Advertisement

ಈ ಬ್ಯಾಂಕ್‌ನಿಂದ ಕೇವಲ ಒಂದು ಸಾವಿರ ರೂ. ಮಾತ್ರ ಡ್ರಾ ಮಾಡಲು ಅವಕಾಶ!

09:14 AM Sep 25, 2019 | Nagendra Trasi |

ಮುಂಬಯಿ: ಪಂಜಾಬ್‌ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ (ಪಿಎಂಸಿ) ವಿರುದ್ಧ ಕೇಂದ್ರೀಯ ರಿಸರ್ವ್‌ ಬ್ಯಾಂಕ್‌ ಹಲವು ನಿಬಂಧನೆಗಳನ್ನು ಹೇರಿದ್ದು, ಇದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.

Advertisement

ಯಾವುದೇ ಖಾತೆ ಹೊಂದಿದ ಗ್ರಾಹಕರು 1 ಸಾವಿರ ರೂ.ಗಳಿಗೆ ಮಿಕ್ಕಿ ಡ್ರಾ ಮಾಡದಂತೆ ನಿಬಂಧನೆ ಹೇರಿದ್ದು, ಇದರಿಂದ ಬ್ಯಾಂಕ್‌ ಮತ್ತು ಬ್ಯಾಂಕ್‌ ಎಟಿಎಂ ಎದುರು ಗೊಂದಲ ಸೃಷ್ಟಿಯಾಗಿದೆ. ಅಲ್ಲದೇ ಮುಂದಿನ ಆರು ತಿಂಗಳ ಕಾಲ ಬ್ಯಾಂಕ್‌ ಯಾವುದೇ ಸಾಲ, ಠೇವಣಿಯನ್ನು ಪಡೆಯದಂತೆ ಆರ್‌ಬಿಐ ನಿರ್ಬಂಧ ವಿಧಿಸಿದೆ.

ನಿರ್ಬಂಧವೇಕೆ?
ಬ್ಯಾಂಕ್‌ ಬೇಕಾಬಿಟ್ಟಿ ಸಾಲ ನೀಡಿದ್ದು, ಆರ್‌ಬಿಐನ ಈ ನಿಂಬಂಧನೆಗೆ ಕಾರಣ ಎಂದು ಹೇಳಲಾಗಿದೆ. 2019 ವಿತ್ತೀಯ ವರ್ಷದ ವರದಿಯಲ್ಲಿ ಬ್ಯಾಂಕ್‌ ಶೇ.3.7ರಷ್ಟು ಸಾಲ ನೀಡಿದ್ದಾಗಿ ಆರ್‌ಬಿಐಗೆ ವರದಿ ನೀಡಿತ್ತು. ಆದರೀಗ ಅದು ಹೆಚ್ಚು ಸಾಲ ಕೊಟ್ಟಿರುವುದಾಗಿ ಹೇಳುತ್ತಿದೆ. ಈ ಕಾರಣಕ್ಕಾಗಿ ಅವ್ಯವಹಾರ ನಡೆದಿದೆಯೇ ಎಂಬ ಶಂಕೆಯಮೇರೆಗೆ ಆರ್‌ಬಿಐ ನಿಬಂಧನೆ ವಿಧಿಸಿದೆ.

ಆರ್‌ಬಿಐ ನಿಬಂಧನೆಯಿಂದ ಪರಿಣಾಮವೇನು?
ಒಂದು ರೀತಿಯಲ್ಲಿ ಆರ್‌ಬಿಐ ಬ್ಯಾಂಕ್‌ ವ್ಯವಹಾರಗಳಿಗೆ ಬಹುತೇಕ ನಿರ್ಬಂಧ ಹೇರಿದೆ. 35ಎ ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ ಅನ್ವಯ ಇದು ಮುಂದಿನ 6 ತಿಂಗಳ ಕಾಲ ಚಾಲ್ತಿಯಲ್ಲಿರಲಿದೆ. ಇದರಿಂದಾಗಿ ಬ್ಯಾಂಕ್‌ನಲ್ಲಿ ಯಾವುದೇ ರೀತಿಯ ಖಾತೆ ಹೊಂದಿರುವ ಗ್ರಾಹಕರು ಮುಂದಿನ 6 ತಿಂಗಳಲ್ಲಿ 1 ಸಾವಿರ ರೂ.ಗಳಿಗೆ ಮಿಕ್ಕಿ ಹಣ ವಿತ್‌ಡ್ರಾ ಮಾಡುವಂತಿಲ್ಲ. ಅಲ್ಲದೇ ಬ್ಯಾಂಕು ಯಾವುದೇ ರೀತಿಯ ಠೇವಣಿ ಮತ್ತು ಸಾಲವನ್ನು ಕೊಡುವಂತಿಲ್ಲ ಎಂದು ಆದೇಶಿಸಲಾಗಿದೆ.

