಲ್ಲಿ ಸಂಬಂಧಿಸಿದ ತಹಶೀಲ್ದಾರರು ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ಸ್ಥಳೀಯ ಪರಿಸ್ಥಿತಿಗನುಗುಣವಾಗಿ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ಪ್ರಕಟನೆ ಮೂಲಕ ನಿರ್ದೇಶ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next