ಮೈಸೂರು: ನಂಜನಗೂಡು ಉಪ ಚುನಾವಣೆಯ ಸೋಲಿನ ಹಿನ್ನೆಲೆ ಚುನಾವಣಾ ರಾಜಕೀಯದಿಂದ ಹಿಂದೆ ಸರಿದು, ಸಕ್ರಿಯ ರಾಜಕೀಯದಲ್ಲಿ ಮುಂದುವರಿಯುವುದಾಗಿ ಬಿಜೆಪಿ ಅಭ್ಯರ್ಥಿಯಾಗಿದ್ದ ವಿ. ಶ್ರೀನಿವಾಸ ಪ್ರಸಾದ್ ಘೋಷಿಸಿದ್ದಾರೆ.
ಉಪ ಚುನಾವಣಾ ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಈ ಹಿಂದೆಯೇ ತಿಳಿಸಿದಂತೆ 2018ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ ತಮ್ಮ ಅಭಿಪ್ರಾಯ ಪಡೆಯದೆ ಸಚಿವ ಸ್ಥಾನದಿಂದ ಕೆಳಗಿಳಿಸುವ ಮೂಲಕ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡಿದ ಹಿನ್ನೆಲೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಬೇಕಾಯಿತು. ಹೀಗಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸದೆ, ಸಕ್ರಿಯ ರಾಜಕೀಯದಲ್ಲಿ ಮುಂದುವರಿಯುತ್ತೇನೆ ಎಂದು ಹೇಳಿದರು.
ಹಣದ ಹೊಳೆ ಹರಿಸಿದರು: ಉಪ ಚುನಾವಣೆಯಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸುವ ವಿಶ್ವಾಸ ಹೊಂದಿದ್ದೆ. ಆದರೆ ಕೊನೆಯ ಎರಡು ದಿನ ಕಾಂಗ್ರೆಸ್‌ನವರು ಹಣದ ಹೊಳೆಯನ್ನೇ ಹರಿಸಿದರು. ಕಾಂಗ್ರೆಸ್‌ನವರು ಎಷ್ಟೇ ಹಣಹಂಚಿದರೂ ಕನಿಷ್ಠ 5 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆಂಬ ಭರವಸೆ ಇತ್ತು.
ಆದರೆ ಕ್ಷೇತ್ರದ ಮತದಾರರು ತಮ್ಮನ್ನು ಬೆಂಬಲಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮೊದಲೇ ಹೇಳಿದಂತೆ ಈ ಉಪಚುನಾವಣೆ ತಮ್ಮ ಹಾಗೂ ಸಿದ್ದರಾಮಯ್ಯ ನಡುವಿನ ಚುನಾವಣೆ ಎಂದಿದ್ದೆ. ಈ ಹಿನ್ನೆಲೆ ಇದನ್ನು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ ಗೆಲುವು ಎಂದು ಒಪ್ಪುತ್ತೇನೆ. ಆದರೆ ಯಾವ ರೀತಿಯ ಗೆಲುವು ಸಾಧಿಸಿದರು ಎಂಬ ಬಗ್ಗೆ ಸಿದ್ದರಾಮಯ್ಯ ಆತ್ಮಸಾಕ್ಷಿಗೆ ಅನುಗುಣವಾಗಿ ಮಾತನಾಡಲಿ ಎಂದರು.
ಪಾವಿತ್ರ್ಯತೆ ನಾಶವಾಗಿದೆ: ನಂಜನಗೂಡು ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಚುನಾವಣೆಯ ಪಾವಿತ್ರ್ಯತೆಯನ್ನೇ ನಾಶ ಮಾಡಿದ್ದು, ಆ ಮೂಲಕ ಭಷ್ಟಾಚಾರದಲ್ಲಿ ಸಿದ್ದರಾಮಯ್ಯ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಆಡಳಿತಯಂತ್ರವನ್ನು ದುರ್ಬಳಕೆ ಮಾಡಿಕೊಂಡು ಚುನಾವಣಾ ಅಕ್ರಮಗಳನ್ನು ನಡೆಸಿದ ಅವರು ಪೊಲೀಸರ ಸಹಕಾರದೊಂದಿಗೆ ಹಣಹಂಚಿಕೆ ಮಾಡಿದ್ದಾರೆ. ಸಂಸದ ಆರ್.ಧ್ರುವನಾರಾಯಣ್ ಆಪ್ತ ಸಹಾಯಕ ಹಣ ಹಂಚಿಕೆ ಮಾಡುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದರು.
ಚುನಾವಣೆಯಲ್ಲಿ ಈ ಪ್ರಮಾಣದ ಅಕ್ರಮ ನಡೆದಿದ್ದರೂ ಚುನಾವಣಾ ಅಕ್ರಮದ ಕುರಿತು ನಾನು ಚುನಾವಣಾ ಆಯೋಗಕ್ಕೆ ದೂರು ನೀಡುವುದಿಲ್ಲ. ಆದರೆ ಚುನಾವಣೆ ಯಾವ ರೀತಿಯಲ್ಲಿ ನಡೆದಿದೆ ಎಂಬುದು ಕ್ಷೇತ್ರದ ಜನರಿಗೆ ಮನವರಿಕೆಯಾಗಿದ್ದು, ಈ ಚುನಾವಣೆಯನ್ನು ಆತ್ಮಸಾಕ್ಷಿಗೆ ಅನುಗುಣವಾಗಿ ನೋಡಬೇಕಿದೆ ಎಂದು ಹೇಳಿದರು.
ನಾನು ಸದಾ ಚಿರಋಣಿ: ಚುನಾವಣೆಯಲ್ಲಿ ಸೋಲು ತಮಗೇನು ಹೊಸತಲ್ಲ, ಹೀಗಾಗಿ ಉಪ ಚುನಾವಣೆಯ ಸೋಲಿನಿಂದ ದುಃಖವಾಗಿಲ್ಲ. ಜನಾದೇಶಕ್ಕೆ ತಲೆ ಬಾಗುತ್ತೇನೆ. ಕಾಂಗ್ರೆಸ್ ಸಾಕಷ್ಟು ಹಣಹಂಚಿಕೆ ಮಾಡಿದರೂ ಸಾವಿರಾರು ಮತದಾರರು ತಮ್ಮನ್ನು ಬೆಂಬಲಿಸಿದ್ದು, ಅವರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಈ ಸೋಲು ತಮ್ಮ ಹಾಗೂ ಕ್ಷೇತ್ರದ ಮತದಾರರ ಸ್ವಾಭಿಮಾನಕ್ಕೆ ಉಂಟಾದ ಸೋಲಾಗಿದೆ ಎಂದರು.