ಹೊಸದಿಲ್ಲಿ: ಸೋಂಕಿತರ ಪತ್ತೆ ಮತ್ತು ಸೋಂಕಿನ ಅಪಾಯದ ಮೌಲ್ಯಮಾಪನಕ್ಕಾಗಿ ಬೆಂಗಳೂರಿನ ಅಕ್ಯುಲಿ ಲ್ಯಾಬ್ ಮೊಬೈಲ್ ಆ್ಯಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಡಿಜಿಟಲ್ ಹಾದಿಯ ಮೂಲಕ ಕೋವಿಡ್ 19 ನಿಯಂತ್ರಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಆಯ್ಕೆಮಾಡಿದ ಕೆಲವೇ ಕೆಲವು ಸಂಸ್ಥೆಗಳಲ್ಲಿ ಅಕ್ಯುಲಿ ಲ್ಯಾಬ್ ಕೂಡ ಒಂದು.
‘ಲೈಫಾಸ್’ ಹೆಸರಿನ ಈ ಆ್ಯಪ್ ಸೋಂಕನ್ನು ಶೇ.92ರಷ್ಟು ನಿಖರತೆ, ಶೇ.90 ನಿರ್ದಿಷ್ಟತೆ ಹಾಗೂ ಶೇ.92ರಷ್ಟು ಸೂಕ್ಷ್ಮತೆಯೊಂದಿಗೆ ಪತ್ತೆಹಚ್ಚುವ ಮೂಲಕ ಪ್ರಯೋಗ ಹಂತದಲ್ಲಿ ಭರವಸೆ ಹುಟ್ಟಿಸಿದೆ. ಐಐಟಿ ಮದ್ರಾಸ್ ನೆರವಿನೊಂದಿಗೆ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಹೇಗೆ ಕೆಲಸ ಮಾಡುತ್ತೆ?: ‘ಲೈಫಾಸ್’ ಆ್ಯಂಡ್ರಾಕೋವಿಡ್ 19 ಸೋಂಕು ಪತ್ತೆ ಆ್ಯಪ್ ಸ್ಮಾರ್ಟ್‌ಫೋನ್‌ನ ಪ್ರೊಸೆಸರ್, ಸಂವೇದಕಗಳನ್ನು ಬಳಸಿಕೊಂಡು ದೇಹದ ಸಂಕೇತಗಳ ಗುಂಪನ್ನು ಅಧ್ಯಯನ ನಡೆಸುತ್ತದೆ.
ಫೋನ್ ಹಿಂದಿನ ಕೆಮರಾದ ಮೇಲೆ 5 ನಿಮಿಷ ತೋರು ಬೆರಳನ್ನು ಇಟ್ಟರೆ, ರಕ್ತನಾಳ ವ್ಯವಸ್ಥೆ, ರಕ್ತದ ಪರಿಮಾಣದ ಬದಲಾವಣೆಯನ್ನು ಸೆರೆಹಿಡಿಯುತ್ತದೆ. ಸಿಗ್ನಲ್ ಸಂಸ್ಕರಣಾ ತಂತ್ರಜ್ಞಾನದ ನೆರವಿನಿಂದ ರಕ್ತದಲ್ಲಿನ 95 ವಿವಿಧ ಬಯೋಮಾರ್ಕರ್‌ಗಳನ್ನು ಅಧ್ಯಯನ ಮಾಡುವ ಸಾಮರ್ಥ್ಯ ಆ್ಯಪ್‌ಗಿದೆ.
ಈ ಮೂಲಕ ವ್ಯಕ್ತಿಯ ದೇಹದಲ್ಲಿನ ರೋಗ ಶಾಸ್ತ್ರೀಯ ಅಂಶಗಳ ಬದಲಾವಣೆ ಆಧರಿಸಿ ಕೋವಿಡ್ 19 ತೀವ್ರತೆಗಳನ್ನು ಪತ್ತೆ ಹಚ್ಚುತ್ತದೆ. ಈ ಆ್ಯಪ್ ಆಧರಿಸಿ ನಡೆಯುತ್ತಿರುವ ಕ್ಲಿನಿಕಲ್ ಪ್ರಯೋಗಗಳು ಸೆಪ್ಟಂಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಆ ಬಳಿಕವಷ್ಟೇ ‘ಲೈಫಾಸ್’ ಆ್ಯಪ್ ಟೆಸ್ಟ್ ಸಾರ್ವಜನಿಕರಿಗೆ ಲಭ್ಯವಾಗಲಿದೆ.