Advertisement

‘ಕಾಂಗ್ರೆಸಿಗರಿಗೆ ಪ್ರವೇಶವಿಲ್ಲ’ಫಲಕ: ಇಲಾಖೆ ತನಿಖೆ

08:10 AM Apr 25, 2018 | Team Udayavani |

ವಿಟ್ಲ: ಕನ್ಯಾನ ಗ್ರಾಮದಲ್ಲಿ ಹಿಂದೂಗಳ ಮನೆಯಲ್ಲಿ ಕಾಂಗ್ರೆಸಿಗರಿಗೆ ಪ್ರವೇಶವಿಲ್ಲ ಎಂದು ಹಾಕಿದ ಫಲಕದ ಬಗ್ಗೆ ವಾಟ್ಸ್ಯಾಪ್‌ ವೈರಲ್‌ ಆದ ವಿಚಾರವಾಗಿ ಸೋಮವಾರ ಫ್ಲೈಯಿಂಗ್‌ ಸ್ಕ್ವಾಡ್‌ ಹಾಗೂ ವಿಟ್ಲ ಪೊಲೀಸರ ತಂಡ ಮನೆ ಮನೆ ಭೇಟಿ ನೀಡಿ ತನಿಖೆ ನಡೆಸಿತು. ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ಈ ಫಲಕದ ವಿಚಾರ ಬಿಸಿಬಿಸಿಯಾಗಿ ಕಾವೇರುತ್ತಿದ್ದಂತೆ ಇಲಾಖೆಗೆ ಒತ್ತಡ ಹೆಚ್ಚಿತೆನ್ನಲಾಗಿದೆ. ಇದು ವಾಸ್ತವವೇ ಅಥವಾ ಎಷ್ಟು ಮನೆಗಳಲ್ಲಿ ಇಂತಹ ಫಲಕ ಇದೆ ಎಂಬ ಅಧಿಕೃತ ಲೆಕ್ಕಾಚಾರವನ್ನು ಜಿಲ್ಲಾ ಚುನಾವಣಾ ಆಯೋಗ ಮಾಡಲೇಬೇಕಾಗಿತ್ತು ಮತ್ತು ಮನೆ ಮನೆಗೆ ತೆರಳಿ ಮಹಜರು ನಡೆಸುವ ಪ್ರಕ್ರಿಯೆ ಆರಂಭಿಸಬೇಕಾಯಿತು.

Advertisement

‘ಇದು ಹಿಂದೂ ಮನೆ. ಗಣ್ಯಶ್ರೀಯನ್ನು ಕಪಟ ಪ್ರೇಮದಿಂದ ಮತಾಂತರ ಮಾಡಲು ಬೆಂಬಲಿಸಿದ ಕಾಂಗ್ರೆಸಿಗರಿಗೆ ಇಲ್ಲಿ ಪ್ರವೇಶವಿಲ್ಲ..’ ನಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ ಎಂದು ಬರೆದ ಫಲಕ ಮನೆಯಲ್ಲಿ ಅಧಿಕಾರಿಗಳಿಗೆ ದೊರೆತಿದ್ದು, ಮನೆ ಮಂದಿಯಿಂದ ಫಲಕ ಅಂಟಿಸಿದ ಬಗ್ಗೆ ಹೇಳಿಕೆ ಪಡೆದು ಮಹಜರು ನಡೆಸಿದ್ದಾರೆ. ಒತ್ತಡಕ್ಕೆ ಮಣಿದು ಫಲಕ ಹಾಕಿದ್ದೀರಾ? ಫಲಕ ತಂದುಕೊಟ್ಟವರು ಯಾರು? ಯಾವ ಉದ್ದೇಶದಿಂದ ಫಲಕ ಅಳವಡಿಸಲಾಗಿದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಭಾಗಗಳಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಫಲಕಗಳನ್ನು ತೆರವು ಮಾಡಿದ್ದಾರೆನ್ನಲಾಗಿದೆ. ಮನೆಗಳ ಬಾಗಿಲಿಗೆ ಅಂಟಿಸಿದ ಕಾಗದವನ್ನು ತೆಗೆಸಿದ ಅಧಿಕಾರಿಗಳ ನಡೆ ಕೆಲವು ಹಿಂದೂ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

ಒತ್ತಡ ಮುಕ್ತ ಚುನಾವಣೆಗೆ ಕ್ರಮ
ಸ್ವಾತಂತ್ರ್ಯವಿದೆ ಎಂದು ವೈಯಕ್ತಿಕ ನಿಂದನೆಗೆ ಅವಕಾಶವಿರುವುದಿಲ್ಲ. ಮರೆತು ಹೋದ ಪ್ರಕರಣವನ್ನು ಮತ್ತೆ ನೆನಪಿಸಿ, ನೊಂದ ಕುಟುಂಬದವರು ದುಃಖೀಸುವಂತಾಗಬಾರದು. ಪ್ರತಿ ಯೊಬ್ಬರಿಗೂ ಅವರದೇ ಆದ ಆಯ್ಕೆ ಇದ್ದು, ಮನೆಯ ಮುಂದೆ ಪ್ರದರ್ಶನಕ್ಕೆ ಅವಕಾಶವಿಲ್ಲ. ಬರುವುದು ಬೇಡವೆಂದು ಹೇಳಬಹುದು ಹೊರತು ಫಲಕ ಹಾಕಿ ಹೇಳುವ ಅವಕಾಶ ಕಾನೂನಿನಲ್ಲಿಲ್ಲ. ಮತದಾನ ಗೌಪ್ಯ ಪ್ರಕ್ರಿಯೆಯಾಗಿದ್ದು, ಯಾರ ಒತ್ತಡವೂ ಇರಬಾರದು ಎಂಬ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next