ಇಂಡಿ: ಚುನಾವಣೆ ಅಥವಾ ಇನ್ನಿತರೆ ಯಾವುದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಮಾಡುವುದಾಗಲಿ, ಬೆದರಿಕೆ ಹಾಕುವುದಾಗಲಿ ಮಾಡಿದರೆ ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಿ ಗಡಿಪಾರು ಮಾಡಬೇಕಾಗುತ್ತದೆ ಎಂದು ನಗರ ಸಿಪಿಐ ಭೀಮನಗೌಡ ಬಿರಾದಾರ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ರವಿವಾರ ರೌಡಿಗಳಿಗೆ ಪರೇಡ್ ನಡೆಸಿ ಅವರು ಮಾತನಾಡಿದರು. ಪಟ್ಟಣದಲ್ಲಿ ಇನ್ನು ಮುಂದೆ ಯಾವುದೇ ರೌಡಿಸಂ ನಡೆಯುವುದಿಲ್ಲ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಯಾವುದೇ ವ್ಯಕ್ತಿ ಇದ್ದರೂ ಅವರ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನು ಹಾಗೂ ಸಮಾಜ ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದವರು ಎಂತಹ ಪ್ರಭಾವಿಗಳೇ ಇದ್ದರೂ ಅವರ ಹೆಡೆಮುರಿ ಕಟ್ಟಿ ಕಾನೂನು ಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ಎಚ್ಚರಿಸಿದರು.
ಸಾರ್ವಜನಿಕರು ಭಯಗೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಹಿಂದೆ ಪೊಲೀಸ್ ಇಲಾಖೆ ಇದೆ. ಪಟ್ಟಣದಲ್ಲಿ ಯಾವುದೇ ರೀತಿಯ ತೊಂದರೆ ನೀಡುವ ವ್ಯಕ್ತಿಗಳು ಇದ್ದರೂ ಅಂಥವರ ಮಾಹಿತಿ ನೀಡಬೇಕು. ಅಪರಾಧ ಕೃತ್ಯಗಳನ್ನು ಮಟ್ಟ ಹಾಕಲು ಸಾರ್ವಜನಿಕರ ಸಹಕಾರ ಪೊಲೀಸ್ ಇಲಾಖೆಗೆ ಅಗತ್ಯವಾಗಿದೆ ಎಂದು ಹೇಳಿದರು. ಪಟ್ಟಣದಲ್ಲಿ ಗೂಂಡಾಗಿರಿ, ಬೆದರಿಕೆ ಹಾಕುವುದು, ಇಸ್ಪೀಟ್-ಮಟ್ಕಾ ಹಾಗೂ ಮರಿ ರೌಡಿಗಳ ಹಾವಳಿ ಕಂಡು ಬಂದರೆ ಅಂಥವನ್ನು ಹಿಡಿದು ಗೂಂಡಾ ಕಾಯ್ದೆಗೆ ಒಳಪಡಿಸಲು ಹಿಂಜರಿಯುವುದಿಲ್ಲ. ಒಂದು ವೇಳೆ ಗೂಂಡಾಗಿರಿ ಮುಂದುವರಿಸಿದರೆ ಅಂಥವರನ್ನು ಪಟ್ಟಣದಲ್ಲಿ ಇರಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿ 3 ತಿಂಗಳಿಗೊಮ್ಮೆ ಪೊಲೀಸರು ಕರೆದಾಗ ಠಾಣೆಗೆ ಬರಬೇಕು. ಯಾವುದೇ ನೆಪ ಹೇಳಿದರೆ ನಡೆಯುವುದಿಲ್ಲ. ಮುಂದೆ ಇದೇ ರೀತಿ ಪಟ್ಟಣದಲ್ಲಿ ನಡೆದುಕೊಂಡರೆ ಮತ್ತೆ ಕೇಸ್ ಹಾಕಿ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ರೌಡಿಗಳಿಗೆ ಎಚ್ಚರಿಕೆ ನೀಡಿದರು.
ಈ ವೇಳೆ ಇಲಾಖೆ ಸಿಬ್ಬಂದಿ ಪಾಂಡು ರಾಠೊಡ, ಭೀಮರಾಯ ಕ್ಷತ್ರಿ, ನಜೀರ್ ಶ್ಯಾಮಣ್ಣನವರ, ಬಸವರಾಜ ಗಡಗಲಿ, ಚಂದ್ರು ರಾಠೊಡ, ಜಟ್ಟೆಪ್ಪ ದೊಡಮನಿ ಸೇರಿದಂತೆ ಇತರರಿದ್ದರು.