ರಬಕವಿ-ಬನಹಟ್ಟಿ: ಬೆಳಗಾವಿ, ವಿಜಯಪುರ ಹಾಗು ಬಾಗಲಕೋಟೆ ಜಿಲ್ಲೆಗಳ ಸಂಜೀವನಿಯಾಗಿರುವ ಹಿಪ್ಪರಗಿ ಜಲಾಶಯ ಸಂಪೂರ್ಣ ಬತ್ತಿ ಹೋಗುವ ಲಕ್ಷಣಗಳ ಗೋಚರಿಸುತ್ತಿದ್ದು, ಜನತೆಗೆ ನೀರಿನ ಹಾಹಾಕಾರ ಎದುರಾಗಲಿದೆ.
6 ಟಿಎಂಸಿ ಸಾಮರ್ಥ್ಯ ಹೊಂದಿರುವ ಹಿಪ್ಪರಗಿ ಜಲಾಶಯದಲ್ಲಿ ಕೇವಲ 0.7 ಟಿಎಂಸಿಯಷ್ಟು ಮಾತ್ರ ನೀರು ಇದೆ. ಜಲಾಶಯದಿಂದ ದಿನಂಪ್ರತಿ 0.07 ಟಿಎಂಸಿಯಷ್ಟು ನೀರು ಖಾಲಿಯಾಗುತ್ತಿದೆ. ಇತ್ತ ಜನರ ನಿತ್ಯದ ಬಳಕೆ, ಮತ್ತೊಂದೆಡೆ ಬಿರುಬಿಸಿಲಿನ ತಾಪಕ್ಕೆ ನೀರು ತೀವ್ರ ಕಡಿಮೆಯಾಗುತ್ತಿದೆ. ಜಲಾಶಯದ ಹಿಂಬಾಗದಲ್ಲಿ ಮಾತ್ರ ನೀರು ಇದ್ದು, ಮುಂಭಾಗ ಸಂಪೂರ್ಣವಾಗಿ ಖಾಲಿಯಾಗಿದೆ. ಇದ್ದರಿಂದ ಮುಂದಿನ ಭಾಗದ ಜನತೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.
ರಬಕವಿ-ಬನಹಟ್ಟಿ ಸಮೀಪದ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಮಹಿಷವಾಡಗಿ ಬ್ಯಾರೇಜ್ ಕಾಣುತ್ತಿದ್ದು, ಹಲವಾರು ತಿಂಗಳಿಂದ ನೀರಲ್ಲಿ ಮುಳಗಿದ್ದ ಬ್ಯಾರೇಜ್ ಕೆಲವು ದಿನಗಳಿಂದ ಕಾಣುತ್ತಿದ್ದು, ಅಲ್ಲದೇ ನೀರಿನ ಮಟ್ಟ ಕೆಲ ದಿನಗಳಲ್ಲಿ ದಿಢೀರ್ ಆಗಿ ಭಾರಿ ಕುಸಿತ ಕಂಡ ಹಿನ್ನಲೆಯಲ್ಲಿ ಜನರಿಗೆ ಬೇಸಿಗೆಯ ಆತಂಕ ಶುರುವಾಗಿದೆ. ಇದೇ ರೀತಿ ಪ್ರತಿ ದಿನ ಖಾಲಿಯಾದರೆ ಏಪ್ರಿಲ್ ಎರಡನೇ ವಾರದಲ್ಲಿ ನೀರು ಖಾಲಿಯಾಗಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಬ್ಯಾರೇಜ್‌ನ ಗೇಟ್‌ಗಳು ಕಾಣುತ್ತಿದ್ದು ರಸ್ತೆ ಸಂಚಾರ ಪ್ರಾರಂಭವಾಗಿದೆ.
ಕೃಷ್ಣಾ ನದಿ ನೀರು ಏಪ್ರಿಲ್ 15ರವರೆಗೆ ಬರಬಹುದು. ಆದರೂ ಮುಂಜಾಗೃತ ಕ್ರಮವಾಗಿ ನಗರಸಭೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕಾರಣ ಸಾರ್ವಜನಿಕರು ನೀರನ್ನು ಮಿತವ್ಯಯವಾಗಿ ಬಳಕೆ ಮಾಡಬೇಕು. ಕೃಷ್ಣಾ ನದಿಯಲ್ಲಿ ನೀರು ನಿಂತ ನೀರಾಗಿರುವುದರಿಂದ ಸಾರ್ವಜನಿಕರು ಆರೋಗ್ಯದ ದೃಷ್ಠಿಯಿಂದ ನೀರನ್ನು ಸೋಸಿ ಕಾಯಿಸಿ ಆರಿಸಿ ನೀರನ್ನು ಕುಡಿಯಬೇಕು.-
ಜಗದೀಶ ಈಟಿ, ಪೌರಾಯುಕ್ತರು, ನಗರಸಭೆ ರಬಕವಿ-ಬನಹಟ್ಟಿ
ಹಿಪ್ಪರಗಿ ಜಲಾಶಯದಲ್ಲಿ ನೀರಿನ ಸಾಂಧ್ರತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇನ್ನೆರಡು ವಾರ ಮಾತ್ರ ನೀರು ದೊರಕಬಹುದು. ನೀರನ್ನು ಕಾಳಜಿಪೂರ್ವಕ ಬಳಕೆ ನಾಗರಿಕರದ್ದಾಗಬೇಕು.
-ವಿ.ಎಸ್. ನಾಯಕ, ಸಹಾಯಕ ಅಭಿಯಂತರ, ಹಿಪ್ಪರಗಿ ಜಲಾಶಯ