Advertisement

Udupi ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಕುಸಿತ; ಶೀರೂರಿನಿಂದ ಬಜೆಗೆ ನೀರು ಪಂಪಿಂಗ್‌

12:50 AM Apr 09, 2024 | Team Udayavani |

ಉಡುಪಿ: ಹಿರಿಯಡಕದ ಬಜೆ ಸ್ವರ್ಣಾ ನದಿ ಅಣೆಕಟ್ಟಿಗೆ ಮೇಲಾºಗದಲ್ಲಿರುವ ಶೀರೂರಿನ ಗುಂಡಿಗಳಿಂದ ಪಂಪ್‌ಸೆಟ್‌ ಮೂಲಕ ನೀರನ್ನು ಹಾಯಿಸಲು ತಯಾರಿ ಆರಂಭಿಸಲಾಗಿದೆ. ಸ್ಥಳಕ್ಕೆ ನಗರಸಭೆ ಪೌರಾಯುಕ್ತ ರಾಯಪ್ಪ, ಎಇ ಚೇತನ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಬಜೆ ಅಣೆಕಟ್ಟಿನಲ್ಲಿ ಉಡುಪಿ ನಗರದ ಬಳಕೆಗೆ ಮೇ 15ರ ವರೆಗೂ ಬೇಕಾಗುವಷ್ಟು ನೀರು ಲಭ್ಯವಿದ್ದು, ಮುಂಜಾಗ್ರತೆ ದೃಷ್ಟಿಯಿಂದ ಮುಂದಿನ ಮೇ 20-25ರ ವರೆಗೂ ನೀರು ಲಭ್ಯವಾಗುವಂತೆ ಶೀರೂರು ಗುಂಡಿಯಿಂದ ಬಜೆಗೆ ನೀರನ್ನುಹಾಯಿಸಲಾಗುತ್ತದೆ. ರೇಶನಿಂಗ್‌ ವ್ಯವಸ್ಥೆಯಡಿ ನೀರು ವಿತರಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದಿನಂತೆ ನೀರುಪೂರೈಕೆಯಾಗಲಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.

ತುಂಬೆಗೆ ಶಂಭೂರಿನಿಂದ ನೀರು
ಬಂಟ್ವಾಳ: ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ಅಣೆಕಟ್ಟಿನಲ್ಲಿ ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿಗಳ ಆದೇಶದಂತೆ ಸೋಮವಾರ ಶಂಭೂರು ಎಎಂಆರ್‌ ಅಣೆಕಟ್ಟಿನಿಂದ ತುಂಬೆಗೆ ನೀರು ಹರಿಸಲಾಗಿದೆ. ತುಂಬೆಯಲ್ಲಿ 6 ಮೀ. ನೀರಿನ ಮಟ್ಟ ಕಾಯ್ದುಕೊಂಡು ನೀರು ಹರಿಸುವುದನ್ನು ನಿಲ್ಲಿಸಲಾಗುತ್ತದೆ.

ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಕುಡಿಯುವುದಕ್ಕೆ ನದಿ ನೀರನ್ನೇ ಆಶ್ರಯಿಸಿರುವ ಪ್ರದೇಶಗಳಲ್ಲಿ ಈಗಾಗಲೇ ಆತಂಕ ಆರಂಭಗೊಂಡಿದೆ. ಕಳೆದ ಕೆಲವು ದಿನಗಳಿಂದ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕುಸಿತ ಕಾಣುತ್ತಿದೆ.

ಸೋಮವಾರ ಎಎಂಆರ್‌ ಅಣೆಕಟ್ಟಿನಲ್ಲಿ ನೀರಿನ ಮಟ್ಟ 16.88 ಮೀ. ಇದ್ದು, ಮಧ್ಯಾಹ್ನದಿಂದ ಗೇಟ್‌ ತೆರೆದು ನೀರು ಹರಿಸಲಾಗಿದೆ. ತುಂಬೆಯಲ್ಲಿ ಸೋಮವಾರ ನೀರಿನ ಮಟ್ಟ 4.88 ಮೀ.ನಷ್ಟಿದ್ದು, ಎಎಂಆರ್‌ನಿಂದ ನೀರು ಬಿಟ್ಟ ಪರಿಣಾಮ ಸೋಮವಾರ ರಾತ್ರಿ ವೇಳೆ 4.94 ಮೀ.ಗೆ ಏರಿಕೆಯಾಗಿದೆ. 6 ಮೀ. ಭರ್ತಿಯಾಗುವವರೆಗೆ ನೀರು ಹರಿಸಲಾಗುವುದು.

Advertisement

ಎಎಂಆರ್‌ನಿಂದ ಕೆಳಕ್ಕೆ ಹರಿಸಿ ನೀರು ಗಣನೀಯ ಇಳಿಕೆಯಾದರೆ ಬಂಟ್ವಾಳ ತಾಲೂಕಿನ ಕೆಲವು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ತೊಂದರೆಯಾಗಲಿದ್ದು, ಕಳೆದ ವರ್ಷ ಅದೇ ರೀತಿ ಸಮಸ್ಯೆಯಾಗಿತ್ತು. ಆದರೆ ಈ ಬಾರಿ ಹೊಸದಾಗಿ ನೀರು ನಿಲ್ಲಿಸಲಾಗಿರುವ ಬಿಳಿಯೂರು ಅಣೆಕಟ್ಟಿನಲ್ಲಿ ನೀರಿನ ಸಂಗ್ರಹವಿರುವುದರಿಂದ ಸದ್ಯಕ್ಕೆ ಆತಂಕವಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next