Advertisement

ತಿಂಗಳಿಗೊಮ್ಮೆ ಇಲಾಖಾ ವಿಚಾರಣೆ ಅದಾಲತ್‌; ಸರಕಾರಿ ನೌಕರರ ವಿಚಾರಣೆ ವಿಳಂಬ ತಡೆಗೆ ಹೊಸ ಕ್ರಮ

02:13 AM Mar 28, 2022 | Team Udayavani |

ದಾವಣಗೆರೆ: ಸರಕಾರಿ ನೌಕರರ ದುರ್ನಡತೆ, ಕರ್ತವ್ಯಲೋಪ ಮುಂತಾದ ಆರೋಪಗಳಿಗೆ ಸಂಬಂ ಧಿಸಿ ನಡೆಯುವ ಇಲಾಖಾ ವಿಚಾರಣೆ ಹಾಗೂ ಶಿಸ್ತುಕ್ರಮ ವಿಳಂಬವಾಗುವುದನ್ನು ತಡೆಯಲು  ಸರಕಾರ ಇದೇ ಮೊದಲ ಬಾರಿಗೆ ಇಲಾಖಾ ವಿಚಾರಣ ಅದಾಲತ್‌ ನಡೆಸಲು ನಿರ್ಧರಿಸಿದೆ.

Advertisement

ಸರಕಾರಿ ನೌಕರರ ಮೇಲಿನ ಆರೋಪಗಳಿಗೆ ಸಂಬಂಧಿಸಿದ ಇಲಾಖಾ ವಿಚಾರಣೆ ಪ್ರಕ್ರಿಯೆ ವಿಳಂಬ ತಡೆಯಲು ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಹಾಗೂ ಇಲಾಖಾ ಮುಖ್ಯಸ್ಥರು ಪ್ರತಿ ತಿಂಗಳು ಒಂದು ದಿನ  “ಇಲಾಖಾ ವಿಚಾರಣ ಅದಾಲತ್‌’ ನಡೆಸಲು ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯ (ಸೇವಾ ನಿಯಮಾವಳಿ) ಅಧೀನ ಕಾರ್ಯದರ್ಶಿ ನಾಗರತ್ನಾ ವಿ. ಪಾಟೀಲ್‌ ಸುತ್ತೋಲೆ ಮೂಲಕ ಎಲ್ಲ ಜಿಲ್ಲಾ ಮುಖ್ಯಸ್ಥರಿಗೆ ನಿರ್ದೇಶಿಸಿದ್ದಾರೆ.

ಸರಕಾರಿ ನೌಕರರ ಮೇಲಿನ ಆಪಾದಿತ ದುರ್ನಡತೆಗೆ ಸಂಬಂಧಿಸಿದ ಕರ್ನಾಟಕ ನಾಗರಿಕ ಸೇವಾ ನಿಯಮಗಳು-1957ರ ನಿಯಮ 11ರಡಿ ವಿಚಾರಣೆ ನಡೆಸಿ ಶಿಸ್ತು ಕ್ರಮ ವಹಿಸಲು ಕಾಲಮಿತಿ ನಿಗದಿಪಡಿಸಲಾಗಿದೆ. ಆದರೂ ಇಲಾಖಾ ವಿಚಾರಣೆ ಪ್ರಕ್ರಿಯೆ ವಿಳಂಬವಾಗುತ್ತಿರುವುದನ್ನು ಗಮನಿಸಿದ ಸರಕಾರ, ಇದರಿಂದ ನೌಕರರ ಕರ್ತವ್ಯ ನಿರ್ವಹಣೆಗೆ ತೊಡಕಾಗಬಾರದೆಂದು ಅದಾಲತ್‌ ಮೂಲಕ ವಿಚಾರಣೆ  ಕ್ಷಿಪ್ರಗೊಳಿಸಲು ತೀರ್ಮಾನಿಸಿದೆ.