ಇದೇ ಮೊದಲಲ್ಲ
ಆರ್‌ಬಿಐ ಹೀಗೆ ನಿಯಂತ್ರಣ ಹೇರುವುದು ಇದೇ ಮೊದಲೇನಲ್ಲ. ಈ ಹಿಂದೆ ನಿಯಮ ಉಲ್ಲಂ ಸಿದ ಸಹಕಾರಿ ಬ್ಯಾಂಕ್‌ಗಳ ವಿರುದ್ಧ ಅದು ಕಾನೂನು ಕ್ರಮ ಕೈಗೊಂಡಿತ್ತು ಈ ತಿಂಗಳಲ್ಲೇ ಅದು ಒಸಾಮ್ನಾಬಾದ್‌ನ ವಸಂತದಾದ ನಗರಿ ಸಹಕಾರಿ ಬ್ಯಾಂಕ್‌, ನಾಸಿಕ್‌ನ ವಿಠಲ್‌ರಾವ್‌ ವಿಖೆ ಪಾಟೀಲ್‌ ಕೋ.ಆಪ್‌. ಬ್ಯಾಂಕ್‌ ಮತ್ತು ಕರಾಡ್‌ ಜನ್ತಾ ಸಹಕಾರಿ ಬ್ಯಾಂಕ್‌ ವಿರುದ್ಧ ಕ್ರಮ ಕೈಗೊಂಡಿತ್ತು.

Advertisement

ಮೇನಲ್ಲಿ ಗೋವಾದ ದಿ ಮಡ್ಗಾಂವ್‌ ಅರ್ಬನ್‌ ಕೋ. ಆಪ್‌. ಬ್ಯಾಂಕ್‌ ವಿರುದ್ಧವೂ ನಿರ್ಬಂಧ ಹೇರಿದ್ದು, ಗ್ರಾಹಕರ ವಿತ್‌ಡ್ರಾ ಮಿತಿಯನ್ನು 5 ಸಾವಿರ ರೂ.ಗೆ ಸೀಮಿತಗೊಳಿಸಿತ್ತು. ಸದ್ಯ ಪಂಜಾಬ್‌ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ ಪರವಾನಿಗೆ ರದ್ದುಮಾಡುವ ಯಾವುದೇ ಇರಾದೆ ಇಲ್ಲ ಎಂದು ಆರ್‌ಬಿಐ ಮೂಲಗಳು ಹೇಳಿವೆ.

ದೊಡ್ಡ ಸಹಕಾರಿ ಬ್ಯಾಂಕ್‌
ಪಂಜಾಬ್‌ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ ದೊಡ್ಡ ಸಹಕಾರಿ ಬ್ಯಾಂಕ್‌. ಕರ್ನಾಟಕ, ಗುಜರಾತ್‌, ಗೋವಾ, ಆಂಧ್ರಪ್ರದೇಶ, ದಿಲ್ಲಿ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಇದು 137 ಶಾಖೆಗಳನ್ನು ಹೊಂದಿದೆ. 1984ರಲ್ಲಿ ಮುಂಬಯಿನಲ್ಲಿ ಇದು ಆರಂಭಗೊಂಡಿತ್ತು. ಈ ಬ್ಯಾಂಕ್‌ ದೇಶದ ಅತಿ ದೊಡ್ಡ 10 ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಇದು ಸುಮಾರು 11,617 ಕೋಟಿ ರೂ. ಠೇವಣಿ ಮತ್ತು 8,383 ಕೋಟಿ ರೂ. ಸಾಲವನ್ನು ನೀಡಿದೆ.

ತಪ್ಪೊಪ್ಪಿಗೆ
ಬ್ಯಾಂಕಿಂಗ್‌ ನಿಯಮಗಳ ಉಲ್ಲಂಘನೆಯಿಂದ ಹೀಗಾಗಿದ್ದು, ಈ ತಪ್ಪುಗಳನ್ನು ಒಪ್ಪಿಕೊಳ್ಳವುದಾಗಿ ಪಿಎಂಸಿ ಬ್ಯಾಂಕ್‌ನ ಆಡಳಿತ ನಿರ್ದೇಶಕ ಜಾಯ್‌ ಥಾಮಸ್‌ ಹೇಳಿದ್ದಾರೆ. ನಾವು ತಪ್ಪುಗಳನ್ನು ಒಪ್ಪಿಕೊಳ್ಳುತ್ತೇವೆ. ಆರ್‌ಬಿಐ ಕ್ರಮದಿಂದ 6 ತಿಂಗಳು ನಮ್ಮ ಗ್ರಾಹಕರಿಗೆ ಸಮಸ್ಯೆಯಾಗಲಿದೆ. ಅಲ್ಲದೇ 6 ತಿಂಗಳ ಒಳಗಾಗಿ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next