ಕಾಲಮಿತಿಯಲ್ಲಿ ವಿಚಾರಣೆ
“ವಿಚಾರಣ ಅದಾಲತ್‌’ನಲ್ಲಿ ಇಲಾಖೆಗಳಲ್ಲಿ ನಡೆಯುತ್ತಿರುವ ವಿಚಾರಣೆ ವಿಳಂಬವಾಗುತ್ತಿದೆಯೇ, ಹೌದಾಗಿದ್ದಲ್ಲಿ ಕಾರಣಗಳೇನು ಎಂಬುದನ್ನು ಪರಿಶೀಲಿಸಬೇಕು. ಸಾಮಾನ್ಯವಾಗಿ ಮಂಡನಾಧಿಕಾರಿಗಳು ಸರಕಾರಿ ನೌಕರರೇ ಆಗಿರುವುದರಿಂದ ನಿಗದಿತ  ಮಾದರಿಯಲ್ಲಿ ವಿವರ ಪಡೆದು  ವಿಳಂಬ ಸರಿ ಪಡಿಸಲು ಸೂಚಿಸಬೇಕು. ಅಗತ್ಯ ಬಿದ್ದಲ್ಲಿ ವಿಚಾರಣಾಧಿಕಾರಿ,  ಮಂಡನಾಧಿಕಾರಿ, ಆಪಾದಿತ ಹಾಗೂ ಸರಕಾರಿ ನೌಕರರಿಗೆ ಕಾಲಮಿತಿಯಲ್ಲಿ ವಿಚಾರಣೆ ಪೂರ್ಣಗೊಳಿ ಸಲು ನಿರ್ದೇಶಿಸಲು  ತಿಳಿಸಲಾಗಿದೆ.

ನಿವೃತ್ತ ಸರಕಾರಿ ನೌಕರರ ವಿರುದ್ಧದ ಇಲಾಖಾ ವಿಚಾರಣೆಗಳಲ್ಲಿ ಅವರಿಂದ ಸರಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿ ಆ ಮೊತ್ತದ ವಸೂಲಾತಿಗೆ ಇರುವ ಅವಕಾಶ ಹಾಗೂ ಅವರಿಂದ ಘೋರ ನಿರ್ಲಕ್ಷéದ ಅಪರಾಧ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಇಲ್ಲದಿದ್ದಲ್ಲಿ ಅಂಥ  ವಿಚಾರಣೆಗಳನ್ನು  ಮುಗಿಸಲು  ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

Advertisement

ವಿಚಾರಣೆ ವಿಳಂಬಕ್ಕೂ ಶಿಸ್ತುಕ್ರಮ
ಇಲಾಖಾ ಹಂತದಲ್ಲಿವಿಚಾರಣೆ ಕಡತ ನಿರ್ವಹಣೆಯಲ್ಲಿ ವಿಳಂಬವಾಗುತ್ತಿದೆಯೋ ಎಂಬುದನ್ನು ಪರಿಶೀಲಿಸಿ ಅವರಿಗೆ ಸೂಕ್ತ ಸಲಹೆ ನೀಡಬೇಕು.  ಬಳಿಕವೂ ವಿಳಂಬವಾಗುತ್ತಿದ್ದಲ್ಲಿ ಅಂಥ ಸರಕಾರಿ ನೌಕರರ ವಿರುದ್ಧವೇ ಕರ್ತವ್ಯಲೋಪದ ಆಧಾರರ ಮೇಲೆ ಶಿಸ್ತಿನ ಕ್ರಮ ಪ್ರಾರಂಭಿಸಬೇಕು. ವಿಚಾರಣಾಧಿಕಾರಿಗಳಾಗಿ ನಿವೃತ್ತ ಸರಕಾರಿ ನೌಕರರನ್ನು ನೇಮಿಸಿದಲ್ಲಿ ಹಾಗೂ ಯಾವುದಾದರೂ ನಿರ್ದಿಷ್ಟ ವಿಚಾರಣಾಧಿಕಾರಿಯಿಂದ ವಿಚಾರಣೆ ವಿಳಂಬವಾದರೆ ಅಂಥವರಿಗೆ ಮುಂದಿನ ಯಾವುದೇ ಇಲಾಖಾ ವಿಚಾರಣೆಯನ್ನು  ವಹಿಸದಂತೆ ಎಚ್ಚರಿಕೆ ವಹಿಸಬೇಕು.

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next